ಶಿವನನ್ನು ಮೆಚ್ಚಿಸಲು ಶಿವ ತಾಂಡವ ರಚಿಸಿ, ಸ್ತುತಿಸಿದ ಲಂಕಾಧಿಪತಿ ರಾವಣ; ಏನು ಈ ಸ್ತೋತ್ರದ ಮಹತ್ವ?
ಲಂಕಾಧಿಪತಿ ರಾವಣ ಎಷ್ಟೇ ಗರ್ವಿಷ್ಟ ಎನಿಸಿದರೂ ಆತನಿಗೆ ಶಿವನ ಮೇಲಿದ್ದ ಅಪಾರ ಭಕ್ತಿ ಅಗಾಧವಾದುದು. ಶಿವನನ್ನು ಮೆಚ್ಚಿಸಲು ಶಿವ ತಾಂಡವ ಸ್ತೋತ್ರವನ್ನು ರಚಿಸಿ ಸ್ತುತಿಸುತ್ತಾನೆ. ಶಿವ ತಾಂಡವ ಮಂತ್ರ ಪಠಿಸಿದವರು ಬುದ್ಧಿವಂತಿಕೆ, ಆಧ್ಯಾತ್ಮಿಕತೆಯನ್ನು ಗಳಿಸುತ್ತಾರೆ ಮತ್ತು ಶಿವನನ್ನು ಸುಲಭವಾಗಿ ಮೆಚ್ಚಿಸಬಹುದು ಎಂದು ನಂಬಲಾಗಿದೆ.
ದಶಕಂಠ ರಾವಣ ಲಂಕೆಯ ಮಹಾರಾಜ, ಸೀತಾದೇವಿಯನ್ನು ಅಪಹರಿಸಿ ಶ್ರೀರಾಮನ ಕೋಪಕ್ಕೆ ಗುರಿಯಾಗಿದ್ದಲ್ಲದೆ, ಆ ಮಹಾದೇವನನ್ನೇ ಮೆಚ್ಚಿಸಿದ ಮೇಧಾವಿ. ರಾವಣನಿಗೆ ಇದ್ದ 10 ತಲೆಗಳ ಮೇಧಸ್ಸು ಸ್ವತ: ಪರಶಿವನನ್ನು ಕೂಡಾ ಪರವಶ ಮಾಡಿತ್ತು. ರಾಮಾಯಣವು ರಾವಣನ ಭಕ್ತಿಯ ಜೊತೆಗೆ ಅವನ ಕೌಶಲ್ಯಗಳನ್ನು ಉಲ್ಲೇಖಿಸುತ್ತದೆ. ಭಕ್ತಿಯ ಜೊತೆ ಅವನ ಏಕಾಗ್ರತೆಯೂ ಒಂದು ಕಾರಣವಾಗಿದೆ. ಶಿವನಿಂದ ಶಕ್ತಿಯುತವಾದ ವರಗಳನ್ನು ಪಡೆಯಲು ಅದೇ ರಾವಣನಿಗೆ ಸಹಾಯ ಮಾಡಿದ್ದು. ಶಿವನನ್ನು ಮೆಚ್ಚಿಸಲು ರಾವಣನು ಹೇಳಿದ ಸ್ತೋತ್ರದ ಬಗ್ಗೆ ತಿಳಿಯೋಣ.
ಶಿವತಾಂಡವ ಸ್ತೋತ್ರವು, ಶಿವನನ್ನು ಪೂಜಿಸಲು ಅನೇಕ ಶಕ್ತಿಶಾಲಿ ಶ್ಲೋಕಗಳೊಂದಿಗೆ ರಾವಣನೇ ರಚಿಸಿದ ಸ್ತೋತ್ರವಾಗಿದೆ. ಇದು ಶಿವನ ನೃತ್ಯ, ತಾಂಡವ ಮತ್ತು ಗಾಂಭೀರ್ಯವನ್ನು ವೈಭವೀಕರಿಸುವ ಅದ್ಭುತ ಸಂಸ್ಕೃತ ಕಾವ್ಯವಾಗಿದೆ. ಇದು ರಾವಣನ ಕಾವ್ಯಾತ್ಮಕ ಪ್ರತಿಭೆ ಮತ್ತು ಶಿವನ ಮೇಲಿನ ಅವನ ಪ್ರೀತಿಯನ್ನು ಪ್ರದರ್ಶಿಸುತ್ತದೆ. ಒಮ್ಮೆ ರಾವಣನು ಶಿವನ ಮುಂದೆ ತನ್ನ ಶಕ್ತಿಯನ್ನು ಪ್ರದರ್ಶಿಸಲು ಕೈಲಾಸ ಪರ್ವತವನ್ನು ಎತ್ತಲು ಪ್ರಯತ್ನಿಸಿದನು. ಶಿವನು ತನ್ನ ಕಾಲ್ಬೆರಳುಗಳಿಂದ ಪರ್ವತವನ್ನು ಮತ್ತಷ್ಟು ಕೆಳಕ್ಕೆ ಒತ್ತುತ್ತಾನೆ. ರಾವಣನಿಗೆ ತನ್ನ ತಪ್ಪಿನ ಅರಿವಾದಾಗ ಶಿವತಾಂಡವ ಸ್ತೋತ್ರವನ್ನು ಬರೆಯುತ್ತಾನೆ. ರಾವಣನಲ್ಲಿ ಕಾಣಿಸಿಕೊಂಡ ಭಕ್ತಿಯಿಂದಾಗಿ, ಶಿವನು ಅವನನ್ನು ಕ್ಷಮಿಸಿದ್ದಲ್ಲದೆ ಅಪಾರ ವರಗಳನ್ನು ನೀಡುತ್ತಾನೆ.
ಶಿವತಾಂಡವ ಸ್ತೋತ್ರ ಶಿವನ ದೈವಿಕ ಗುಣಗಳನ್ನು ವಿವರಿಸುವ ಸಂಸ್ಕೃತ ಕಾವ್ಯವಾಗಿದೆ. ಈ ಸ್ತೋತ್ರದಲ್ಲಿ ಕೆಲವು ಪ್ರಮುಖ ಅಂಶಗಳಿವೆ.
1. ಶಿವ ತಾಂಡವ
ಈ ಸ್ತೋತ್ರದ ಮೊದಲ ಸಾಲುಗಳು ಶಿವನ ತಾಂಡವವನ್ನು ವಿವರಿಸುತ್ತವೆ. ಇದು ಸೃಷ್ಟಿ , ಸಂರಕ್ಷಣೆ, ವಿನಾಶದ ಶಾಶ್ವತ ಚಕ್ರಗಳನ್ನು ಪ್ರತಿನಿಧಿಸುತ್ತದೆ. ಈ ನೃತ್ಯ, ಶಕ್ತಿಯುತ ಮತ್ತು ದೈವಿಕ, ವಿಶ್ವದಲ್ಲಿ ಸೃಜನಾತ್ಮಕ ಬದಲಾವಣೆಗಳನ್ನು ಪ್ರಕಟಿಸುತ್ತದೆ.
2. ಶಿವನ ಮಂಗಳಕರ ಅಲಂಕಾರಗಳು
ಈ ಸ್ತೋತ್ರವು ಶಿವನ ಮುಡಿಯನ್ನು, ಅವನ ತಲೆಯ ಮೇಲೆ ಅರ್ಧಚಂದ್ರನನ್ನು, ಅವನ ಕುತ್ತಿಗೆಯಲ್ಲಿ ಹಾವನ್ನು ಮತ್ತು ಅವನ ಕೂದಲಿನಿಂದ ಹರಿಯುವ ಗಂಗೆಯನ್ನು ಸ್ತುತಿಸುತ್ತದೆ. ಇವೆಲ್ಲವೂ ಶಿವನ ಘನತೆ, ಕಾಲಚಕ್ರ ಮತ್ತು ಪರಿಶುದ್ಧತೆಯನ್ನು ಪ್ರತಿನಿಧಿಸುವ ದೈವಿಕ ಗುಣಲಕ್ಷಣಗಳಾಗಿವೆ.
3. ಶಿವನ ಜ್ವಲಂತ ಸ್ವಭಾವ
ರಾವಣನ ಸ್ತೋತ್ರವು ಶಿವನ ಬೆಂಕಿಯಂತಹ, ಅಜೇಯ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ. ವಿನಾಶ ಮತ್ತು ಸೃಷ್ಟಿ ಪ್ರಕ್ರಿಯೆಯಲ್ಲಿ ಶಿವನ ಪಾತ್ರವನ್ನು ಚಿತ್ರಿಸುತ್ತದೆ.
4. ಶಿವನ ಮೇಲೆ ರಾವಣನಿಗಿದ್ದ ಭಕ್ತಿ
ರಾವಣನ ಮಾತುಗಳು ಶಿವನ ಮೇಲಿನ ಭಕ್ತಿಯನ್ನು ಬಹಿರಂಗಪಡಿಸುತ್ತವೆ. ಅಹಂಕಾರಿಯಾದ ರಾವಣನು ಪೂಜೆಯ ವಿಷಯದಲ್ಲಿ ತನಗಿಂತ ಉತ್ತಮವಾಗಿ ಶಿವನನ್ನು ಪೂಜಿಸಲು ಸಾಧ್ಯವಿಲ್ಲ ಎಂದು ಸಾಬೀತುಪಡಿಸಿದನು. ರಾವಣನ ಭಕ್ತಿ ಅತ್ಯಂತ ಶಕ್ತಿಶಾಲಿ ಮತ್ತು ಅಗಾಧ ಎಂದು ಪುರಾಣಗಳು ಹೇಳುತ್ತವೆ .
5. ದಿವ್ಯ ಶಕ್ತಿ
ರಾವಣನ ಗರ್ವವು ಅವನನ್ನು ಸೋಲಿಸಲು ಕಾರಣವಾದರೂ, ಅವನ ಹೃದಯದ ಶುದ್ಧತೆ ಮತ್ತು ಭಕ್ತಿಯು ಅವನಿಗೆ ಶಿವನ ಕೃಪೆಯನ್ನು ಪಡೆಯಲು ದಾರಿ ಮಾಡಿಕೊಟ್ಟಿತು.
ಶಿವನ ಆಶೀರ್ವಾದವನ್ನು ಪಡೆಯಲು ನಿಜವಾದ ಭಕ್ತಿಯಿಂದ ತನ್ನ ಹೃದಯವನ್ನು ಶಿವನಿಗೆ ಅರ್ಪಿಸಿ ಅವನನ್ನು ಮೆಚ್ಚಿಸಲು ಈ ಸ್ತೋತ್ರದಿಂದ ಸಾಧ್ಯವಾಯ್ತು. ತಪ್ಪುಗಳನ್ನು ಮಾಡಿದ್ದರೂ ರಾವಣ ಈ ಶಿವತಾಂಡವ ಸ್ತೋತ್ರವನ್ನು ರಚಿಸಿ, ಶಿವನನ್ನು ಪೂಜಿಸಿದ್ದರಿಂದ ಶಿವನೊಂದಿಗೆ ಶಾಶ್ವತವಾದ ಬಂಧವನ್ನು ಸ್ಥಾಪಿಸಲು ಸಾಧ್ಯವಾಯಿತು. ಶಿವತಾಂಡವ ಸ್ತೋತ್ರವನ್ನು ಪಠಿಸುವ ಮೂಲಕ, ಭಕ್ತರು ಶಕ್ತಿ, ಬುದ್ಧಿವಂತಿಕೆ, ಆಧ್ಯಾತ್ಮಿಕತೆಯನ್ನು ಗಳಿಸುತ್ತಾರೆ ಮತ್ತು ಶಿವನನ್ನು ಸುಲಭವಾಗಿ ಮೆಚ್ಚಿಸಬಹುದು ಎಂದು ನಂಬಲಾಗಿದೆ .
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.