Shraddha Pooja: ಮೃತಪಟ್ಟಿರುವ ತಂದೆ ತಾಯಿಗೆ ಶ್ರಾದ್ಧ ಪೂಜೆ ಮಾಡುವ ಮಕ್ಕಳ ಶ್ರೇಯಸ್ಸು ಹೆಚ್ಚಾಗುತ್ತೆ; ಹಿಂದೂ ಧರ್ಮದಲ್ಲಿನ ಮಹತ್ವ ತಿಳಿಯಿರಿ
ದೇವತೆಗಳಿಗೆ ಸ್ವರ್ಗಲೋಕ ಹೇಗೊ ಹಾಗೆ ಪಿತೃಗಳ ಲೋಕವೇ ಬೇರೆ. ಅದುವೇ ಸೋಮಪಥ. ಮರೀಚಿ ಮುನಿಯ ಮಕ್ಕಳಾದ ಪಿತೃ ದೇವತೆಗಳು ವಾಸಮಾಡುವುದು ಇಲ್ಲಿಯೇ.
ಬೆಂಗಳೂರು: ಮೃತಪಟ್ಟಿರುವ ತಂದೆ ತಾಯಿಗೆ ವಿಹಿತವಾದ ಕಾಲದಲ್ಲಿ ಶ್ರದ್ಧೆಯಿಂದ ಮಾಡುವ ಕಾರ್ಯವೇ ಶ್ರಾದ್ಧ (Shraddha). ಇದನ್ನು ನೆರವೇರಿಸುವುದು ಮಕ್ಕಳ ಕರ್ತವ್ಯ. ಇದು ನಮ್ಮ ಶ್ರೇಯಸ್ಸಿಗಾಗಿಯೇ ಹೊರತು ಮತ್ತೇನು ಅಲ್ಲ. ಪಂಚಯಜ್ಞಗಳಲ್ಲಿ ನಿರತರಾದವರೂ, ಲೋಪಬರದಂತೆ ಪಿತೃಶ್ರಾದ್ಧವನ್ನು ಮಾಡುವವರೂ, ಸಕಾಲ ದಲ್ಲಿ ಸಂಧ್ಯೋಪಾಸನೆ ಮಾಡುವವರು ದೇವ, ಪಿತೃ ಮತ್ತು ಋಷಿ ಋಣಗಳಿಂದ ಖಂಡಿತವಾಗಿಯೂ ಮುಕ್ತರಾಗುತ್ತಾರೆ.
ವಿಷ್ಣುವಿಗೆ ವೈಕುಂಠ, ಶಿವನಿಗೆ ಕೈಲಾಸ, ಬ್ರಹ್ಮನಿಗೆ ಸತ್ಯಲೋಕ, ಗಣಪತಿಗೆ ಸ್ವಾನಂದಲೋಕ, ದೇವತೆಗಳಿಗೆ ಸ್ವರ್ಗಲೋಕ ಹೇಗೊ ಹಾಗೆ ಪಿತೃಗಳ ಲೋಕವೇ ಬೇರೆ. ಅದುವೇ ಸೋಮಪಥ. ಮರೀಚಿ ಮುನಿಯ ಮಕ್ಕಳಾದ ಪಿತೃ ದೇವತೆಗಳು ವಾಸಮಾಡುವುದು ಇಲ್ಲಿಯೇ.
ಸುರಲೋಕದ ದೇವತೇಗಳೂ ಕೂಡ ಈ ಪಿತೃದೇವತೆಗಳನ್ನು ಪೂಜಿಸುತ್ತಾರೆ. ಇವರು ಅಗ್ನಿಷ್ವಾತ್ತರೆಂದೇ ಖ್ಯಾತರಾಗಿದ್ದಾರೆ. ಸ್ವರ್ಗದಲ್ಲಿ ಪಿತೃಗಳ ಏಳು ಗಣಗಳಿವೆ. ಅವರಲ್ಲಿ ಮೂರು ಅಮೂರ್ತಾ ಗಣಗಳು, ನಾಲ್ಕು ಮೂರ್ತಾಪಿತೃಗಳು. ಅಮೂರ್ತರು ನಿರಾಕಾರರೂ, ಮೂರ್ತರು ಎಂದರೆ ಸಾಕಾರರು. ಇವರು ಅತ್ಯಂತ ಬಲಿಷ್ಟರು ಮತ್ತು ಮಹಾ ತೇಜಸ್ವಿಗಳು. ಅಮೂರ್ತಾಗಣದ ಪಿತೃಗಳು ವೈರಾಜ ಪ್ರಜಾಪತಿಯಿಂದ ಸೃತ್ಟಿಯಾಗಿ ವೈರಾಜ ಎಂಬ ದೇವಗಣದಿಂದ ಪೂಜಿತರಾಗಿದ್ದಾರೆ.
ಯೋಗದ ಅಭ್ಯಾಸದಲ್ಲಿ ಸಿದ್ಧಿಪಡೆಯದೆ ಸಾಧನೆ ಪೂರ್ತಿಯಾಗದ ಯೋಗಿಗಳು ದಿವ್ಯ ಲೋಕವನ್ನು ಹೊಂದಿ ಪ್ರಳಯಕಾಲದಲ್ಲಿ ನಾಶಹೊಂದುವರು. ಹೊಸ ಸೃಷ್ಠಿಯಲ್ಲಿ ಮತ್ತೆ ಬ್ರಹ್ಮಜ್ಞಾನಿಯಾಗಿ ಹುಟ್ಟಿ ಬರುವರು. ಹಿಂದೆ ಪೂರ್ಣಯೋಗದಿಂದ ಭ್ರಷ್ಟರಾದ ಆ ಜ್ಞಾನಿಗಳೇ ಪೂರ್ವಜನ್ಮದ ಯೋಗಾಭ್ಯಾಸದ ಬಲದಿಂದ ಹೆಚ್ಚುಹೆಚ್ಚು ಶ್ರೀ ಹರಿಯ ಆರಾಧನೆ ಮಾಡಿ, ತಮ್ಮ ಸಾಧನೆ ಪೂರ್ತಿಮಾಡಿ ನಿರ್ದಿಷ್ಟವಾದ ಧ್ಯಾನ ಯೋಗದಿಂದ ಭಗವಂತನ ಸಾಕ್ಷಾತ್ಕಾರವನ್ನು ಪಡೆಯುವರು. ಮುಂದೆ ಅವರಿಗೆ ಮೋಕ್ಷವು ಲಭಿಸುವುದು. ಅಂಥ ಯೋಗಿಗಳ ಗುಂಪಿಗೆ ಪಿತೃಗಳು ಎಂದು ಹೇಳುವುದು. ಅಂಥಾ ಮಹಾಯೋಗಿಗಳನ್ನು ಉದ್ದೇಶಿಸಿಯೇ ಶ್ರಾದ್ಧದಲ್ಲಿ ದಾನ, ಭೋಜನಾದಿಗಳನ್ನು ನಡೆಸುವುದು.
ಅಮಾವಾಸ್ಯೆ ಪಿತೃಗಳಿಗೆ ಪ್ರಿಯವಾಗಲು ಕಾರಣವೇನು?
ಪಿತೃದೇವತೆಗಳ ಮಾನಸಪುತ್ರಿ ಆಚ್ಛೋದೆ. ಈಕೆಯು ಒಂದು ಸಾವಿರ ವರ್ಷ ತಪಸ್ಸು ಮಾಡಿದಳು. ತಪಸ್ಸಿಗೆ ಪ್ರಸನ್ನರಾದ ಪಿತೃಗಳು ಪ್ರತ್ಯಕ್ಷರಾದರು. ಅವರದು ದಿವ್ಯರೂಪ, ಕೊರಳಲ್ಲಿ ದಿವ್ಯ ಮಾಲೆ, ದಿವ್ಯ ಗಂಧದಲೇಪನ, ಹರೆಯದ ವಯಸ್ಸು, ಬಲಿಷ್ಠವಾದ ದೇಹ. ಇವರಲ್ಲಿ ಅಮಾವಸು ಎಂಬವವನು ಅತಿಸುಂದರ. ಅವನ ಮೋಹಕ ರೂಪಕ್ಕೆ ಆಕರ್ಶಿತಳಾದ ಆಚ್ಛೋದೆಯ ಮನಸ್ಸು ವಿಚಲಿತವಾಯಿತು. ಅವನಿಗೆ ತನ್ನನ್ನು ಒಪ್ಪಿಸಿಕೊಳ್ಳುವಂತೆ ವರಬೇಡಿದಳು. ತಕ್ಷಣವೇ ಆಕೆಯು ಮಾನಸಿಕ ವ್ಯಭಿಚಾರದಿಂದ ಯೋಗ ಭ್ರಷ್ಟಳಾದಳು. ಅದರ ಬೆನ್ನಲ್ಲೇ ಅಧಃಪಾತಕ್ಕೆ ಬೀಳುವಂತೆ ಮಾಡಿತು. ಇಷ್ಟಾದರು ಅಮಾವಸುವಿನ ಮನಸ್ಸು ವಿಚಲಿತವಾಗಲಿಲ್ಲ. ಅಮಾವಸುವಿನ ಜಿತೇಂದ್ರಿಯತೆ, ಸ್ಥೈರ್ಯದಿಂದಾಗಿ ಅವನು ಜಗತ್ಪ್ರಸಿದ್ಧನಾದನು. ಈ ಘಟನೆ ನಡೆದ ದಿನವು ಅವನ ಹೆಸರಿನಿಂದಲೇ ಪ್ರಸಿದ್ಧವಾಯಿತು. ಇದು ಪಿತೃಗಳಿಗೆ ಪ್ರಿಯವಾದ ತಿಥಿ. ಆದಿನದಂದು ಮಾಡುವ ಶ್ರಾದ್ಧ, ತರ್ಪಣ. ಮುಂತಾದ ಪಿತೃಕಾರ್ಯಗಳು ಅಕ್ಷಯ ಫಲ ನೀಡುತ್ತದೆ.
ಆಚ್ಛೋದೆಗೆ ತನ್ನ ತಪ್ಪಿನ ಅರಿವಾಗಿ ಪಿತೃಗಳಲ್ಲಿ ಕ್ಷಮೆಯಾಚಿಸಿದಳು. ದಯಮಾಡಿ ತನ್ನ ಹಿಂದಿನ ಖ್ಯಾತಿಗೆ ಚ್ಯುತಿ ಬರದಂತೆ ಅನುಗ್ರಹಿಸಿ ಮುಂದೆಯೂ ತನಗೆ ಯಾವ ಕೆಡಕೂ ಆಗಬಾರದೆಂದೂ ದೈನ್ಯದಿಂದ ಬೇಡಿದಳು. ಪಿತೃಗಳಿಗೆ ಅವಳ ಮೇಲೆ ಕರುಣೆಬಂದು, ಭವಿಷ್ಯದಲ್ಲಿ ಅವಳಿಂದ ಆಗಬೇಕಾದ ದೇವತಾ ಕಾರ್ಯವನ್ನು ದಿವ್ಯದೃಷ್ಟಿಯಿಂದ ನೋಡಿ ಪ್ರಸನ್ನರಾದರು.
ದೇವಲೋಕದಲ್ಲಿ ದೇವತೆಗಳು ತಮ್ಮ ದಿವ್ಯದೇಹದಿಂದ ಮಾಡಿದ ಕರ್ಮಫಲವನ್ನು ಅದೇ ದೇಹದಲ್ಲಿಯೇ ಅನುಭವಿಸುತಾರೆ. ಮಾನವರು ಈ ಜನ್ಮದಲ್ಲಿ ಮಾಡಿದ ಕರ್ಮಫಲವನ್ನು ಜನ್ಮಾಂತರದಲ್ಲಿಯೇ ಅನುಭವಿಸಬೇಕು. ಆದ್ದರಿಂದ ನೀನು ಕೂಡ ನಿನ್ನ ತಪ್ಪಿನಫಲವನ್ನು ಈದೇಹದಲ್ಲಿ ಪಡೆಯದೆ ಜನ್ಮಾಂತರದಲ್ಲಿ ದೇಹಾಂತರದಲ್ಲಿ ಪಡೆಯುವೆ ಎಂದರು. ನೀನು ಮಾಡಿದ ಅಪಚಾರದಿಂದಾಗಿ ಭೂಲೋಕದಲ್ಲಿ ಮತ್ಸ್ಯಕನ್ಯೆಯಾಗಿ, ವಸುರಾಜನ ಮಗಳಾಗಿ, ಪರಾಶರರ ಪತ್ನಿಯಾಗಿ, ಕಾಲಾಂತರದಲ್ಲಿ ಶಂತನಿಗೆ ಪತ್ನಿಯಾಗುವೆ. ನಿನ್ನ ಇಬ್ಬರು ಮಕ್ಕಳು ಸತ್ತುಹೋಗುವರು. ಹಿರಿಯ ಮಗನಾದ ವ್ಯಾಸರಿಂದ ಅಂಬೆ ಅಂಬಾಲಿಕೆಯ ಮೂಲಕ ಎರಡು ಮಕ್ಕಳನ್ನು ಪಡೆದು ಅವರಿಂದ ಸದ್ಗತಿಯನ್ನು ಪಡೆಯುವೆ ಎಂದರು.
ಭೂಲೋಕದಲ್ಲಿ ಸತ್ಯವತಿಯೆಂದೂ, ಪಿತೃಲೋಕದಲ್ಲಿ ಅಷ್ಟಕ ಎಂದೂ ಪ್ರಸಿದ್ಧಿಯಾಗುವೆ. ಆವರ ಇಷ್ಟಾರ್ಥಗಳನ್ನು ಸಲ್ಲಿಸುತ್ತಾ ಆಯುಷ್ಯವರ್ಧನಿಯೂ, ಆರೋಗ್ಯದಾಯಿನಿಯೂ ಆಗುವಿ. ಕಾಲಾಂತರದಲ್ಲಿ ಆಚ್ಛೋದ ಎಂಬ ಪುಣ್ಯಜಲವುಳ್ಳ ಶ್ರೇಷ್ಠನದಿಯಾಗುವೆ ಎಂದು ವರವಿತ್ತರು. ಅದರಂತೆ ಈನದಿಯಲ್ಲಿ ಸ್ನಾನಮಾಡಿ, ಪಿತೃಕಾರ್ಯಗಳನ್ನು ಮಾಡಿದರೆ ಪಿತೃಗಳಿಗೆ ಸದ್ಗತಿ ದೊರೆಯುವುದು ಎನ್ನುತ್ತಾರೆ.
ಮಾನಸ ಎಂಬ ಪಿತೃಗಣಕ್ಕೆ ‘ಗೋ’ ಎಂಬುವವಳು ಮಾನಸಪುತ್ರಿ. ಈಕೆ ಶುಕ್ರಾಚಾರ್ಯರ ಪತ್ನಿ. ಈಕೆಯ ಸಂತತಿಯೇ ‘ಸಾಧ್ಯ’ ಎಂಬ ದೇವಗಣ. ಬ್ರಹ್ಮಾಂಡದ ಮೇಲಿರುವ “ಮಾನಸ” ಎಂಬ ಲೋಕದಲ್ಲಿ ಧರ್ಮಸ್ವರೂಪರಾದ ಸೋಮಪಾ ಎಂಬ ಪಿತೃಗಳು ನೆಲಸಿದ್ದಾರೆ. ಇವರಲ್ಲಾ ಸ್ವಾಹಾದೇವಿಯ ಮಕ್ಕಳು. ಇವರು ಸೃಷ್ಟಿಕಾರ್ಯ ಮಾಡುತ್ತಾ ಪ್ರಜಾಪತಿಯ ಸ್ಥಾನದಲ್ಲಿದ್ದಾರೆ. ಇವರ ಮಾನಸಪುತ್ರಿಯೇ ನರ್ಮದಾ. ಇವಳು ಮಹಾನದಿಯ ರೂಪದಿಂದ ಜನರ ಪಾಪಕರ್ಮಗಳನ್ನು ತೊಳೆದು ಉದ್ಧರಿಸುತ್ತಾ ಹರಿಯುತ್ತಿದ್ದಾಳೆ.
ಸೃಷ್ಟಿಯ ಆದಿಕಾಲದಿಂದಲೂ ಸೃಷ್ಟಿಯಾಗಿರುವ ಮನುಗಳೂ ಮತ್ತು ಪ್ರಜೆಗಳು ಆ ಪಿತೃದೇವತೆಗಳನ್ನು ಕಾಲನಿರ್ಭಂದವಿಲ್ಲದೆ ಪ್ರತಿದಿನವೂ ಶ್ರಾದ್ಧಮಾಡಿ ಅವರ ಅನುಗ್ರಹಕ್ಕೆ ಪಾತ್ರರಾಗಿ ಒಳ್ಳೆಯ ಮಕ್ಕಳನ್ನು ಪಡೆಯುವರು. ಆದಿ ಸೃಷ್ಟಿಯಿಂದಲೂ ಪಿತೃಶ್ರಾದ್ಧದ ವಿಧಿವಿಧಾನಗಳು ರೂಪುಗೊಂಡಿವೆ.
ವಿಭಾಗ