ಶನಿಗೆ ಬಲ ತುಂಬಲಿದೆ ಕುಂಭ ರಾಶಿಯಲ್ಲಿ ಶುಕ್ರ ಸಂಚಾರ, ಮೇಷ, ಕಟಕ, ಕನ್ಯಾದವರಿಗೆ ಪ್ರಯೋಜನ ಹೆಚ್ಚು, 12 ರಾಶಿಗಳ ಶುಭ, ಅಶುಭ ಫಲ ವಿವರ
Venus Transit In Aquarius: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕುಂಭ ರಾಶಿಯಲ್ಲಿ ಶುಕ್ರ ಸಂಚಾರವು ಶನಿಗೆ ಬಲ ತುಂಬಲಿದೆ. ಈ ಅವಧಿಯಲ್ಲಿ ಮೇಷ, ಕಟಕ, ಕನ್ಯಾದವರಿಗೆ ಪ್ರಯೋಜನ ಹೆಚ್ಚು ಎನ್ನುತ್ತ 12 ರಾಶಿಗಳ ಶುಭ, ಅಶುಭ ಫಲ ವಿವರವನ್ನು ನೀಡಿದ್ದಾರೆ ಬೆಂಗಳೂರಿನ ಹಿರಿಯ ಜ್ಯೋತಿಷಿ ಎಚ್ ಸತೀಶ್.
Venus Transit In Aquarius: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶುಕ್ರನು ಡಿಸೆಂಬರ್ ತಿಂಗಳ 28 ರಂದು ಮಕರ ರಾಶಿಯಿಂದ ಕುಂಭರಾಶಿಯನ್ನು ಪ್ರವೇಶಿಸಿ ಜನವರಿ ತಿಂಗಳ 28 ರವರೆಗೂ ಕುಂಭ ರಾಶಿಯಲ್ಲಿಯೇ ಸಂಚರಿಸುತ್ತಾನೆ. ಶುಕ್ರನಿಗೆ ಕುಂಭರಾಶಿಯು ಮಿತ್ರ ಕ್ಷೇತ್ರವಾಗುತ್ತದೆ. ಶನಿ ಮತ್ತು ಶುಕ್ರರು ಪರಸ್ಪರ ಮಿತ್ರರಾಗುತ್ತಾರೆ. ಈ ರಾಶಿಯಲ್ಲಿ ಶನಿಯು ಹೆಚ್ಚು ಬಲಶಾಲಿ ಆಗುತ್ತಾನೆ. ಈ ಕಾರಣದಿಂದಾಗಿ ಶುಕ್ರ ಮತ್ತು ಶನಿ ಗ್ರಹಗಳ ಸಂಯೋಜನೆಯಿಂದ ಕೆಲವು ರಾಶಿಚಕ್ರದವರು ಶುಭ ಫಲಗಳನ್ನು ಪಡೆಯಬಹುದು ಎನ್ನುತ್ತಾರೆ ಹಿರಿಯ ಜ್ಯೋತಿಷಿ ಬೆಂಗಳೂರಿನ ಎಚ್ ಸತೀಶ್.
ವಿವಿಧ ರಾಶಿಗಳ ಮೇಲೆ ಕುಂಭ ರಾಶಿಯಲ್ಲಿ ಶುಕ್ರ ಸಂಚಾರದ ಪ್ರಭಾವ
1) ಮೇಷ ರಾಶಿಯವರ ಮೇಲೆ ಕುಂಭ ರಾಶಿಯಲ್ಲಿ ಶುಕ್ರ ಸಂಚಾರದ ಪ್ರಭಾವ: ವಿವಾಹ ವಿಚಾರದಲ್ಲಿ ಇದ್ದ ಅಡಚಣೆಗಳು ದೂರವಾಗುತ್ತವೆ. ಹಣಕಾಸಿನ ವಿಚಾರದಲ್ಲಿ ಧೃಡ ನಿಲುವನ್ನು ತೆಗೆದುಕೊಳ್ಳುವುದರಿಂದ ಉತ್ತಮ ಆದಾಯ ದೊರೆಯಬಹುದು. ಪ್ರಯೋಜನವಿಲ್ಲದ ವಿಚಾರಗಳಿಂದ ದೂರ ಉಳಿಯುವಿರಿ. ಬಾಳಸಂಗಾತಿಯ ಸಲಹೆ ಪ್ರಕಾರ ಮುಂದುವರಿದರೆ ಕುಟುಂಬದಲ್ಲಿನ ಆತಂಕದ ಪರಿಸ್ಥಿತಿಯು ದೂರವಾಗಬಹುದು. ಸ್ವಂತ ವ್ಯಾಪಾರ ವ್ಯವಹಾರದಲ್ಲಿ ನಿಧಾನಗತಿಯ ಪ್ರಗತಿ ಉಂಟಾಗಬಹುದು. ಮೌನ ತೊರೆದು ಮಾತನಾಡಿದಲ್ಲಿ ಉದ್ಯೋಗದಲ್ಲಿ ಉನ್ನತ ಅಧಿಕಾರ ದೊರೆಯುವ ಸಾಧ್ಯತೆಯೂ ಇದೆ. ಮಾನಸಿಕ ನೆಮ್ಮದಿ ದೊರೆಯಬಹುದು. ವಿರೋಧಿಗಳು ನಿಮ್ಮ ಮುಂದೆ ಸೋಲೊಪ್ಪುವ ಸಾಧ್ಯತೆಯೂ ಇದೆ. ವಿದ್ಯಾರ್ಥಿಗಳು ಹೆಚ್ಚಿನ ಪ್ರಯತ್ನದಿಂದ ಮಾತ್ರ ಗೆಲುವು ಸಾಧಿಸಬಹುದು. ಧಾರ್ಮಿಕ ಕೆಲಸ ಕಾರ್ಯಗಳಲ್ಲಿ ಆಸಕ್ತಿ ಮೂಡಬಹುದು.
2) ವೃಷಭ ರಾಶಿಯವರಿಗೆ ಕುಂಭ ರಾಶಿಯಲ್ಲಿ ಶುಕ್ರ ಸಂಚಾರದ ಪ್ರಭಾವ: ಎಲ್ಲರ ಜೊತೆಯಲ್ಲಿ ಪ್ರೀತಿ ವಿಶ್ವಾಸದಿಂದ ವರ್ತಿಸುವಿರಿ. ಇದರಿಂದಾಗಿ ನಿಮ್ಮ ಕೆಲಸ ಕಾರ್ಯಗಳಲ್ಲಿನ ಒತ್ತಡವು ದೂರವಾಗುತ್ತದೆ. ಹಣಕಾಸಿನ ವಿಚಾರದಲ್ಲಿ ತೊಂದರೆ ಇರುವುದಿಲ್ಲ. ಆದರೆ ಮನಸ್ತಾಪ ಉಂಟಾಗಬಹುದು. ಖರ್ಚು ವೆಚ್ಚಗಳು ಹೆಚ್ಚಾಗಬಹುದು. ಹಣವನ್ನು ಉಳಿಸಲಾಗದು. ಕುಟುಂಬದಲ್ಲಿ ಶುಭ ಕಾರ್ಯಗಳು ನಡೆಯಲಿವೆ. ಉದ್ದೇಶವಿಲ್ಲದ ಪ್ರಯಾಣದಿಂದ ಬೇಸರಗೊಳ್ಳುವಿರಿ. ಸ್ವಂತ ವ್ಯಾಪಾರ ವ್ಯವಹಾರದಲ್ಲಿ ಎಚ್ಚರಿಕೆ ಇರಲಿ. ಬಂಧು ಬಳಗದವರಿಂದ ನಿರಾಶೆ ಉಂಟಾಗಬಹುದು. ಸ್ವಂತ ಉದ್ದಿಮೆಯಲ್ಲಿರುವವರು ನಿಧಾನಗತಿಯ ಪ್ರಗತಿ ನಿರೀಕ್ಷಿಸಬಹುದು. ಕ್ರೀಡಾಸ್ಪರ್ಧಿಗಳಿಗೆ ವಿನೂತನ ಅವಕಾಶಗಳು ದೊರೆಯಬಹುದು. ಆತ್ಮೀಯರ ಸಹಾಯದಿಂದ ಉದ್ಯೋಗ ದೊರೆಯುವ ಸಾಧ್ಯತೆಗಳಿವೆ. ಆರೋಗ್ಯದಲ್ಲಿ ಏರಿಳಿತ ಕಂಡುಬರಬಹುದು. ಅನಗತ್ಯ ವಿಚಾರಗಳಿಗೆ ಯೋಚನೆ ಮಾಡುವಿರಿ. ಧೈರ್ಯ ಸಾಹಸದ ಗುಣ ಬೆಳೆಸಿಕೊಂಡಷ್ಟೂ ಧನಾತ್ಮಕ ಫಲಗಳನ್ನು ಪಡೆಯಲು ಸಾಧ್ಯವಿದೆ.
3) ಮಿಥುನ ರಾಶಿಯವರ ಮೇಲೆ ಕುಂಭ ರಾಶಿಯಲ್ಲಿ ಶುಕ್ರ ಸಂಚಾರದ ಪ್ರಭಾವ: ಮನದಲ್ಲಿ ಅಳುಕಿನ ಭಾವನೆ ಕಾಡಬಹುದು. ಬೇರೆಯವರ ವಿಚಾರಕ್ಕೆ ಕುಟುಂಬದಲ್ಲಿ ಮನಸ್ತಾಪ ಉಂಟಾಗಬಹುದು. ತಪ್ಪು ಅಭಿಪ್ರಾಯದಿಂದಾಗಿ ಆತ್ಮೀಯರೊಬ್ಬರು ದೂರವಾಗುತ್ತಾರೆ. ಕುಟುಂಬದ ಹಿರಿಯರ ಆರೋಗ್ಯದಲ್ಲಿ ಏರುಪೇರು ಉಂಟಾಗುವ ಸಾಧ್ಯತೆಯೂ ಇದೆ. ಅನಿರೀಕ್ಷಿತ ಖರ್ಚು ವೆಚ್ಚಗಳು ಎದುರಾಗುತ್ತವೆ. ಆರಂಭಿಸಿದ ಕೆಲಸ ಕಾರ್ಯಗಳು ನಿಧಾನಗತಿಯಲ್ಲಿ ಮುಂದುವರೆಯುವ ಸಾಧ್ಯತೆ ಇದೆ. ಹಣಕಾಸಿನ ವ್ಯವಹಾರದಲ್ಲಿ ಎಚ್ಚರಿಕೆ ವಹಿಸಿ. ಸಾಲವಾಗಿ ಪಡೆದ ಹಣವನ್ನು ಸುಲಭವಾಗಿ ಹಿಂತಿರುಗಿಸಲು ಸಾಧ್ಯವಾಗುವುದಿಲ್ಲ. ಕಿವಿಗೆ ಸಂಬಂಧಿಸಿದ ತೊಂದರೆ ಉಂಟಾಗಬಹುದು. ವಿರೋಧಿಗಳ ತೀರ್ಮಾನಗಳು ನಿಮ್ಮ ಕೆಲಸ ಕಾರ್ಯಗಳಿಗೆ ಅಡ್ಡಿಯನ್ನು ಉಂಟುಮಾಡಬಹುದು. ಕೆಲವರು ಸುಳ್ಳು ಹೇಳಿ ನಿಮ್ಮ ಒಳ್ಳೆಯತನವನ್ನು ದುರುಪಯೋಗಪಡಿಸಿಕೊಳ್ಳಬಹುದು. ಉದ್ಯೋಗದಲ್ಲಿ ನಿರೀಕ್ಷಿಸಿದ ಮಟ್ಟವನ್ನು ತಲುಪುವುದು ಸಾಧ್ಯವಿದೆ.
4) ಕರ್ಕಾಟಕ ರಾಶಿಯವರ ಮೇಲೆ ಕುಂಭ ರಾಶಿಯಲ್ಲಿ ಶುಕ್ರ ಸಂಚಾರದ ಪ್ರಭಾವ: ಉದ್ಯೋಗದಲ್ಲಿ ಅನಿರೀಕ್ಷಿತವಾಗಿ ಉನ್ನತ ಅಧಿಕಾರ ದೊರೆಯಬಹುದು. ಕುಟುಂಬದ ಹೆಚ್ಚಿನ ಜವಾಬ್ದಾರಿಯನ್ನು ನೀವಾಗಿಯೇ ಒಪ್ಪಿಕೊಳ್ಳುವಿರಿ. ಹಣಕಾಸಿನ ವಿಚಾರವು ಮಧ್ಯಮ ಗತಿಯಲ್ಲಿ ಸಾಗಲಿದೆ. ಖರ್ಚು ವೆಚ್ಚಕ್ಕೆ ತಕ್ಕಂತೆ ಆದಾಯ ದೊರೆಯಬಹುದು. ಹೊಸ ವಾಹನ ಕೊಳ್ಳುವ ಆಸೆಯನ್ನು ಪೂರೈಸಿಕೊಳ್ಳುವಿರಿ. ನಿಮ್ಮ ಪರಿಶ್ರಮಕ್ಕೆ ತಕ್ಕ ಫಲವನ್ನು ಪಡೆಯುವಿರಿ. ಆರೋಗ್ಯದಲ್ಲಿ ಚೇತರಿಕೆ ಉಂಟಾಗಲಿದೆ. ಹಣದ ಸಹಾಯ ದೊರೆಯಬಹುದು. ಅನಗತ್ಯ ಸಂಚಾರವಿರುತ್ತದೆ. ಅನಾವಶ್ಯಕ ಖರ್ಚು ವೆಚ್ಚಗಳು ಇರುತ್ತವೆ. ಕುಟುಂಬದಲ್ಲಿನ ಮಂಗಳ ಕಾರ್ಯವನ್ನು ಮುಂದೂಡುವ ಪ್ರಸಂಗ ಬರಬಹುದು. ಸೋದರರ ನಡುವಿನ ಮನಸ್ತಾಪವು ದೂರವಾಗಬಹುದು. ವಾಹನ ಚಾಲನೆ ಮಾಡುವ ವೇಳೆ ಎಚ್ಚರಿಕೆ ವಹಿಸಿ. ಗುರು ಹಿರಿಯರಿಗೆ ಸಹಾಯ ಮಾಡುವಿರಿ. ಸಾಹಸದ ಕೆಲಸಗಳಲ್ಲಿ ಆಸಕ್ತಿ ಉಂಟಾಗಬಹುದು.
5) ಸಿಂಹ ರಾಶಿಯವರಿಗೆ ಕುಂಭ ರಾಶಿಯಲ್ಲಿ ಶುಕ್ರ ಸಂಚಾರದ ಪ್ರಭಾವ: ಮನಸ್ಸಿನಲ್ಲಿ ಚಿಂತೆ ಕಾಡಬಹುದು. ಮನೆತನದ ಆಸ್ತಿಯ ವಿಚಾರದಲ್ಲಿ ಕಲಹ ಉಂಟಾಗಬಹುದು. ಉದ್ಯೋಗದಲ್ಲಿ ನಿಮ್ಮ ಕೆಲಸ ಕಾರ್ಯಗಳಲ್ಲಿ ಬೇರೆಯವರ ಹಸ್ತಕ್ಷೇಪ ನಿಮ್ಮ ಅರಿವಿಗೆ ಬರಬಹುದು. ಬಿಡುವಿಲ್ಲದ ಕೆಲಸದಿಂದ ಆರೋಗ್ಯದಲ್ಲಿ ತೊಂದರೆ ಉಂಟಾಗಬಹುದು. ಉತ್ತಮ ಆದಾಯವಿದ್ದರೂ, ಮುನ್ನೆಚ್ಚರಿಕೆ ವಹಿಸದೇ ಇದ್ದಲ್ಲಿ ಉಳಿತಾಯ ಮಾಡುವಲ್ಲಿ ವಿಫಲರಾಗುವಿರಿ. ಆತ್ಮೀಯರ ಸಹಾಯದಿಂದ ಹಣಕಾಸಿನ ಸ್ಥಿತಿಯು ಉತ್ತಮ ಮಟ್ಟ ತಲುಪಲಿದೆ. ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ಆದಾಯವಿರುತ್ತದೆ. ವಿವಾಹ ಯೋಗವಿದೆ. ಮಹಿಳಾ ಉದ್ಯಮಿಗಳು ಹಿನ್ನೆಡೆ ಅನುಭವಿಸುತ್ತಾರೆ. ಲೋಹದ ವಸ್ತುವಿನಿಂದ ತೊಂದರೆ ಉಂಟಾಗಬಹುದು. ಬಂಧು-ಬಳಗದವರ ಜೊತೆಯಲ್ಲಿ ಉತ್ತಮ ಒಡನಾಟ ಇರುವುದಿಲ್ಲ. ಮಾತುಕತೆಯ ಮೇಲೆ ನಿಗಾ ಇರಲಿ.
6) ಕನ್ಯಾ ರಾಶಿಯವರ ಮೇಲೆ ಕುಂಭ ರಾಶಿಯಲ್ಲಿ ಶುಕ್ರ ಸಂಚಾರದ ಪ್ರಭಾವ: ಉತ್ತಮ ಆದಾಯದಲ್ಲಿ ಪ್ರಗತಿ ಕಂಡುಬರುತ್ತದೆ. ಕುಟುಂಬದ ಕೆಲಸ ಕಾರ್ಯಗಳಲ್ಲಿ ಯಶಸ್ಸು ದೊರೆಯಬಹುದು. ಎಲ್ಲರ ಸಂತೋಷಕ್ಕೆ ಕಾರಣರಾಗುವಿರಿ. ಉತ್ತಮ ಯೋಜನೆಯಿಂದ ಹಣಕಾಸಿನ ವ್ಯವಹಾರವನ್ನು ನಿರ್ವಹಿಸುವಿರಿ. ನೆರೆಹೊರೆಯವರೊಂದಿಗೆ ಉತ್ತಮ ಬಾಂಧವ್ಯ ಇರುತ್ತದೆ. ಆರೋಗ್ಯದಲ್ಲಿ ಏರಿಳಿತ ಕಂಡು ಬರುತ್ತದೆ. ಉದ್ಯೋಗಸ್ಥರಿಗೆ ಬಡ್ತಿ ದೊರೆಯಬಹುದು. ಉದ್ಯೋಗದ ಸಲುವಾಗಿ ದೂರದ ಊರಿಗೆ ತೆರಳುವಿರಿ. ವಿದ್ಯಾರ್ಥಿಗಳು ಉನ್ನತ ವಿದ್ಯಾಭ್ಯಾಸದಲ್ಲಿ ವಿನೂತನ ಸಾಧನೆಯನ್ನು ಮಾಡುವಿರಿ. ಕೌಟುಂಬಿಕ ನಿರ್ವಹಣೆಗಾಗಿ ಹೆಚ್ಚಿನ ಹಣ ದೊರೆಯಬಹುದು. ವಿವಾದಗಳಿಂದ ದೂರ ಉಳಿಯುವಿರಿ. ತಪ್ಪನ್ನು ಒಪ್ಪಿಕೊಳ್ಳುವ ದೊಡ್ಡ ಗುಣ ನಿಮ್ಮಲ್ಲಿರುತ್ತದೆ. ಗುರು ಹಿರಿಯರ ಮೆಚ್ಚುಗೆಯನ್ನು ಗಳಿಸುವಿರಿ.
7) ತುಲಾ ರಾಶಿಯವರ ಮೇಲೆ ಕುಂಭ ರಾಶಿಯಲ್ಲಿ ಶುಕ್ರ ಸಂಚಾರದ ಪ್ರಭಾವ: ಬಿಡುವಿಲ್ಲದ ಕೆಲಸ ಕಾರ್ಯಗಳಿಂದ ದೈಹಿಕವಾಗಿ ಬಳಲುವಿರಿ. ಹಣದ ಕೊರತೆ ಕಂಡು ಬರುತ್ತದೆ. ಒಲ್ಲದ ಮನಸ್ಸಿನಿಂದ ಉದ್ಯೋಗವನ್ನು ಬದಲಿಸುವಿರಿ. ಉದ್ಯೋಗದಲ್ಲಿ ಅನಾವಶ್ಯಕ ತೊಂದರೆ ಎದುರಾಗಬಹುದು. ಮಾಡದ ತಪ್ಪಿಗೆ ದಂಡ ತೆರಬೇಕಾದ ಸನ್ನಿವೇಶ ಎದುರಾಗಬಹುದು. ಆತ್ಮೀಯರಿಂದ ಹಣದ ಸಹಾಯ ದೊರೆಯುತ್ತದೆ. ಮಕ್ಕಳ ವಿಚಾರದಲ್ಲಿ ಚಿಂತೆ ಕಾಡಬಹುದು. ಸ್ವಂತ ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಆಸಕ್ತಿಯನ್ನು ತೋರುವವಿರಿ. ಸಭೆ ಸಮಾರಂಭಗಳಲ್ಲಿ ಪಾಲ್ಗೊಳ್ಳದೆ ದೂರ ಉಳಿಯುವ ಸಾಧ್ಯತೆ ಇದೆ. ದಂಪತಿ ನಡುವೆ ಮನಸ್ತಾಪ ಕಾಡಬಹುದು. ಸ್ವಂತ ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಲಾಭ ಗಳಿಸುವಿರಿ. ಪಾಲುಗಾರಿಕೆಯ ವ್ಯಾಪಾರದಲ್ಲಿ ಆಸಕ್ತಿ ಇರುವುದಿಲ್ಲ. ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಹಣ ಹೊಂದಿಸಬೇಕಾಗುತ್ತದೆ.
8) ವೃಶ್ಚಿಕ ರಾಶಿಯವರ ಮೇಲೆ ಕುಂಭ ರಾಶಿಯಲ್ಲಿ ಶುಕ್ರ ಸಂಚಾರದ ಪ್ರಭಾವ: ಬುದ್ಧಿವಂತಿಕೆಯಿಂದ ಹಣಕಾಸಿನ ವಿಚಾರದಲ್ಲಿ ಯಶಸ್ಸನ್ನು ಗಳಿಸುವಿರಿ. ಅನಗತ್ಯ ಖರ್ಚು ವೆಚ್ಚಗಳನ್ನು ಕಡಿತಗೊಳಿಸುವಿರಿ. ಸೋಲುವ ವೇಳೆ ಕೋಪಗೊಳ್ಳುವ ಸಾಧ್ಯತೆ ಇದೆ. ಒಮ್ಮೆ ತೆಗೆದುಕೊಂಡ ನಿರ್ಧಾರಗಳನ್ನು ಬದಲಿಸುವುದಿಲ್ಲ. ಸಮರ್ಪಕ ದೈಹಿಕ ವ್ಯಾಯಾಮದಿಂದ ಉತ್ತಮ ಆರೋಗ್ಯವನ್ನು ಗಳಿಸುವುದು ಸಾಧ್ಯವಿದೆ. ಮಕ್ಕಳು ವಿದ್ಯಾಭ್ಯಾಸದಲ್ಲಿ ನಿರೀಕ್ಷಿತ ಮಟ್ಟವನ್ನು ತಲುಪುತ್ತಾರೆ. ಮೊದಲ ಆದ್ಯತೆಯನ್ನು ಕುಟುಂಬದ ಕೆಲಸ ಕಾರ್ಯಗಳಿಗೆ ನೀಡುವಿರಿ. ಕುಟುಂಬದ ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಉತ್ತಮ ಆದಾಯವಿದ್ದರೂ ಹೆಚ್ಚಿನ ಖರ್ಚು ವೆಚ್ಚಗಳು ಎದುರಾಗುತ್ತವೆ. ಆತ್ಮವಿಶ್ವಾಸದ ಕೊರತೆಯಿಂದ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆಗಳಿವೆ. ಸಹನೆಯಿಂದ ಎಲ್ಲವನ್ನೂ, ಎಲ್ಲರನ್ನೂ ಗೆಲ್ಲಬಲ್ಲಿರಿ.
9) ಧನಸ್ಸು ರಾಶಿಯವರ ಮೇಲೆ ಕುಂಭ ರಾಶಿಯಲ್ಲಿ ಶುಕ್ರ ಸಂಚಾರದ ಪ್ರಭಾವ: ಧೃಡ ನಿಲುವನ್ನು ತೆಗೆದುಕೊಳ್ಳದ ಕಾರಣ ಉದ್ಯೋಗದಲ್ಲಿ ಗಲಿಬಿಲಿಯ ವಾತಾವರಣ ಉಂಟಾಗುತ್ತದೆ. ಹಿರಿಯ ಅಧಿಕಾರಿಗಳ ಒಳ್ಳೆಯತನವನ್ನು ಸದ್ಬಳಕೆ ಮಾಡಿಕೊಳ್ಳಲು ಪ್ರಯತ್ನಿಸಿದ ಒಳಿತಾಗುವ ಸಾಧ್ಯತೆ ಇದೆ. ಕುಟುಂಬದಲ್ಲಿರುವ ವಯೋವೃದ್ಧರ ಆರೋಗ್ಯದಲ್ಲಿ ಸುಧಾರಣೆ ಕಂಡು ಬರುತ್ತದೆ. ಆತುರದಿಂದ ಮಾಡುವ ಕೆಲಸ ಕಾರ್ಯಗಳಿಂದ ಮಧ್ಯಮ ಗತಿಯ ಯಶಸ್ಸು ಗಳಿಸುವಿರಿ. ದೈಹಿಕವಾಗಿ ಬಳಲುವಿರಿ. ಬಂಧು-ಬಳಗದವರು ನಿಮ್ಮೊಂದಿಗೆ ಸಂತೋಷದಿಂದ ಬಾಳುತ್ತಾರೆ. ಮಕ್ಕಳಿಂದ ಶುಭ ವರ್ತಮಾನ ಬರಬಹುದು. ಅತಿಯಾದ ಜವಾಬ್ದಾರಿಗಳು ಮಾನಸಿಕ ಚಿಂತೆಯನ್ನು ಹೆಚ್ಚಿಸುತ್ತದೆ. ಹಣಕಾಸಿನ ವ್ಯವಹಾರದಲ್ಲಿ ಏಕಾಂಗಿತನ ನಿಮ್ಮನ್ನು ಕಾಡುತ್ತದೆ. ಬೇರೆಯವರ ಹಣಕಾಸಿನ ವ್ಯವಹಾರದಲ್ಲಿ ಮಧ್ಯವರ್ತಿ ಆಗದಿರಿ. ಉದ್ಯೋಗದಲ್ಲಿ ಉಂಟಾಗುವ ಬದಲಾವಣೆಗಳು ನಿಮಗೆ ಸಹಕಾರಿಯಾಗಬಹುದು. ಬಹುದಿನದಿಂದ ಇರುವ ಭೂವಿವಾದಕ್ಕೆ ಮಾತುಕತೆಯ ಮುಖಾಂತರ ಪರಿಹಾರ ಕಲ್ಪಿಸುವ ಸಾಧ್ಯತೆ ಇದೆ.
10) ಮಕರ ರಾಶಿಯವರಿಗೆ ಕುಂಭ ರಾಶಿಯಲ್ಲಿ ಶುಕ್ರ ಸಂಚಾರದ ಪ್ರಭಾವ: ನಿಮ್ಮಿಂದ ಸಹಾಯ ಪಡೆದವರು ನಿಮಗೆ ಅವಶ್ಯಕತೆ ಇದ್ದಾಗ ದೂರ ಸರಿಯುತ್ತಾರೆ. ಯಾವುದೇ ಕೆಲಸ ಕಾರ್ಯದಲ್ಲಿ ನಿರೀಕ್ಷಿತ ಯಶಸ್ಸು ದೊರೆಯಬಹುದು. ಹಣಕಾಸಿನ ತೊಂದರೆ ಇರುವುದಿಲ್ಲ. ಸಾರ್ವಜನಿಕ ಸೇವೆಯಲ್ಲಿ ತೊಡಗಿರುವವರು ಸಮಾಜದಲ್ಲಿ ವಿಶೇಷ ಗೌರವಕ್ಕೆ ಪಾತ್ರರಾಗುವ ಸಾಧ್ಯತೆ ಇದೆ. ಸ್ವಂತ ಮನೆ ಅಥವಾ ಜಮೀನು ಖರೀದಿಸುವ ಸಾಧ್ಯತೆಗಳಿವೆ. ಪಾಲುದಾರಿಕೆಯ ವ್ಯವಹಾರಗಳಲ್ಲಿ ನಿರೀಕ್ಷಿಸಿದ ಲಾಭಾಂಶ ದೊರೆಯುವುದು ಕಷ್ಟ. ಕಾನೂನಿನ ವಿಚಾರಗಳಲ್ಲಿನ ತೀರ್ಮಾನಗಳನ್ನು ಪಾಲಿಸುವುದು ಒಳ್ಳೆಯದು. ಆತುರ ಪಡದೆ ಆತ್ಮವಿಶ್ವಾಸದಿಂದ ಮುನ್ನಡೆದರೆ ಜೀವನದಲ್ಲಿ ಯಾವುದೇ ತೊಂದರೆ ಎದುರಾಗದು. ಅತಿಯಾಗಿ ಮಾತನಾಡುವ ಕಾರಣ ಕುಟುಂಬದ ಮತ್ತು ನಿಮ್ಮ ಸ್ವಂತ ವಿಚಾರಗಳು ಎಲ್ಲರಿಗೂ ತಿಳಿಯುತ್ತದೆ. ಆದ್ದರಿಂದ ಮಾತು ಕಡಿಮೆ ಮಾಡಿದಷ್ಟು ಒಳ್ಳೆಯದು.
11) ಕುಂಭ ರಾಶಿಯವರ ಮೇಲೆ ಕುಂಭ ರಾಶಿಯಲ್ಲಿ ಶುಕ್ರ ಸಂಚಾರದ ಪ್ರಭಾವ: ಆತುರದಿಂದ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವ ಪ್ರಮೇಯ ಕಂಡ ಬರುವುದಿಲ್ಲ. ಸಮಯ ಸಂದರ್ಭಕ್ಕೆ ಹೊಂದಿಕೊಂಡು ನಡೆಯುವ ಕಾರಣ, ಕುಟುಂಬದಲ್ಲಿ ಶಾಂತಿ ನೆಮ್ಮದಿ ನೆಲೆಸಿರುತ್ತದೆ. ಕುಟುಂಬದಲ್ಲಿ ಹಿರಿಯರ ತೀರ್ಮಾನವನ್ನು ಗೌರವಿಸುವಿರಿ. ಬಂಧು ಬಳಗದವರಿಂದ ದೂರ ಉಳಿಯಲು ಬಯಸುವಿರಿ. ಉತ್ತಮ ಸ್ನೇಹಿತರು ನಿಮ್ಮ ಕಷ್ಟ ನಷ್ಟಗಳಿಗೆ ಸ್ಪಂದಿಸುತ್ತಾರೆ. ಸ್ವಂತ ವ್ಯಾಪಾರ ವ್ಯವಹಾರವಿದ್ದಲ್ಲಿ ಉತ್ತಮ ವರಮಾನ ದೊರೆಯಬಹುದು. ಉದ್ಯೋಗದಲ್ಲಿ ನಿಧಾನಗತಿಯ ಪ್ರಗತಿಯನ್ನು ನಿರೀಕ್ಷಿಸಬಹುದು. ಬೇರೆಯವರಿಗೆ ಸಾಧ್ಯವಾಗದ ಸವಾಲೆನಿಸುವ ಕೆಲಸ ಕಾರ್ಯಗಳನ್ನು ಮಾಡಬಲ್ಲಿರಿ. ಎಲ್ಲರ ಪ್ರೀತಿ ವಿಶ್ವಾಸ ನಿಮಗೆ ದೊರೆಯುತ್ತದೆ. ಅವಶ್ಯಕತೆ ಇದ್ದಲ್ಲಿ ಉದ್ಯೋಗವನ್ನು ಬದಲಾಯಿಸಬಹುದು. ವಾಹನದಿಂದ ತೊಂದರೆ ಕಂಡು ಬರುತ್ತದೆ. ಎಚ್ಚರಿಕೆಯಿಂದ ಹಣಕಾಸಿನ ವ್ಯವಹಾರ ನಡೆಸುವುದು ಅವಶ್ಯ.
12) ಮೀನ ರಾಶಿಯವರಿಗೆ ಕುಂಭ ರಾಶಿಯಲ್ಲಿ ಶುಕ್ರ ಸಂಚಾರದ ಪ್ರಭಾವ: ಮಾನಸಿಕ ಒತ್ತಡದಿಂದಲೇ ಕೆಲಸ ಕಾರ್ಯಗಳನ್ನು ಆರಂಭಿಸುವಿರಿ. ನಿಮ್ಮ ಉದ್ಯೋಗದಲ್ಲಿ ಬೇರೆಯವರ ಪಾತ್ರ ಹೆಚ್ಚಿನದಾಗಿರುತ್ತದೆ. ಕಲುಷಿತ ನೀರು ಅಥವಾ ದ್ರವರೂಪದ ಆಹಾರ ಸೇವಿಸುವುದರಿಂದ ತೊಂದರೆಗೆ ಒಳಗಾಗುವಿರಿ. ನೀವೇ ತೆಗೆದುಕೊಳ್ಳುವ ತೀರ್ಮಾನಗಳಲ್ಲಿ ತಪ್ಪನ್ನು ಹುಡುಕುವಿರಿ. ನಿಮ್ಮ ಮೇಲೆ ಸಹೋದ್ಯೋಗಿಗಳಿಗೆ ಬೇಸರವಿರುತ್ತದೆ. ಅರೆಮನೆಸ್ಸಿನಿಂದ ಕೆಲಸ ಕಾರ್ಯಗಳನ್ನು ಆರಂಭಿಸುವ ಕಾರಣ ಹಿನ್ನಡೆ ಉಂಟಾಗುತ್ತದೆ. ಕುಟುಂಬದಲ್ಲಿ ಬೇಸರದ ವಾತಾವರಣವಿರುತ್ತದೆ. ರಕ್ತಕ್ಕೆ ಸಂಬಂಧಿಸಿದ ತೊಂದರೆ ಇರುವವರು ಎಚ್ಚರಿಕೆ ವಹಿಸಬೇಕು. ಬರುವ ಆದಾಯವನ್ನು ನೋಡಿ ಕೊಂಡು ನಿಮ್ಮ ಖರ್ಚು ವೆಚ್ಚಗಳನ್ನು ರೂಪಿಸುವಿರಿ. ನೀವು ತೆಗೆದುಕೊಳ್ಳುವ ಹಣಕಾಸಿಗೆ ಸಂಬಂಧಿಸಿದ ನಿರ್ಣಯಗಳನ್ನು ಎಲ್ಲರೂ ಒಪ್ಪುತ್ತಾರೆ. ಧೃಡ ಮನಸ್ಥಿತಿಯು ಹೊಸ ರೀತಿಯ ಬೆಳವಣಿಗೆಗೆ ಕಾರಣವಾಗುತ್ತದೆ.
ಬರಹ: ಎಚ್. ಸತೀಶ್, ಜ್ಯೋತಿಷಿ, ಬೆಂಗಳೂರು
ಮೊಬೈಲ್: 8546865832
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ.)
ವಿಭಾಗ