Ekadashi Tithi 2023: ಈ ಬಾರಿ ಪ್ರಥಮೈಕಾದಶಿ ಯಾವಾಗ; ಶಯನಿ ಏಕಾದಶಿ ಎಂದೂ ಕರೆಯಲ್ಪಡುವ ಈ ದಿನದ ಮಹತ್ವ ಆಚರಣೆ ಬಗ್ಗೆ ಒಂದಿಷ್ಟು ವಿವರ
ಈ ದಿನ ವಿಷ್ಣುವಿನ ಏಳನೇ ಅವತಾರವಾದ ಶ್ರೀರಾಮನ ಗೌರವಾರ್ಥವಾಗಿ ಗೋದಾವರಿ ನದಿಯಲ್ಲಿ ಸ್ನಾನ ಮಾಡುವುದು ವಿಶೇಷವಾಗಿದೆ. ವಿಷ್ಣು ಸಹಸ್ರನಾಮ ಪಠಿಸುವುದರಿಂದ ಹೆಚ್ಚಿನ ಫಲ ಲಭ್ಯವಾಗುತ್ತದೆ.
ಪ್ರತಿ ವರ್ಷ ಆಷಾಢ ಮಾಸದ ಶುಕ್ಲ ಪಕ್ಷದ ಏಕಾದಶಿಯನ್ನು ಪ್ರಥಮೈಕಾದಶಿ ಎಂದು ಕರೆಯುತ್ತಾರೆ. ಉದಯದಲ್ಲಿ ಏಕಾದಶಿ ಇರುವ ವೇಳೆ ಇದನ್ನು ಆಚರಣೆ ಮಾಡಬೇಕೆಂಬ ನಿಯಮವಿದೆ. ಇದನ್ನು ಶಯನಿ ಏಕಾದಶಿ ಎಂದೂ ಕರೆಯುತ್ತಾರೆ. ಈ ಬಾರಿ ಜೂನ್ 29 ಗುರುವಾರ ಏಕಾದಶಿ ಆಚರಣೆ ಮಾಡಲಾಗುತ್ತಿದೆ.
ಧಾರ್ಮಿಕ ಗ್ರಂಥಗಳಲ್ಲಿ ಉಲ್ಲೇಖ
ಸಾಮಾನ್ಯವಾಗಿ ಏಕಾದಶಿಯ ದಿನ ಎಲ್ಲರೂ ಉಪವಾಸ ಮಾಡುತ್ತಾರೆ. ಈ ದಿನ ಉಪವಾಸ ಮಾಡಿದರೆ ಬ್ರಹ್ಮ ವಿಷ್ಣು ಮಹೇಶ್ವರರನ್ನು ಪೂಜಿಸಿದ ಪುಣ್ಯ ಲಭಿಸುತ್ತದೆ ಎಂದು ಧಾರ್ಮಿಕ ಗ್ರಂಥಗಳಲ್ಲಿ ಉಲ್ಲೇಖವಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಇದನ್ನು ಉಪವಾಸದ ಹಬ್ಬ ಎಂದೂ ಕರೆಯುತ್ತಾರೆ. ಈ ದಿನ ಕೆಲವರು ಸಂಪೂರ್ಣ ಸಸ್ಯಾಹಾರಿಗಳಾಗಿ ಉಪವಾಸ ಜಾಗರಣೆ ಆಚರಿಸುತ್ತಾರೆ. ಇದರಿಂದಾಗಿ, ಎಲ್ಲಾ ಪಾಪಕರ್ಮಗಳಿಂದ ಮುಕ್ತರಾಗುತ್ತಾರೆ ಎಂದು ಧಾರ್ಮಿಕ ಗ್ರಂಥಗಳಲ್ಲಿ ಹೇಳಲಾಗಿದೆ. ಇಂದಿನಿಂದ ಬರುವ ಒಟ್ಟು ನಾಲ್ಕು ಶುದ್ಧ ಏಕಾದಶಿಗಳಲ್ಲಿ ಉಪವಾಸ ಮಾಡಿದರೆ ಎಲ್ಲಾ ರೀತಿಯ ಪಾಪಗಳು ಪರಿಹಾರವಾಗುತ್ತದೆ ಎಂದು ಉಪವಾಸದ ಬಗ್ಗೆ ಸ್ವಯಂ ಶ್ರೀ ಕೃಷ್ಣನೇ ಧರ್ಮರಾಯನಿಗೆ ಹೇಳುತ್ತಾನೆ. ಕೆಲವರು ಹಲಸಿನ ಎಲೆಯ ಮೇಲೆ ಭೋಜನ ಸ್ವೀಕರಿಸುತ್ತಾರೆ ಮತ್ತು ನೆಲದ ಮೇಲೆ ಮಲಗುವುದಲ್ಲದೆ ಬ್ರಹ್ಮಚರ್ಯವನ್ನು ಆಚರಿಸುತ್ತಾರೆ.
ಪಂಡರಾಪುರದಲ್ಲಿ ವಿಶೇಷ ಪೂಜೆ
ಈ ದಿನ ಪಂಡರಾಪುರದಲ್ಲಿ ವಿಶೇಷವಾದ ಪೂಜೆಯನ್ನು ಮಾಡಲಾಗುತ್ತದೆ. ಇಲ್ಲಿ ವಿಷ್ಣುವಿನ ಪ್ರತಿರೂಪವಾದ ವಿಠ್ಠಲ ದೇವರನ್ನು ಪೂಜಿಸಲಾಗುತ್ತದೆ. ಪುರಾಣ ಕಾಲದ ಕಥೆಯೊಂದರ ಪ್ರಕಾರ, ರಾಜ್ಯವೊಂದರಲ್ಲಿ ಭಯಂಕರವಾದ ಕ್ಷಾಮ ಇತ್ತು. ಅತಿ ಸತ್ಯಸಂಧನಾದ ರಾಜನು ಪ್ರಜೆಗಳಿಗೆ ಯಾವುದೇ ಸಹಾಯ ಮಾಡದ ಪರಿಸ್ಥಿತಿಯಲ್ಲಿರುತ್ತಾನೆ. ಆದರೆ ಈತ ದೇವರ ಭಕ್ತನಾಗಿದ್ದು ಎಲ್ಲಾ ಪೂಜೆ, ವ್ರತಗಳಲ್ಲೂ ಭಾಗಿಯಾರುತ್ತಾರೆ. ಆ ಸಂದರ್ಭದಲ್ಲಿ ನಾರದ ಮಹರ್ಷಿಗಳು ಶಯನಿ ಏಕಾದಶಿ ವ್ರತವನ್ನು ಆಚರಿಸುವಂತೆ ಸಲಹೆ ನೀಡುತ್ತಾರೆ . ಆಗ ರಾಜನು ಪೂಜೆ ಪುನಸ್ಕಾರಗಳನ್ನು ನೇಮದಿಂದ ನಡೆಸಿದ ಕಾರಣ ಇಡೀ ರಾಜ್ಯವೇ ಕ್ಷಾಮದಿಂದ ಮುಕ್ತಿ ಪಡೆಯುತ್ತದೆ.
ವಿಷ್ಣು ಪೂಜೆ
ಈ ಅವಧಿಯಲ್ಲಿ ಪಾದರಕ್ಷೆ ,ಛತ್ರಿ, ಉಪ್ಪು ,ನೆಲ್ಲಿಕಾಯಿಗಳನ್ನು ದಾನ ಮಾಡುವುದರಿಂದ ವಿಷ್ಣುವಿನ ಅನುಗ್ರಹವನ್ನು ಪಡೆಯಬಹುದು. ಗಂಗಾ ಇತರ ನದಿಗಳಲ್ಲಿ ಮಂಗಳ ಸ್ನಾನ ಮಾಡಿದರೆ ಅನೇಕ ರೀತಿಯಲ್ಲಿ ಶುಭ ಫಲಗಳನ್ನು ಪಡೆಯಬಹುದು. ವಿಷ್ಣುವಿಗೆ ಪೂಜೆ ಮಾಡಿ ರವೆಯಿಂದ ಮಾಡಿದ ಸಜ್ಜಿಗೆಯನ್ನು ನೈವೇದ್ಯ ಮಾಡುವುದರಿಂದ ಕುಟುಂಬದ ಕಷ್ಟ ನಷ್ಟಗಳು ಮರೆಯಾಗುತ್ತದೆ. ಈ ವೇಳೆ ಲಕ್ಷ್ಮಿ ಸಹಿತ ವಿಷ್ಣುವಿನ ಪೂಜೆ ಮಾಡಿದರೆ ಅಧಿಕ ಶುಭ ಫಲಗಳು ದೊರೆಯುತ್ತವೆ.
ಗೋದಾವರಿ ನದಿ ಸ್ನಾನ
ವಿಷ್ಣುವಿನ ಏಳನೇ ಅವತಾರವಾದ ಶ್ರೀರಾಮನ ಗೌರವಾರ್ಥವಾಗಿ ಗೋದಾವರಿ ನದಿಯಲ್ಲಿ ಸ್ನಾನ ಮಾಡುವುದು ವಿಶೇಷವಾಗಿದೆ. ವಿಷ್ಣು ಸಹಸ್ರನಾಮ ಪಠಿಸುವುದರಿಂದ ಹೆಚ್ಚಿನ ಫಲ ಲಭ್ಯವಾಗುತ್ತದೆ. ದಂಪತಿ ಜೊತೆ ಸೇರಿ ಪೂಜೆ ಮಾಡುವುದರಿಂದ ಜೀವನವಿಡಿ ಕುಟುಂಬದಲ್ಲಿ ಅನ್ನಕ್ಕೆ ಏನೂ ಸಮಸ್ಯೆ ಆಗುವುದಿಲ್ಲ. ಕೆಲವು ಕಡೆ ಅಳಿಯಂದಿರಿಗೆ ವಸ್ತ್ರ ದಾನ ಮಾಡುವ ಸಂಪ್ರದಾಯ ಇದೆ. ಮನ್ಯು ಸೂಕ್ತ ಪಾರಾಯಣದಿಂದ ಹಣದ ತೊಂದರೆ ನೀಗುವುದು ಮಾತ್ರವಲ್ಲದೆ ಶತ್ರುಗಳ ಉಪಟಳದಿಂದ ಪಾರಾಗಬಹುದು.