ಮಾಘ ಮಾಸದಲ್ಲಿ ನದಿಸ್ನಾನದ ಮಹತ್ವ, ಮದುವೆಯಂಥ ಶುಭ ಕಾರ್ಯಗಳನ್ನು ಮಾಡಲು ಕಾರಣವೇನು? ಚಿಲಕಮರ್ತಿ ಪ್ರಭಾಕರ ಚಕ್ರವರ್ತಿ ಶರ್ಮಾ ವಿವರಣೆ
ಹಿಂದೂ ಧರ್ಮದಲ್ಲಿ ಮಾಘ ಮಾಸಕ್ಕೆ ವಿಶೇಷ ಪ್ರಾಮುಖ್ಯತೆ ಇದೆ. ಈ ಸಮಯದಲ್ಲಿ ವಿಷ್ಣುವಿನ ಆರಾಧನೆ, ಸರಸ್ವತಿ ಪೂಜೆ, ನದಿಸ್ನಾನಕ್ಕೆ ಬಹಳ ಮಹತ್ವವಿದೆ. ಈ ಮಾಸದಲ್ಲಿ ನದಿಸ್ನಾನ ಮಾಡಿದರೆ ಕೂಡಾ ವಿಶೇಷ ಫಲ ದೊರೆಯುತ್ತದೆ ಎಂದು ಪ್ರಸಿದ್ಧ ಆಧ್ಯಾತ್ಮಿಕ ವಿದ್ವಾಂಸ ಬ್ರಹ್ಮಶ್ರೀ ಚಿಲಕಮರ್ತಿ ಪ್ರಭಾಕರ ಚಕ್ರವರ್ತಿ ಶರ್ಮಾ ಹೇಳಿದ್ದಾರೆ.

ಹಿಂದೂ ಕ್ಯಾಲೆಂಡರ್ ಪ್ರಕಾರ ಮಾಘ ಮಾಸವು 11ನೆ ತಿಂಗಳಾಗಿದೆ. ಚಂದ್ರನು ಮಖಾ ನಕ್ಷತ್ರದಲ್ಲಿ ಸಂಚರಿಸುವುದರಿಂದ ಈ ತಿಂಗಳಿಗೆ ಈ ಮಾಘ ಮಾಸ ಎಂಬ ಹೆಸರು ಬಂದಿದೆ. ಉತ್ತರಾಯಣ ಪುಣ್ಯ ಕಾಲದಲ್ಲಿ ಬರುವ ಈ ಮಾಸದಲ್ಲಿ ವಿಷ್ಣುವಿನ ಆರಾಧನೆಗೂ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ. ಮಾಘ ಮಾಸದಲ್ಲಿ ನದಿಯಲ್ಲಿ ಸ್ನಾನ ಮಾಡಿ ವಿಷ್ಣುವನ್ನು ಪೂಜಿಸಿ ಕೈಲಾದಷ್ಟು ದಾನ ಮಾಡಿದರೆ ಅನೇಕ ಪುಣ್ಯ ಕಾರ್ಯಗಳನ್ನು ಮಾಡಿದ ಫಲ ದೊರೆಯುತ್ತದೆ.
ಮಾಘಮಾಸದಲ್ಲಿ ನದಿಸ್ನಾನಕ್ಕೆ ಇದೆ ಪ್ರಾಮುಖ್ಯತೆ
ಮಾಘ ಮಾಸದಲ್ಲಿ ಎಲ್ಲಾ ನದಿಗಳು ಪವಿತ್ರ ಗಂಗೆಗೆ ಸಮಾನ ಎಂದು ಪುರಾಣಗಳು ಹೇಳುತ್ತವೆ. ನದಿಯಲ್ಲಿ ಸ್ನಾನ ಮಾಡಲು ಸಾಧ್ಯವಾಗದವರು ಸಾಧ್ಯವಾದಷ್ಟು ಕೊಳ ಅಥವಾ ಬಾವಿ ನೀರಿನಲ್ಲಿ ಸ್ನಾನ ಮಾಡಬಹುದು. ಸ್ನಾನದ ನಂತರ ಸೂರ್ಯನಿಗೆ ಅರ್ಘ್ಯವನ್ನು ಅರ್ಪಿಸುವುದು ಸಹ ಒಂದು ಆಚರಣೆಯಾಗಿದೆ. ಅಲ್ಲದೆ, ಈ ಮಾಘ ಮಾಸದಲ್ಲಿ ಎಳ್ಳು ದಾನ ಮಾಡುವುದರಿಂದ ವಿಶೇಷ ಫಲಗಳು ದೊರೆಯುತ್ತದೆ. ಮಾಘಮಾಸದಲ್ಲಿ ಬರುವ ಹುಣ್ಣಿಮೆ ಕೂಡಾ ಬಹಳ ವಿಶೇಷವಾದುದು. ತಿಂಗಳಿಡೀ ಪ್ರತಿದಿನ ನದಿಯಲ್ಲಿ ಸ್ನಾನ ಮಾಡಲು ಸಾಧ್ಯವಾಗದಿದ್ದರೂ ಹುಣ್ಣಿಮೆ ದಿನವಾದರೂ ನದಿಸ್ನಾನ ಮಾಡಿದರೆ ಪುಣ್ಯಪ್ರಾಪ್ತಿಯಾಗುತ್ತದೆ ಎಂದು ಪ್ರಸಿದ್ಧ ಆಧ್ಯಾತ್ಮಿಕ ವಿದ್ವಾಂಸ ಬ್ರಹ್ಮಶ್ರೀ ಚಿಲಕಮರ್ತಿ ಪ್ರಭಾಕರ ಚಕ್ರವರ್ತಿ ಶರ್ಮಾ ಹೇಳಿದ್ದಾರೆ.
ಮಾಘಮಾಸದಲ್ಲಿ ಅನುಕೂಲವಿದ್ದವರು ಸಮುದ್ರದಲ್ಲಿ ಕೂಡಾ ಸ್ನಾನ ಮಾಡಬಹುದು. ಏಕೆಂದರೆ ಎಲ್ಲಾ ನದಿಗಳು ಸಮುದ್ರ ಸೇರುವುದರಿಂದ ಸಮುದ್ರದಲ್ಲಿ ಸ್ನಾನ ಮಾಡಿದರೆಎಲ್ಲಾ ನದಿಗಳಲ್ಲಿ ಸ್ನಾನ ಮಾಡುವ ಪುಣ್ಯ ದೊರೆಯುತ್ತದೆ. ಈ ಮಾಸದಲ್ಲಿ ಮದುವೆ, ಅಕ್ಷರಾಭ್ಯಾಸ, ನಾಮಕರಣ, ಗೃಹಪ್ರವೇಶದಂಥ ಶುಭ ಕಾರ್ಯವನ್ನು ಮಾಡಿದರೆ ಉತ್ತಮ. ಇತರ ತಿಂಗಳುಗಳಿಗೆ ಹೋಲಿಸಿದರೆ ಮಾಘ ಮಾಸದಲ್ಲಿ ಒಳ್ಳೆ ಮುಹೂರ್ತಗಳಿವೆ ಮತ್ತು ಈ ಸಮಯದಲ್ಲಿ ವಿವಾಹವಾದರೆ ವೈವಾಹಿಕ ಜೀವನವು ಸಂತೋಷದಿಂದ ಕೂಡಿರುತ್ತದೆ ಎಂದು ನಂಬಲಾಗಿದೆ. ಅದಕ್ಕಾಗಿಯೇ ಈ ತಿಂಗಳಲ್ಲಿ ಹೆಚ್ಚು ಮದುವೆ ಲಗ್ನಗಳಿರುತ್ತವೆ. ಮಾಘ ಮಾಸದಲ್ಲಿ ಜ್ಞಾನವನ್ನು ದಯಪಾಲಿಸುವ ಸರಸ್ವತಿ ದೇವಿಯ ಜನ್ಮದಿನ ಕೂಡಾ ಇದೆ. ಇದೆಲ್ಲದರ ಜೊತೆಗೆ ರಥಸಪ್ತಮಿ ಕೂಡಾ ಮಾಘ ಮಾಸದಲ್ಲೇ ಬರುತ್ತದೆ ಎಂದು ಬ್ರಹ್ಮಶ್ರೀ ಚಿಲಕಮರ್ತಿ ಪ್ರಭಾಕರ ಚಕ್ರವರ್ತಿ ಶರ್ಮಾ ಹೇಳಿದ್ದಾರೆ.
ವಸಂತ ಪಂಚಮಿ, ರಥ ಸಪ್ತಮಿ ಬರುವುದು ಇದೇ ಮಾಸದಲ್ಲಿ
ಮಾಘಶುದ್ಧ ಪಂಚಮಿಯನ್ನು ಶ್ರೀ ಪಂಚಮಿ ಮತ್ತು ವಸಂತ ಪಂಚಮಿ ಎಂದೂ ಕರೆಯಲಾಗುತ್ತದೆ. ವಿದ್ಯೆಯ ಅಧಿದೇವತೆ, ಜ್ಞಾನವನ್ನು ನೀಡುವ ಸರಸ್ವತಿ ದೇವಿ ಜನ್ಮದಿನವನ್ನು ವಸಂತ ಪಂಚಮಿಯನ್ನಾಗಿ ಆಚರಿಸಲಾಗುತ್ತದೆ. ವಸಂತ ಪಂಚಮಿಯಂದು ವಾಗ್ದೇವಿಯನ್ನು ಪೂಜಿಸುವುದರಿಂದ ಅಪಾರ ಜ್ಞಾನ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಶರನ್ನವ ರಾತ್ರಿಗಳಲ್ಲಿ ಬರುವ ಮೂಲ ನಕ್ಷತ್ರದ ಹೊರತುಪಡಿಸಿ ಈ ದಿನವೂ ಸರಸ್ವತಿ ದೇವಿಯನ್ನು ಆರಾಧಿಸಲಾಗುತ್ತದೆ. ಹೀಗೆ ಮಾಡುವುದರಿಂದ ಯಾವುದೇ ಅಡ್ಡಿ ಆತಂಕ ಇಲ್ಲದೆ ಮಕ್ಕಳು ವಿದ್ಯಾಭ್ಯಾ ಮಾಡುತ್ತಾರೆ. ಆದ್ದರಿಂದಲೇ ವಸಂತ ಪಂಚಮಿಯನ್ನು ವಿದ್ಯಾರಂಭ ಪರ್ವ ದಿನ ಎಂದೂ ಕರೆಯಲಾಗುತ್ತದೆ.
ಇನ್ನು ರಥಸಪ್ತಮಿಯಂದು ಸೂರ್ಯನು 7 ಕುದುರೆಗಳ ರಥದ ಮೇಲೆ ಸವಾರಿ ಮಾಡುತ್ತಾನೆ. ಸೂರ್ಯನು 7 ಕುದುರೆಗಳ ರಥವನ್ನು ಏರಿ ದಕ್ಷಿಣಾಯನವನ್ನು ಮುಗಿಸಿದ ನಂತರ ಪೂರ್ವಕ್ಕೆ ಪ್ರಯಾಣಿಸುತ್ತಾನೆ. ರಥಸಪ್ತಮಿ ಎಂದರೆ ಸೂರ್ಯ ಜನಿಸಿದ ದಿನವಲ್ಲ, ಇಂದಿನಿಂದ ಸೂರ್ಯನ ರಥಯಾತ್ರೆ ಆರಂಭವಾಗುತ್ತದೆ. ಮಾಘ ಸಪ್ತಮಿಯಿಂದ ಬರುವ ಮುಂದಿನ 6 ತಿಂಗಳನ್ನು ಉತ್ತರಾಯಣ ಪುಣ್ಯಕಾಲವೆಂದು ಪರಿಗಣಿಸಲಾಗಿದೆ. ಸೂರ್ಯನ 7 ಕುದುರೆಗಳು ಏಳು ವಾರಗಳನ್ನು ಸೂಚಿಸುತ್ತದೆ. ಈ ಸಮಯದಲ್ಲಿ ಮೇಷದಿಂದ ಮೀನದವರೆಗೆ 12 ರಾಶಿಗಳಲ್ಲಿ ಪ್ರಯಾಣಿಸುತ್ತಾನೆ. ಸೂರ್ಯ ರಥ ಈ 12 ಚಿಹ್ನೆಗಳನ್ನು ಪೂರ್ಣಗೊಳಿಸಲು ಒಂದು ವರ್ಷ ತೆಗೆದುಕೊಳ್ಳುತ್ತದೆ. ಈ ವಿಶೇಷ ದಿನದಂದು ಸೂರ್ಯನನ್ನು ಪೂಜಿಸಿದರೆ ಹಣಕಾಸು, ಆರೋಗ್ಯ ಸಮಸ್ಯೆಗಳು ದೂರಾಗುತ್ತದೆ. ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ದೊರೆಯುತ್ತದೆ.
ಎಕ್ಕದ ಎಲೆಯನ್ನು ಬಳಸುವುದು ಏಕೆ?
ಈ ದಿನ ತಲೆ ದೇಹದ ವಿವಿಭ ಭಾಗಗಳಲ್ಲಿ ಎಕ್ಕದ ಎಲೆಗಳನ್ನು ಇಟ್ಟು ಸ್ನಾನ ಮಾಡಿ ಹೊರಗೆ ಸೂರ್ಯನ ಬೆಳಕಿನಲ್ಲಿ ಪೊಂಗಲ್ ಮಾಡಿ, ಚಪ್ಪರದ ಅವರೆಕಾಯಿಂದ ರಥ ಮಾಡಿ ಪೂಜಿಸುವ ಸಂಪ್ರದಾಯವಿದೆ. ಎಕ್ಕದ ಎಲೆಯನ್ನು ಬಳಸುವ ವೈಜ್ಞಾನಿಕ ಕಾರಣವನ್ನು ವಿವರಿಸುವುದಾದರೆ, ಎಕ್ಕದ ಎಲೆ ಆರೋಗ್ಯಕ್ಕೆ ಬಹಳ ಒಳ್ಳೆಯದು, ಇದನ್ನು ಬಳಸಿದರೆ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ನಿವಾರಣೆಯಾಗುತ್ತದೆ. ಇದು ಔಷಧೀಯ ಗುಣಗಳನ್ನು ಹೊಂದಿದೆ.
ಒಟ್ಟಿನಲ್ಲಿ ಮದುವೆ ಅಥವಾ ಇನ್ನಿತರ ಶುಭ ಕಾರ್ಯ, ಸೂರ್ಯ ಆರಾಧನೆ, ಸರಸ್ವತಿ ಪೂಜೆ, ನದಿಸ್ನಾನಕ್ಕೆ ಈ ಮಾಸದಲ್ಲಿ ಬಹಳ ಪ್ರಾಮುಖ್ಯತೆ ಇದೆ ಎಂದು ಬ್ರಹ್ಮಶ್ರೀ ಚಿಲಕಮರ್ತಿ ಪ್ರಭಾಕರ ಚಕ್ರವರ್ತಿ ಶರ್ಮಾ ತಿಳಿಸಿದ್ದಾರೆ.
