ಭಾರತ ಸೇರಿದಂತೆ ಜಗತ್ತಿನಾದ್ಯಂತ ಇಂದು ತ್ಯಾಗದ ಸಂಕೇತ ಗುಡ್ ಫ್ರೈಡೇ ಆಚರಣೆ; ಚರ್ಚ್ ಗಳಲ್ಲಿ ಉಪವಾಸ ಪ್ರಾರ್ಥನೆ
2025ರ ಏಪ್ರಿಲ್ 18 ರಂದು ಗುಡ್ ಫ್ರೈಡೇ ಆಚರಿಸಲಾಗುತ್ತಿದೆ. ಯೇಸು ಕ್ರಿಸ್ತನ ತ್ಯಾಗ ಹಾಗೂ ಬಲಿದಾನವನ್ನು ಸೂಚಿಸುವ ಈ ದಿನವನ್ನು ಸಂಭ್ರಮಕ್ಕಿಂತ ಗಂಭೀರವಾಗಿ ಉಪವಾಸದ ಪ್ರಾರ್ಥನೆಯೊಂದಿಗೆ ಆಚರಿಸಲಾಗುತ್ತಿದೆ.

ಗುಡ್ ಫ್ರೈಡೇ 2025: ಯೇಸು ಕ್ರಿಸ್ತನ ತ್ಯಾಗ ಹಾಗೂ ಬಲಿದಾನವನ್ನು ಸ್ಮರಿಸುವ ಗುಡ್ ಫ್ರೈಡೇಯನ್ನು ಇಂದು (ಏಪ್ರಿಲ್ 18, ಶುಕ್ರವಾರ) ಎಲ್ಲಾ ಕ್ರೈಸ್ತ ಸಮುದಾಯದವರು ಭಾರತ ಸೇರಿದಂತೆ ಜಗತ್ತಿನಾದ್ಯಂತ ಆಚರಿಸುತ್ತಿದ್ದಾರೆ. ಗುಡ್ ಫ್ರೈಡೇಯನ್ನು ಶುಭ ಶುಕ್ರವಾರ ಎಂದು ಕರೆಯಲಾಗುತ್ತದೆ. ಯೇಸು ಕ್ರಿಸ್ತನು ಈ ಲೋಕದಲ್ಲಿನ ಮನುಷ್ಯರ ಪಾಪಗಳಿಗಾಗಿ ತಾನು ಶಿಲುಬೆಯಲ್ಲಿ ಪ್ರಾಣವನ್ನು ಅರ್ಪಿಸಿದ ಎಂದು ಬೈಬಲ್ ಹೇಳುತ್ತದೆ. ಈ ತ್ಯಾಗವನ್ನು ಸ್ಮರಿಸಿ ಕ್ರೈಸ್ತ ಬಾಂಧವರು ಇವತ್ತು ಚರ್ಚ್ ಗಳಲ್ಲಿ ಉಪವಾಸ ಪ್ರಾರ್ಥನೆಗಳೊಂದಿಗೆ ದೇವರ ವಾಕ್ಯಗಳನ್ನು ಓದುತ್ತಾರೆ. ಪ್ರತಿ ವರ್ಷ ಡಿಸೆಂಬರ್ 25 ರಂದು ಕ್ರಿಸ್ಮನ್ ಹಬ್ಬದ ಸಂದರ್ಭದಲ್ಲಿ ಯೇಸು ಕ್ರಿಸ್ತನ ಹುಟ್ಟಿದ ದಿನವನ್ನು ಸಂಭ್ರಮಿಸಲಾಗುತ್ತದೆ. ಆದರೆ ಗುಡ್ ಫ್ರೈಡೇಯಲ್ಲಿ ಆತನ ಮರಣ ಹೊಂದಿರುವುದನ್ನು ಸ್ಮರಿಸಲಾಗುತ್ತದೆ.
ಶಿಲುಬೆಯಲ್ಲಿ ಯೇಸು ಮರಣವನ್ನು ಹೊಂದಿರುವುದನ್ನು ಕ್ರೈಸ್ತರು ತ್ಯಾಗ ಅಥವಾ ಬಲಿದಾನವಾಗಿ ಸ್ವೀಕರಿಸುತ್ತಾರೆ. ಇದು ಒಳ್ಳೆಯದು. ಹೀಗಾಗಿಯೇ ಇದನ್ನು ಗುಡ್ ಫ್ರೈಡೇ ಎಂದು ಕರೆಯಲಾಗುತ್ತದೆ. ಯೇಸು ಕ್ರಿಸ್ತನ ಮರಣವನ್ನು ಒಳ್ಳೆಯದು ಎಂದು ಯಾಕೆ ಕರೆಯುತ್ತಾರೆ ಎಂಬುದನ್ನು ನೋಡುವುದಾದರೆ ಆತ ಮರಣ ಹೊಂದಿದ ಮೂರು ದಿನಗಳ ನಂತರ ಮನುಷ್ಯರಿಗಾಗಿ ಮತ್ತೆ ಸಮಾಧಿಯಿಂದ ಎದ್ದು ಬಂದನು ಎಂದು ಬೈಬಲ್ ಹೇಳುತ್ತದೆ. ಯೇಸು ಮರಣ ಹೊಂದಿದ ಮೂರನೇ ದಿನ ಜೀವಂತವಾಗಿ ಎದ್ದುಬಂದ ಎಂಬುದನ್ನು ಪುನರುತ್ಥಾನದ ಸಂಕೇತವಾಗಿ ಈಸ್ಟರ್ ಭಾನುವಾರ ಎಂದು ಆಚರಿಸಲಾಗುತ್ತದೆ. 2025ರ ಏಪ್ರಿಲ್ 20 ರಂದು ಈಸ್ಟರ್ ಭಾನುವಾರವನ್ನು ಆಚರಿಸಲಾಗುತ್ತದೆ. ಈ ಎರಡೂ ವಿಶೇಷ ದಿನಗಳಲ್ಲಿ ಜಗತ್ತಿನಾದ್ಯಂತ ಕ್ರೈಸ್ತ ಬಾಂಧವರು ಚರ್ಚ್ ಗಳಲ್ಲಿ ನಡೆಯುವ ವಿಶೇಷ ಪ್ರಾರ್ಥನೆಗಳಲ್ಲಿ ಭಾಗವಹಿಸುತ್ತಾರೆ. ಉಪವಾಸ, ಶೋಕದ ಹಾಡುಗಳೊಂದಿಗೆ ದೇವರನ್ನು ಸ್ಮರಿಸುತ್ತಾರೆ.
ಗುಡ್ ಫ್ರೈಡೇ 2025: ಕ್ರೈಸ್ತರು ಗುಡ್ ಫ್ರೈಡೇಯನ್ನು ಏಕೆ ಮತ್ತು ಹೇಗೆ ಆಚರಿಸುತ್ತಾರೆ?
ಬ್ರಿಟಾನಿಕಾ ಪ್ರಕಾರ, ಗುಡ್ ಫ್ರೈಡೇಯನ್ನು ನಂಬಿಕೆಯ ಆರಂಭಿಕ ದಿನಗಳಿಂದಲೂ ಕ್ರೈಸ್ತರು ಶೋಕ, ತಪಸ್ಸು ಮತ್ತು ಉಪವಾಸದ ದಿನವೆಂದು ಗುರುತಿಸಿದ್ದಾರೆ. ಗುಡ್ ಫ್ರೈಡೇ ಎಂಬ ಪದವು ಪವಿತ್ರ ಮಹತ್ವವನ್ನು ಪ್ರತಿಬಿಂಬಿಸುತ್ತದೆ ಎಂದು ಕೆಲವರು ನಂಬಿದರೆ, ಇತರರು ಧಾರ್ಮಿಕ ಆಚರಣೆಯಾಗಿ ಅದರ ಸ್ಥಾನಮಾನದಿಂದ ಈ ಹೆಸರು ಬಂದಿದೆ ಎಂದು ಸೂಚಿಸುತ್ತಾರೆ.
ಕ್ರೈಸ್ತರು ಉಪವಾಸ, ಅಗತ್ಯವಿರುವವರಿಗೆ ದಾನ, ಚರ್ಚ್ ಗಳಲ್ಲಿ ಹಮ್ಮಿಕೊಳ್ಳುವ ವಿಶೇಷ ಕೂಟಗಳಲ್ಲಿ ಭಾಗವಹಿಸುವ ಮೂಲಕ ಶುಭ ಶುಕ್ರವಾರವನ್ನು ಆಚರಿಸುತ್ತಾರೆ. ಈ ಸಮಯದಲ್ಲಿ, ಜನರು ತಮ್ಮ ಜೀವನದಲ್ಲಿ ನೋವು, ಸಂಕಟ ಮತ್ತು ಯಾತನೆಯಿಂದ ಮುಕ್ತರಾಗಲಿ ಎಂದು ಪ್ರಾರ್ಥಿಸುತ್ತಾರೆ. ಈ ದಿನದಂದು ಒಂದು ಕೇಂದ್ರ ಆಚರಣೆಯೆಂದರೆ ಮಹಾ ಮೂರು ಗಂಟೆಗಳ ಯಾತನೆಯ ಸೇವೆ, ಇದನ್ನು ಮಧ್ಯಾಹ್ನದಿಂದ ಮಧ್ಯಾಹ್ನ 3 ರವರೆಗೆ ನಡೆಸಲಾಗುತ್ತದೆ. ಈ ಸಮಯವನ್ನು ಸಾಂಪ್ರದಾಯಿಕವಾಗಿ ನಂಬಲಾಗಿದೆ, ಬೈಬಲಿನಲ್ಲಿ ಉಲ್ಲೇಖಿಸಲಾಗಿದೆ. ಇದು ಯೇಸುವಿನ ಶಿಲುಬೆಗೇರಿಸುವಿಕೆಯ ಸಮಯದಲ್ಲಿ ಭೂಮಿಯ ಮೇಲೆ ಬಿದ್ದ ಕತ್ತಲೆಯ ಗಂಟೆಗಳನ್ನು ಸೂಚಿಸುತ್ತದೆ.
ರೋಮನ್ನರು ಯೇಸು ಕ್ರಿಸ್ತನನ್ನು ಶಿಲುಬೆಗೇರಿಸಿದಾಗ ಗುಡ್ ಫ್ರೈಡೆಯನ್ನು ಆಚರಿಸಲಾಗುತ್ತದೆ ಎಂದು ಬೈಬಲ್ ನ ಹೊಸ ಒಡಂಬಡಿಕೆ ಹೇಳುತ್ತದೆ. ಬೈಬಲ್ ದಾಖಲೆಗಳ ಪ್ರಕಾರ, ಯೇಸುವನ್ನು ಶಿಲುಬೆಗೇರಿಸಿದ ಪ್ರಕ್ರಿಯೆಯನ್ನು ವಿವರವಾಗಿ ನೋಡುವುದಾದರೆ ಮೊದಲು ಯೇಸುವನ್ನು ಸಾರ್ವಜನಿಕವಾಗಿ ಥಳಿಸಲಾಗುತ್ತದೆ. ಆನಂತರ ಕೆಲವರು ಆತನನ್ನು ಗೇಲಿ ಮಾಡುತ್ತಾರೆ. ಚಾಟಿ ಏಟುಗಳೊಂದಿಗೆ ಭಾರವಾದ ಮರದ ಶಿಲುಬೆಯನ್ನು ಒಯ್ಯುವಂತೆ ಒತ್ತಾಯಿಸಲಾಗುತ್ತದೆ. ಅಂತಿಮವಾಗಿ ಯೇಸುವಿನ ಮಣಿಕಟ್ಟು ಮತ್ತು ಕಾಲುಗಳಿಂದ ಶಿಲುಬೆಗೆ ಮೊಳೆ ಹೊಡೆಯಲಾಗುತ್ತದೆ. ಸಾಯುವವರೆಗೂ ಶಿಲುಬೆಯ ಮೇಲೆ ನೇತಾಡುತ್ತಾರೆ. ಇದೇ ಸಂದರ್ಭದಲ್ಲಿ ಇಬ್ಬರು ಕಳ್ಳರನ್ನು ಕೂಡ ಶಿಲುಬೆಗೆ ಹಾಕಲಾಗಿರುತ್ತದೆ. ಎಷ್ಟೇ ಹಿಂಸೆ ಕೊಟ್ಟರೂ ಯೇಸು ಮಾತ್ರ ತಂದೆಯೇ ಇವರು ಏನೂ ಅರಿಯರು, ಇವರನ್ನು ಕ್ಷಮಿಸು ಎಂದು ಹೇಳುತ್ತಾರೆ ಎಂದು ಬೈಬಲ್ ನಲ್ಲಿ ವಿವರಿಸಲಾಗಿದೆ.