ಅಯೋಧ್ಯೆಯ ಶ್ರೀರಾಮ ಮಂದಿರಕ್ಕೆ ವರ್ಷದ ಸಂಭ್ರಮ; ವಾರ್ಷಿಕೋತ್ಸವದಲ್ಲಿ ಬಾಲ ರಾಮನ ದರ್ಶನಕ್ಕೆ ಹರಿದು ಬಂದ ಭಕ್ತ ಸಾಗರ
ರಾಮನೂರು ಅಯೋಧ್ಯೆಯಲ್ಲಿ ಬಾಲ ರಾಮನ ಪ್ರತಿಷ್ಠಾಪನೆಯಾಗಿ ಒಂದು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಅಯೋಧ್ಯೆಯಲ್ಲಿ ವಾರ್ಷಿಕೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ವಿವಿಧ ರೀತಿಯ ಅಭಿಷೇಕಗಳೊಂದಿಗೆ ಪ್ರತಿಷ್ಠಾ ದ್ವಾದಶಿಯನ್ನು ಆರಂಭಿಸಲಾಗಿದೆ. ಜನವರಿ 11 ರಿಂದ ಮೂರು ದಿನಗಳ ಕಾಲ ಮಂದಿರದಲ್ಲಿ ವಿವಿಧ ಧಾರ್ಮಿಕ ಆಚರಣೆಗಳು ನಡೆಯಲಿವೆ.
ಅಯೋಧ್ಯೆಯ ರಾಮ ಮಂದಿರದಲ್ಲಿ ಬಾಲ ರಾಮನನ್ನು ಪ್ರತಿಷ್ಠಾಪಿಸಿ ಒಂದು ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಇಂದಿನಿಂದ (ಜನವರಿ 11, ಶನಿವಾರ) ಮೂರು ದಿನ ಅದ್ಧೂರಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಯಜುರ್ವೇದ ಪಠಣದೊಂದಿಗೆ ಕಾರ್ಯಕ್ರಮಗಳು ಪ್ರಾರಂಭವಾಗಿದ್ದು, ಮೊದಲ ದಿನ ಪ್ರತಿಷ್ಠಾ ದ್ವಾದಶಿಯ ಆರಂಭಿಕ ದಿನವಾಗಿ ಆಚರಿಸಲಾಗುತ್ತಿದೆ. ಈಗಾಗಲೇ ವಿವಿಧ ಅಭಿಷೇಕಗಳನ್ನು ಮಾಡಲಾಗುತ್ತಿದೆ.
ಅಯೋಧ್ಯೆ ರಾಮ ಮಂದಿರದಲ್ಲಿ ಬಾಲ ರಾಮನ ಪ್ರತಿಷ್ಠಾ ದಿನ; ವಾರ್ಷಿಕೋತ್ಸವ
ಕಳೆದ ವರ್ಷದ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದಂತೆ ಈ ಕಾರ್ಯಕ್ರಮ ನಡೆಯುತ್ತಿದೆ. ವಾರ್ಷಿಕೋತ್ಸವದ ನಿಮಿತ್ತ ಬಾಲ ರಾಮನನ್ನು ಕಣ್ತುಂಬಿಕೊಳ್ಳಲು ಹೆಚ್ಚಿನ ಸಂಖ್ಯೆಯ ಭಕ್ತರು ಪವಿತ್ರ ನಗರವನ್ನು ತಲುಪಿದ್ದಾರೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ರಾಮ್ ಲಲ್ಲಾಗೆ ಅಭಿಷೇಕ ನೆರವೇರಿಸಿದ್ದಾರೆ. ಮಧ್ಯಾಹ್ನ 12.20 ರ ಸುಮಾರಿಗೆ ದೇವರಿಗೆ ವಿಶೇಷ ಆರತಿ ಬೆಳಗಿ ಪೂಜೆ ನೆರವೇರಿಸಿದರು.
ಬಾಲ ರಾಮನ ಮೂರ್ತಿಗೆ ವಿವಿಧ ಬಣ್ಣಗಳ ಹೂವುಗಳಿಂದ ಅಲಂಕರಿಸಲಾಗಿದೆ. ಜನವರಿ 11 ರಿಂದ 13 ರವರೆಗೆ ನಿಗದಿಯಾಗಿರುವ ಇಲ್ಲಿನ ಆಚರಣೆಗಳು ಕಳೆದ ವರ್ಷ ಐತಿಹಾಸಿಕ ಸಮಾರಂಭದಲ್ಲಿ ಭಾಗವಹಿಸಲು ಸಾಧ್ಯವಾಗದ ಸಾಮಾನ್ಯ ಜನರು ಹಾಗೂ ಸುಮಾರು 110 ಆಹ್ವಾನಿತ ವಿಐಪಿಗಳು ಭಾಗವಹಿಸುವ ಸಾಧ್ಯತೆ ಇದೆ ಎಂದು ಶ್ರೀ ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮಾಹಿತಿ ನೀಡಿದ್ದಾರೆ.
ಉತ್ಸವದ ಆಚರಣೆಗಳು ವಿಶೇಷವಾಗಿ ಯಜ್ಞಶಾಲಾಗಳಲ್ಲೇ ನಡೆಯುತ್ತಿವೆ. ಟ್ರಸ್ಟ್ ಈಗಾಗಲೇ ದೇಶಾದ್ಯಂತದ ಸಂತರು ಮತ್ತು ಭಕ್ತರಿಗೆ ಆಹ್ವಾನಗಳನ್ನು ನೀಡಲಾಗಿದೆ. ನಿವಾಸಿಗಳು ಮತ್ತು ಯಾತ್ರಾರ್ಥಿಗಳು ಈ ಆಚರಣೆಗಳಲ್ಲಿ ಭಾಗವಹಿಸಬೇಕು. ಮೂರು ದಿನಗಳ ಉತ್ಸವದ ಸಮಯದಲ್ಲಿ ಕನಿಷ್ಠ ಒಂದು ದಿನದ ಭೇಟಿ ನೀಡುವ ಮೂಲಕ ಅಯೋಧ್ಯೆಯ ಅಧ್ಯಾತ್ಮ ವಾತಾವರಣವನ್ನು ಅನುಭವಿಸಿ ಎಂದು ರಾಯ್ ಕರೆ ನೀಡಿದ್ದಾರೆ.
ಬಾಲ ರಾಮನ ಪ್ರಾಣ ಪ್ರತಿಷ್ಠಾಪನೆಯಾಗಿ ಒಂದು ವರ್ಷ
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ 2024ರ ಜನವರಿ 22 ರಂದು ಬಾಲ ರಾಮ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮ ನಡೆದಿತ್ತು. ಆದರೆ ಹಿಂದೂ ಪಂಚಾಂಗದ ಪ್ರಕಾರ ಈ ಸಂಭ್ರಮಕ್ಕೆ 2025ರ ಜನವರಿ 11ಕ್ಕೆ 1 ವರ್ಷ ತುಂಬಲಿದೆ. ಇದೇ ಕಾರಣಕ್ಕೆ ಜನವರಿ 11 ರಂದು ವಾರ್ಷಿಕೋತ್ಸವ ನಡೆಸಲಾಗುತ್ತಿದೆ. ರಾಮ ಮಂದಿರದ ಮುಖ್ಯ ವಿಗ್ರಹವನ್ನು ಮೈಸೂರಿನ ಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್ ಅವರು ಕೆತ್ತನೆ ಮಾಡಿದ್ದರು. ಆ ಬಳಿಕ ಮೈಸೂರಿನ ಅರುಣ್ ಯೋಗಿರಾಜ್ ಅವರು ಪ್ರಸಿದ್ಧಿಯನ್ನು ಪಡೆದಿದ್ದಾರೆ.