Bengaluru Karaga 2025: ಏಪ್ರಿಲ್ 12ರಂದು ಬೆಂಗಳೂರು ಐತಿಹಾಸಿಕ ಕರಗ; ಇತಿಹಾಸ, ಮಹತ್ವ ಹೀಗಿದೆ
2025ರ ಏಪ್ರಿಲ್ 12 ರಂದು ಬೆಂಗಳೂರು ಐತಿಹಾಸಿಕ ಕರಗ ಶಕ್ತ್ಯುತ್ಸವ ನಡೆಯಲಿದೆ. ಕರಗದ ಇತಿಹಾಸ, ಮಹತ್ವ ಹಾಗೂ ಪ್ರವಾಸಿಗರ ಆಕರ್ಷಣೆಯ ಕೇಂದ್ರ ಹಾಗೂ ಕರಗಕ್ಕೆ ಸಂಬಂಧಿಸಿದ ಕಥೆಯನ್ನು ತಿಳಿಯಿರಿ.

Bengaluru Karaga: ಉದ್ಯಾನ ನಗರಿ ಬೆಂಗಳೂರಿನಲ್ಲಿ ನಡೆಯಲಿರುವ ಐತಿಹಾಸಿಕ ಕರಗ ಮಹೋತ್ಸವಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇದ್ದು, ಈಗಾಗಲೇ ಸಿದ್ಧತೆಗಳು ಶುರುವಾಗಿವೆ. ಏಪ್ರಿಲ್ 4 ರಿಂದ ಕರಗ ಉತ್ಸವದ ಪೂಜಾ ವಿಧಿ-ವಿಧಾನಗಳು ಆರಂಭವಾಗಲಿದ್ದು, ಏಪ್ರಿಲ್ 12ರ ಶನಿವಾರ ಕರಗ ಶಕ್ತ್ಯುತ್ಸವ ನಡೆಯಲಿದೆ. ಆ ಮೂಲಕ ಪ್ರಸಿದ್ಧ ಕರಗ ಮೆರವಣಿಗೆಯೊಂದಿಗೆ ಮುಕ್ತಾಯಗೊಳ್ಳುತ್ತದೆ. ಕರ್ನಾಟಕದಲ್ಲಿ ಅನುಸರಿಸಲಾಗುವ ಸಾಂಪ್ರದಾಯಿಕ ಕನ್ನಡ ಹಿಂದೂ ಚಂದ್ರಮಾನ ಕ್ಯಾಲೆಂಡರ್ ಪ್ರಕಾರ, ಚೈತ್ರ ಮಾಸದ ಹುಣ್ಣಿಮೆಯಂದು ಕರಗ ಶಕ್ತ್ಯುತ್ಸವ ನಡೆಯುತ್ತೆ.11 ದಿನಗಳ ಈ ಉತ್ಸವವು 300 ವರ್ಷಗಳಿಗೂ ಹೆಚ್ಚು ಇತಿಹಾಸವನ್ನು ಹೊಂದಿದೆ. ಕರಗವನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಮಂದಿ ನಗರಕ್ಕೆ ಆಗಮಿಸುತ್ತಾರೆ. ಬಿಬಿಎಂಪಿ, ನಗರ ಜಿಲ್ಲಾಡಳಿತ, ಪೊಲೀಸ್ ವಿಭಾಗ ಹಾಗೂ ಕರದ ಸಮಿತಿಯ ಪದಾಧಿಕಾರಿಗಳು ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಬೆಂಗಳೂರು ಕರಗ ಮಹೋತ್ಸವದ ಇತಿಹಾಸ, ಮಹತ್ವ ಹಾಗೂ ಕಥೆಗಳನ್ನು ಇಲ್ಲಿ ವಿವರಿಸಲಾಗಿದೆ.
ಬೆಂಗಳೂರು ಕರಗ ಉತ್ಸವವು ಮಹಾಭಾರತದ ದ್ರೌಪದಿಯನ್ನು ಆದರ್ಶ ಮಹಿಳೆ ಮತ್ತು ಶಕ್ತಿ ದೇವತೆ ಎಂದು ಆಚರಿಸಲಾಗುತ್ತದೆ. ಕರ್ನಾಟಕದ ಸಾಂಸ್ಕೃತಿಕ ಮತ್ತು ಧಾರ್ಮಿಕ ಪರಂಪರೆಯನ್ನು ಚಿತ್ರಿಸುವ ಈ ಉತ್ಸವವು ವಿಶೇಷವಾಗಿ ತಿಗಳ ಸಮುದಾಯದೊಂದಿಗೆ ಸಂಬಂಧ ಹೊಂದಿದೆ. ಇವರ ಪೂರ್ವಜರು ನೆರೆಯ ತಮಿಳುನಾಡಿನವರು. ದೌಪದಿ ದೇವಿ ವಹ್ನಿಕುಲ ಕ್ಷತ್ರಿಯರು ಅಥವಾ ತಿಗಳ ಸಮುದಾಯದ ಕುಲದೇವತೆ. ಬೆಂಗಳೂರಿನ ತಿಗಳರಪೇಟೆಯಲ್ಲಿರುವ ಪ್ರಸಿದ್ಧ ಧರ್ಮರಾಯ ಸ್ವಾಮಿ ದೇವಸ್ಥಾನದಲ್ಲಿ ಕರಗದ ಪೂಜಾ ವಿಧಿ-ವಿಧಾನಗಳು ನಡೆಯುತ್ತದೆ. ಏಪ್ರಿಲ್ 12ರ ಶನಿವಾರ ರಾತ್ರಿ ಸುಮಾರು 12 ಗಂಟೆಗೆ ಮೆರವಣಿಗೆ ಪಾರಂಭವಾಗಿ ಬೆಳಿಗ್ಗೆ 6 ಗಂಟೆಯವರಿಗೆ ನಡೆಯುತ್ತದೆ.
ಬೆಂಗಳೂರು ಕರಗ ಉತ್ಸವದ ಕಥೆ
ದಂತಕಥೆಯ ಪ್ರಕಾರ, ಪ್ರಸಿದ್ಧ ಕುರುಕ್ಷೇತ್ರ ಯುದ್ಧದ ನಂತರ, ದ್ರೌಪದಿ ತಿಮಿರಾಸುರ ಎಂಬ ರಾಕ್ಷಸನ ವಿರುದ್ಧ ಹೋರಾಡಲು ವೀರಕುಮಾರರು ಎಂಬ ಸೈನಿಕರ ಸೈನ್ಯವನ್ನು ರಚಿಸಿದಳು. ರಾಕ್ಷಸನ ಸೋಲಿನ ನಂತರ, ಪಾಂಡವರು ಸ್ವರ್ಗಕ್ಕೆ ಏರುತ್ತಿದ್ದಾಗ, ಸೈನ್ಯವು ದೌಪದಿಯನ್ನು ಅಲ್ಲಿಯೇ ಇರಲು ಕೇಳಿಕೊಂಡಿತು. ಆದರೆ ಆಕೆ ನಿರಾಕರಿಸುತ್ತಾಳೆ. ಜೊತೆಗೆ ಪ್ರತಿ ವರ್ಷ ಒಮ್ಮೆ ಭೂಮಿಗೆ ಹಿಂತಿರುಗುವುದಾಗಿ ಭರವಸೆ ನೀಡುತ್ತಾಳೆ.
'ಕರಗ' ಎಂದರೆ ಮಣ್ಣಿನ ಮಡಿಕೆ. ಕರಗವನ್ನು ಹೊರುವ ವ್ಯಕ್ತಿಯನ್ನು ಮೊದಲೇ ಗುರುತಿಸಲಾಗಿರುತ್ತದೆ. ಆ ವ್ಯಕ್ತಿ ಕರಗವನ್ನು ತಲೆಯ ಮೇಲೆ ಹೊತ್ತು ಪ್ರಮುಖ ಬೀದಿಗಳಲ್ಲಿ ಸಾಗುತ್ತಾರೆ. ಎತ್ತರದ ಹೂವಿನ ಪಿರಮಿಡ್ ಆಕಾರದಲ್ಲಿ ದೇವಿಯ ಮೂರ್ತಿಯನ್ನು ಅಲಂಕರಿಸಲಾಗಿರುತ್ತದೆ. ಆ ಮಡಿಕೆಯಲ್ಲಿರುವ ವಸ್ತುಗಳು ಶತಮಾನಗಳಿಂದ ರಹಸ್ಯವಾಗಿ ಉಳಿದಿವೆ ಎಂದು ಹೇಳಲಾಗುತ್ತದೆ. ಕರಗವನ್ನು ಹೊತ್ತ ವ್ಯಕ್ತಿಯು ಸ್ತ್ರೀಯರ ಉಡುಪನ್ನು ಧರಿಸಿರುತ್ತಾನೆ. ಆತ ಕರಗವನ್ನು ಮುಟ್ಟದೆ ತಲೆಯ ಮೇಲೆ ಸಮತೋಲನದಲ್ಲಿರಿಸಿಕೊಳ್ಳುತ್ತಾನೆ. ಧೋತಿ ಮತ್ತು ಪೇಟಗಳನ್ನು ಧರಿಸಿ, ಹೊರಕವಚವಿಲ್ಲದ ಕತ್ತಿಗಳನ್ನು ಹಿಡಿದ ನೂರಾರು ‘ವೀರಕುಮಾರರು’ ಕರಗವನ್ನು ಹಿಂಬಾಲಿಸುತ್ತಾರೆ.
ವಿಶೇಷವೆಂದರೆ ಈ ಕರಗ ಉತ್ಸವದಲ್ಲಿ ಕರಗ ಹೊರುವ ವ್ಯಕ್ತಿಯ ಪತ್ನಿ ವಿಧವೆಯ ಪಾತ್ರವನ್ನು ನಿರ್ವಹಿಸುತ್ತಾಳೆ. ಕರಗ ಹೊರುವ ವ್ಯಕ್ತಿ ತನ್ನ ಪತ್ನಿಯ ಮಂಗಳಸೂತ್ರ ಮತ್ತು ಬಳೆಗಳನ್ನು ಧರಿಸುತ್ತಾನೆ. 11ನೇ ದಿನ ಕೊನೆಯವರೆಗೂ ಈ ಮಹಿಳೆ ತನ್ನ ಪತಿ ಹಾಗೂ ಕರಗವನ್ನು ನೋಡುವುದನ್ನು ನಿಷೇಧಿಸಲಾಗಿರುತ್ತದೆ. ನಗರದ ನಗರ್ತಪೇಟೆ, ಕಬ್ಬನ್‌ಪೇಟೆ, ಗಾಣಿಗರಪೇಟೆ, ಅವೆನ್ಯೂ ರಸ್ತೆ, ದೊಡ್ಡಪೇಟೆ, ಅರಳೆಪೇಟೆ, ಬಾಳೆಪೇಟೆ, ಕುಂಬಾರಪೇಟೆ, ಹಲಸೂರು ಹಾಗೂ ಗೊಲ್ಲರಪೇಟೆ ಮೂಲಕ ಕರಗ ಸಾಗುತ್ತದೆ. ವರ್ಷಕ್ಕೊಮ್ಮೆ ನಡೆಯುವ ಈ ಶಕ್ತ್ಯುತ್ಸವವನ್ನು ಕಣ್ತುಂಬಿಕೊಳ್ಳಲು ನೆರೆಯ ಜಿಲ್ಲೆಗಳು ಹಾಗೂ ತಮಿಳುನಾಡು ಸೇರಿದಂತೆ ನೆರೆಯ ರಾಜ್ಯಗಳಿಂದಲೂ ಸಾವಿವಾರು ಭಕ್ತರು ನಗರಕ್ಕೆ ಆಗಮಿಸುತ್ತಾರೆ.
