Bhagavad Gita: ಪರಮಾತ್ಮನ ನಿಜರೂಪ ನೋಡಲು ಅರ್ಜುನನು ಕೋರಿಕೊಂಡಿದ್ದು ಹೇಗೆ; ಭಗವದ್ಗೀತೆ ಈ ಶ್ಲೋಕಗಳಿಂದ ತಿಳಿಯಿರಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ಪರಮಾತ್ಮನ ನಿಜರೂಪ ನೋಡಲು ಅರ್ಜುನನು ಕೋರಿಕೊಂಡಿದ್ದು ಹೇಗೆ; ಭಗವದ್ಗೀತೆ ಈ ಶ್ಲೋಕಗಳಿಂದ ತಿಳಿಯಿರಿ

Bhagavad Gita: ಪರಮಾತ್ಮನ ನಿಜರೂಪ ನೋಡಲು ಅರ್ಜುನನು ಕೋರಿಕೊಂಡಿದ್ದು ಹೇಗೆ; ಭಗವದ್ಗೀತೆ ಈ ಶ್ಲೋಕಗಳಿಂದ ತಿಳಿಯಿರಿ

Bhagavad Gita: ಪರಮಾತ್ಮನ ವಿಶ್ವರೂಪ ಕಂಡ ಭಯ, ತಲ್ಲಣದಿಂದ ಕೂಡಿದ ಮನಸ್ಸನ್ನು ಶಾಂತಗೊಳ್ಳಲು ನಿನ್ನ ನಿಜರೂಪವನ್ನು ತೋರಿಸು ಎಂದು ಅರ್ಜುನನು ಪರಮಾತ್ಮ ಕೃಷ್ಣನಲ್ಲಿ ಕೋರಿಕೆ ಇಡುತ್ತಾನೆ. ಭಗದ್ಗೀತೆ ಅಧ್ಯಾಯ 11 ವಿಶ್ವರೂಪ, ಶ್ಲೋಕ 45 ಮತ್ತು 46 ರಲ್ಲಿದೆ ಇದರ ವಿವರ.

ಭಗವದ್ಗೀತೆ
ಭಗವದ್ಗೀತೆ

ಅಧ್ಯಾಯ - 11: ವಿಶ್ವರೂಪ – ಶ್ಲೋಕ - 45
ಅದೃಷ್ಟಪೂರ್ವಂ ಹೃಷಿತೋSಸ್ಮಿ ದೃಷ್ಟ್ವಾ
ಭಯೇನ ಚ ಪ್ರವ್ಯಥಿತಂ ಮನೋ ಮೇ
ತದೇವ ಮೇ ದರ್ಶಯ ದೇವ ರೂಪಮ್‌
ಪ್ರಸಿದ ದೇವೇಶ ಜಗನ್ನಿವಾಸ || 45 ||

ಅರ್ಥ: ನಾನು ಹಿಂದೆ ನೋಡದಿದ್ದ ಈ ವಿಶ್ವರೂಪವನ್ನು ಕಂಡು ಸಂತೋಷಪಟ್ಟಿದ್ದೇನೆ. ಆದರೆ ಅದೇ ಕಾಲದಲ್ಲಿ ನನ್ನ ಮನಸ್ಸು ಭಯದಿಂದ ತಲ್ಲಣಗೊಂಡಿದೆ. ಹೇ ಪ್ರಭುಗಳ ಪ್ರಭುವೇ, ಜಗನ್ನಿವಾಸನೇ, ನನ್ನಲ್ಲಿ ಕೃಪೆಮಾಡಿ ದೇವೋತ್ತಮ ಪರಮ ಪುರುಷನಾದ ನಿನ್ನ ರೂಪವನ್ನು ನನಗೆ ಮತ್ತೆ ತೋರಿಸು.

ಭಾವಾರ್ಥ: ಅರ್ಜುನನು ಕೃಷ್ಣನ ಪರಮ ಪ್ರಿಯಸಖನಾದದ್ದರಿಂದ ಯಾವಾಗಲೂ ಆತನಿಗೆ ಪ್ರೀತಿಪಾತ್ರನು. ಅರ್ಜುನನು ಪ್ರಿಯಸ್ನೇಹಿತನಾಗಿ ತನ್ನ ಸ್ನೇಹಿತನ ಸಿರಿಯನ್ನು ಕಂಡು ಹರ್ಷಪಟ್ಟಿದ್ದಾನೆ. ತನ್ನ ಸ್ನೇಹಿತನಾದ ಕೃಷ್ಣನು ದೇವೋತ್ತಮ ಪರಮ ಪುರುಷ ಮತ್ತು ಇಂತಹ ಅದ್ಭುತವಾದ ವಿಶ್ವರೂಪವನ್ನು ತೋರಿಸಬಲ್ಲ ಎಂದು ಅರ್ಜುನನಿಗೆ ಸಂತೋಷವಾಗಿದೆ. ಆದರೆ ಅದೇ ಕಾಲದಲ್ಲಿ ವಿಶ್ವರೂಪವನ್ನು ಕಂಡು ತನ್ನ ಪರಿಶುದ್ಧ ಸ್ನೇಹದ ಕಾರಣದಿಂದ ಕೃಷ್ಣನ ವಿಷಯದಲ್ಲಿ ಹಲವು ಅಪರಾಧಗಳನ್ನು ಮಾಡಿದ್ದೇನೆ ಎಂದು ಅವನಿಗೆ ಭಯವಾಗುತ್ತದೆ. ಹೀಗೆ ಅವನು ಭಯಪಡಲು ಕಾರಣವೇ ಇಲ್ಲದಿದ್ದರೂ ಭಯದಿಂದ ಅವನ ಮನಸ್ಸು ವ್ಯಗ್ರವಾಗಿದೆ. ಆದುದರಿಂದ ಕೃಷ್ಣನು ತನ್ನ ನಾರಾಯಣ ರೂಪವನ್ನು ತೋರಬೇಕೆಂದು ಅರ್ಜುನನು ಬೇಡುತ್ತಿದ್ದಾನೆ. ಏಕೆಂದರೆ ಕೃಷ್ಣನು ಯಾವ ರೂಪವನ್ನಾದರೂ ಧರಿಸಬಲ್ಲ.

ಈ ವಿಶ್ವರೂಪವು ಐಹಿಕವಾದದ್ದು ಮತ್ತು ಸ್ವಲ್ಪಕಾಲದ್ದು. ಏಕೆಂದರೆ ಈ ಐಹಿಕ ಜಗತ್ತು ಅಲ್ಪ ಕಾಲದ್ದು. ಆದರೆ ವೈಕುಂಠ ಲೋಕಗಳಲ್ಲಿ ಅವನಿಗೆ ಚತುರ್ಭುಜನಾದ ನಾರಾಯಣನ ದಿವ್ಯ ರೂಪವಿದೆ. ಆಧ್ಯಾತ್ಮಿಕ ಗಗನದಲ್ಲಿ ಲೆಕ್ಕವಿಲ್ಲದಷ್ಟು ಲೋಕಗಳಿವೆ. ಬೇರೆ ಬೇರೆ ಹೆಸರುಗಳ ತನ್ನ ಪರಿಪೂರ್ಣವಿಸ್ತರಣೆಗಳಿಂದ ಕೃಷ್ಣನು ಪ್ರತಿಯೊಂದು ಲೋಕದಲ್ಲಿಯೂ ಇದ್ದಾನೆ. ವೈಕುಂಠ ಲೋಕಗಳ ಪ್ರಕಟವಾದ ರೂಪಗಳಲ್ಲಿ ಒಂದನ್ನು ಕಾಣಲು ಅರ್ಜುನನು ಬಯಸುತ್ತಾನೆ. ಪ್ರತಿಯೊಂದು ವೈಕುಂಠ ಲೋಕದಲ್ಲಿಯೂ ನಾರಾಯಣ ರೂಪಕ್ಕೆ ನಾಲ್ಕು ಭುಜಗಳಿವೆ. ಆದರೆ ಶಂಖ, ಗದೆ, ಪದ್ಮ ಮತ್ತು ಚಕ್ರ ಈ ಸಂಕೇತಗಳ ಜೋಡಣೆಯು ಬೇರೆ ಬೇರೆಯಾಗಿರುತ್ತವೆ. ಈ ನಾಲ್ಕು ವಸ್ತುಗಳನ್ನು ಬೇರೆ ಬೇರೆ ಕೈಗಳು ಹಿಡಿದಿರುವುದಕ್ಕೆ ಅನುಗುಣವಾಗಿ ನಾರಾಯಣನಿಗೆ ಬೇರೆ ಬೇರೆ ಹೆಸರುಗಳುಂಟು. ಈ ಎಲ್ಲ ರೂಪಗಳೂ ಕೃಷ್ಣನಿಂದ ಅಭಿನ್ನ; ಆದುದರಿಂದ ಅರ್ಜುನನು ಈ ಚತುರ್ಭುಜ ರೂಪವನ್ನು ತನಗೆ ತೋರಿಸಬೇಕೆಂದು ಪ್ರಾರ್ಥಿಸುತ್ತಾನೆ.

ಅಧ್ಯಾಯ - 11: ವಿಶ್ವರೂಪ – ಶ್ಲೋಕ - 46
ಕಿರೀಟಿನಂ ಗದಿನಂ ಚಕ್ರಹಸ್ತಮ್
ಇಚ್ಛಾಮಿ ತ್ವಾಂ ದ್ರಷ್ಟುಮಹಂ ತಥೈವ |
ತೇನೈವ ರೂಪೇಣ ಚತುರ್ಭುಜೇನ
ಸಹಸ್ರಬಾಹೋ ಭವ ವಿಶ್ವಮೂರ್ತೇ || 46 ||

ಅರ್ಥ: ಹೇ ವಿಶ್ವಮೂರ್ತಿಯೇ, ಸಹಸ್ರಬಾಹುವೇ, ಕಿರೀಟಧಾರಿಯಾಗಿ ಗದೆ, ಚಕ್ರ, ಶಂಖ ಮತ್ತು ಪದ್ಮಗಳನ್ನು ಕೈಗಳಲ್ಲಿ ಹಿಡಿದಿರುವ ನಿನ್ನ ಚತುರ್ಭುಜ ರೂಪವನ್ನು ನಾನು ನೋಡಲು ಬಯಸುತ್ತೇನೆ.

ಭಾವಾರ್ಥ: ಬ್ರಹ್ಮಸಂಹಿತೆಯಲ್ಲಿ (5.39) ರಾಮಾದಿ ಮೂರ್ತಿಷು ಕಲಾನಿಯಮೇನ ತಿಷ್ಯನ್ – ಭಗವಂತನು ನಿರಂತರವಾಗಿ ನೂರಾರು ಮತ್ತು ಸಾವಿರಾರು ರೂಪಗಳಲ್ಲಿ ನೆಲೆಸಿರುತ್ತಾನೆ ಮತ್ತು ರಾಮ, ನೃಸಿಂಹ, ನಾರಾಯಣ ಮೊದಲಾದವು ಮುಖ್ಯ ರೂಪಗಳು ಎಂದು ಹೇಳಿದೆ. ಕೃಷ್ಣನೇ ಮೂಲ ದೇವೋತ್ತಮ ಪುರುಷ ಮತ್ತು ಅವನು ತಾತ್ಕಾಲಿಕವಾಗಿ ವಿಶ್ವರೂಪವನ್ನು ಧರಿಸಿದ್ದಾನೆ ಎಂದು ಅರ್ಜುನನಿಗೆ ಗೊತ್ತಿತ್ತು. ಈಗ ಅವನು ದಿವ್ಯರೂಪವಾದ ನಾರಾಯಣ ರೂಪವನ್ನು ಕಾಣಬೇಕೆಂದು ಪ್ರಾರ್ಥಿಸುತ್ತಿದ್ದಾನೆ. ಕೃಷ್ಣನು ಮೂಲ ದೇವೋತ್ತಮ ಪರಮ ಪುರುಷನು ಮತ್ತು ಇತರ ಎಲ್ಲ ರೂಪಗಳಿಗೂ ಅವನೇ ಮೂಲ ಎಂದು ಶ್ರೀಮದ್ಭಾಗವತದಲ್ಲಿ ಹೇಳಿದೆ. ಈ ಶ್ಲೋಕವು ಸಂದೇಹವಿಲ್ಲದಂತೆ ಈ ಹೇಳಿಕೆಯನ್ನು ಸಿದ್ಧಮಾಡಿ ತೋರಿಸುತ್ತದೆ. ಆತನು ತನ್ನ ಸ್ಟಾಂಶ ವಿಸ್ತರಣೆಗಳಿಂದ ಭಿನ್ನನಲ್ಲ ಮತ್ತು ತನ್ನ ಅಸಂಖ್ಯಾತ ರೂಪಗಳಲ್ಲಿ ಯಾವ ರೂಪದಲ್ಲಿಯೇ ಆಗಲಿ ಅವನು ದೇವರು. ಈ ಎಲ್ಲ ರೂಪಗಳಲ್ಲಿಯೂ ಆತನು ಯುವಕನಂತೆ ಹೊಸ ಕಳೆಯಿಂದಿರುತ್ತಾನೆ. ಕೃಷ್ಣನನ್ನು ಬಲ್ಲವನು ಐಹಿಕ ಜಗತ್ತಿನ ಕಲ್ಮಷದ ಸೋಂಕಿನಿಂದ ಕೂಡಲೇ ಬಿಡುಗಡೆಯಾಗುತ್ತಾನೆ.

(ಗಮನಿಸಿ: ಈ ಬರಹವು 'ಗೀತೋಪನಿಷದ್ ಭಗವದ್ಗೀತಾ ಯಥಾರೂಪ' ಪುಸ್ತಕದಲ್ಲಿರುವ ಮಾಹಿತಿಯನ್ನು ಆಧರಿಸಿದೆ. ಸಮಕಾಲೀನ ವಿಚಾರಗಳಿಗೆ ಅನ್ವಯಿಸಲು ಅರ್ಥದಲ್ಲಿ ತುಸು ವಿವರ ನೀಡಲಾಗಿದೆ. ಸಂದಿಗ್ಧ ಬಂದರೆ ಓದುಗರು ಮೂಲ ಪುಸ್ತಕವನ್ನೇ ಆಧರಿಸಿ, ಅನ್ವಯಿಸಿಕೊಳ್ಳಬೇಕು)

HT Kannada Desk

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.