Bhagavad Gita: ಪರಮಾತ್ಮನ ತೇಜೋಮಯವಾದ ವಿಶ್ವರೂಪವನ್ನು ಮೊದಲು ನೋಡಿದವನು ಅರ್ಜುನ; ಗೀತೆಯ ಈ ಶ್ಲೋಕದ ಅರ್ಥ ತಿಳಿಯಿರಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ಪರಮಾತ್ಮನ ತೇಜೋಮಯವಾದ ವಿಶ್ವರೂಪವನ್ನು ಮೊದಲು ನೋಡಿದವನು ಅರ್ಜುನ; ಗೀತೆಯ ಈ ಶ್ಲೋಕದ ಅರ್ಥ ತಿಳಿಯಿರಿ

Bhagavad Gita: ಪರಮಾತ್ಮನ ತೇಜೋಮಯವಾದ ವಿಶ್ವರೂಪವನ್ನು ಮೊದಲು ನೋಡಿದವನು ಅರ್ಜುನ; ಗೀತೆಯ ಈ ಶ್ಲೋಕದ ಅರ್ಥ ತಿಳಿಯಿರಿ

Bhagavad Gita: ಶ್ರೀಕೃಷ್ಣನು ಅರ್ಜುನನಿಗೆ ತೋರಿಸಿದ ವಿಶ್ವರೂಪವು ತೇಜಸ್ಸು ಮತ್ತು ಸಿರಿಯ ಜೊತೆಗೆ ಸೂರ್ಯನ ಪ್ರಕಾಶದಂತೆ ಹೊಳೆಯುತ್ತಿದ್ದ ಕಣ್ಣು. ಭಗವದ್ಗೀತೆ ಅಧ್ಯಾಯ 11, ವಿಶ್ವರೂಪ, ಶ್ಲೋಕ 47 ಹಾಗೂ 48 ರಿಂದ ತಿಳಿಯಿರಿ.

ಭಗವದ್ಗೀತೆ
ಭಗವದ್ಗೀತೆ

ಅಧ್ಯಾಯ - 11: ವಿಶ್ವರೂಪ – ಶ್ಲೋಕ - 47
ಶ್ರೀ ಭಗವಾನುವಾಚ
ಮಯಾ ಪ್ರಸನ್ನೇನ ತವಾರ್ಜುನೇದಮ್
ರೂಪಂ ಪರಂ ದರ್ಶಿತಮಾತ್ಮಯೋಗಾತ್ |
ತೇಜೋಮಯಂ ವಿಶ್ವಮನನ್ತಮಾದ್ಯಮ್
ಯನ್ಮೇ ತ್ವದನ್ಯೇನ ದೃಷ್ಟಪೂರ್ವಮ್ || 47 ||

ಅರ್ಥ: ದೇವೋತ್ತಮ ಪರಮ ಪುರುಷನು ಹೀಗೆ ಹೇಳಿದನು ಪ್ರಿಯ ಅರ್ಜುನ, ನಾನು ಪ್ರಸನ್ನನಾಗಿ ನನ್ನ ಅಂತರಂಗಶಕ್ತಿಯಿಂದ ಈ ಐಹಿಕ ಜಗತ್ತಿನಲ್ಲಿ ಈ ಪರಮ ವಿಶ್ವರೂಪವನ್ನು ನಿನಗೆ ತೋರಿಸಿದ್ದೇನೆ. ಅನಂತವೂ, ತೇಜೋಮಯವೂ ಆದ ಈ ಆದಿ ರೂಪವನ್ನು ನಿನಗೆ ಮೊದಲು ಯಾರೂ ನೋಡಿಲ್ಲ.

ಭಾವಾರ್ಥ: ಅರ್ಜುನನು ಪರಮ ಪ್ರಭುವಿನ ವಿಶ್ವರೂಪವನ್ನು ಕಾಣಲು ಬಯಸಿದನು. ಆದುದರಿಂದ ತನ್ನ ಭಕ್ತನಾದ ಅರ್ಜುನನಲ್ಲಿ ಇದ್ದ ದಯೆಯಿಂದ ಶ್ರೀಕೃಷ್ಣನು ತೇಜಸ್ಸು ಮತ್ತು ಸಿರಿಗಳಿಂದ ಕೂಡಿದ ವಿಶ್ವರೂಪವನ್ನು ತೋರಿಸಿದನು. ಈ ರೂಪವು ಸೂರ್ಯನಂತೆ ಕಣ್ಣನ್ನು ಕೋರೈಸುತ್ತಿತ್ತು ಮತ್ತು ಅದರ ಹಲವು ಮುಖಗಳು ವೇಗವಾಗಿ ಬದಲಾಗುತ್ತಿದ್ದವು. ತನ್ನ ಗೆಳೆಯ ಅರ್ಜುನನ ತೃಪ್ತಿಗಾಗಿ ಪ್ರಭುವು ಈ ರೂಪವನ್ನು ತೋರಿಸಿದನು. ತನ್ನ ಅಂತರಂಗಶಕ್ತಿಯಿಂದ ಕೃಷ್ಣನು ಈ ರೂಪವನ್ನು ತೋರಿಸಿದನು. ಈ ಶಕ್ತಿಯನ್ನು ಮನುಷ್ಯನ ಊಹೆಯು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಅರ್ಜುನನಿಗೆ ಮೊದಲು ಈ ವಿಶ್ವರೂಪವನ್ನು ಯಾರೂ ಕಂಡಿರಲಿಲ್ಲ. ಆದರೆ ಈ ರೂಪವನ್ನು ಅರ್ಜುನನಿಗೆ ತೋರಿಸಿದುದರಿಂದ ಸ್ವರ್ಗಲೋಕಗಳಲ್ಲಿಯೂ ಹೊರಗಿನ ಆಕಾಶದ ಲೋಕಗಳಲ್ಲಿಯೂ ಇದ್ದ ಭಕ್ತರು ಅದನ್ನು ನೋಡಲು ಸಾಧ್ಯವಾಯಿತು. ಅವರು ಆ ರೂಪವನ್ನು ಮೊದಲು ನೋಡಿರಲಿಲ್ಲ; ಅರ್ಜುನನಿಂದಾಗಿ ಅವರು ನೋಡಲು ಸಾಧ್ಯವಾಯಿತು. ಎಂದರೆ, ಕೃಷ್ಣನು ಕೃಪೆಯಿಟ್ಟು ಅರ್ಜುನನಿಗೆ ತೋರಿಸಿದ ವಿಶ್ವರೂಪವನ್ನು ಭಗವಂತನ ಗುರು ಶಿಷ್ಯ ಪರಂಪರೆಗೆ ಸೇರಿದವರೆಲ್ಲ ನೋಡಬಲ್ಲವರಾದರು.

ಕೃಷ್ಣನು ಶಾಂತಿ ಸಂಧಾನಕ್ಕಾಗಿ ದುರ್ಯೋಧನನ ಬಳಿ ಹೋದಾಗ ಈ ರೂಪವನ್ನು ದುರ್ಯೋಧನನಿಗೆ ತೋರಿಸಿದ ಎಂದು ಒಬ್ಬರು ವ್ಯಾಖ್ಯಾನ ಮಾಡಿದ್ದಾರೆ. ದುರದೃಷ್ಟದಿಂದ ದುರ್ಯೋಧನನು ಆ ಶಾಂತಿ ಸಂಧಾನಕ್ಕೆ ಒಪ್ಪಲಿಲ್ಲ. ಆಗ ಕೃಷ್ಣನು ತನ್ನ ವಿಶ್ವರೂಪಗಳಲ್ಲಿ ಕೆಲವನ್ನು ಪ್ರಕಟಮಾಡಿದ್ದನು. ಆದರೆ ರೂಪಗಳು ಅರ್ಜುನನಿಗೆ ತೋರಿಸಿದ ರೂಪಕ್ಕಿಂತ ಬೇರೆಯಾದವು. ಈ ರೂಪವನ್ನು ಹಿಂದೆ ಬೇರೆ ಯಾರೂ ನೋಡಿರಲಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.

ಅಧ್ಯಾಯ - 11: ವಿಶ್ವರೂಪ – ಶ್ಲೋಕ - 48
ನ ವೇದಯಜ್ಞಾಧ್ಯಯನೈರ್ನ ದಾನೈರ್
ನ ಚ ಕ್ರಿಯಾಭಿರ್ನ ತಪೋಭಿರುಗ್ರೈಃ |
ಏವಂರೂಪಃ ಶಕ್ಯ ಅಹಂ ನೃಲೋಕೇ
ದ್ರಷ್ಟುಂ ತ್ವದನ್ಯೇನ ಕುರುಪ್ರವೀರ || 48 ||

ಅರ್ಥ: ಕುರು ಯೋಧರಲ್ಲಿ ಅತ್ಯಂತ ಶ್ರೇಷ್ಠನಾದ ಅರ್ಜುನನೆ, ನಿನಗೆ ಮೊದಲು ಯಾರೂ ಈ ನನ್ನ ವಿಶ್ವರೂಪವನ್ನು ನೋಡಿರಲಿಲ್ಲ. ಏಕೆಂದರೆ ವೇದಾಧ್ಯಯನದಿಂದಾಗಲೀ, ಯಜ್ಞಗಳನ್ನು ಮಾಡುವುದರಿಂದಾಗಲೀ, ದಾನದಿಂದಾಗಲೀ, ಪುಣ್ಯಕಾರ್ಯಗಳಿಂದಾಗಲೀ, ಉಗ್ರ ತಪಸ್ಸಿನಿಂದಾಗಲೀ ಈ ಐಹಿಕ ಜಗತ್ತಿನಲ್ಲಿ ನನ್ನ ಈ ರೂಪವನ್ನು ನೋಡಲು ಸಾಧ್ಯವಿಲ್ಲ.

ಭಾವಾರ್ಥ: ಈ ಸಂದರ್ಭದಲ್ಲಿ ದೈವೀದೃಷ್ಟಿಯನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬೇಕು. ದೈವೀದೃಷ್ಟಿಯು ಯಾರಿಗೆ ಆಗಬಹುದು? ದೈವೀ ಎಂದರೆ ದೇವರಿಗೆ ಸಂಬಂಧಿಸಿದ್ದು. ದೇವತೆಯಾಗಿ ದೈವೀ ಅಂತಸ್ತನ್ನು ಮನುಷ್ಯನು ಪಡೆಯದಿದ್ದರೆ ಅವನಿಗೆ ದೈವೀದೃಷ್ಟಿಯು ಸಾಧ್ಯವಿಲ್ಲ. ದೇವತೆಯೆಂದರೆ ಏನು? ಪವಿತ್ರ ಗ್ರಂಥಗಳಲ್ಲಿ ಹೀಗೆ ಹೇಳಿದೆ ವಿಷ್ಣುಭಕ್ತರೇ ದೇವತೆಗಳು (ವಿಷ್ಣು ಭಕ್ತಾಃ ಸ್ಮೃತಾ ದೇವಾಃ) ನಾಸ್ತಿಕರಾದವರು ಎಂದರೆ ವಿಷ್ಣುವಿನಲ್ಲಿ ನಂಬಿಕೆ ಇಲ್ಲದವರು ಅಥವಾ ಕೃಷ್ಣನ ನಿರಾಕಾರ ಭಾಗವನ್ನು ಮಾತ್ರ ಪರಮವೆಂದು ಮನ್ನಣೆಮಾಡುವವರು ದೈವೀದೃಷ್ಟಿಯನ್ನು ಪಡೆಯಲಾರರು. ಕೃಷ್ಣನನ್ನು ತೆಗಳಿ ಆಗಲೇ ದೈವೀದೃಷ್ಟಿಯನ್ನು ಪಡೆಯುವುದು ಸಾಧ್ಯವಿಲ್ಲ. ತಾನೇ ದೇವತೆಯಾಗದೆ ದೈವೀದೃಷ್ಟಿ ದೊರೆಯುವುದು ಸಾಧ್ಯವಿಲ್ಲ. ಎಂದರೆ ದೈವೀದೃಷ್ಟಿಯಿರುವವರು ಅರ್ಜುನನಂತೆ ನೋಡಬಲ್ಲರು.

ಭಗವದ್ಗೀತೆಯು ವಿಶ್ವರೂಪವನ್ನು ವರ್ಣಿಸುತ್ತದೆ. ಅರ್ಜುನನಿಗಿಂತ ಮೊದಲು ಈ ವರ್ಣನೆಯು ಯಾರಿಗೂ ತಿಳಿಯದಿದ್ದರೂ ಈಗ ಈ ಘಟನೆಯನಂತರ ವಿಶ್ವರೂಪದ ಒಂದು ಕಲ್ಪನೆಯನ್ನು ಪಡೆದುಕೊಳ್ಳಲು ಸಾಧ್ಯ. ವಾಸ್ತವವಾಗಿ ದೈವಿಕರಾದವರು ಪ್ರಭುವಿನ ವಿಶ್ವರೂಪವನ್ನು ಕಾಣಬಲ್ಲರು. ಆದರೆ ಕೃಷ್ಣನ ಪರಿಶುದ್ಧ ಭಕ್ತರಾಗದೆ ಯಾರೂ ದೈವಿಕರಾಗುವುದು ಸಾಧ್ಯವಿಲ್ಲ. ವಾಸ್ತವವಾಗಿ ದೈವಿಕ ಸ್ವಭಾವವಿದ್ದು ದೈವಿಕ ದೃಷ್ಟಿ ಇರುವವರಿಗೆ ಪ್ರಭುವಿನ ವಿಶ್ವರೂಪವನ್ನು ನೋಡುವುದರಲ್ಲಿ ಹೆಚ್ಚು ಆಸಕ್ತಿ ಇರುವುದಿಲ್ಲ. ಹಿಂದಿನ ಶ್ಲೋಕದಲ್ಲಿ ವರ್ಣಿಸಿದಂತೆ ಅರ್ಜುನನು ವಿಷ್ಣುವಾಗಿ ಶ್ರೀಕೃಷ್ಣನ ಚತುರ್ಭುಜ ರೂಪವನ್ನು ನೋಡಲು ಬಯಸಿದನು; ವಿಶ್ವರೂಪದಿಂದ ಅವನಿಗೆ ಭಯವೇ ಆಯಿತು.

ಈ ಶ್ಲೋಕದಲ್ಲಿ ಹಲವು ಮಹತ್ವದ ಪದಗಳಿವೆ. ಉದಾಹರಣೆಗೆ ವೇದ ಯಜ್ಞಾಧ್ಯಯನೈ: ಇದು ವೈದಿಕ ಸಾಹಿತ್ಯದ ಮತ್ತು ಯಜ್ಞಗಳ ನಿಯಮಗಳ ವಸ್ತುವಿನ ಅಧ್ಯಯನಕ್ಕೆ ಸಂಬಂಧಿಸಿದ್ದು. ವೇದ ಎನ್ನುವ ಶಬ್ದವು ನಾಲ್ಕು ವೇದಗಳು (ಋಗ್ವೇದ, ಯಜುರ್ವೇದ, ಸಾಮವೇದ ಮತ್ತು ಅಥರ್ವವೇದ) ಮತ್ತು ಹದಿನೆಂಟು ಪುರಾಣಗಳು, ಉಪನಿಷತ್ತುಗಳು ಮತ್ತು ವೇದಾಂತ ಸೂತ್ರ ಇಂತಹ ಎಲ್ಲ ಬಗೆಯ ವೇದ ಸಾಹಿತ್ಯಕ್ಕೆ ಸಂಬಂಧಿಸಿದ್ದು. ಇವನ್ನು ಮನೆಯಲ್ಲಾಗಲೀ ಬೇರೆಲ್ಲಾದರೂ ಆಗಲಿ ಅಧ್ಯಯನ ಮಾಡಬಹುದು. ಹಾಗೆಯೇ ಯಜ್ಞವಿಧಾನವನ್ನು ಅಧ್ಯಯನ ಮಾಡಲು ಕಲ್ಪಸೂತ್ರಗಳು ಮತ್ತು ಮೀಮಾಂಸ ಸೂತ್ರಗಳಂತಹ ಸೂತ್ರಗಳಿವೆ.

ದಾನೈಃ ಶಬ್ದವು ಯೋಗ್ಯ ಪಾತ್ರನಿಗೆ ಕೊಟ್ಟ ದಾನವನ್ನು ಸೂಚಿಸುತ್ತದೆ. ಬ್ರಾಹ್ಮಣರಂತೆ ಮತ್ತು ವೈಷ್ಣವರಂತೆ ಪ್ರಭುವಿನ ಪ್ರೀತಿಯ ದಿವ್ಯಸೇವೆಯಲ್ಲಿ ನಿರತರಾದವರು ದಾನ ಪಡೆಯಲು ಯೋಗ್ಯರು. ಹಾಗೆಯೇ 'ಪುಣ್ಯಕಾರ್ಯಗಳು' ಎನ್ನುವುದು ಅಗ್ನಿಹೋತ್ರ ಮತ್ತು ಬೇರೆ ಬೇರೆ ಜಾತಿಗಳವರಿಗೆ ವಿಧಿಸಿರುವ ಕರ್ತವ್ಯಗಳಿಗೆ ಸಂಬಂಧಿಸಿದ್ದು. ದೇಹದಂಡನೆಯನ್ನು ಸ್ವ ಇಚ್ಛೆಯಿಂದ ಒಪ್ಪಿಕೊಳ್ಳುವುದು ತಪಸ್ಯ. ಒಬ್ಬ ಮನುಷ್ಯನು ಇವೆಲ್ಲವನ್ನೂ ಮಾಡಬಹುದು. ದೇಹದಂಡನೆಯನ್ನು ಮಾಡಿಕೊಳ್ಳಬಹುದು; ದಾನವನ್ನು ಕೊಡಬಹುದು; ವೇದಗಳನ್ನು ಅಭ್ಯಾಸಮಾಡಬಹುದು ಇತ್ಯಾದಿ. ಆದರೆ ಆತನು ಅರ್ಜುನನಂತೆ ಭಕ್ತನಲ್ಲದಿದ್ದರೆ ಆ ವಿಶ್ವರೂಪವನ್ನು ಕಾಣಲು ಸಾಧ್ಯವಿಲ್ಲ. ನಿರಾಕಾರವಾದಿಗಳು ತಾವು ಪ್ರಭುವಿನ ವಿಶ್ವರೂಪವನ್ನು ಕಾಣುತ್ತಿದ್ದೇವೆ ಎಂದು ಭಾವಿಸುತ್ತಾರೆ. ನಿರಾಕಾರವಾದಿಗಳು ಭಕ್ತರಲ್ಲ ಎಂದು ಭಗವದ್ಗೀತೆಯಿಂದ ತಿಳಿಯುತ್ತೇವೆ. ಆದುದರಿಂದ ಪ್ರಭುವಿನ ವಿಶ್ವರೂಪವನ್ನು ನೋಡಲು ಅವರಿಗೆ ಸಾಧ್ಯವಿಲ್ಲ.

ಅವತಾರಗಳನ್ನು ಸೃಷ್ಟಿಮಾಡುವ ಹಲವು ಜನರಿದ್ದಾರೆ. ಸಾಮಾನ್ಯ ಮನುಷ್ಯನೊಬ್ಬನು ಒಂದು ಅವತಾರ ಎಂದು ಅವರ ಸುಳ್ಳು ಹೇಳಿಕೆ. ಇದೆಲ್ಲ ಮೂರ್ಖತನ. ನಾವು ಭಗವದ್ಗೀತೆಯ ತತ್ವಗಳನ್ನು ಅನುಸರಿಸಬೇಕು; ಇಲ್ಲವಾದರೆ ಪರಿಪೂರ್ಣ ಆಧ್ಯಾತ್ಮಿಕ ಜ್ಞಾನವನ್ನು ಪಡೆಯಲು ಸಾಧ್ಯವೇ ಇಲ್ಲ. ಭಗವದ್ಗೀತೆಯನ್ನು ಭಗವದ್ವಿಜ್ಞಾನದ ಪೂರ್ವಭಾವಿ ಅಧ್ಯಯನವೆಂದು ಪರಿಗಣಿಸುತ್ತಾರೆ. ಅದು ಎಷ್ಟು ಪರಿಪೂರ್ಣವಾಗಿದೆ ಎಂದರೆ ಮನುಷ್ಯನು ಪ್ರತಿಯೊಂದನ್ನೂ ಅರ್ಥಮಾಡಿಕೊಳ್ಳುವ ವಿವೇಚನಾಶಕ್ತಿಯನ್ನು ಕೊಡುತ್ತದೆ. ಹುಸಿ ಅವತಾರದ ಹಿಂಬಾಲಕರು ತಾವು ಭಗವಂತನ ದಿವ್ಯ ಅವತಾರವನ್ನು, ವಿಶ್ವರೂಪವನ್ನು ಕಂಡಿದ್ದೇವೆ ಎಂದು ಹೇಳಿಕೊಳ್ಳಬಹುದು. ಆದರೆ ಇದನ್ನು ಒಪ್ಪಿಕೊಳ್ಳುವುದು ಸಾಧ್ಯವಿಲ್ಲ. ಏಕೆಂದರೆ ಕೃಷ್ಣನ ಭಕ್ತನಾಗದಿದ್ದರೆ ಭಗವಂತನ ವಿಶ್ವರೂಪವನ್ನು ಕಾಣಲು ಸಾಧ್ಯವಿಲ್ಲ ಎಂದು ಇಲ್ಲಿ ಹೇಳಿದೆ. ಆದುದರಿಂದ ಮೊಟ್ಟಮೊದಲು ಮನುಷ್ಯನು ಕೃಷ್ಣನ ಪರಿಶುದ್ಧ ಭಕ್ತನಾಗಬೇಕು; ಅನಂತರ ಅವನು ತಾನು ಕಂಡ ವಿಶ್ವರೂಪವನ್ನು ತೋರಿಸಬಲ್ಲೆ ಎಂದು ಹೇಳಿಕೊಳ್ಳಬಹುದು. ಕೃಷ್ಣ ಭಕ್ತನು ಹುಸಿ ಅವತಾರಗಳನ್ನಾಗಲಿ, ಹುಸಿ ಅವತಾರಗಳ ಹಿಂಬಾಲಕರನ್ನಾಗಲಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ.

(ಗಮನಿಸಿ: ಈ ಬರಹವು 'ಗೀತೋಪನಿಷದ್ ಭಗವದ್ಗೀತಾ ಯಥಾರೂಪ' ಪುಸ್ತಕದಲ್ಲಿರುವ ಮಾಹಿತಿಯನ್ನು ಆಧರಿಸಿದೆ. ಸಮಕಾಲೀನ ವಿಚಾರಗಳಿಗೆ ಅನ್ವಯಿಸಲು ಅರ್ಥದಲ್ಲಿ ತುಸು ವಿವರ ನೀಡಲಾಗಿದೆ. ಸಂದಿಗ್ಧ ಬಂದರೆ ಓದುಗರು ಮೂಲ ಪುಸ್ತಕವನ್ನೇ ಆಧರಿಸಿ, ಅನ್ವಯಿಸಿಕೊಳ್ಳಬೇಕು.)

HT Kannada Desk

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.