Bhagavad Gita: ಈ ಜಗತ್ತಿನಲ್ಲಿ ಯಾವುದು ಶ್ರೇಷ್ಠವಾಗಿದೆಯೋ ಅದೆಲ್ಲವೂ ಪರಮಾತ್ಮನೇ ಆಗಿದ್ದಾನೆ: ಗೀತೆಯ ಈ ಶ್ಲೋಕಗಳ ತಾತ್ಪರ್ಯ ಹೀಗಿದೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ಈ ಜಗತ್ತಿನಲ್ಲಿ ಯಾವುದು ಶ್ರೇಷ್ಠವಾಗಿದೆಯೋ ಅದೆಲ್ಲವೂ ಪರಮಾತ್ಮನೇ ಆಗಿದ್ದಾನೆ: ಗೀತೆಯ ಈ ಶ್ಲೋಕಗಳ ತಾತ್ಪರ್ಯ ಹೀಗಿದೆ

Bhagavad Gita: ಈ ಜಗತ್ತಿನಲ್ಲಿ ಯಾವುದು ಶ್ರೇಷ್ಠವಾಗಿದೆಯೋ ಅದೆಲ್ಲವೂ ಪರಮಾತ್ಮನೇ ಆಗಿದ್ದಾನೆ: ಗೀತೆಯ ಈ ಶ್ಲೋಕಗಳ ತಾತ್ಪರ್ಯ ಹೀಗಿದೆ

Bhagavad Gita: ಈ ಬ್ರಹ್ಮಾಂಡದಲ್ಲಿ ಶ್ರೇಷ್ಠವಾದದ್ದು ಬಹಳಷ್ಟಿವೆ. ಅವೆಲ್ಲವೂ ಪರಮಾತ್ಮನೇ ಆಗಿದ್ದಾನೆ. ಅವುಗಳ ಬಗ್ಗೆ ಅಧ್ಯಾಯ 10 ವಿಭೂತಿಯೋಗ ಶ್ಲೋಕ 28, 29 ಮತ್ತು 30 ರಲ್ಲಿ ವಿವರಿಸಲಾಗಿದೆ.

ಭಗವದ್ಗೀತೆ
ಭಗವದ್ಗೀತೆ

ಅಧ್ಯಾಯ – 10: ವಿಭೂತಿ ಯೋಗ – ಶ್ಲೋಕ – 28
ಆಯುಧಾನಾಮಹಂ ವಜ್ರಂ ಧೇನೂನಾಮಸ್ಮಿ ಕಾಮಧುಕ್ |
ಪ್ರಜನಶ್ಚಾಸ್ಮಿ ಕನ್ದರ್ಪಃ ಸರ್ಪಾಣಾಮಸ್ಮಿ ವಾಸುಕಿಃ || 28 ||

ಅರ್ಥ: ಆಯುಧಗಳಲ್ಲಿ ನಾನು ವಜ್ರಾಯುಧ, ಗೋವುಗಳಲ್ಲಿ ಸುರಭಿ, ಪ್ರಜೋತ್ಪತ್ತಿಗೆ ಕಾರಣಗಳಲ್ಲಿ ನಾನು ಕಂದರ್ಪ, ಪ್ರೇಮದೇವತೆ; ಸರ್ಪಗಳಲ್ಲಿ ನಾನು ವಾಸುಕಿ.

ಭಾವಾರ್ಥ: ವಜ್ರಾಯುಧ ಅಥವಾ ಸಿಡಿಲು ನಿಜವಾಗಿಯೂ ಬಲಶಾಲಿಯಾದದ್ದು. ಅದು ಕೃಷ್ಣನ ಶಕ್ತಿಯನ್ನು ಪ್ರತಿನಿಧಿಸುತ್ತದೆ. ಆಧ್ಯಾತ್ಮಿಕ ಗಗನದಲ್ಲಿರುವ ಕೃಷ್ಣಲೋಕದಲ್ಲಿ, ಯಾವಾಗ ಕರೆದರೂ ಹಾಲು ಕೊಡುವ ಹಸುಗಳಿವೆ. ಅವು ಮನುಷ್ಯನು ಎಷ್ಟು ಬಯಸಿದರೆ ಅಷ್ಟು ಹಾಲನ್ನು ಕೊಡುತ್ತವೆ. ನಿಜ, ಇಂತಹ ಗೋವುಗಳು ಐಹಿಕ ಲೋಕದಲ್ಲಿ ಇಲ್ಲ. ಆದರೆ ಕೃಷ್ಣಲೋಕದಲ್ಲಿ ಅವುಗಳ ಪ್ರಸ್ತಾಪ ಇದೆ. ಪ್ರಭುವು ಇಂತಹ ಅನೇಕ ಗೋವುಗಳನ್ನು ಇಟ್ಟುಕೊಂಡಿದ್ದಾನೆ. ಅವುಗಳಿಗೆ ಸುರಭಿ ಎಂದು ಹೆಸರು. ಭಗವಂತನು ಸುರಭಿ ಗೋವುಗಳನ್ನು ನೋಡಿಕೊಳ್ಳುವುದರಲ್ಲಿ ನಿರತನಾಗಿರುತ್ತಾನೆ ಎಂದು ಹೇಳಲಾಗಿದೆ. ಕಂದರ್ಪ ಎಂದರೆ ಸತ್ಪುತ್ರರ ಪ್ರಾಪ್ತಿಗಾಗಿ ಇರುವ ಕಾಮಾಪೇಕ್ಷೆ. ಆದುದರಿಂದ ಕಂದರ್ಪನು ಕೃಷ್ಣನ ಪ್ರತಿನಿಧಿ. ಕೆಲವೊಮ್ಮೆ ಇಂದ್ರಿಯ ಸುಖಕ್ಕಾಗಿಯೇ ರತಿಕ್ರೀಡೆ ಆಡುವುದುಂಟು. ಇಂತಹ ರತಿಕ್ರೀಡೆಯು ಕೃಷ್ಣನ ಪ್ರತಿನಿಧಿಯಲ್ಲ. ಆದರೆ ಒಳ್ಳೆಯ ಮಕ್ಕಳ ಜನನಕ್ಕಾಗಿ ನಡೆಯುವ ಕಾಮಜೀವನಕ್ಕೆ ಕಂದರ್ಪ ಎಂದು ಹೆಸರು. ಇದು ಕೃಷ್ಣನನ್ನು ಪ್ರತಿನಿಧಿಸುತ್ತದೆ.

ಅಧ್ಯಾಯ – 10: ವಿಭೂತಿ ಯೋಗ – ಶ್ಲೋಕ – 29
ಅನಂತಶ್ಚಾಸ್ಮಿ ನಾಗಾನಾಂ ವರುಣೋ ಯಾದಸಾಮಹಮ್ |
ಪಿತೃಣಾಮರ್ಯಮಾ ಚಾಸ್ಮಿ ಯಮಃ ಸಂಯಮತಾಮಹಮ್ || 29 ||

ಅರ್ಥ: ಬಹು ಹೆಡೆಗಳ ನಾಗರಲ್ಲಿ ನಾನು ಅನಂತ, ಜಲವಾಸಿಗಳಲ್ಲಿ ನಾನು ವರುಣ ದೇವತೆ. ಪಿತೃಗಳಲ್ಲಿ ಅರ್ಯಮಾ ಮತ್ತು ಶಾಸನ ನಿರ್ವಹಿಸುವವರಲ್ಲಿ ನಾನು ಯಮ.

ಭಾವಾರ್ಥ: ಜಲವಾಸಿಗಳಲ್ಲಿ ವರುಣದೇವನೇ ಅತ್ಯಂತ ಶ್ರೇಷ್ಠನಾದಂತೆ ಬಹು ಹೆಡೆಗಳ ನಾಗಸರ್ಪಗಳಲ್ಲಿ ಅನಂತನೇ ಬಹುಶ್ರೇಷ್ಠ. ಇವರಿಬ್ಬರೂ ಕೃಷ್ಣನನ್ನು ಪ್ರತಿನಿಧಿಸುತ್ತಾರೆ. ಪಿತೃಗಳ ಲೋಕವೊಂದಿದೆ. ಅದರ ಅಧಿಪತಿ ಅರ್ಯಮಾ. ಆತನು ಕೃಷ್ಣನನ್ನು ಪ್ರತಿನಿಧಿಸುತ್ತಾನೆ. ದುಷ್ಕರ್ಮಿಗಳಿಗೆ ಶಿಕ್ಷೆ ಮಾಡುವ ಜೀವಿಗಳು ಅನೇಕರಿದ್ದಾರೆ. ಅವರಲ್ಲಿ ಯಮನೇ ಪ್ರಧಾನನು. ಯಮನು ಭೂಲೋಕದ ಬಳಿ ಇರುವ ಒಂದು ಗ್ರಹದಲ್ಲಿ ನೆಲೆಸಿದ್ದಾನೆ. ಮರಣಾನಂತರ ಬಹಳ ಪಾಪ ಮಾಡಿರುವವರನ್ನು ಆ ಲೋಕಕ್ಕೆ ಕರೆದೊಯ್ಯಲಾಗುತ್ತದೆ. ಯಮನು ಅವರಿಗೆ ವಿಧವಿಧವಾದ ಶಿಕ್ಷೆಗಳನ್ನು ವಿಧಿಸುತ್ತಾನೆ.

ಅಧ್ಯಾಯ – 10: ವಿಭೂತಿ ಯೋಗ – ಶ್ಲೋಕ – 30
ಪ್ರಹ್ಲಾದಶ್ಚಾಸ್ಮಿ ದೈತ್ಯಾನಾಂ ಕಾಲಃ ಕಲಯತಾಮಹಮ್ |
ಮೃಗಾಣಾಂ ಚ ಮೃಗೇನ್ದ್ರೋಹಂ ವೈನತೇಯಶ್ಚ ಪಕ್ಷಿಣಾಮ್ || 30 ||

ಅರ್ಥ: ದೈತ್ಯರಲ್ಲಿ ನಾನು ಭಕ್ತ ಪ್ರಹ್ಲಾದ, ಕ್ಷಯವನ್ನುಂಟುಮಾಡುವವರಲ್ಲಿ ನಾನು ಕಾಲ. ಪ್ರಾಣಿಗಳಲ್ಲಿ ನಾನು ಸಿಂಹ ಮತ್ತು ಪಕ್ಷಿಗಳಲ್ಲಿ ನಾನು ಗರುಡ.

ಭಾವಾರ್ಥ: ದಿತಿ ಮತ್ತು ಅದಿತಿ ಸೋದರಿಯರು. ಅದಿತಿಯ ಗಂಡುಮಕ್ಕಳಿಗೆ ಆದಿತ್ಯರೆಂದೂ ದಿತಿಯ ಗಂಡುಮಕ್ಕಳಿಗೆ ದೈತ್ಯರೆಂದೂ ಹೆಸರು. ಆದಿತ್ಯರೆಲ್ಲ ಭಗವಂತನ ಭಕ್ತರು; ದೈತ್ಯರೆಲ್ಲ ನಾಸ್ತಿಕರು. ಪ್ರಹ್ಲಾದನು ದೈತ್ಯ ಕುಟುಂಬದಲ್ಲಿ ಹುಟ್ಟಿದರೂ ಬಾಲ್ಯದಿಂದ ಅವನು ಮಹಾಭಕ್ತ. ಅವನ ಭಕ್ತಿಸೇವೆಯಿಂದಾಗಿ ಮತ್ತು ಧರ್ಮಿಷ್ಟ ಸ್ವಭಾವದಿಂದಾಗಿ ಅವನನ್ನು ಕೃಷ್ಣನ ಪ್ರತಿನಿಧಿ ಎಂದು ಪರಿಗಣಿಸಿದೆ. ಕ್ಷಯವನ್ನುಂಟುಮಾಡುವ ಅನೇಕ ತತ್ವಗಳಿವೆ, ಆದರೆ ಕಾಲವು ಐಹಿಕ ವಿಶ್ವದಲ್ಲಿ ಎಲ್ಲ ವಸ್ತುಗಳನ್ನು ಸವೆಸುತ್ತದೆ; ಆದುದರಿಂದ ಅದು ಕೃಷ್ಣನ ಪ್ರತಿನಿಧಿ. ಅನೇಕ ಪ್ರಾಣಿಗಳಲ್ಲಿ ಸಿಂಹವು ಅತ್ಯಂತ ಬಲಶಾಲಿಯಾದದ್ದು ಮತ್ತು ಭಯಂಕರವಾದದ್ದು. ಲಕ್ಷಾಂತರ ಬಗೆಯ ಪಕ್ಷಿಗಳಲ್ಲಿ ವಿಷ್ಣುವಿನ ವಾಹನವಾದ ಗರುಡನು ಅತ್ಯಂತ ಶ್ರೇಷ್ಠನು.

(ಗಮನಿಸಿ: ಈ ಬರಹವು 'ಗೀತೋಪನಿಷದ್ ಭಗವದ್ಗೀತಾ ಯಥಾರೂಪ' ಪುಸ್ತಕದಲ್ಲಿರುವ ಮಾಹಿತಿಯನ್ನು ಆಧರಿಸಿದೆ. ಸಮಕಾಲೀನ ವಿಚಾರಗಳಿಗೆ ಅನ್ವಯಿಸಲು ಅರ್ಥದಲ್ಲಿ ತುಸು ವಿವರ ನೀಡಲಾಗಿದೆ. ಸಂದಿಗ್ಧ ಬಂದರೆ ಓದುಗರು ಮೂಲ ಪುಸ್ತಕವನ್ನೇ ಆಧರಿಸಿ, ಅನ್ವಯಿಸಿಕೊಳ್ಳಬೇಕು.)

Raghavendra M Y

TwittereMail
ರಾಘವೇಂದ್ರ ಎಂ.ವೈ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್ ಪ್ರೊಡ್ಯೂಸರ್. ರಾಶಿ ಭವಿಷ್ಯ (ಧರ್ಮ) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ, ಉದಯ ನ್ಯೂಸ್, ದಿಗ್ವಿಜಯ ನ್ಯೂಸ್, ಫಸ್ಟ್ ನ್ಯೂಸ್, ಡಿಡಿ ಚಂದನ ನ್ಯೂಸ್, ಈ-ಟಿವಿ ಭಾರತದಲ್ಲಿ ಬುಲೆಟಿನ್ ಪ್ರೊಡ್ಯೂಸರ್ ಸೇರಿ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಅನುಭವ. ಪುಸ್ತಕ, ಪತ್ರಿಕೆ ಓದುವುದು ಇಷ್ಟ. ವಾಣಿಜ್ಯ, ಕ್ರಿಕೆಟ್, ಗ್ರಾಮೀಣ ವಿದ್ಯಮಾನಗಳ ಬಗ್ಗೆ ಇಷ್ಟಪಟ್ಟು ಬರೆಯುತ್ತಾರೆ. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಿರುಪನಹಳ್ಳಿ ಇವರ ಸ್ವಂತ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.