ಭಗವಂತನನ್ನು ಹೇಗೆ ಮತ್ತು ಯಾವ ರೂಪಗಳಲ್ಲಿ ಪೂಜಿಸುತ್ತಾರೆ; ಭಗವದ್ಗೀತೆಯ ಈ ಶ್ಲೋಕದಿಂದ ಅರಿತುಕೊಳ್ಳಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಭಗವಂತನನ್ನು ಹೇಗೆ ಮತ್ತು ಯಾವ ರೂಪಗಳಲ್ಲಿ ಪೂಜಿಸುತ್ತಾರೆ; ಭಗವದ್ಗೀತೆಯ ಈ ಶ್ಲೋಕದಿಂದ ಅರಿತುಕೊಳ್ಳಿ

ಭಗವಂತನನ್ನು ಹೇಗೆ ಮತ್ತು ಯಾವ ರೂಪಗಳಲ್ಲಿ ಪೂಜಿಸುತ್ತಾರೆ; ಭಗವದ್ಗೀತೆಯ ಈ ಶ್ಲೋಕದಿಂದ ಅರಿತುಕೊಳ್ಳಿ

Bhagavad Gita: ಜಗತ್ತಿನಲ್ಲಿ ಭಕ್ತರು ಪರಮಾತ್ಮನನ್ನ ಯಾವ ರೂಪಗಳಲ್ಲಿ, ಹೇಗೆ ಪೂಜಿಸುತ್ತಾರೆ ಎಂದು ಭಗವದ್ಗೀತೆಯ ಅಧ್ಯಾಯ 9, ರಹಸ್ಯತಮ ಜ್ಞಾನದ ಶ್ಲೋಕ14 ಮತ್ತು 15 ರಲ್ಲಿ ಈ ರೀತಿಯಾಗಿ ವರ್ಣಿಸಲಾಗಿದೆ.

Bhagavad gita: ಭಗವಂತನನ್ನು ಹೇಗೆ ಮತ್ತು ಯಾವ ರೂಪಗಳಲ್ಲಿ ಪೂಜಿಸುತ್ತಾರೆ ಎಂಬುದನ್ನು ಭಗವದ್ಗೀತೆಯ ಈ ಶ್ಲೋಕದಿಂದ ಅರಿತುಕೊಳ್ಳಿ.
Bhagavad gita: ಭಗವಂತನನ್ನು ಹೇಗೆ ಮತ್ತು ಯಾವ ರೂಪಗಳಲ್ಲಿ ಪೂಜಿಸುತ್ತಾರೆ ಎಂಬುದನ್ನು ಭಗವದ್ಗೀತೆಯ ಈ ಶ್ಲೋಕದಿಂದ ಅರಿತುಕೊಳ್ಳಿ.

ಅಧ್ಯಾಯ - 9: ರಹಸ್ಯತಮ ಜ್ಞಾನ - ಶ್ಲೋಕ - 14
ಸತತಂ ಕೀರ್ತಯನ್ತೋ ಮಾಂ ಯತನ್ತಶ್ಚ ದೃಢವ್ರತಾಃ |
ನಮಸ್ಯನ್ತಶ್ಚ ಮಾಂ ಭಕ್ತ್ಯಾ ನಿತ್ಯಯುಕ್ತಾ ಉಪಾಸತೇ || 14 ||

ಅರ್ಥ: ಸದಾ ನನ್ನ ಕೀರ್ತನೆಯನ್ನು ಮಾಡುತ್ತ, ದೃಢ ಸಂಕಲ್ಪದಿಂದ ಪ್ರಯತ್ನವನ್ನು ಮಾಡುತ್ತ, ನನಗೆ ನಮಸ್ಕಾರವನ್ನು ಮಾಡುತ್ತ ಈ ಮಹಾತ್ಮರು ಸತತವಾಗಿ ಭಕ್ತಿಯಿಂದ ನನ್ನನ್ನು ಪೂಜಿಸುತ್ತಾರೆ.

ಭಾವಾರ್ಥ: ಪರಮಾತ್ಮನ ಪರಮ ಭಕ್ತನಾದ ಮಹಾತ್ಮನು ದೇವೋತ್ತಮ ಪುರುಷನಾದ ಪರಮ ಪ್ರಭು ಕೃಷ್ಣನ ಕೀರ್ತನೆಯಲ್ಲಿ ಸದಾ ನಿರತನಾಗಿರುತ್ತಾನೆ. ಅವನಿಗೆ ಬೇರೆ ಕೆಲಸವೇ ಇಲ್ಲ. ಅವನು ಸದಾ ದೇವರನ್ನು ಸ್ತುತಿಸುವುದರಲ್ಲಿಯೇ ನಿರತನಾಗಿರುತ್ತಾನೆ. ಬೇರೆ ಮಾತುಗಳಲ್ಲಿ ಹೇಳುವುದಾದರೆ, ಆತನು ನಿರಾಕಾರವಾದಿಯಲ್ಲ. ಕೀರ್ತನೆಯ ಪ್ರಶ್ನೆ ಇರುವಾಗ, ಪರಮ ಪ್ರಭುವನ್ನು ಕೀರ್ತಿಸಬೇಕು. ಅವನ ಪವಿತ್ರ ನಾಮವನ್ನೂ, ನಿತ್ಯ ರೂಪವನ್ನೂ, ದಿವ್ಯ ಗುಣಗಳನ್ನೂ, ಅಸಾಧಾರಣ ಲೀಲೆಗಳನ್ನೂ ಹೊಗಳಬೇಕು. ಇವೆಲ್ಲವನ್ನೂ ಸ್ತುತಿಸಬೇಕು. ಆದುದರಿಂದ ಮಹಾತ್ಮನಾದವನಿಗೆ ದೇವೋತ್ತಮ ಪರಮ ಪುರುಷನಲ್ಲಿ ಮಾತ್ರ ಆಸಕ್ತಿಯಿರುತ್ತದೆ.

ಪರಮಾತ್ಮನ ನಿರಾಕಾರಸ್ವರೂಪವಾದ ಬ್ರಹ್ಮ ಜ್ಯೋತಿಯಲ್ಲಿ ಆಸಕ್ತನಾದವನನ್ನು ಭಗವದ್ಗೀತೆಯಲ್ಲಿ ಮಹಾತ್ಮನೆಂದು ವರ್ಣಿಸಿಲ್ಲ. ಶ್ರೀಮದ್ಭಾಗವತದಲ್ಲಿ ವರ್ಣಿಸಿದಂತೆ ಮಹಾತ್ಮನಾದವನು ವಿಷ್ಣುವಿನ ವಿಷಯವನ್ನು ಕೇಳುತ್ತ, ಆತನ ಸಂಕೀರ್ತನೆಯನ್ನು ಮಾಡುತ್ತ, ಭಕ್ತಿಸೇವೆಯ ಬೇರೆಬೇರೆ ಕಾರ್ಯಗಳಲ್ಲಿ ಸದಾ ತೊಡಗಿರುತ್ತಾನೆ. ಯಾವುದೇ ದೇವರುಗಳ ಅಥವಾ ಮನುಷ್ಯನ ಸೇವೆಯಲ್ಲಿ ಅಲ್ಲ. ಶ್ರವಣಂ ಕೀರ್ತನಂ ವಿಷ್ಣೋ ಅಂದರೆ ಸದಾ ಅವನ ಬಗ್ಗೆಯೇ ಕೇಳುವುದು ಮತ್ತು ಕೀರ್ತನೆ ಮಾಡುವುದು ಹಾಗೂ ಸ್ಮರಣಮ್, ಅವನ ನೆನಪು ಮಾಡುವುದಾಗಿದೆ. ಐದು ದಿವ್ಯ ರಸಗಳಲ್ಲಿ ಯಾವುದಾದರೂ ಒಂದು ರಸದಲ್ಲಿ ಕಟ್ಟಕಡೆಗೆ ಪರಮ ಪ್ರಭುವಿನ ಸಹವಾಸವನ್ನು ಪಡೆಯಬೇಕು. ಇದು ಇಂತಹ ಮಹಾತ್ಮನ ವಜ್ರಸಂಕಲ್ಪವಾಗಿದೆ. ಈ ಯಶಸ್ಸನ್ನು ಸಾಧಿಸಲು ಅವನು ಕಾಯಾ ವಾಚಾ ಮನಸಾ ಎಲ್ಲ ಚಟುವಟಿಕೆಗಳನ್ನೂ ಪರಮ ಪ್ರಭುವಾದ ಶ್ರೀಕೃಷ್ಣನ ಸೇವೆಯಲ್ಲಿ ತೊಡಗಿಸುತ್ತಾನೆ. ಇದನ್ನು ಸಂಪೂರ್ಣ ಕೃಷ್ಣಪ್ರಜ್ಞೆ ಎಂದು ಕರೆಯುತ್ತಾರೆ.

ಭಕ್ತಿ ಸೇವೆಯಲ್ಲಿ ಕೆಲವು ನಿರ್ಧಾರಿತ ಚಟುವಟಿಕೆಗಳಿವೆ. ಉದಾಹರಣೆಗೆ, ಏಕಾದಶಿಯ ದಿವಸ ಮತ್ತು ಪರಮಾತ್ಮನ ಅವತಾರದ ದಿವಸ ಉಪವಾಸ ಮಾಡುವುದು. ದಿವ್ಯಜಗತ್ತಿನಲ್ಲಿ ದೇವೋತ್ತಮ ಪರಮ ಪುರುಷನ ಸಹವಾಸಕ್ಕೆ ಪ್ರವೇಶ ಪಡೆಯಲು ಆಸಕ್ತರಾದವರಿಗೆಲ್ಲ ಮಹಾ ಆಚಾರ್ಯರು ಈ ವಿಧಿನಿಯಮಗಳನ್ನು ಕೊಟ್ಟಿದ್ದಾರೆ. ಮಹಾತ್ಮರು ಎಲ್ಲ ವಿಧಿನಿಯಮಗಳನ್ನೂ ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ಆದುದರಿಂದ ಅವರು ಅಪೇಕ್ಷಿತ ಫಲವನ್ನು ನಿಶ್ಚಯವಾಗಿಯೂ ಸಾಧಿಸುವರು.

ಈ ಅಧ್ಯಾಯದ ಎರಡನೆಯ ಶ್ಲೋಕದಲ್ಲಿ ವರ್ಣಿಸಿದಂತೆ ಈ ಭಕ್ತಿಸೇವೆಯು ಬಹಳ ಸುಲಭವಾಗಿದೆ. ಅದನ್ನು ಸುಖವಾದ ಮನಸ್ಥಿತಿಯಲ್ಲಿ ನಡೆಸಬಹುದು. ಇದಕ್ಕಾಗಿ ಯಾವುದೇ ಕಠಿಣವಾದ ಪ್ರಾಯಶ್ಚಿತ್ತವನ್ನಾಗಲೀ, ವ್ರತವನ್ನಾಗಲೀ ನಡೆಸಬೇಕಾಗಿಲ್ಲ. ವ್ಯಕ್ತಿಯು ಒಬ್ಬ ತಜ್ಞ ಗುರುವಿನ ಮಾರ್ಗದರ್ಶನದಲ್ಲಿ ಈ ಭಕ್ತಿಸೇವೆಯಲ್ಲಿ ತೊಡಗಿಸಿಕೊಳ್ಳಬಹುದು. ಗೃಹಸ್ಥನಾಗಿ ಅಥವಾ ಸನ್ಯಾಸಿಯಾಗಿ ಅಥವಾ ಬ್ರಹ್ಮಚಾರಿಯಾಗಿ ಆತನು ಯಾವುದೇ ಸ್ಥಿತಿಯಲ್ಲಾದರೂ ಮತ್ತು ಜಗತ್ತಿನಲ್ಲಿ ಎಲ್ಲಾದರೂ ದೇವೋತ್ತಮ ಪರಮ ಪುರುಷನ ಈ ಭಕ್ತಿಸೇವೆಯನ್ನು ಮಾಡಬಹುದು. ಹಾಗೆ ಮಾಡಿದಾಗ ವಾಸ್ತವವಾಗಿ ಅವನು ಮಹಾತ್ಮನಾಗಬಹುದು.

ಅಧ್ಯಾಯ - 9: ರಹಸ್ಯತಮ ಜ್ಞಾನ - ಶ್ಲೋಕ - 15
ಜ್ಞಾನಯಜ್ಞೇ ಚಾಮ್ಯನ್ಯೇ ಯಜನ್ತೋ ಮಾಮುಪಾಸತೇ |
ಏಕತ್ವೇನ ಪೃಥಕ್ರ್ವೇನ ಬಹುಧಾ ವಿಶ್ವತೋಮುಖಮ್ || 15 ||

ಅರ್ಥ: ಜ್ಞಾನದ ಬೆಳವಣಿಗೆಯಿಂದ ಯಜ್ಞದಲ್ಲಿ ನಿರತರಾದ ಇತರರು ಭಗವಂತನನ್ನು ಅದ್ವಿತೀಯನೆಂದೂ ಹಲವು ರೂಪಗಳಲ್ಲಿ ಇರುವವನೆಂದೂ ಮತ್ತು ವಿಶ್ವರೂಪದಲ್ಲಿಯೂ ಪೂಜಿಸುತ್ತಾರೆ.

ಭಾವಾರ್ಥ: ಈ ಶ್ಲೋಕವು ಹಿಂದಿನ ಶ್ಲೋಕಗಳ ಸಾರಾಂಶವಾಗಿದೆ. ಕೃಷ್ಣಪ್ರಜ್ಞೆಯಲ್ಲಿ ಪರಿಶುದ್ದರಾಗಿ ಕೃಷ್ಣನನ್ನು ಬಿಟ್ಟು ಬೇರೆ ಏನನ್ನೂ ತಿಳಿಯದವರಿಗೆ ಮಹಾತ್ಮರೆಂದು ಹೆಸರು ಎಂದು ಪರಮಾತ್ಮನು ಅರ್ಜುನನಿಗೆ ಹೇಳುತ್ತಾನೆ. ಆದರೂ ನಿಖರವಾಗಿ ಮಹಾತ್ಮರ ಸ್ಥಾನದಲ್ಲಿಯೇ ಇಲ್ಲದಿದ್ದರೂ ವಿವಿಧ ರೀತಿಗಳಲ್ಲಿ ಕೃಷ್ಣನನ್ನು ಪೂಜಿಸುವ ಇತರರು ಇದ್ದಾರೆ. ಅವರಲ್ಲಿ ಕೆಲವರನ್ನು ಸಂಕಟದಲ್ಲಿರುವವರು, ಆರ್ಥಿಕವಾಗಿ ಬಲಹೀನರಾದವರು, ಕುತೂಹಲವುಳ್ಳವರು ಮತ್ತು ಜ್ಞಾನವನ್ನು ಬೆಳೆಸಿಕೊಳ್ಳುವುದರಲ್ಲಿ ನಿರತರಾದವರು ಎಂದು ಈಗಾಗಲೇ ವರ್ಣಿಸಲಾಗಿದೆ. ಆದರೆ ಇದಕ್ಕಿಂತ ಕೆಳಗಿನ ಮಟ್ಟದಲ್ಲಿರುವ ಇತರರೂ ಇದ್ದಾರೆ. ಅವರಲ್ಲಿ ಮೂರು ವರ್ಗಗಳವರಿದ್ದಾರೆ.

ಮೊದಲನೆಯವರು ತಾನು ಪರಮ ಪ್ರಭುವಿನೊಂದಿಗೆ ಒಂದು ಎಂದು ತಿಳಿದು ಪೂಜಿಸುವವರು, ಎರಡನೆಯವರು ಪರಮ ಪ್ರಭುವಿನ ಯಾವುದಾದರೂ ರೂಪವನ್ನು ಸೃಷ್ಟಿಸಿಕೊಂಡು ಅದನ್ನು ಪೂಜಿಸುವವರು ಮತ್ತು ಮೂರನೆಯವರು ದೇವೋತ್ತಮ ಪರಮ ಪುರುಷನ ವಿಶ್ವರೂಪವನ್ನು ಒಪ್ಪಿಕೊಂಡು ಅದನ್ನು ಪೂಜಿಸುವವರು. ಈ ಮೂವರಲ್ಲಿ ಅತ್ಯಂತ ಕೆಳಗಿನ ಹಂತದಲ್ಲಿರುವ, ತಾವು ಅದೈತಿಗಳೆಂದು ಭಾವಿಸಿಕೊಂಡು ತಮ್ಮನ್ನೇ ಪರಮ ಪ್ರಭು ಎಂದು ಪೂಜಿಸಿಕೊಳ್ಳುವವರು ಬಹು ಹೆಚ್ಚಿನ ಸಂಖ್ಯೆಯವರು. ಈ ಜನರು ತಾವೇ ಪರಮ ಪ್ರಭು ಎಂದು ಯೋಚಿಸುತ್ತಾರೆ ಮತ್ತು ಈ ಮನಸ್ಥಿತಿಯಲ್ಲಿ ತಮ್ಮನ್ನೇ ಪೂಜಿಸಿಕೊಳ್ಳುತ್ತಾರೆ. ಇದೂ ಒಂದು ರೀತಿಯ ದೇವರಪೂಜೆಯೇ. ಏಕೆಂದರೆ ಅವರು ತಾವು ಐಹಿಕ ದೇಹವಲ್ಲ, ಆದರೆ ವಾಸ್ತವವಾಗಿ ಚೇತನಾತ್ಮರು ಎನ್ನುವುದನ್ನು ಅರ್ಥಮಾಡಿಕೊಳ್ಳುತ್ತಾರೆ.

ಸಾಮಾನ್ಯವಾಗಿ ನಿರಾಕಾರವಾದಿಗಳು ಪರಮ ಪ್ರಭುವನ್ನು ಈ ರೀತಿ ಪೂಜಿಸುತ್ತಾರೆ. ಮೊದಲೆನೆಯವರು ದೇವತೆಗಳನ್ನು ಪೂಜಿಸುವವರು, ಎರಡನೆಯವರು ತಮ್ಮ ಕಲ್ಪನಾಶಕ್ತಿಯಿಂದ ಎಲ್ಲವೂ ಪರಮಾತ್ಮ ಸ್ವರೂಪವೆಂದು ಭಾವಿಸುವವರು ಎರಡನೆಯವರು. ಈ ಐಹಿಕ ವಿಶ್ವದ ಅಭಿವ್ಯಕ್ತಿಯಾಚೆ ಬೇರೇನನ್ನೂ ಕಲ್ಪಿಸಿಕೊಳ್ಳಲಾರದವರು ಮೂರನೆಯ ವರ್ಗದವರು. ಅವರು ವಿಶ್ವವನ್ನೇ ಪರಮ ಜೀವಿಯೆಂದು ಅಥವಾ ಅಸ್ತಿತ್ವದಲ್ಲಿರುವ ವಸ್ತುವೆಂದು ಭಾವಿಸಿ ಅದನ್ನೇ ಪೂಜಿಸುತ್ತಾರೆ. ವಿಶ್ವವೂ ಪರಮ ಪ್ರಭುವಿನ ಒಂದು ರೂಪವಾಗಿದೆ.

(ಗಮನಿಸಿ: ಈ ಬರಹವು ಗೀತೋಪನಿಷದ್‌ ಭಗವದ್ಗೀತಾ ಯಥಾರೂಪ ಮಾಹಿತಿಯನ್ನು ಆಧರಿಸಿದೆ. ಇದನ್ನು ಸಾಮಾನ್ಯ ಮಾಹಿತಿಗಾಗಿ ಪ್ರಕಟಿಸಲಾಗಿದೆ.)

Raghavendra M Y

TwittereMail
ರಾಘವೇಂದ್ರ ಎಂ.ವೈ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್ ಪ್ರೊಡ್ಯೂಸರ್. ರಾಶಿ ಭವಿಷ್ಯ (ಧರ್ಮ) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ, ಉದಯ ನ್ಯೂಸ್, ದಿಗ್ವಿಜಯ ನ್ಯೂಸ್, ಫಸ್ಟ್ ನ್ಯೂಸ್, ಡಿಡಿ ಚಂದನ ನ್ಯೂಸ್, ಈ-ಟಿವಿ ಭಾರತದಲ್ಲಿ ಬುಲೆಟಿನ್ ಪ್ರೊಡ್ಯೂಸರ್ ಸೇರಿ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಅನುಭವ. ಪುಸ್ತಕ, ಪತ್ರಿಕೆ ಓದುವುದು ಇಷ್ಟ. ವಾಣಿಜ್ಯ, ಕ್ರಿಕೆಟ್, ಗ್ರಾಮೀಣ ವಿದ್ಯಮಾನಗಳ ಬಗ್ಗೆ ಇಷ್ಟಪಟ್ಟು ಬರೆಯುತ್ತಾರೆ. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಿರುಪನಹಳ್ಳಿ ಇವರ ಸ್ವಂತ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.