Bhagavad Gita: ಭೂತ, ಭವಿಷ್ಯ, ವರ್ತಮಾನ ಎಲ್ಲವೂ ಪರಮಾತ್ಮನ ವಿಶ್ವರೂಪದಲ್ಲಿ ಅಡಗಿದೆ; ಗೀತೆಯ ಈ ಶ್ಲೋಕಗಳ ಅರ್ಥ ತಿಳಿಯಿರಿ
Bhagavad Gita: ಪರಮಾತ್ಮನ ವಿಶ್ವರೂಪ ನೋಡಲು ಸ್ವತಃ ಕೃಷ್ಣನೇ ಅರ್ಜುನನಿಗೆ ದಿವ್ಯವಾದ ದೃಷ್ಟಿಯನ್ನು ನೀಡುತ್ತಾನೆ. ಭಗವದ್ಗೀತೆಯ ಅಧ್ಯಾಯ 11, ವಿಶ್ವರೂಪದ, ಶ್ಲೋಕ 7 ಮತ್ತು 8 ರ ಅರ್ಥ ಹೀಗಿದೆ.

ಅಧ್ಯಾಯ – 11: ವಿಶ್ವರೂಪ – ಶ್ಲೋಕ – 7
ಇಹೈಕಸ್ಥಂ ಜಗತ್ ಕೃತ್ಸ್ನಂ ಪಶ್ಯಾದ್ಯ ಸಚರಾಚರಮ್ |
ಮಮ ದೇಹೇ ಗುಡಾಕೇಶ ಯಚ್ಚಾನ್ಯದ್ ದ್ರಷ್ಟುಮಿಚ್ಛಸಿ || 7 ||
ಅರ್ಥ: ಅರ್ಜುನ, ನೀನು ಏನೇನನ್ನು ನೋಡಲು ಬಯಸುತ್ತೀಯೋ ಆದೆಲ್ಲವನ್ನೂ ಒಮ್ಮೆಗೇ ಈ ನನ್ನ ದೇಹದಲ್ಲಿ ನೋಡು! ನೀನು ಈಗ ಏನೇನನ್ನು ನೋಡಲು ಬಯಸುತ್ತೀಯೋ ಮತ್ತು ಮುಂದೆ ಏನೇನನ್ನು ನೋಡಲು ಬಯಸಬಹುದೋ ಅದೆಲ್ಲವನ್ನೂ ಈ ವಿಶ್ವರೂಪವು ನಿನಗೆ ತೋರಿಸುವುದು. ಚರಾಚರವಾದದ್ದೆಲ್ಲವೂ ಸಂಪೂರ್ಣವಾಗಿ ಒಂದು ಸ್ಥಳದಲ್ಲಿ ಇಲ್ಲಿವೆ.
ಭಾವಾರ್ಥ: ಒಂದು ಸ್ಥಳದಲ್ಲಿ ಕುಳಿತು ಯಾರೂ ಇಡೀ ವಿಶ್ವವನ್ನು ಕಾಣಲಾರರು. ಅತ್ಯಂತ ಮುಂದುವರಿದ ವಿಜ್ಞಾನಿಯೂ ವಿಶ್ವದ ಇತರ ಭಾಗಗಳಲ್ಲಿ ಆಗುತ್ತಿರುವುದನ್ನು ಕಾಣಲಾರ. ಆದರೆ ಅರ್ಜುನನಂತಹ ಭಕ್ತನು ವಿಶ್ವದ ಯಾವುದೇ ಭಾಗದಲ್ಲಿರುವ ಏನನ್ನಾದರೂ ಕಾಣಬಲ್ಲ. ಭೂತ, ವರ್ತಮಾನ ಮತ್ತು ಭವಿಷ್ಯತ್ತುಗಳಲ್ಲಿ ಅವನು ಕಾಣಲು ಬಯಸುವ ಏನನ್ನೇ ಆದರೂ ಕಾಣುವ ಶಕ್ತಿಯನ್ನು ಕೃಷ್ಣನು ಅವನಿಗೆ ಕೊಡುತ್ತಾನೆ. ಹೀಗೆ ಕೃಷ್ಣನ ದಯೆಯಿಂದ ಅರ್ಜುನನು ಎಲ್ಲವನ್ನೂ ನೋಡಬಲ್ಲವನಾಗುತ್ತಾನೆ.
ಅಧ್ಯಾಯ – 11: ವಿಶ್ವರೂಪ – ಶ್ಲೋಕ - 8
ನ ತು ಮಾಂ ಶಕ್ಯಸೇ ದ್ರಷ್ಟುಮನೇನೈವ ಸ್ವಚಕ್ಷುಷಾ |
ದಿವ್ಯಂ ದದಾಮಿ ತೇ ಚಕ್ಷುಃ ಪಶ್ಯ ಮೇ ಯೋಗಮೈಶ್ರರಮ್ || 8 ||
ಅರ್ಥ: ಆದರೆ ನೀನು ನಿನ್ನ ಈಗಿನ ಕಣ್ಣುಗಳಿಂದ ನನ್ನನ್ನು ಕಾಣಲಾರೆ. ಆದುದರಿಂದ ನಿನಗೆ ದಿವ್ಯವಾದ ಕಣ್ಣುಗಳನ್ನು ಕೊಡುತ್ತೇನೆ. ನನ್ನ ಐಶ್ವರ್ಯಯೋಗವನ್ನು ನೋಡು.
ಭಾವಾರ್ಥ: ಶುದ್ಧಭಕ್ತನು ಎರಡು ಕೈಗಳಿರುವ ಕೃಷ್ಣನನ್ನು ಬಿಟ್ಟು ಬೇರೆ ಯಾವ ರೂಪದಲ್ಲೂ ಅವನನ್ನು ಕಾಣಲು ಇಷ್ಟ ಪಡುವುದಿಲ್ಲ. ಭಕ್ತನು ತನ್ನ ಮನಸ್ಸಿನಿಂದ ಅವನ ವಿಶ್ವರೂಪವನ್ನು ಕಾಣಲಾರ, ಅವನ ಕೃಪೆಯಿಂದ ಮತ್ತು ದಿವ್ಯವಾದ ಕಣ್ಣುಗಳಿಂದ ಮಾತ್ರ ಕಾಣಬಲ್ಲ. ಕೃಷ್ಣನ ವಿಶ್ವರೂಪವನ್ನು ನೋಡಲು ಅರ್ಜುನನು ಬದಲಾಯಿಸಬೇಕಾದದ್ದು ಅವನ ಮನಸ್ಸನ್ನಲ್ಲ, ಅವನ ಕಣ್ಣುಗಳನ್ನು, ಕೃಷ್ಣನ ವಿಶ್ವರೂಪವು ಅಷ್ಟೇನೂ ಮುಖ್ಯವಾದದ್ದಲ್ಲ. ಇದು ಮುಂದಿನ ಶ್ಲೋಕಗಳಲ್ಲಿ ಸ್ಪಷ್ಟವಾಗುತ್ತದೆ. ಆದರೆ ಅರ್ಜುನನು ಅದನ್ನು ನೋಡಲು ಬಯಸಿದುದರಿಂದ, ವಿಶ್ವರೂಪವನ್ನು ನೋಡಲು ಅಗತ್ಯವಾದ ವಿಶಿಷ್ಟ ದೃಷ್ಟಿಯನ್ನು ಪ್ರಭುವು ಅವನಿಗೆ ಕೊಡುತ್ತಾನೆ.
ಕೃಷ್ಣನೊಡನೆ ಆಧ್ಯಾತ್ಮಿಕ ಸಂಬಂಧದಲ್ಲಿ ಸರಿಯಾದ ರೀತಿಯಲ್ಲಿ ನೆಲೆಗೊಂಡವರು ಆಕರ್ಷಿತರಾಗುವುದು ಪ್ರೇಮಮಯ ಲಕ್ಷಣಗಳಿಂದ, ದೈವಹೀನವಾದ ಸಿರಿಗಳ ಪ್ರದರ್ಶನದಿಂದಲ್ಲ. ಕೃಷ್ಣನೊಡನೆ ಆಟವಾಡಿದವರು, ಕೃಷ್ಣನ ಸ್ನೇಹಿತರು ಮತ್ತು ಕೃಷ್ಣನ ತಂದೆ ತಾಯಿಯರು, ಕೃಷ್ಣನು ತನ್ನ ಸಿರಿಗಳನ್ನು ತೋರಿಸಬೇಕೆಂದು ಎಂದೂ ಬಯಸಲಿಲ್ಲ. ಅವರು ಪರಿಶುದ್ಧ ಪ್ರೇಮದಲ್ಲಿ ಎಷ್ಟು ತನ್ಮಯರಾಗಿದ್ದರೆಂದರೆ ಅವರಿಗೆ ಕೃಷ್ಣನು ದೇವೋತ್ತಮ ಪರಮ ಪುರುಷ ಎನ್ನುವುದೂ ತಿಳಿಯದು. ತಮ್ಮ ಪ್ರೇಮ ವಿನಿಮಯದಲ್ಲಿ ಕೃಷ್ಣನು ಪರಮ ಪ್ರಭು ಎನ್ನುವುದನ್ನು ಅವರು ಮರೆಯುತ್ತಾರೆ. ಕೃಷ್ಣನೊಡನೆ ಆಡುವ ಬಾಲಕರು ಬಹು ಪುಣ್ಯ ಜೀವಿಗಳು ಮತ್ತು ಅನೇಕಾನೇಕ ಜನ್ಮಗಳ ಅನಂತರ ಅವರಿಗೆ ಕೃಷ್ಣನೊಡನೆ ಹಾಗೆ ಕ್ರೀಡಿಸಲು ಸಾಧ್ಯವಾಗಿದೆ ಎಂದು ಶ್ರೀಮದ್ಭಾಗವತದಲ್ಲಿ ಹೇಳಿದೆ.
ಕೃಷ್ಣನು ದೇವೋತ್ತಮ ಪರಮ ಪುರುಷ ಎಂದು ಈ ಹುಡುಗರಿಗೆ ತಿಳಿಯದು. ಆತನನ್ನು ತಮ್ಮ ಸ್ನೇಹಿತ ಎಂದೇ ತಿಳಿಯುತ್ತಾರೆ. ಆದುದರಿಂದ ಶುಕಮುನಿಗಳು ಈ ಶ್ಲೋಕವನ್ನು ಹೇಳಿದ್ದಾರೆ – ಇತ್ಥಂ ಸತಾಂ ಬ್ರಹ್ಮ ಸುಖಾನುಭೂತ್ಯಾ ದಾಸ್ಯಂ ಗತಾನಾಂ ಪರದೈವತೇನ | ಮಾಯಾಶ್ರಿತಾನಾಂ ನರದಾರಕೇಣ ಸಾಕಂ ವಿಜಹ್ರುಃ ಕೃತಪುಣ್ಯಪುಂಜಾಃ || ಇದರ ಅರ್ಥ "ಇವನು ಪರಮ ಪುರುಷ; ಮಹರ್ಷಿಗಳು ಇವನನ್ನು ನಿರಾಕಾರ ಬ್ರಹ್ಮನೆಂದು ಭಾವಿಸುತ್ತಾರೆ. ಭಕ್ತರು ಇವನನ್ನು ದೇವೋತ್ತಮ ಪರಮ ಪುರುಷ ಎಂದು ಭಾವಿಸುತ್ತಾರೆ. ಸಾಮಾನ್ಯ ಜನರು ಇವನನ್ನು ಭೌತಿಕ ಪ್ರಕೃತಿಯ ಸೃಷ್ಟಿ ಎಂದು ಭಾವಿಸುತ್ತಾರೆ. ತಮ್ಮ ಹಿಂದಿನ ಜನ್ಮಗಳಲ್ಲಿ ಅನೇಕಾನೇಕ ಪುಣ್ಯಕಾರ್ಯಗಳನ್ನು ಮಾಡಿರುವ ಈ ಬಾಲಕರು ಆ ದೇವೋತ್ತಮ ಪರಮ ಪುರುಷನೊಂದಿಗೆ ಆಟವಾಡುತ್ತಿದ್ದಾರೆ." (ಶ್ರೀಮದ್ಭಾಗವತ 10.12.11).
ವಾಸ್ತವಾಂಶವೆಂದರೆ ಭಕ್ತನಿಗೆ ವಿಶ್ವರೂಪವನ್ನು ನೋಡುವ ಆಸಕ್ತಿಯಿಲ್ಲ. ಆದರೆ ಕೃಷ್ಣನು ಕೇವಲ ವಿಚಾರ ಸರಣಿಯಲ್ಲಿ ಅಥವಾ ತಾತ್ವಿಕವಾಗಿ ತಾನು ಪರಮನೆಂದು ಹೇಳಿಕೊಳ್ಳಲಿಲ್ಲ; ವಾಸ್ತವವಾಗಿಯೇ ಆ ರೀತಿ ಅರ್ಜುನನಿಗೆ ಕಾಣಿಸಿಕೊಂಡ. ಇದನ್ನು ಭವಿಷ್ಯದ ಜನರು ಅರ್ಥಮಾಡಿಕೊಳ್ಳಬೇಕು; ಆ ಮೂಲಕ ಕೃಷ್ಣನ ಹೇಳಿಕೆಗಳಿಗೆ ಸಮರ್ಥನೆ ಬರಬೇಕು ಎಂದು ಅರ್ಜುನನು ಬಯಸಿದನು. ಅರ್ಜುನನು ಇದನ್ನು ದೃಢಪಡಿಸಿಕೊಳ್ಳಬೇಕು. ಏಕೆಂದರೆ ಅರ್ಜುನನು ಪರಂಪರಾ ಪದ್ಧತಿಯ ಪ್ರಾರಂಭ. ದೇವೋತ್ತಮ ಪರಮ ಪುರುಷನಾದ ಕೃಷ್ಣನನ್ನು ಅರ್ಥಮಾಡಿಕೊಳ್ಳಬೇಕೆಂದು ನಿಜವಾಗಿ ಆಸಕ್ತಿ ಇದ್ದು ಅರ್ಜುನನ ಹೆಜ್ಜೆಗಳಲ್ಲಿಯೇ ಹೆಜ್ಜೆಯಿಟ್ಟು ಅನುಸರಿಸುವವರು ಇದನ್ನು ಅರ್ಥಮಾಡಿಕೊಳ್ಳಬೇಕು. ಕೃಷ್ಣನು ವಾದದಲ್ಲಿ ಮಾತ್ರವೇ ತನ್ನನ್ನು ಪರಮನೆಂದು ಹೇಳಿಕೊಳ್ಳಲಿಲ್ಲ; ನಿಜವಾಗಿ ತನ್ನನ್ನು ಪರಮನೆಂದು ತೋರಿಸಿಕೊಂಡನು. ನಾವು ಆಗಲೇ ವಿವರಿಸಿರುವಂತೆ ಅರ್ಜುನನಿಗೆ ವಿಶ್ವರೂಪವನ್ನು ನೋಡಬೇಕೆಂದು ಅಷ್ಟೇನೂ ಅಪೇಕ್ಷೆ ಇರಲಿಲ್ಲ. ಇದು ಕೃಷ್ಣನಿಗೆ ತಿಳಿದಿತ್ತು; ಇದಕ್ಕಾಗಿ ಪ್ರಭುವು ತನ್ನ ವಿಶ್ವರೂಪವನ್ನು ನೋಡಲು ಅಗತ್ಯವಾದ ಶಕ್ತಿಯನ್ನು ಅರ್ಜುನನಿಗೆ ನೀಡಿದನು.
(ಗಮನಿಸಿ: ಈ ಬರಹವು 'ಗೀತೋಪನಿಷದ್ ಭಗವದ್ಗೀತಾ ಯಥಾರೂಪ' ಪುಸ್ತಕದಲ್ಲಿರುವ ಮಾಹಿತಿಯನ್ನು ಆಧರಿಸಿದೆ. ಸಮಕಾಲೀನ ವಿಚಾರಗಳಿಗೆ ಅನ್ವಯಿಸಲು ಅರ್ಥದಲ್ಲಿ ತುಸು ವಿವರ ನೀಡಲಾಗಿದೆ. ಸಂದಿಗ್ಧ ಬಂದರೆ ಓದುಗರು ಮೂಲ ಪುಸ್ತಕವನ್ನೇ ಆಧರಿಸಿ, ಅನ್ವಯಿಸಿಕೊಳ್ಳಬೇಕು.)
