ವಿವೇಚನೆಯಿಂದ ಜೀವಿಗಳ ವಿಸ್ತಾರ ಅರಿತರೆ ಮಾತ್ರ ಪರಮಾತ್ಮನ ಅಸ್ತಿತ್ವ ತಿಳಿಯಬಹುದಾಗಿದೆ: ಭಗವದ್ಗೀತೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ವಿವೇಚನೆಯಿಂದ ಜೀವಿಗಳ ವಿಸ್ತಾರ ಅರಿತರೆ ಮಾತ್ರ ಪರಮಾತ್ಮನ ಅಸ್ತಿತ್ವ ತಿಳಿಯಬಹುದಾಗಿದೆ: ಭಗವದ್ಗೀತೆ

ವಿವೇಚನೆಯಿಂದ ಜೀವಿಗಳ ವಿಸ್ತಾರ ಅರಿತರೆ ಮಾತ್ರ ಪರಮಾತ್ಮನ ಅಸ್ತಿತ್ವ ತಿಳಿಯಬಹುದಾಗಿದೆ: ಭಗವದ್ಗೀತೆ

ಐಹಿಕ ಜಗತ್ತಿನಲ್ಲಿ ಪರಮಾತ್ಮನು ಜೀವಿಗಳನ್ನು ಬೇರೆ ಬೇರೆ ಉದ್ದೇಶಗಳಿಂದ ಸೃಷ್ಟಿಸಿದ್ದಾನೆ. ಜೀವಿಗಳ ವಿಸ್ತಾರವಾದ ಪರಿಕಲ್ಪನೆಯನ್ನು ಅರಿತಾಗ ಮಾತ್ರ ಪರಮಾತ್ಮನ ನಿಜವಾದ ಅಸ್ತಿತ್ವವನ್ನು ತಿಳಿಯಬಹುದಾಗಿದೆ. ಭಗವದ್ಗೀತೆ ಅಧ್ಯಾಯ 13 ಶ್ಲೋಕ 31, 32, ಮತ್ತು 33 ರಿಂದ ತಿಳಿಯಿರಿ.

ವಿವೇಚನೆಯಿಂದ ಜೀವಿಗಳ ವಿಸ್ತಾರ ಅರಿತರೆ ಮಾತ್ರ ಪರಮಾತ್ಮನ ಅಸ್ತಿತ್ವ ತಿಳಿಯಬಹುದಾಗಿದೆ: ಭಗವದ್ಗೀತೆ
ವಿವೇಚನೆಯಿಂದ ಜೀವಿಗಳ ವಿಸ್ತಾರ ಅರಿತರೆ ಮಾತ್ರ ಪರಮಾತ್ಮನ ಅಸ್ತಿತ್ವ ತಿಳಿಯಬಹುದಾಗಿದೆ: ಭಗವದ್ಗೀತೆ

ಅಧ್ಯಾಯ 13, ಪ್ರಕೃತಿ, ಪುರುಷ ಹಾಗೂ ಪ್ರಜ್ಞೆ ಶ್ಲೋಕ - 31

ಯದಾ ಭೂತಪೃಥಗ್ಭಾವಮೇಕಸ್ಥ ಮನುಪಶ್ಯತಿ |

ತತ ಏವ ಚ ವಿಸ್ತಾರಂ ಬ್ರಹ್ಮ ಸಮ್ಪದ್ಯತೇ ತದಾ || 31 ||

ಅರ್ಥ: ವಿವೇಚನೆಯುಳ್ಳ ಮನುಷ್ಯನು ಬೇರೆ ಬೇರೆ ಐಹಿಕ ದೇಹಗಳ ಕಾರಣದಿಂದ ಬೇರೆ ಬೇರೆ ಅಸ್ತಿತ್ವಗಳನ್ನು ನೋಡುವುದನ್ನು ಬಿಟ್ಟಾಗ ಮತ್ತು ಎಲ್ಲೆಲ್ಲೂ ಜೀವಿಗಳು ಹೇಗೆ ವಿಸ್ತಾರ ಹೊಂದುತ್ತಾರೆ ಎನ್ನುವುದನ್ನು ಕಂಡಾಗ ಅವನು ಬ್ರಹ್ಮನ್ ಪರಿಕಲ್ಪನೆಯನ್ನು ತಲಪುತ್ತಾನೆ.

ಭಾವಾರ್ಥ: ಜೀವಿಗಳ ಬೇರೆ ಬೇರೆ ದೇಹಗಳು ಜೀವಾತ್ಮನ ಬೇರೆ ಬೇರೆ ಬಯಕೆಗಳ ಕಾರಣದಿಂದ ಆದವು; ದೇಹಗಳು ಆತ್ಮಕ್ಕೆ ಸೇರಿದವಲ್ಲ. ಇದನ್ನು ಮನುಷ್ಯನು ನೋಡಲು ಸಾಧ್ಯವಾದಾಗ ಅವನು ನಿಜವಾಗಿ ನೋಡುತ್ತಾನೆ. ಬದುಕಿನ ಐಹಿಕ ಪರಿಕಲ್ಪನೆಯಲ್ಲಿ ಒಬ್ಬನು ದೇವತೆಯಾಗಿ, ಮತ್ತೊಬ್ಬನು ಮನುಷ್ಯನಾಗಿ, ನಾಯಿ, ಬೆಕ್ಕು ಇತ್ಯಾದಿಯಾಗಿ ನಮಗೆ ಕಾಣುತ್ತಾರೆ. ಇದು ಐಹಿಕ ದೃಷ್ಟಿ; ವಾಸ್ತವ ದೃಷ್ಟಿಯಲ್ಲ. ಈ ಐಹಿಕ ಭಿನ್ನತೆಗೆ ಬದುಕಿನ ಐಹಿಕ ಪರಿಕಲ್ಪನೆಯೇ ಕಾರಣ. ಐಹಿಕ ದೇಹವು ನಾಶವಾದ ಅನಂತರ ಜೀವಾತ್ಮ ಒಂದೇ. ಐಹಿಕ ಪ್ರಕೃತಿಯ ಸಂಪರ್ಕದಿಂದ ಜೀವಾತ್ಮನಿಗೆ ಬೇರೆ ಬೇರೆ ದೇಹಗಳು ಬರುತ್ತವೆ. ಮನುಷ್ಯನಿಗೆ ಇದನ್ನು ಕಾಣಲು ಸಾಧ್ಯವಾದಾಗ ಅವನು ದಿವ್ಯದರ್ಶನವನ್ನು ಪಡೆಯುತ್ತಾನೆ; ಹೀಗೆ ಮಾನವ ಪ್ರಾಣಿ, ಮೇಲಾದದ್ದು, ಕೀಳಾದದ್ದು ಇತ್ಯಾದಿ ಭಿನ್ನತೆಯ ಭಾವಗಳಿಂದ ಮುಕ್ತನಾಗಿ ಮನುಷ್ಯನು ಪ್ರಜ್ಞೆಯಲ್ಲಿ ಪರಿಶುದ್ಧನಾಗುತ್ತಾನೆ. ಅವನು ತನ್ನ ದಿವ್ಯ ಅಸ್ತಿತ್ವದಲ್ಲಿ ಕೃಷ್ಣಪ್ರಜ್ಞೆಯನ್ನು ಬೆಳೆಸಿಕೊಳ್ಳುವುದು ಸಾಧ್ಯವಾಗುತ್ತದೆ. ಆಗ ಅವನಿಗೆ ಎಲ್ಲವೂ ಹೇಗೆ ಕಾಣುತ್ತದೆ ಎನ್ನುವುದನ್ನು ಮುಂದಿನ ಶ್ಲೋಕದಲ್ಲಿ ಹೇಳಿದೆ.

ಅಧ್ಯಾಯ 13, ಪ್ರಕೃತಿ, ಪುರುಷ ಹಾಗೂ ಪ್ರಜ್ಞೆ ಶ್ಲೋಕ - 32

ಅನಾದಿತ್ವಾನ್ನಿರ್ಗುಣತ್ಪಾತ್ ಪರಮಾತ್ಮಾಯಮವ್ಯಯಃ |

ಶರೀರಸ್ಥೋSಪಿ ಕೌನ್ತೇಯ ನ ಕರೋತಿ ನ ಲಿಪ್ಯತೇ || 32 ||

ಅರ್ಥ: ಅರ್ಜುನ, ಅವಿನಾಶಿಯಾದ ಆತ್ಮವು ದಿವ್ಯವಾದದ್ದು, ನಿತ್ಯವಾದದ್ದು ಮತ್ತು ಗುಣಗಳನ್ನು ಮೀರಿದ್ದು; ಶಾಶ್ವತದ ನೋಟವಿರುವವರು ಇದನ್ನು ಕಾಣಬಲ್ಲರು. ಐಹಿಕ ದೇಹದ ಸಂಪರ್ಕವಿದ್ದರೂ ಆತ್ಮವು ಏನನ್ನೂ ಮಾಡುವುದಿಲ್ಲ ಮತ್ತು ಲಿಪ್ತವಾಗುವುದಿಲ್ಲ.

ಭಾವಾರ್ಥ: ಐಹಿಕ ದೇಹವು ಜನ್ಮ ತಾಳುವುದರಿಂದ ಜೀವಿಯು ಜನ್ಮ ತಾಳಿದಂತೆ ಕಾಣುತ್ತದೆ. ಆದರೆ ವಾಸ್ತವವಾಗಿ ಜೀವಿಯು ನಿತ್ಯನು. ಐಹಿಕ ದೇಹದಲ್ಲಿ ಇದ್ದರೂ ಅವನು ದಿವ್ಯನಾದವನು ಮತ್ತು ನಿತ್ಯನಾದವನು. ಆದುದರಿಂದ ಅವನನ್ನು ನಾಶಮಾಡಲು ಸಾಧ್ಯವಿಲ್ಲ. ಸ್ವಭಾವತಃ ಅವನು ಆನಂದಮಯನು. ಆತನು ಯಾವುದೇ ಐಹಿಕ ಕರ್ಮಗಳಲ್ಲಿ ತೊಡಗುವುದಿಲ್ಲ. ಆದುದರಿಂದ ಆತನಿಗೆ ಐಹಿಕ ದೇಹಗಳ ಸಂಪರ್ಕವಾದದ್ದರಿಂದ ಅವನು ಮಾಡುವ ಕರ್ಮಗಳು ಅವನನ್ನು ಬಂಧಿಸುವುದಿಲ್ಲ.

ಅಧ್ಯಾಯ 13, ಪ್ರಕೃತಿ, ಪುರುಷ ಹಾಗೂ ಪ್ರಜ್ಞೆ ಶ್ಲೋಕ - 33

ಯಥಾ ಸರ್ವಗತಂ ಸೌಕ್ಷ್ಮ್ಯಾದಾಕಾಶಂ ನೋಪಲಿಪ್ಯತೇ |

ಸರ್ವತ್ರಾವಸ್ಥಿತೋ ದೇಹೇ ತಥಾತ್ಮಾ ನೋಪಲಿಪ್ಯತೇ || 33 ||

ಅರ್ಥ: ಆಕಾಶವು ಎಲ್ಲೆಲ್ಲಿಯೂ ಇದ್ದರೂ ತನ್ನ ಸೂಕ್ಷ್ಮ ಸ್ವರೂಪದಿಂದಾಗಿ ಅದು ಯಾತರೊಡನೆಯೂ ಬೆರೆಯುವುದಿಲ್ಲ. ಹಾಗೆಯೇ ಬ್ರಹ್ಮನ್ ದೃಷ್ಟಿಯಲ್ಲಿ ಸ್ಥಿತನಾಗಿರುವ ಆತ್ಮನು ಆ ದೇಹದಲ್ಲಿದ್ದರೂ ದೇಹದ ಜೊತೆಗೆ ಬೆರೆಯುವುದಿಲ್ಲ.

ಭಾವಾರ್ಥ: ವಾಯುವು ನೀರು, ಮಣ್ಣು, ಹೊಲಸು ಮತ್ತು ಬೇರೇನೇ ಇರಲಿ ಅದನ್ನು ಪ್ರವೇಶಿಸುತ್ತದೆ; ಆದರೂ ಅದು ಯಾತರೊಡನೆಯೂ ಬೆರೆಯುವುದಿಲ್ಲ. ಹಾಗೆಯೇ ಜೀವಿಯು ಹಲವಾರು ದೇಹಗಳಲ್ಲಿ ನೆಲೆಸಬೇಕಾದರೂ ಆತನ ಸೂಕ್ಷ್ಮ ಸ್ವಭಾವದಿಂದಾಗಿ ಅವುಗಳಿಂದ ದೂರ ಇರುತ್ತಾನೆ. ಆದುದರಿಂದ ಜೀವಿಯು ಈ ದೇಹದೊಡನೆ ಹೇಗೆ ಸಂಪರ್ಕ ಹೊಂದಿರುತ್ತಾನೆ ಮತ್ತು ಅದು ನಾಶವಾದ ನಂತರ ಹೇಗೆ ಅದರಿಂದ ಹೊರಗಿರುತ್ತಾನೆ ಎನ್ನುವುದನ್ನು ಐಹಿಕ ಕಣ್ಣುಗಳಿಂದ ನೋಡಲು ಸಾಧ್ಯವಿಲ್ಲ. ಯಾವ ವಿಜ್ಞಾನಿಯೂ ಇದನ್ನು ಖಚಿತಪಡಿಸಿಕೊಳ್ಳಲಾರ.

(ಗಮನಿಸಿ: ಈ ಬರಹವು 'ಗೀತೋಪನಿಷದ್ ಭಗವದ್ಗೀತಾ ಯಥಾರೂಪ' ಪುಸ್ತಕದಲ್ಲಿರುವ ಮಾಹಿತಿಯನ್ನು ಆಧರಿಸಿದೆ. ಸಮಕಾಲೀನ ವಿಚಾರಗಳಿಗೆ ಅನ್ವಯಿಸಲು ಅರ್ಥದಲ್ಲಿ ತುಸು ವಿವರ ನೀಡಲಾಗಿದೆ. ಸಂದಿಗ್ಧ ಬಂದರೆ ಓದುಗರು ಮೂಲ ಪುಸ್ತಕವನ್ನೇ ಆಧರಿಸಿ, ಅನ್ವಯಿಸಿಕೊಳ್ಳಬೇಕು.)

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.