Bhagavad Gita: ಐಹಿಕ ಜಗತ್ತಿನ ಸೋಲು, ಗೆಲುವು ಎಲ್ಲದಕ್ಕೂ ಪರಮಾತ್ಮನೇ ಕಾರಣ; ಭಗವದ್ಗೀತೆಯ ಶ್ಲೋಕಗಳಿಂದ ಸತ್ಯಾಂಶ ತಿಳಿಯಿರಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ಐಹಿಕ ಜಗತ್ತಿನ ಸೋಲು, ಗೆಲುವು ಎಲ್ಲದಕ್ಕೂ ಪರಮಾತ್ಮನೇ ಕಾರಣ; ಭಗವದ್ಗೀತೆಯ ಶ್ಲೋಕಗಳಿಂದ ಸತ್ಯಾಂಶ ತಿಳಿಯಿರಿ

Bhagavad Gita: ಐಹಿಕ ಜಗತ್ತಿನ ಸೋಲು, ಗೆಲುವು ಎಲ್ಲದಕ್ಕೂ ಪರಮಾತ್ಮನೇ ಕಾರಣ; ಭಗವದ್ಗೀತೆಯ ಶ್ಲೋಕಗಳಿಂದ ಸತ್ಯಾಂಶ ತಿಳಿಯಿರಿ

Bhagavad Gita: ಐಹಿಕ ಜಗತ್ತಿನಲ್ಲಿ ಕಾಣಿಸುವ ಸೋಲು, ಗೆಲುವು, ಬಲ, ಅಬಲ ಎಲ್ಲವೂ ಪರಮಾತ್ಮನಿಂದಲೇ ಆಗುತ್ತದೆ. ಭಗವದ್ಗೀತೆಯ ಅಧ್ಯಾಯ 10 ವಿಭೂತಿ ಯೋಗ, ಶ್ಲೋಕ 36 ಮತ್ತು 37 ರಿಂದ ಇದನ್ನು ತಿಳಿದುಕೊಳ್ಳಿ.

ಭಗವದ್ಗೀತೆ
ಭಗವದ್ಗೀತೆ

ಅಧ್ಯಾಯ – 10: ವಿಭೂತಿ ಯೋಗ – ಶ್ಲೋಕ – 36

ದ್ಯೂತಂ ಛಲಯತಾಮಸ್ಮಿ ತೇಜಸ್ತೇಜಸ್ವಿನಾಮಹಮ್ |

ಜಯೋSಸ್ಮಿ ವ್ಯವಸಾಯೋSಸ್ಮಿ ಸತ್ತ್ವಂ ಸತ್ತ್ವವತಾಮಹಮ್ || 36 ||

 

ಅರ್ಥ: ಮೋಸಗಾರರ ಜೂಜು ನಾನೇ. ತೇಜಸ್ವಿಗಳ ತೇಜಸ್ಸು ನಾನು. ನಾನು ಜಯ, ನಾನು ಸಾಹಸ, ಬಲಿಷ್ಠರ ಬಲವೂ ನಾನೇ.

ಭಾವಾರ್ಥ: ವಿಶ್ವದಲ್ಲಿ ನಾನಾ ಬಗೆಯ ಮೋಸಗಾರರುಂಟು. ಇತರ ಎಲ್ಲ ಮೋಸ ರೀತಿಗಳನ್ನು ಮೀರಿಸಿದ್ದು ಜೂಜು. ಆದುದರಿಂದ ಅದು ಕೃಷ್ಣನ ಪ್ರತಿನಿಧಿ. ಪರಮನಾಗಿ ಕೃಷ್ಣನು ಇತರರಿಗಿಂತ ಹೆಚ್ಚು ಮೋಸಗಾರನಾಗಿರಬಲ್ಲ. ಯಾರೂ ಆತನ ಮೋಸವನ್ನು ಆತನಿಗೆ ತಿಳಿಯದಂತೆ ಕಂಡುಹಿಡಿಯಲಾರರು. ಅವನ ಹಿರಿಮೆಗೆ ಒಂದೇ ಮುಖವಲ್ಲ; ಅದಕ್ಕೆ ಎಲ್ಲ ಮುಖಗಳುಂಟು. ಜಯಶಾಲಿಗಳಲ್ಲಿ ಆತನು ಜಯ. ತೇಜಸ್ವಿಗಳ ತೇಜಸ್ಸು ಅವನು. ಸಾಹಸಿಗಳು, ಶ್ರಮಪಡುವವರಲ್ಲಿ ಆತನೇ ಮಹಾಸಾಹಸಿ, ಅತ್ಯಂತ ಶ್ರಮಪಡುವವನು. ಕೃಷ್ಣನು ಭೂಮಿಯ ಮೇಲೆ ಇದ್ದಾಗ ಅವನನ್ನು ಯಾರೂ ಬಲದಲ್ಲಿ ಮೀರಿಸುವವರಿರಲಿಲ್ಲ. ಬಾಲ್ಯದಲ್ಲಿಯೇ ಗೋವರ್ಧನಗಿರಿಯನ್ನು ಎತ್ತಿದವನು ಅವನು. ಮೋಸದಲ್ಲಿ ಯಾರೂ ಅವನನ್ನು ಮೀರಿಸಲಾರರು; ತೇಜಸ್ಸಿನಲ್ಲಿ ಅವನನ್ನು ಯಾರೂ ಮೀರಿಸಲಾರರು; ಜಯದಲ್ಲಿ ಯಾರೂ ಅವನನ್ನು ಮೀರಿಸಲಾರರು; ಸಾಹಸದಲ್ಲಿ ಯಾರೂ ಅವನನ್ನು ಮೀರಿಸಲಾರರು ಮತ್ತು ಶಕ್ತಿಯಲ್ಲಿ ಯಾರೂ ಅವನನ್ನು ಮೀರಿಸಲಾರರು.

ಅಧ್ಯಾಯ – 10: ವಿಭೂತಿ ಯೋಗ – ಶ್ಲೋಕ – 37

ವೃಷ್ಣೀನಾಂ ವಾಸುದೇವೋSಸ್ಮಿ ಪಾಣ್ದವಾನಾಂ ಧನಂಜಯಃ |

ಮುನೀನಾಮಪ್ಯಹಂ ವ್ಯಾಸಃ ಕವೀನಾಮುಶನಾ ಕವಿಃ || 37 ||

 

ಅರ್ಥ: ವೃಷ್ಣಿ ವಂಶದವರಲ್ಲಿ ನಾನು ವಾಸುದೇವ; ಪಾಂಡವರಲ್ಲಿ ನಾನು ಅರ್ಜುನ, ಋಷಿಗಳಲ್ಲಿ ನಾನು ವ್ಯಾಸ; ಮಹಾಚಿಂತಕರಲ್ಲಿ ನಾನು ಉಶನಾ.

ಭಾವಾರ್ಥ: ಕೃಷ್ಣನು ದೇವೋತ್ತಮ ಪರಮ ಪುರುಷನು, ಬಲದೇವನು ಅವನ ನಿಕಟ ವಿಸ್ತರಣೆ. ಕೃಷ್ಣನೂ ಬಲದೇವನೂ ವಸುದೇವನ ಮಕ್ಕಳಾಗಿ ಕಾಣಿಸಿಕೊಂಡರು. ಆದುದರಿಂದ ಇಬ್ಬರನ್ನೂ ವಾಸುದೇವ ಎಂದು ಕರೆಯಬಹುದು. ಇನ್ನೊಂದು ದೃಷ್ಟಿಯಿಂದ ನೋಡಿದರೆ, ಕೃಷ್ಣನು ಬೃಂದಾವನವನ್ನು ಬಿಡುವುದೇ ಇಲ್ಲವಾದುದರಿಂದ ಬೇರೆಡೆ ಕಾಣುವ ಕೃಷ್ಣ ಸ್ವರೂಪಗಳೆಲ್ಲ ಅವನ ವಿಸ್ತರಣೆಗಳೇ. ವಾಸುದೇವನು ಕೃಷ್ಣನ ನಿಕಟ ವಿಸ್ತರಣೆ; ಆದುದರಿಂದ ವಾಸುದೇವನು ಕೃಷ್ಣನಿಗಿಂತ ಬೇರೆಯಲ್ಲ. ಈ ಶ್ಲೋಕದಲ್ಲಿ ಹೆಸರಿಸಿರುವ ವಾಸುದೇವನು ಬಲದೇವ ಅಥವಾ ಬಲರಾಮ, ಏಕೆಂದರೆ ಅವನು ಎಲ್ಲ ಅವತಾರಗಳ ಆದಿ ಮೂಲ; ಆದುದರಿಂದ ವಾಸುದೇವನಿಗೆ ಅವನು ಏಕಮಾತ್ರ ಮೂಲ ಎಂದು ಅರಿತುಕೊಳ್ಳಬೇಕು. ಪ್ರಭುವಿನ ನಿಕಟ ವಿಸ್ತರಣೆಗಳಿಗೆ ಸ್ವಾಂಶ (ವೈಯಕ್ತಿಕ ವಿಸ್ತರಣೆ) ಎಂದು ಹೆಸರು. ವಿಭಿನ್ನಾಂಶ (ಭಿನ್ನವಾದ ವಿಸ್ತರಣೆಗಳು) ಎಂದು ಕರೆಯುವ ವಿಸ್ತರಣೆಗಳೂ ಇವೆ.

ಪಾಂಡುವಿನ ಮಕ್ಕಳಲ್ಲಿ ಅರ್ಜುನನು ಧನಂಜಯನೆಂದು ಹೆಸರಾದವನು. ಅವನು ಪುರುಷ ಶ್ರೇಷ್ಠ, ಆದುದರಿಂದ ಕೃಷ್ಣನನ್ನು ಪ್ರತಿನಿಧಿಸುತ್ತಾನೆ. ಮುನಿಗಳಲ್ಲಿ ಅಥವಾ ವೇದಗಳನ್ನು ಬಲ್ಲ ವಿದ್ವಾಂಸರಲ್ಲಿ ವ್ಯಾಸರೇ ಎಲ್ಲರಿಗಿಂತ ಶ್ರೇಷ್ಠರು. ಏಕೆಂದರೆ, ಈ ಕಲಿಯುಗದಲ್ಲಿ ಜನಸಾಮಾನ್ಯರಿಗೂ ವೇದಗಳು ತಿಳಿಯಲೆಂದು ವೇದಗಳನ್ನು ಬೇರೆ ಬೇರೆ ರೀತಿಗಳಲ್ಲಿ ವಿವರಿಸಿದ ವ್ಯಾಸರು ಕೃಷ್ಣನ ಅವತಾರವೆಂದೂ ಪ್ರಸಿದ್ಧ; ಆದುದರಿಂದ ವ್ಯಾಸರೂ ಕೃಷ್ಣನ ಪ್ರತಿನಿಧಿ. ಯಾವುದಾದರೂ ವಿಷಯವನ್ನು ಕೂಲಂಕಷವಾಗಿ ಯೋಚಿಸಬಲ್ಲವರು ಕವಿಗಳು. ಕವಿಗಳಲ್ಲಿ ಉಶನಾ. ಶುಕ್ರಾಚಾರ್ಯರು ದಾನವರ ಗುರು; ಅವರು ಬಹು ಬುದ್ದಿವಂತರು; ದೂರದೃಷ್ಟಿಯ ರಾಜನೀತಜ್ಞರು. ಆದುದರಿಂದ ಶುಕ್ರಾಚಾರ್ಯರು ಕೃಷ್ಣನ ಮಹಿಮೆಯ ಮತ್ತೊಬ್ಬ ಪ್ರತಿನಿಧಿ.

(ಗಮನಿಸಿ: ಈ ಬರಹವು 'ಗೀತೋಪನಿಷದ್ ಭಗವದ್ಗೀತಾ ಯಥಾರೂಪ' ಪುಸ್ತಕದಲ್ಲಿರುವ ಮಾಹಿತಿಯನ್ನು ಆಧರಿಸಿದೆ. ಸಮಕಾಲೀನ ವಿಚಾರಗಳಿಗೆ ಅನ್ವಯಿಸಲು ಅರ್ಥದಲ್ಲಿ ತುಸು ವಿವರ ನೀಡಲಾಗಿದೆ. ಸಂದಿಗ್ಧ ಬಂದರೆ ಓದುಗರು ಮೂಲ ಪುಸ್ತಕವನ್ನೇ ಆಧರಿಸಿ, ಅನ್ವಯಿಸಿಕೊಳ್ಳಬೇಕು.)

Reshma

TwittereMail
ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.