Bhagavad Gita: ದುಷ್ಟರಿಗೆ ಶಿಕ್ಷೆ ನೀಡುವವನು ಶ್ರೀಕೃಷ್ಣ: ಭಗವದ್ಗೀತೆಯ ಈ ಶ್ಲೋಕದ ಅರ್ಥ ತಿಳಿಯಿರಿ
Bhagavad Gita: ಐಹಿಕ ಜಗತ್ತಿನಲ್ಲಿ ನಡೆಯುವ ಪ್ರತಿಯೊಂದು ವಿಷಯಗಳಿಗೆ 1 ಕಾರಣವಿರುತ್ತದೆ. ಅವೆಲ್ಲವುಗಳ ಮೂಲ ಶ್ರೀಕೃಷ್ಣನೇ ಆಗಿದ್ದಾನೆ. ಭಗವದ್ಗೀತೆಯ 10ನೇ ಅಧ್ಯಾಯದ ಶ್ಲೋಕ 38, 39, 40 ರ ಅರ್ಥ ಹೀಗಿದೆ.

ಅಧ್ಯಾಯ – 10: ವಿಭೂತಿ ಯೋಗ – ಶ್ಲೋಕ – 38
ದಣ್ದೋ ದಮಯತಾಮಸ್ಮಿ ನೀತಿರಸ್ಮಿ ಜಿಗೀಷತಾಮ್ |
ಮೌನಂ ಚೈವಾಸ್ಮಿ ಗುಹ್ಯಾನಾಂ ಜ್ಞಾನಂ ಜ್ಞಾನಾವತಾಮಹಮ್ || 38 ||
ಅರ್ಥ: ಶಾಸನ ಅವಿಧೇಯತೆಯನ್ನು ದಮನ ಮಾಡುವ ರೀತಿಗಳಲ್ಲಿ ನಾನು ಶಿಕ್ಷೆ, ಜಯವನ್ನು ಅರಸುವವರಲ್ಲಿ ನಾನು ನೀತಿ, ಗುಹ್ಯ ವಿಷಯಗಳಲ್ಲಿ ನಾನು ಮೌನ, ಜ್ಞಾನಿಗಳ ಜ್ಞಾನ ನಾನು.
ಭಾವಾರ್ಥ: ದಮನ ಮಾಡುವ ಸಾಧನಗಳು ಹಲವು. ಇವುಗಳಲ್ಲಿ ದುಷ್ಕರ್ಮಿಗಳನ್ನು ಕತ್ತರಿಸಿ ಹಾಕುವ ಸಾಧನಗಳು ತುಂಬ ಮುಖ್ಯವಾದವು. ದುಷ್ಕರ್ಮಿಗಳನ್ನು ಕತ್ತರಿಸಿ ಶಿಕ್ಷೆ ಮಾಡಿದಾಗ ಶಿಕ್ಷೆಯ ಸಾಧನವು ಕೃಷ್ಣನ ಪ್ರತಿನಿಧಿ. ಯಾವುದಾದರೂ ಕಾರ್ಯಕ್ಷೇತ್ರದಲ್ಲಿ ವಿಜಯವನ್ನು ಸಾಧಿಸಲು ಪ್ರಯತ್ನಿಸುವವರ ನಡುವೆ ಅತ್ಯಂತ ಜಯಶಾಲಿ ಅಂಶ ನೀತಿ, ಶ್ರವಣ, ಚಿಂತನ ಮತ್ತು ಧ್ಯಾನ ಈ ಗುಹ್ಯ ಚಟುವಟಿಕೆಗಳಲ್ಲಿ ಮೌನವೇ ತುಂಬ ಮುಖ್ಯ. ಏಕೆಂದರೆ ಮೌನದಿಂದ ಮನುಷ್ಯನು ಬಹುಶೀಘ್ರವಾಗಿ ಮುಂದುವರಿಯಬಲ್ಲ. ಜಡವಸ್ತು ಮತ್ತು ಚೇತನ - ಇವುಗಳ ನಡುವೆ, ಭಗವಂತನ ಮೇಲ್ಮಟ್ಟದ ಮತ್ತು ಕೆಳಮಟ್ಟದ ಪ್ರಕೃತಿಗಳ ನಡುವೆ ವ್ಯತ್ಯಾಸವನ್ನು ಕಾಣಬಲ್ಲವನು ಜ್ಞಾನಿ. ಇಂತಹ ಜ್ಞಾನವು ಸ್ವಯಂ ಕೃಷ್ಣನೇ.
ಅಧ್ಯಾಯ – 10: ವಿಭೂತಿ ಯೋಗ – ಶ್ಲೋಕ – 39
ಯಚ್ಚಾಪಿ ಸರ್ವಭೂತಾನಾಂ ಬೀಜಂ ತದಹಮರ್ಜುನ |
ನ ತದಸ್ತಿ ವಿನಾ ಯತ್ಸ್ಯಾನ್ಮಯಾ ಭೂತಂ ಚರಾಚರಮ್ || 39 ||
ಅರ್ಥ: ಅರ್ಜುನ, ಇದಲ್ಲದೆ ನಾನು ಎಲ್ಲ ಅಸ್ತಿತ್ವಗಳನ್ನು ಉತ್ಪಾದಿಸುವ ಬೀಜ. ನಾನಿಲ್ಲದೆ ಚರಾಚರವಾದದ್ದು ಯಾವುದೂ ಇರಲು ಸಾಧ್ಯವಿಲ್ಲ.
ಭಾವಾರ್ಥ: ಪ್ರತಿಯೊಂದಕ್ಕೂ ಒಂದು ಕಾರಣವಿದೆ. ಆ ಅಭಿವ್ಯಕ್ತಿಯ ಕಾರಣ ಅಥವಾ ಬೀಜವು ಕೃಷ್ಣ. ಕೃಷ್ಣನ ಶಕ್ತಿಯಿಲ್ಲದೆ ಏನೂ ಇರಲು ಸಾಧ್ಯವಿಲ್ಲ; ಆದುದರಿಂದ ಅವನನ್ನು ಸರ್ವಶಕ್ತ ಎಂದು ಕರೆಯುತ್ತಾರೆ. ಅವನ ಶಕ್ತಿಯಿಲ್ಲದೆ ಚಲಿಸುವುದಾಗಲೀ, ಚಲಿಸದೆ ಇರುವುದಾಗಲೀ ಇರಲು ಸಾಧ್ಯವಿಲ್ಲ. ಕೃಷ್ಣನ ಶಕ್ತಿಯ ಆಧಾರವಿಲ್ಲದ ಯಾವುದೇ ಅಸ್ತಿತ್ವವನ್ನು ಮಾಯೆ ಎಂದು ಕರೆಯುತ್ತಾರೆ.
ಅಧ್ಯಾಯ – 10: ವಿಭೂತಿ ಯೋಗ – ಶ್ಲೋಕ – 40
ನಾನೋSಸ್ತಿ ಮಮ ದಿವ್ಯಾನಾಂ ವಿಭೂತೀನಾಂ ಪರನ್ತಪ |
ವಿಷ ತೂದ್ದೇಶತಃ ಪ್ರೋಕ್ತೋ ವಿಭೂತೇರ್ವಿಸ್ತರೋ ಮಯಾ || 40 ||
ಅರ್ಥ: ಶತ್ರು ವಿಜೇತನಾದ ಅರ್ಜುನನೆ, ನನ್ನ ದೈವೀ ಅಭಿವ್ಯಕ್ತಿಗಳಿಗೆ ಕೊನೆಯೇ ಇಲ್ಲ. ನಾನು ನಿನಗೆ ಹೇಳಿರುವುದು ನನ್ನ ಅನಂತ ಸಿರಿಗಳ ಒಂದು ಸೂಚನೆಯಷ್ಟೆ.
ಭಾವಾರ್ಥ: ವೇದ ಸಾಹಿತ್ಯದಲ್ಲಿ ಹೇಳಿರುವಂತೆ ಪರಮನ ಸಿರಿಗಳನ್ನು ಮತ್ತು ಶಕ್ತಿಗಳನ್ನು ಬೇರೆ ಬೇರೆ ರೀತಿಗಳಲ್ಲಿ ಅರ್ಥಮಾಡಿಕೊಳ್ಳುತ್ತಾರೆ: ಆದರೆ ಇಂತಹ ಸಿರಿಗಳಿಗೆ ಮಿತಿಯಿಲ್ಲ. ಆದುದರಿಂದ ಎಲ್ಲ ಸಿರಿಗಳನ್ನೂ ಶಕ್ತಿಗಳನ್ನೂ ವಿವರಿಸಲು ಸಾಧ್ಯವಿಲ್ಲ. ಅರ್ಜುನನ ಕುತೂಹಲವನ್ನು ತಣಿಸಲು ಕೆಲವೇ ನಿದರ್ಶನಗಳನ್ನು ವರ್ಣಿಸಿದೆ.
(ಗಮನಿಸಿ: ಈ ಬರಹವು 'ಗೀತೋಪನಿಷದ್ ಭಗವದ್ಗೀತಾ ಯಥಾರೂಪ' ಪುಸ್ತಕದಲ್ಲಿರುವ ಮಾಹಿತಿಯನ್ನು ಆಧರಿಸಿದೆ. ಸಮಕಾಲೀನ ವಿಚಾರಗಳಿಗೆ ಅನ್ವಯಿಸಲು ಅರ್ಥದಲ್ಲಿ ತುಸು ವಿವರ ನೀಡಲಾಗಿದೆ. ಸಂದಿಗ್ಧ ಬಂದರೆ ಓದುಗರು ಮೂಲ ಪುಸ್ತಕವನ್ನೇ ಆಧರಿಸಿ, ಅನ್ವಯಿಸಿಕೊಳ್ಳಬೇಕು.)
