ಅಧ್ಯಾತ್ಮಿಕ ಜಗತ್ತಿನಲ್ಲಿ ಬೆಳಕಿಗಾಗಿ ಸೂರ್ಯ–ಚಂದ್ರರ ಅಗತ್ಯವೇ ಇಲ್ಲ; ಪರಮಾತ್ಮನೊಬ್ಬನೇ ಸಾಕು: ಭಗವದ್ಗೀತೆ
ಪರಮಾತ್ಮ ಶ್ರೀಕೃಷ್ಣನೇ ಎಲ್ಲಾ ಪ್ರಕಾಶಮಾನ ವಸ್ತುಗಳಿಗೆ ಮೂಲ. ಅಷ್ಟೇ ಅಲ್ಲದೇ ಅಧ್ಯಾತ್ಮಿಕ ಜಗತ್ತಿನ ಬೆಳಕು ಕೂಡಾ ಅವನೇ. ಆದ್ದರಿಂದ ಅವನನ್ನು ನೋಡಲು ಸೂರ್ಯ–ಚಂದ್ರರ ಬೆಳಕಿನ ಅಗತ್ಯವಿಲ್ಲ. ಭಗವದ್ಗೀತೆ ಅಧ್ಯಾಯ 13 ರಿಂದ ಇದನ್ನು ತಿಳಿಯಿರಿ.

ಅಧ್ಯಾಯ 13, ಪ್ರಕೃತಿ, ಪುರುಷ ಹಾಗೂ ಪ್ರಜ್ಞೆ ಶ್ಲೋಕ - 18
ಜ್ಯೋತಿಷ್ಠಮಪಿ ತತ್‌ಜ್ಯೋತಿಸ್ತಮಸಃ ಪರಮುಚ್ಯತೇ |
ಜ್ಞಾನಂ ಜ್ಞೇಯಂ ಜ್ಞಾನಗಮ್ಯಂ ಹೃದಿ ಸರ್ವಸ್ಯ ವಿಷ್ಠಿತಮ್ || 18 ||
ಅರ್ಥ: ಆತನು ಎಲ್ಲ ಪ್ರಕಾಶಮಾನ ವಸ್ತುಗಳ ಬೆಳಕಿನ ಮೂಲ. ಆತನು ಜಡವಸ್ತುವಿನ ತಮಸ್ಸಿನಾಚೆ ಇದ್ದಾನೆ ಮತ್ತು ಅವನು ಅವ್ಯಕ್ತನು. ಅವನು ಜ್ಞಾನ, ಜ್ಞಾನದ ವಸ್ತು ಮತ್ತು ಜ್ಞಾನದ ಗುರಿ. ಅವನು ಎಲ್ಲರ ಹೃದಯಗಳಲ್ಲಿ ಪ್ರತಿಷ್ಠಿತನಾಗಿದ್ದಾನೆ.
ಭಾವಾರ್ಥ: ದೇವೋತ್ತಮ ಪರಮ ಪುರುಷನಾದ ಪರಮಾತ್ಮನು ಸೂರ್ಯ, ಚಂದ್ರ ಮತ್ತು ನಕ್ಷತ್ರಗಳಂತಹ ಪ್ರಕಾಶಮಾನ ವಸ್ತುಗಳ ಪ್ರಭೆಯ ಮೂಲ. ಆಧ್ಯಾತ್ಮಿಕ ಜಗತ್ತಿನಲ್ಲಿ ಸೂರ್ಯ ಚಂದ್ರರ ಅಗತ್ಯವೇ ಇಲ್ಲ. ಏಕೆಂದರೆ ಪರಮ ಪ್ರಭುವಿನ ಪ್ರಭೆಯೇ ಅಲ್ಲಿದೆ ಎನ್ನುವುದನ್ನು ವೇದ ಸಾಹಿತ್ಯದಲ್ಲಿ ಕಾಣುತ್ತೇವೆ. ಐಹಿಕ ಜಗತ್ತಿನಲ್ಲಿ ಪ್ರಭುವಿನ ದಿವ್ಯತೇಜಸ್ಸಾದ ಬ್ರಹ್ಮ ಜ್ಯೋತಿಯನ್ನು ಮಹತ್‌ತ್ವವು ಎಂದರೆ ಐಹಿಕ ಘಟಕಾಂಶಗಳು ಮರೆಮಾಡಿರುತ್ತವೆ; ಆದುದರಿಂದ ಈ ಐಹಿಕ ಜಗತ್ತಿನಲ್ಲಿ ಬೆಳಕಿಗಾಗಿ ನಮಗೆ ಸೂರ್ಯ, ಚಂದ್ರ, ವಿದ್ಯುಚ್ಛಕ್ತಿ ಮೊದಲಾದವುಗಳ ನೆರವು ಬೇಕು. ಆದರೆ ಆಧ್ಯಾತ್ಮಿಕ ಜಗತ್ತಿನಲ್ಲಿ ಅಂತಹ ವಸ್ತುಗಳ ಅಗತ್ಯವಿಲ್ಲ. ಪರಮಾತ್ಮನ ಪ್ರಕಾಶಮಾನ ತೇಜಸ್ಸಿನಿಂದ ಎಲ್ಲದರ ಮೇಲೂ ಬೆಳಕು ಬೀಳುತ್ತದೆ ಎಂದು ವೇದಸಾಹಿತ್ಯದಲ್ಲಿ ಸ್ಪಷ್ಟವಾಗಿ ಹೇಳಿದೆ. ಆದುದರಿಂದ ಆತನು ಐಹಿಕ ಜಗತ್ತಿನಲ್ಲಿ ನೆಲೆಸಿಲ್ಲ ಎಂದು ಸ್ಪಷ್ಟವಾಗಿದೆ. ಅವನಿರುವುದು ಆಧ್ಯಾತ್ಮಿಕ ಜಗತ್ತಿನಲ್ಲಿ. ಅದು ಆಧ್ಯಾತ್ಮಿಕ ಗಗನದಲ್ಲಿ ಬಹುದೂರ ಇದೆ. ಇದನ್ನು ವೇದ ಸಾಹಿತ್ಯದಲ್ಲಿಯೂ ದೃಢಪಡಿಸಿದೆ ಆದಿತ್ಯವರ್ಣಂ ತಮಸಃ ಪರಸ್ತಾತ್ (ಶ್ವೇತಾಶ್ವತರ ಉಪನಿಷತ್ತು 3.8) ಆತನು ಸೂರ್ಯನಂತೆ ನಿರಂತರವಾಗಿ ಪ್ರಕಾಶಮಾನನು; ಆದರೆ ಈ ಐಹಿಕ ಜಗತ್ತಿನ ಕತ್ತಲೆಯಿಂದ ಬಹುದೂರ ಇದ್ದಾನೆ.
ಆತನದು ದಿವ್ಯಜ್ಞಾನ. ವೇದಸಾಹಿತ್ಯವು ಬ್ರಹ್ಮನ್ ಕೇಂದ್ರೀಕರಿಸಿದ ದಿವ್ಯಜ್ಞಾನ ಎನ್ನುವುದನ್ನು ದೃಢಪಡಿಸುತ್ತದೆ. ಆ ಆಧ್ಯಾತ್ಮಿಕ ಜಗತ್ತಿಗೆ ಸೇರಬೇಕೆಂದು ಕಾತರನಾದವನಿಗೆ ಪರಮ ಪ್ರಭುವು ಜ್ಞಾನವನ್ನು ನೀಡುತ್ತಾನೆ; ಪ್ರಭುವು ಪ್ರತಿಯೊಬ್ಬರ ಹೃದಯದಲ್ಲಿಯೂ ಪ್ರತಿಷ್ಠಿತನಾಗಿದ್ದಾನೆ. ಒಂದು ವೈದಿಕ ಮಂತ್ರ ಹೀಗಿದೆ ತಂ ಹ ದೇವಮ್ ಆತ್ಮ ಬುದ್ಧಿ ಪ್ರಕಾಶಂ ಮುಮುಕ್ಷುರ್ ವೈ ಶರಣಮ್ ಅಹಂ ಪ್ರಪದ್ಯೇ (ಶ್ವೇತಾಶ್ವತರ ಉಪನಿಷತ್ತು 6.18) ಬಿಡುಗಡೆಯನ್ನು ಬಯಸುವವನು ದೇವೋತ್ತಮ ಪರಮ ಪುರುಷನಿಗೆ ಶರಣಾಗಬೇಕು. ಕಟ್ಟಕಡೆಯ ಜ್ಞಾನದ ಗುರಿಯನ್ನು ಕುರಿತು ಹೇಳುವುದಾದರೆ ಅದನ್ನು ವೇದ ಸಾಹಿತ್ಯವು ದೃಢಪಡಿಸುತ್ತದೆ ತಂ ಏವ ವಿದಿತ್ವಾತಿ ಮೃತ್ಯುಮ್ ಏತಿ "ಅವನನ್ನು ತಿಳಿಯುವುದರಿಂದ ಮಾತ್ರ ಮನುಷ್ಯನು ಹುಟ್ಟು ಸಾವುಗಳ ಎಲ್ಲೆಯನ್ನು ಮೀರಬಲ್ಲನು" (ಶ್ವೇತಾಶ್ವತರ ಉಪನಿಷತ್ತು 3.8).
ಆತನು ಪರಮ ನಿಯಂತ್ರಕನಾಗಿ ಪ್ರತಿಯೊಬ್ಬರ ಹೃದಯದಲ್ಲಿಯೂ ನೆಲೆಸಿದ್ದಾನೆ. ಪರಮ ಪ್ರಭುವಿನ ಕಾಲುಗಳು, ಕೈಗಳು ಎಲ್ಲೆಡೆ ಹಂಚಿಹೋಗಿವೆ; ವ್ಯಕ್ತಿಗತ ಆತ್ಮದ ವಿಷಯದಲ್ಲಿ ಈ ಮಾತನ್ನು ಹೇಳಲು ಸಾಧ್ಯವಿಲ್ಲ. ಆದುದರಿಂದ ಇಬ್ಬರು ಕ್ಷೇತ್ರಜ್ಞರು ವ್ಯಕ್ತಿಗತ ಆತ್ಮ ಮತ್ತು ಪರಮಾತ್ಮ - ಇದ್ದಾರೆ ಎಂಬುದನ್ನು ಒಪ್ಪಲೇಬೇಕು. ಇವರಲ್ಲಿ ಒಬ್ಬರ ಕೈಕಾಲುಗಳು ಒಂದು ಸ್ಥಳದಲ್ಲಿ ಹಂಚಿವೆ. ಆದರೆ ಕೃಷ್ಣನ ಕೈಗಳು ಮತ್ತು ಕಾಲುಗಳು ಎಲ್ಲೆಡೆ ಹಂಚಿ ಹೋಗಿವೆ. ಇದನ್ನು ಶ್ವೇತಾಶ್ವತರ ಉಪನಿಷತ್ತು ದೃಢಪಡಿಸುತ್ತದೆ (3.17)- ಸರ್ವಸ್ಯ ಪ್ರಭುಮ್ ಈಶಾನಂ ಸರ್ವಸ್ಯ ಶರಣಂ ಬೃಹತ್. ದೇವೋತ್ತಮ ಪರಮ ಪುರುಷನಾದ ಪರಮಾತ್ಮನು ಎಲ್ಲ ಜೀವಿಗಳ ಪ್ರಭು; ಅವನು ಎಲ್ಲ ಜೀವಿಗಳ ಕಟ್ಟಕಡೆಯ ಆಶ್ರಯನು. ಆದುದರಿಂದ ಅತ್ಯುಚ್ಚ ಪರಮಾತ್ಮನೂ ವ್ಯಕ್ತಿಗತ ಆತ್ಮನೂ ಯಾವಾಗಲೂ ಬೇರೆ ಬೇರೆಯೇ ಎನ್ನುವ ವಾಸ್ತವಾಂಶವನ್ನು ನಿರಾಕರಿಸಲಾಗುವುದಿಲ್ಲ.
ಅಧ್ಯಾಯ 13, ಪ್ರಕೃತಿ, ಪುರುಷ ಹಾಗೂ ಪ್ರಜ್ಞೆ ಶ್ಲೋಕ - 19
ಇತಿ ಕ್ಷೇತ್ರಂ ತಥಾ ಜ್ಞಾನಂ ಜ್ಞೇಯಂ ಚೋಕ್ತಂ ಸಮಾಸತಃ |
ಮದ್ಭಕ್ತ ಏತದ್ವಿಜ್ಞಾಯ ಮದ್ಭಾವಾಯೋಪಪದ್ಯತೇ || 19 ||
ಅರ್ಥ: ಹೀಗೆ ನಾನು ಕ್ಷೇತ್ರ (ದೇಹ), ಜ್ಞಾನ ಮತ್ತು ಜ್ಞಾನಕ್ಕೆ ನಿಲುಕುವುದು ಎಂದರೆ ಜ್ಞೇಯ ಇವನ್ನು ಸಂಗ್ರಹವಾಗಿ ಹೇಳಿದ್ದಾಯಿತು. ನನ್ನ ಭಕ್ತರು ಮಾತ್ರ ಇದನ್ನು ಪೂರ್ಣವಾಗಿ ಅರ್ಥಮಾಡಿಕೊಂಡು ನನ್ನ ಸ್ವಭಾವವನ್ನು ಪಡೆಯುತ್ತಾರೆ.
ಭಾವಾರ್ಥ: ಪ್ರಭುವು ದೇಹ, ಜ್ಞಾನ ಮತ್ತು ಜ್ಞೇಯಗಳನ್ನು ಸಂಕ್ಷೇಪವಾಗಿ ವರ್ಣಿಸಿದ್ದಾನೆ. ಈ ಜ್ಞಾನವು ಮೂರು ವಸ್ತುಗಳನ್ನು ಕುರಿತದ್ದು ಕ್ಷೇತ್ರಜ್ಞ, ಜೇಯ ಮತ್ತು ಜ್ಞಾನದ ಪ್ರಕ್ರಿಯೆ. ಮೂರನ್ನೂ ಸೇರಿಸಿ ವಿಜ್ಞಾನ ಎಂದು ಕರೆಯುತ್ತಾರೆ. ಭಗವಂತನ ಪರಿಶುದ್ಧ ಭಕ್ತರು ಪರಿಪೂರ್ಣ ಜ್ಞಾನವನ್ನು ನೇರವಾಗಿ ತಿಳಿಯಬಲ್ಲರು. ಇತರರಿಗೆ ತಿಳಿಯಲು ಸಾಧ್ಯವಾಗುವುದಿಲ್ಲ. ಕಟ್ಟಕಡೆಯ ಹಂತದಲ್ಲಿ ಈ ಮೂರೂ ಒಂದೇ ಆಗುತ್ತವೆ ಎಂದು ಅದ್ವೈತಿಗಳು ಹೇಳುತ್ತಾರೆ. ಆದರೆ ಭಕ್ತರು ಇದನ್ನು ಒಪ್ಪುವುದಿಲ್ಲ. ಜ್ಞಾನ ಮತ್ತು ಜ್ಞಾನದಲ್ಲಿ ಬೆಳವಣಿಗೆ ಎಂದರೆ ಕೃಷ್ಣಪ್ರಜ್ಞೆಯಲ್ಲಿ ತನ್ನನ್ನು ಅರ್ಥಮಾಡಿಕೊಳ್ಳುವುದು. ಐಹಿಕ ಪ್ರಜ್ಞೆಯು ನಮ್ಮನ್ನು ನಡೆಸುತ್ತದೆ. ಆದರೆ ಎಲ್ಲ ಪ್ರಜ್ಞೆಯನ್ನು ಕೃಷ್ಣನ ಕೆಲಸ ಕಾರ್ಯಗಳಿಗೆ ವರ್ಗಾಯಿಸಿ ಕೃಷ್ಣನೇ ಸರ್ವಸ್ವ ಎಂದು ಅರ್ಥಮಾಡಿಕೊಳ್ಳುತ್ತಲೇ ನಾವು ನಿಜವಾದ ಜ್ಞಾನವನ್ನು ಸಾಧಿಸುತ್ತೇವೆ. ಜ್ಞಾನವೆಂದರೆ ಭಕ್ತಿಸೇವೆಯ ಪೂರ್ವಭಾವಿ ಅರಿವು ಮಾತ್ರವಲ್ಲದೆ ಬೇರೇನೂ ಅಲ್ಲ. ಹದಿನೈದನೆಯ ಅಧ್ಯಾಯದಲ್ಲಿ ಇದನ್ನು ಬಹು ಸ್ಪಷ್ಟವಾಗಿ ವಿವರಿಸಲಾಗುವುದು.
ಸಂಗ್ರಹವಾಗಿ ಹೇಳುವುದಾದರೆ, ಮಹಾಭೂತಾನಿಯಿಂದ ಪ್ರಾರಂಭವಾಗಿ ಚೇತನಾ ಧೃತಿಃ ಎನ್ನುವವರೆಗೆ ಆರು ಮತ್ತು ಏಳನೆಯ ಶ್ಲೋಕಗಳು ಐಹಿಕ ಮೂಲ ಘಟಕಗಳನ್ನು, ಬದುಕಿನ ಲಕ್ಷಣಗಳ ಕೆಲವು ಅಭಿವ್ಯಕ್ತಿಯನ್ನು ವಿಶ್ಲೇಷಣೆ ಮಾಡುತ್ತವೆ ಎಂದು ಅರ್ಥಮಾಡಿಕೊಳ್ಳಬಹುದು. ಇವು ಒಂದುಗೂಡಿ ದೇಹ ಅಥವಾ ಕ್ಷೇತ್ರ ಆಗುತ್ತದೆ. ಅಮಾನಿತ್ವಮ್ ನಿಂದ ತತ್ವಜ್ಞಾನಾರ್ಥ ದರ್ಶನಮ್‌ವರೆಗೆ ಎಂಟರಿಂದ ಹನ್ನೆರಡನೆಯ ಶ್ಲೋಕಗಳು ಎರಡು ಬಗೆಯ ಕ್ಷೇತ್ರಜ್ಞರನ್ನು ಅರ್ಥಮಾಡಿಕೊಳ್ಳುವ ಪ್ರಕ್ರಿಯೆಯನ್ನು ವರ್ಣಿಸುತ್ತವೆ; ಆತ್ಮ ಮತ್ತು ಪರಮಾತ್ಮ ಈ ಕ್ಷೇತ್ರಜ್ಞರು. ಅನಾದಿ ಮತ್‌ಪರಮ್‌ನಿಂದ ಪ್ರಾರಂಭವಾಗಿ ಹೃದಿ ಸರ್ವಸ್ಯ ವಿಷ್ಠಿತಮ್‌ರೆಗೆ ಹದಿಮೂರರಿಂದ ಹದಿನೆಂಟರವರೆಗಿನ ಶ್ಲೋಕಗಳು ಆತ್ಮನನ್ನೂ ಪರಮ ಪ್ರಭು ಅಥವಾ ಪರಮಾತ್ಮನನ್ನೂ ವರ್ಣಿಸುತ್ತವೆ.
ಈ ಮೂರು ಅಂಶಗಳನ್ನು ವರ್ಣಿಸಿದೆ ಕ್ಷೇತ್ರ (ದೇಹ), ಜ್ಞಾನದ ಪ್ರಕ್ರಿಯೆ ಮತ್ತು ಆತ್ಮ ಹಾಗೂ ಪರಮಾತ್ಮ, ಪ್ರಭುವಿನ ಪರಿಶುದ್ಧ ಭಕ್ತರು ಮಾತ್ರ ಈ ಮೂರು ಅಂಶಗಳನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬಲ್ಲರು ಎಂದು ಇಲ್ಲಿ ವಿಶೇಷವಾಗಿ ವರ್ಣಿಸಿದೆ. ಆದುದರಿಂದ ಭಕ್ತರಿಗೆ ಭಗವದ್ಗೀತೆಯು ಸಂಪೂರ್ಣವಾಗಿ ಉಪಯುಕ್ತವಾಗಿದೆ; ಪರಮ ಪ್ರಭುವಾದ ಕೃಷ್ಣನ ಸ್ವಭಾವವೇ ಪರಮಗುರಿ; ಇದನ್ನು ಪಡೆಯಬಲ್ಲವರು ಈ ಭಕ್ತರು. ಬೇರೆ ಮಾತುಗಳಲ್ಲಿ ಹೇಳುವುದಾದರೆ ಭಕ್ತರು ಮಾತ್ರ ಭಗವದ್ಗೀತೆಯನ್ನು ಅರ್ಥಮಾಡಿಕೊಳ್ಳಬಲ್ಲರು ಮತ್ತು ಅಪೇಕ್ಷಿತ ಪರಿಣಾಮವನ್ನು ಪಡೆಯಬಲ್ಲರು; ಇತರರಿಗೆ ಇದು ಸಾಧ್ಯವಿಲ್ಲ.
(ಗಮನಿಸಿ: ಈ ಬರಹವು 'ಗೀತೋಪನಿಷದ್ ಭಗವದ್ಗೀತಾ ಯಥಾರೂಪ' ಪುಸ್ತಕದಲ್ಲಿರುವ ಮಾಹಿತಿಯನ್ನು ಆಧರಿಸಿದೆ. ಸಮಕಾಲೀನ ವಿಚಾರಗಳಿಗೆ ಅನ್ವಯಿಸಲು ಅರ್ಥದಲ್ಲಿ ತುಸು ವಿವರ ನೀಡಲಾಗಿದೆ. ಸಂದಿಗ್ಧ ಬಂದರೆ ಓದುಗರು ಮೂಲ ಪುಸ್ತಕವನ್ನೇ ಆಧರಿಸಿ, ಅನ್ವಯಿಸಿಕೊಳ್ಳಬೇಕು.)