ಭಗವದ್ಗೀತೆ: ಜೀವಿಗಳ ಅಂತರಾತ್ಮದಲ್ಲಿ ಇರುವವನು ಪರಮಾತ್ಮ, ಅವನೇ ಮೇಲ್ವಿಚಾರಕ ಹಾಗೂ ಸೂತ್ರಧಾರಿ
ಐಹಿಕ ಪ್ರಪಂಚದಲ್ಲಿ ಜೀವಾತ್ಮಗಳ ದೇಹದೊಳಗೆ ಪರಮಾತ್ಮ ನೆಲೆಸಿದ್ದಾನೆ. ಅವನೇ ಜೀವನದಲ್ಲಿ ನಡೆಯುವ ಎಲ್ಲಾ ಘಟನೆಗಳ ಮೇಲ್ವಿಚಾರಕ. ಭಗವದ್ಗೀತೆ ಅಧ್ಯಾಯ 13ರ ಈ ಶ್ಲೋಕ ಓದಿ ತಿಳಿಯಿರಿ. (

ಅಧ್ಯಾಯ 13, ಪ್ರಕೃತಿ, ಪುರುಷ ಹಾಗೂ ಪ್ರಜ್ಞೆ ಶ್ಲೋಕ - 22
ಪುರುಷಃ ಪ್ರಕೃತಿಸ್ಥೋ ಹಿ ಭುನ್ಕ್ತೇ ಪ್ರಕೃತಿಜಾನ್ ಗುಣಾನ್ |
ಕಾರಣಂ ಗುಣಸನ್ಗೋSಸ್ಯ ಸದಸದ್ಯೋನಿಜನ್ಮಸು || 22 ||
ಅರ್ಥ: ಐಹಿಕ ಪ್ರಕೃತಿಯಲ್ಲಿ ಜೀವಾತ್ಮನು ಹೀಗೆ ತ್ರಿಗುಣಗಳನ್ನು ಅನುಭವಿಸುತ್ತ ಬದುಕಿನ ರೀತಿಗಳನ್ನು ಅನುಸರಿಸುತ್ತಾನೆ. ಇದಕ್ಕೆ ಐಹಿಕ ಪ್ರಕೃತಿಯೊಡನೆ ಅವನ ಸಹಯೋಗವೇ ಕಾರಣ. ಹೀಗೆ ಆತನು ವಿವಿಧ ಜೀವಿ ವರ್ಗಗಳಲ್ಲಿ ಒಳ್ಳೆಯದನ್ನು ಕೆಟ್ಟದ್ದನ್ನು ಅನುಭವಿಸುತ್ತಾನೆ.
ಭಾವಾರ್ಥ: ಜೀವಾತ್ಮ ಒಂದು ದೇಹದಿಂದ ಇನ್ನೊಂದು ದೇಹಕ್ಕೆ ಹೇಗೆ ಸಾಗುತ್ತಾನೆ ಎನ್ನುವುದನ್ನು ಅರ್ಥಮಾಡಿಕೊಳ್ಳಲು ಈ ಶ್ಲೋಕವು ಬಹು ಮುಖ್ಯವಾದದ್ದು. ಮನುಷ್ಯನು ಉಡುಪನ್ನು ಬದಲಾಯಿಸುವ ಹಾಗೆ ಜೀವಿಯು ದೇಹದಿಂದ ದೇಹಕ್ಕೆ ಸಾಗುತ್ತಾನೆ. ಇದನ್ನು ಎರಡನೆಯ ಅಧ್ಯಾಯದಲ್ಲಿ ಹೇಳಿದೆ. ಉಡುಪಿನ ಈ ಬದಲಾವಣೆಗೆ ಐಹಿಕ ಅಸ್ತಿತ್ವದಲ್ಲಿ ಅವನಿಗಿರುವ ಆಸಕ್ತಿಯೇ ಕಾರಣ. ಈ ಮಾಯಾ ಅಭಿವ್ಯಕ್ತಿಯು ಅವನನ್ನು ಮೋಹಗೊಳಿಸಿದಷ್ಟು ಕಾಲವೂ ಅವನು ದೇಹದಿಂದ ದೇಹಕ್ಕೆ ಸಾಗುತ್ತಲೇ ಇರಬೇಕಾಗುತ್ತದೆ. ಐಹಿಕ ಪ್ರಕೃತಿಯ ಮೇಲೆ ಪ್ರಭುತ್ವ ನಡೆಸಬೇಕೆಂಬ ಅವನ ಆಸೆಯಿಂದ ಅವನು ಇಂತಹ ಅಪೇಕ್ಷಣೀಯವಲ್ಲದ ಸನ್ನಿವೇಶಗಳಲ್ಲಿ ಇರಿಸಲ್ಪಡುತ್ತಾನೆ.
ಜೀವಿಯು ಒಮ್ಮೆ ದೇವತೆಯಾಗಿ, ಒಮ್ಮೆ ಮನುಷ್ಯನಾಗಿ, ಒಮ್ಮೆ ಮೃಗವಾಗಿ, ಪಕ್ಷಿಯಾಗಿ, ಹುಳವಾಗಿ, ಜಲಚರವಾಗಿ, ಸಂತನಾಗಿ, ತಿಗಣೆಯಾಗಿ ಹುಟ್ಟುತ್ತಾನೆ. ಇದು ಐಹಿಕ ಬಯಕೆಯ ಪ್ರಭಾವದಿಂದಾಗಿ ಆಗುತ್ತದೆ. ಇದು ನಡೆಯುತ್ತಲೇ ಇದೆ. ಎಲ್ಲ ಆಗುಹೋಗುಗಳಲ್ಲಿಯೂ ಜೀವಾತ್ಮನು ತಾನು ಸನ್ನಿವೇಶದ ಪ್ರಭು ಎಂದುಕೊಳ್ಳುತ್ತಾನೆ; ಆದರೆ ಅವನು ಐಹಿಕ ಪ್ರಕೃತಿಯ ಪ್ರಭಾವದಲ್ಲಿರುತ್ತಾನೆ. ಅವನನ್ನು ಹೀಗೆ ಬೇರೆಬೇರೆ ದೇಹಗಳಲ್ಲಿ ಹೇಗೆ ಇರಿಸಲಾಗುತ್ತದೆ ಎನ್ನುವುದನ್ನು ಇಲ್ಲಿ ವಿವರಿಸಲಾಗಿದೆ. ಬೇರೆಬೇರೆ ಪ್ರಕೃತಿಯ ಗುಣಗಳ ಸಹಯೋಗವೇ ಇದಕ್ಕೆ ಕಾರಣ. ಆದುದರಿಂದ ಮನುಷ್ಯನು ಮೂರು ಐಹಿಕ ಗುಣಗಳನ್ನು ಮೀರಿ ದಿವ್ಯಸ್ಥಿತಿಯನ್ನು ಸಾಧಿಸಬೇಕು. ಇದಕ್ಕೆ ಕೃಷ್ಣಪ್ರಜ್ಞೆ ಎಂದು ಹೆಸರು. ಮನುಷ್ಯನು ಕೃಷ್ಣ ಪ್ರಜ್ಞೆಯಲ್ಲಿ ನೆಲೆಸದಿದ್ದರೆ ಅವನ ಐಹಿಕ ಪ್ರಜ್ಞೆಯು ಅವನು ದೇಹದಿಂದ ದೇಹಕ್ಕೆ ಸಾಗುವಂತೆ ಒತ್ತಾಯ ಮಾಡುತ್ತದೆ. ಏಕೆಂದರೆ ಅನಾದಿಕಾಲದಿಂದ ಅವನಿಗೆ ಐಹಿಕ ಬಯಕೆಗಳು ಇದ್ದೇ ಇವೆ. ಆದರೆ ಅವನು ಈ ಗ್ರಹಿಕೆಯನ್ನು ಬದಲಾಯಿಸಿಕೊಳ್ಳಬೇಕು.
ಅಧಿಕಾರಯುತ ಮೂಲಗಳಿಂದ ಕೇಳಿ ತಿಳಿದರೆ ಮಾತ್ರ ಈ ಬದಲಾವಣೆಯನ್ನು ಸಾಧಿಸಬಹುದು. ಇದಕ್ಕೆ ಅತ್ಯುತ್ತಮ ನಿದರ್ಶನ ಇಲ್ಲಿದೆ. ಅರ್ಜುನನು ಕೃಷ್ಣನಿಂದ ದೇವರ ವಿಜ್ಞಾನವನ್ನು ಕೇಳುತ್ತಿದ್ದಾನೆ. ಜೀವಿಯು ಈ ಶ್ರವಣ ಪ್ರಕ್ರಿಯೆಗೆ ತನ್ನನ್ನು ಒಪ್ಪಿಸಿಕೊಂಡರೆ ಐಹಿಕ ಪ್ರಕೃತಿಯ ಮೇಲೆ ಯಜಮಾನಿಕೆ ನಡೆಸಬೇಕೆಂಬ ಅವನ ಬಹುಕಾಲದ ಬಯಕೆಯನ್ನು ಕಳೆದುಕೊಳ್ಳುತ್ತಾನೆ; ಯಜಮಾನಿಕೆ ನಡೆಸಬೇಕೆಂಬ ಈ ಬಹುಕಾಲದ ಬಯಕೆಯನ್ನು ಕಡಿಮೆಮಾಡಿಕೊಂಡಂತೆ, ಕ್ರಮೇಣ ಮತ್ತು ಸರಿಪ್ರಮಾಣದಲ್ಲಿ ಆಧ್ಯಾತ್ಮಿಕ ಸುಖವನ್ನು ಅನುಭವಿಸುತ್ತಾನೆ. ಅವನು ದೇವೋತ್ತಮ ಪರಮ ಪುರುಷನ ಸಹಯೋಗವನ್ನು ಕಲಿತುಕೊಂಡಂತೆ ಅಷ್ಟಷ್ಟು ಮಟ್ಟಿಗೆ ತನ್ನ ನಿತ್ಯಾನಂದದ ಬದುಕನ್ನು ಸವಿಯುತ್ತಾನೆ ಎಂದು ವೇದದ ಒಂದು ಮಂತ್ರದಲ್ಲಿ ಹೇಳಿದೆ.
ಅಧ್ಯಾಯ 13, ಪ್ರಕೃತಿ, ಪುರುಷ ಹಾಗೂ ಪ್ರಜ್ಞೆ ಶ್ಲೋಕ - 23
ಉಪದ್ರಷ್ಟಾನುಮನ್ತಾ ಚ ಭರ್ತಾ ಭೋಕ್ತಾ ಮಹೇಶ್ವರಃ |
ಪರಮಾತ್ಮೇತಿ ಚಾಪ್ಯಕ್ತೋ ದೇಹೇsಸ್ಮಿನ್ ಪುರುಷಃ ಪರಃ || 23 ||
ಅರ್ಥ: ಆದರೂ ಈ ದೇಹದಲ್ಲಿ ಇನ್ನೊಬ್ಬನಿದ್ದಾನೆ, ಅವನು ದಿವ್ಯಾನುಭವಿ; ಅವನು ಪ್ರಭು ಮತ್ತು ಪರಮ ಸ್ವಾಮಿ; ಅವನು ಮೇಲ್ವಿಚಾರಕನಾಗಿ ಮತ್ತು ಅಪ್ಪಣೆ ಕೊಡುವವನಾಗಿ ಇರುತ್ತಾನೆ. ಅವನಿಗೆ ಪರಮಾತ್ಮನೆಂದು ಹೆಸರು.
ಭಾವಾರ್ಥ: ಯಾವಾಗಲೂ ಜೀವಾತ್ಮನೊಂದಿಗೆ ಇರುವ ಪರಮಾತ್ಮನು ಪರಮ ಪ್ರಭುವಿನ ಪ್ರತಿನಿಧಿ ಎಂದು ಇಲ್ಲಿ ಹೇಳಿದೆ. ಅವನು ಸಾಮಾನ್ಯ ಜೀವಿಯಲ್ಲ. ಅದೈತ ತತ್ವಶಾಸ್ತ್ರಜ್ಞರು ಕ್ಷೇತ್ರಜ್ಞನು ಒಬ್ಬನೇ ಎಂದು ಭಾವಿಸುವುದರಿಂದ ಪರಮಾತ್ಮನಿಗೂ ಜೀವಾತ್ಮನಿಗೂ ವ್ಯತ್ಯಾಸವಿಲ್ಲ ಎಂದು ಪರಿಗಣಿಸುತ್ತಾರೆ. ಇದನ್ನು ಸ್ಪಷ್ಟಮಾಡಲು ಪ್ರಭುವು ಪರಮಾತ್ಮನಾಗಿ ಎಲ್ಲ ದೇಹಗಳಲ್ಲಿ ತನ್ನ ಪ್ರಾತಿನಿಧ್ಯವಿದೆ ಎಂದು ಹೇಳುತ್ತಾನೆ. ಆತನು ಪರ ಎಂದರೆ ದಿವ್ಯನು. ವ್ಯಕ್ತಿಗತ ಆತ್ಮವು ಒಂದು ವಿಶಿಷ್ಟ ಕ್ಷೇತ್ರದ ಚಟುವಟಿಕೆಗಳನ್ನು ಅನುಭವಿಸುತ್ತದೆ. ಆದರೆ ಪರಮಾತ್ಮನು ಮಿತಿಗಳಿರುವ ಭೋಕ್ತವಾಗಿಯಾಗಲಿ, ದೇಹದ ಚಟುವಟಿಕೆಗಳಲ್ಲಿ ಭಾಗವಹಿಸುವವನಾಗಿ ಆಗಲಿ ಅಲ್ಲಿರುವುದಿಲ್ಲ. ಸಾಕ್ಷಿಯಾಗಿ, ಮೇಲ್ವಿಚಾರಕನಾಗಿ, ಅಪ್ಪಣೆ ಕೊಡುವವನಾಗಿ ಪರಮ ಭೋಕ್ತವಾಗಿ ಇರುತ್ತಾನೆ.
ಅವನ ಹೆಸರು ಪರಮಾತ್ಮ; ಆತ್ಮನೆಂದಲ್ಲ. ಅವನು ದಿವ್ಯನು. ಆತ್ಮ, ಪರಮಾತ್ಮ ಬೇರೆ ಬೇರೆ ಎನ್ನುವುದು ಸುಸ್ಪಷ್ಟ, ಪರಮಾತ್ಮನಿಗೆ ಎಲ್ಲೆಲ್ಲೂ ಕಾಲುಗಳಿವೆ. ಕೈಗಳಿವೆ. ಆದರೆ ಜೀವಾತ್ಮನಿಗೆ ಹೀಗಿಲ್ಲ. ಪರಮಾತ್ಮನು ಪರಮ ಪ್ರಭುವಾದದ್ದರಿಂದ ಜೀವಾತ್ಮನಿಗಿರುವ ಐಹಿಕ ಭೋಗದ ಬಯಕೆಗೆ ಅನುಮತಿ ನೀಡಲು ಒಳಗಿದ್ದಾನೆ. ಪರಮಾತ್ಮನ ಅನುಮತಿ ಇಲ್ಲದೆ ಜೀವಾತ್ಮನು ಏನನ್ನೂ ಮಾಡುವಂತಿಲ್ಲ. ವ್ಯಕ್ತಿಯು ಭುಕ್ತ ಎಂದರೆ ಪಾಲಿತನಾದವನು; ಪರಮಾತ್ಮನು ಭೋಕ್ತಾ ಎಂದರೆ ಪಾಲಕನು. ಜೀವಿಗಳ ಸಂಖ್ಯೆಗೆ ಮಿತಿ ಇಲ್ಲ. ಅವನು ಅವರಲ್ಲಿ ಮಿತ್ರನಾಗಿ ಇದ್ದಾನೆ.
ವಾಸ್ತವಾಂಶವೆಂದರೆ ಪ್ರತಿಯೊಂದು ಜೀವಿಯೂ ನಿರಂತರವಾಗಿ ಪರಮ ಪ್ರಭುವಿನ ವಿಭಿನ್ನಾಂಶ. ಅವರಿಬ್ಬರದು ಆತ್ಮೀಯ ಸ್ನೇಹಿತರ ಸಂಬಂಧ. ಆದರೆ ಜೀವಾತ್ಮನಿಗೆ ಒಂದು ಪ್ರವೃತ್ತಿಯುಂಟು; ಅವನು ಪರಮ ಪ್ರಭುವಿನ ಒಪ್ಪಿಗೆಯನ್ನು ಕಡೆಗಣಿಸಿ, ಪ್ರಕೃತಿಯ ಮೇಲೆ ಯಜಮಾನಿಕೆ ನಡೆಸುವುದಕ್ಕಾಗಿ ಸ್ವತಂತ್ರವಾಗಿ ಕಾರ್ಯಪ್ರವೃತ್ತನಾಗುತ್ತಾನೆ; ಈ ಪ್ರವೃತ್ತಿ ಇರುವುದರಿಂದ ಅವನನ್ನು ಪರಮ ಪ್ರಭುವಿನ ಅಲ್ಪಪ್ರಮಾಣದ ಶಕ್ತಿ ಎಂದು ಕರೆಯಲಾಗಿದೆ. ಈ ಜೀವಿಯು ಐಹಿಕ ಶಕ್ತಿಯಲ್ಲಾಗಲಿ, ಆಧ್ಯಾತ್ಮಿಕ ಶಕ್ತಿಯಲ್ಲಾಗಲಿ ನೆಲೆಸಿರಬಹುದು.
ಐಹಿಕ ಶಕ್ತಿಯಿಂದ ಅವನು ಎಲ್ಲಿಯವರೆಗೆ ಬಂಧಿತನಾಗಿರುವನೋ ಅಲ್ಲಿಯವರೆಗೆ ಪರಮಾತ್ಮನಾದ ಪರಮ ಪ್ರಭುವು ಅವನೊಡನೆ ಇರುತ್ತಾನೆ; ಜೀವಿಯು ಆಧ್ಯಾತ್ಮಿಕ ಶಕ್ತಿಗೆ ಹಿಂದಿರುಗುವಂತೆ ಮಾಡುವುದೇ ಅವನ ಉದ್ದೇಶ. ಅವನನ್ನು ಮತ್ತೆ ಆಧ್ಯಾತ್ಮಿಕ ಶಕ್ತಿಗೆ ಕರೆದೊಯ್ಯಲು ಪ್ರಭು ಸದಾ ಕಾತರನಾಗಿರುತ್ತಾನೆ. ಆದರೆ ಅವನ ಅತ್ಯಲ್ಪ ಸ್ವಾತಂತ್ರ್ಯದಿಂದಾಗಿ ಜೀವಿಯು ಆಧ್ಯಾತ್ಮಿಕ ಬೆಳಕಿನ ಸಹಯೋಗವನ್ನು ಸದಾ ತಿರಸ್ಕರಿಸುತ್ತಾನೆ. ಸ್ವಾತಂತ್ರ್ಯದ ಈ ದುರುಪಯೋಗವು ಬದ್ದ ಪ್ರಕೃತಿಯಲ್ಲಿ ಅವನ ಐಹಿಕ ಘರ್ಷಣೆಗೆ ಕಾರಣ. ಆದುದರಿಂದ ಪ್ರಭುವು ಸದಾ ಅಂತರಂಗದಿಂದ, ಹೊರಗಿನಿಂದ ಮಾರ್ಗದರ್ಶನವನ್ನು ಮಾಡುತ್ತಲೇ ಇರುತ್ತಾನೆ. ಭಗವದ್ಗೀತೆಯಲ್ಲಿ ಹೇಳಿರುವಂತೆ ಅವನು ಹೊರಗಿನಿಂದ ಮಾರ್ಗದರ್ಶನವನ್ನು ಮಾಡುತ್ತಾನೆ; ಒಳಗಿನಿಂದ ಅವನು ಐಹಿಕ ಕ್ಷೇತ್ರದಲ್ಲಿ ಜೀವಿಯ ಕಾರ್ಯ ರೀತಿಯು ನಿಜವಾದ ಸುಖದ ಹಾದಿಯಲ್ಲ ಎಂದು ಜೀವಿಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸುತ್ತಾನೆ. "ಇದನ್ನು ಬಿಟ್ಟು ಬಿಡು; ನಿನ್ನ ನಂಬಿಕೆಯನ್ನು ನನ್ನೆಡೆಗೆ ತಿರುಗಿಸು; ಆಗ ನೀನು ಸುಖವಾಗಿರುವೆ." ಎಂದು ಅವನು ಹೇಳುತ್ತಾನೆ. ಹೀಗೆ ವಿವೇಕಿಯು ಪರಮಾತ್ಮನಲ್ಲಿ ಅಥವಾ ದೇವೋತ್ತಮ ಪರಮ ಪುರುಷನಲ್ಲಿ ನಂಬಿಕೆ ಇಟ್ಟುಕೊಳ್ಳುತ್ತಾನೆ. ಇದರಿಂದ ಅವನು ನಿತ್ಯ ಜ್ಞಾನಾನಂದದ ಬದುಕಿನತ್ತ ನಡೆಯಲು ಪ್ರಾರಂಭಿಸುತ್ತಾನೆ.
(ಗಮನಿಸಿ: ಈ ಬರಹವು 'ಗೀತೋಪನಿಷದ್ ಭಗವದ್ಗೀತಾ ಯಥಾರೂಪ' ಪುಸ್ತಕದಲ್ಲಿರುವ ಮಾಹಿತಿಯನ್ನು ಆಧರಿಸಿದೆ. ಸಮಕಾಲೀನ ವಿಚಾರಗಳಿಗೆ ಅನ್ವಯಿಸಲು ಅರ್ಥದಲ್ಲಿ ತುಸು ವಿವರ ನೀಡಲಾಗಿದೆ. ಸಂದಿಗ್ಧ ಬಂದರೆ ಓದುಗರು ಮೂಲ ಪುಸ್ತಕವನ್ನೇ ಆಧರಿಸಿ, ಅನ್ವಯಿಸಿಕೊಳ್ಳಬೇಕು.)