ಐಹಿಕ ಜಗತ್ತಿನ ಕರ್ಮಗಳನ್ನು ಮಾಡಿಸುವವನು ಪರಮಾತ್ಮ ಎಂದು ತಿಳಿದಾಗ ಮಾತ್ರ ಕೃಷ್ಣನನ್ನು ಕಾಣಲು ಸಾಧ್ಯ: ಭಗವದ್ಗೀತೆ
ಪ್ರತಿಯೊಂದು ಜೀವಿಯಲ್ಲೂ ಪರಮಾತ್ಮ ನೆಲೆಸಿದ್ದಾನೆ. ಅವನ ಮಾರ್ಗದರ್ಶನದ ಮೂಲಕ ಜೀವಿಗಳು ಪೂರ್ವ ನಿಯೋಜಿತ ಕರ್ಮಗಳನ್ನು ಮಾಡುತ್ತಾರೆ. ಭಗವದ್ಗೀತೆ ಅಧ್ಯಾಯ 13 ರ ಶ್ಲೋಕ 29 ಮತ್ತು 30 ಓದಿ.

ಅಧ್ಯಾಯ 13, ಪ್ರಕೃತಿ, ಪುರುಷ ಹಾಗೂ ಪ್ರಜ್ಞೆ ಶ್ಲೋಕ - 29
ಸಮಂ ಪಶ್ಯನ್ ಹಿ ಸರ್ವತ್ರ ಸಮವಸ್ಥಿತಮೀಶ್ವರಮ್ |
ನ ಹಿನಾಸ್ತ್ಯಾತ್ಮನಾತ್ಮಾನಂ ತತೋ ಯಾತಿ ಪರಾಂ ಗತಿಮ್ || 29 ||
ಅರ್ಥ: ಎಲ್ಲೆಲ್ಲಿಯೂ, ಪ್ರತಿಯೊಂದು ಜೀವಂತ ಪ್ರಾಣಿಯಲ್ಲಿಯೂ ಒಂದೇ ಸಮನಾಗಿ ಪರಮಾತ್ಮನು ಇರುವುದನ್ನು ಕಾಣಬಲ್ಲವನು ತನ್ನ ಮನಸ್ಸಿನಿಂದ ತನ್ನನ್ನು ಹೀನಸ್ಥಿತಿಗೆ ತಂದುಕೊಳ್ಳುವುದಿಲ್ಲ. ಹೀಗೆ ಅವನು ಪರಮ ಗತಿಯನ್ನು ಸೇರುತ್ತಾನೆ.
ಭಾವಾರ್ಥ: ಐಹಿಕ ಅಸ್ತಿತ್ವವನ್ನು ಒಪ್ಪಿಕೊಂಡು ಜೀವಿಯು ತನ್ನ ಆಧ್ಯಾತ್ಮಿಕ ಸ್ಥಿತಿಯಿಂದ ಬೇರೆ ಸ್ಥಿತಿಗೆ ಬಂದಿದ್ದಾನೆ. ಆದರೆ ಪರಮ ಪ್ರಭುವು ತನ್ನ ಪರಮಾತ್ಮ ಅಭಿವ್ಯಕ್ತಿಯಿಂದ ಎಲ್ಲೆಲ್ಲಿಯೂ ಇದ್ದಾನೆ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು. ಎಂದರೆ, ಪ್ರತಿಯೊಂದು ಜೀವಂತ ಪ್ರಾಣಿಯಲ್ಲಿಯೂ ದೇವೋತ್ತಮ ಪರಮ ಪುರುಷನು ಇರುವುದನ್ನು ಕಾಣಬೇಕು; ಆಗ ಮನುಷ್ಯನು ವಿನಾಶಕರ ಮನೋಧರ್ಮದಿಂದ ತನ್ನನ್ನು ಹೀನಸ್ಥಿತಿಗೆ ತಂದುಕೊಳ್ಳುವುದಿಲ್ಲ. ಆ ಮೂಲಕ ಅವನು ಕ್ರಮೇಣ ಆಧ್ಯಾತ್ಮಿಕ ಜಗತ್ತಿನ ಬಳಿಗೆ ಹೋಗುತ್ತಾನೆ. ಸಾಮಾನ್ಯವಾಗಿ ಮನಸ್ಸು ಇಂದ್ರಿಯತೃಪ್ತಿಯ ಪ್ರಕ್ರಿಯೆಗಳಿಗೆ ಅಂಟಿಕೊಂಡಿರುತ್ತದೆ; ಅದು ಪರಮಾತ್ಮನ ಕಡೆ ತಿರುಗಿದಾಗ ಮನುಷ್ಯನು ಆಧ್ಯಾತ್ಮಿಕ ತಿಳುವಳಿಕೆಯಲ್ಲಿ ಪ್ರಗತಿಯನ್ನು ಸಾಧಿಸುತ್ತಾನೆ.
ಅಧ್ಯಾಯ 13, ಪ್ರಕೃತಿ, ಪುರುಷ ಹಾಗೂ ಪ್ರಜ್ಞೆ ಶ್ಲೋಕ - 30
ಪ್ರಕೃತ್ಯೈವ ಚ ಕರ್ಮಾಣಿ ಕ್ರಿಯಮಾಣಾನಿ ಸರ್ವಶಃ |
ಯಃ ಪಶ್ಯತಿ ತಥಾತ್ಮಾನಮಕರ್ತಾರಂ ಸ ಪಶ್ಯತಿ || 30 ||
ಅರ್ಥ: ದೇಹವು ಎಲ್ಲ ಕರ್ಮಗಳನ್ನೂ ಮಾಡುತ್ತದೆ. ಅದು ಐಹಿಕ ಪ್ರಕೃತಿಯಿಂದ ಆಗಿದೆ. ತಾನು ಏನನ್ನೂ ಮಾಡುವುದಿಲ್ಲ ಎಂದು ಯಾರು ನೋಡಬಲ್ಲರೋ ಅವರೇ ನಿಜವಾಗಿ ನೋಡುತ್ತಾರೆ.
ಭಾವಾರ್ಥ: ಪರಮಾತ್ಮನ ಮಾರ್ಗದರ್ಶನದಲ್ಲಿ ಐಹಿಕ ಪ್ರಕೃತಿಯು ದೇಹವನ್ನು ಮಾಡುತ್ತದೆ; ದೇಹಕ್ಕೆ ಸಂಬಂಧಿಸಿ ಆಗುವ ಕರ್ಮಗಳನ್ನು ಪರಮಾತ್ಮನು ಮಾಡುವುದಿಲ್ಲ. ಸುಖಕ್ಕಾಗಲೀ ದುಃಖಕ್ಕಾಗಲೀ ಮನುಷ್ಯನು ಮಾಡುತ್ತಾನೆಂದು ನಾವು ಭಾವಿಸಬಹುದಾದ್ದನ್ನೆಲ್ಲ ಮನುಷ್ಯನು ತನ್ನ ದೇಹದ ಸ್ವರೂಪದಿಂದಾಗಿ ಮಾಡಲೇಬೇಕಾಗುತ್ತದೆ. ಆದರೆ ಆತ್ಮನು ದೇಹದ ಕರ್ಮಗಳಿಂದ ಹೊರಗಿದ್ದಾನೆ. ಮನುಷ್ಯನ ಹಿಂದಿನ ಬಯಕೆಗಳಿಗೆ ಅನುಗುಣವಾಗಿ ಈಗ ಈ ದೇಹವು ಬಂದಿದೆ. ಬಯಕೆಗಳನ್ನು ಪೂರೈಸಿಕೊಳ್ಳಲು ಮನುಷ್ಯನಿಗೆ ಈ ದೇಹವನ್ನು ಕೊಟ್ಟಿದೆ. ಅದಕ್ಕೆ ಅನುಗುಣವಾಗಿ ಅವನು ಕರ್ಮಗಳನ್ನು ಮಾಡುತ್ತಾನೆ. ವಾಸ್ತವವಾಗಿ ಹೇಳುವುದಾದರೆ ದೇಹವೊಂದು ಯಂತ್ರ; ಬಯಕೆಗಳ ತೃಪ್ತಿಗಾಗಿ ಪರಮ ಪ್ರಭುವು ಇದನ್ನು ರೂಪಿಸಿದ್ದಾನೆ. ಬಯಕೆಗಳಿಂದಾಗಿ ಮನುಷ್ಯನನ್ನು ಕಷ್ಟಪಡುವ ಅಥವಾ ಸುಖಪಡುವ ಪರಿಸ್ಥಿತಿಗಳಲ್ಲಿ ಇಡಲಾಗುತ್ತದೆ. ಜೀವಿಯು ಈ ದಿವ್ಯದರ್ಶನವನ್ನು ಬೆಳೆಸಿಕೊಂಡರೆ ಅದು ಅವನನ್ನು ದೇಹದ ಕರ್ಮಗಳಿಂದ ಬೇರೆ ಮಾಡುತ್ತದೆ. ಇಂತಹ ದರ್ಶನವಿರುವವನು ವಾಸ್ತವವಾಗಿ ದ್ರಷ್ಟಾರನು.
(ಗಮನಿಸಿ: ಈ ಬರಹವು 'ಗೀತೋಪನಿಷದ್ ಭಗವದ್ಗೀತಾ ಯಥಾರೂಪ' ಪುಸ್ತಕದಲ್ಲಿರುವ ಮಾಹಿತಿಯನ್ನು ಆಧರಿಸಿದೆ. ಸಮಕಾಲೀನ ವಿಚಾರಗಳಿಗೆ ಅನ್ವಯಿಸಲು ಅರ್ಥದಲ್ಲಿ ತುಸು ವಿವರ ನೀಡಲಾಗಿದೆ. ಸಂದಿಗ್ಧ ಬಂದರೆ ಓದುಗರು ಮೂಲ ಪುಸ್ತಕವನ್ನೇ ಆಧರಿಸಿ, ಅನ್ವಯಿಸಿಕೊಳ್ಳಬೇಕು.)