Bhagavad Gita: ಭಗವದ್ಗೀತೆಯನ್ನು ಅರ್ಜುನನಿಗೆ ಬೋಧಿಸಿದ ಶ್ರೀಕೃಷ್ಣನೇ ಆದಿಗುರು; ಗೀತೆಯ ಅರ್ಥ ತಿಳಿಯಿರಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ಭಗವದ್ಗೀತೆಯನ್ನು ಅರ್ಜುನನಿಗೆ ಬೋಧಿಸಿದ ಶ್ರೀಕೃಷ್ಣನೇ ಆದಿಗುರು; ಗೀತೆಯ ಅರ್ಥ ತಿಳಿಯಿರಿ

Bhagavad Gita: ಭಗವದ್ಗೀತೆಯನ್ನು ಅರ್ಜುನನಿಗೆ ಬೋಧಿಸಿದ ಶ್ರೀಕೃಷ್ಣನೇ ಆದಿಗುರು; ಗೀತೆಯ ಅರ್ಥ ತಿಳಿಯಿರಿ

Bhagavad Gita: ಬ್ರಹ್ಮನಿಗೆ ವೇದಗಳನ್ನು ಬೋಧಿಸಿದವನು ಪರಮಾತ್ಮ, ಈಗ ಅರ್ಜುನನಿಗೆ ಭಗವದ್ಗೀತೆಯನ್ನು ಬೋಧಿಸಿದವನೂ ಅವನೇ. ಆದ್ದರಿಂದ ಪರಮಾತ್ಮ ಶ್ರೀಕೃಷ್ಣನೇ ಆದಿಗುರು. ಭಗವದ್ಗೀತೆಯ ಅಧ್ಯಾಯ 11, ವಿಶ್ವರೂಪ, ಶ್ಲೋಕ 43 ಹಾಗೂ 44ರಲ್ಲಿದೆ ಇದರ ತಾತ್ಪರ್ಯ. (ಬರಹ: ಅರ್ಚನಾ ವಿ.ಭಟ್)

ಭಗವದ್ಗೀತೆ
ಭಗವದ್ಗೀತೆ

ಅಧ್ಯಾಯ - 11: ವಿಶ್ವರೂಪ – ಶ್ಲೋಕ - 43

ಪಿತಾಸಿ ಲೋಕಸ್ಯ ಚರಾಚರಸ್ಯ

ತ್ವಮಸ್ಯ ಪೂಜ್ಯಶ್ಚ ಗುರುರ್ಗರೀಯಾನ್ |

ನ ತ್ವತ್ಸಮೋsಸ್ತ್ಯಭ್ಯಧಿಕಃ ಕುತೋsನ್ನೋ

ಲೋಕತ್ರಯೇsಪ್ಯಪ್ರತಿಮಪ್ರಭಾವ || 43 ||

ಅರ್ಥ: ಈ ಸಮಸ್ತ ವಿಶ್ವಕ್ಕೆ, ಚರಾಚರವಾದುದೆಲ್ಲಕ್ಕೆ ನೀನೇ ತಂದೆ. ನೀನು ಪೂಜ್ಯನು, ಪರಮ ಗುರುವು. ನಿನಗೆ ಸಮಾನರಾದವರು ಯಾರೂ ಇಲ್ಲ, ಯಾರೂ ನಿನ್ನೊಡನೆ ಒಂದಾಗಿರುವುದಿಲ್ಲ. ಆದುದರಿಂದ, ಅಪರಿಮಿತ ಪ್ರಭಾವದ ಪ್ರಭುವೆ, ಮೂರು ಲೋಕಗಳಲ್ಲಿ ನಿನಗಿಂತ ಶ್ರೇಷ್ಠರಾದವರು ಯಾರಿದ್ದಾರೆ?

ಭಾವಾರ್ಥ: ದೇವೋತ್ತಮ ಪರಮ ಪುರುಷನಾದ ಕೃಷ್ಣನು ಮಗನಿಗೆ ತಂದೆಯು ಪೂಜ್ಯನಾದಂತೆ ಪೂಜ್ಯನು. ಮೂಲತಃ ಬ್ರಹ್ಮನಿಗೆ ವೇದಗಳನ್ನು ಬೋಧಿಸಿದವನು ಮತ್ತು ಈಗ ಭಗವದ್ಗೀತೆಯನ್ನು ಅರ್ಜುನನಿಗೆ ಬೋಧಿಸುತ್ತಿರುವವನು ಆತನೇ. ಆದುದರಿಂದಲೇ ಆತನು ಆದಿ ಗುರು. ಈ ಕ್ಷಣದಲ್ಲಿ ನಿಜವಾದ ಗುರುವಾಗಿರುವ ಯಾರೇ ಆಗಲಿ ಕೃಷ್ಣನಿಂದ ಪ್ರಾರಂಭವಾದ ಗುರು ಶಿಷ್ಯ ಪರಂಪರೆಯಲ್ಲಿ ಬಂದವರು. ಕೃಷ್ಣನ ಪ್ರತಿನಿಧಿಯಾಗದೆ ಯಾರೂ ಅಲೌಕಿಕ ವಿಷಯದಲ್ಲಿ ಗುರುವಾಗಲು ಸಾಧ್ಯವಿಲ್ಲ. ಭಗವಂತನಿಗೆ ಎಲ್ಲ ರೀತಿಗಳಲ್ಲಿ ಪ್ರಣಾಮಗಳನ್ನು ಅರ್ಪಿಸಲಾಗುತ್ತಿದೆ. ಆತನ ಮಹಿಮೆಯು ಅಪರಿಮಿತವಾದದ್ದು. ಅಲೌಕಿಕವಾದ ಅಥವಾ ಐಹಿಕವಾದ ಯಾವುದೇ ಅಭಿವ್ಯಕ್ತಿಯಲ್ಲಿ ಕೃಷ್ಣನಿಗೆ ಸಮನಾದವರು ಅಥವಾ ಅವನಿಗಿಂತ ಶ್ರೇಷ್ಠರಾದವರು ಯಾರೂ ಇಲ್ಲ. ಆದುದರಿಂದ ದೇವೋತ್ತಮ ಪರಮ ಪುರುಷನಾದ ಕೃಷ್ಣನಿಗಿಂತ ಮೇಲಿನವರು ಯಾರೂ ಇಲ್ಲ. ಎಲ್ಲರೂ ಅವನಿಗಿಂತ ಕೆಳಗಿನ ಸ್ಥಾನದಲ್ಲಿರುವವರು. ಅವನನ್ನು ಮೀರಬಲ್ಲವರು ಯಾರೂ ಇಲ್ಲ.

ಇದನ್ನು ಶ್ವೇತಾಶ್ವತರ ಉಪನಿಷತ್ತಿನಲ್ಲಿ ಹೇಳಿದೆ “ನ ತಸ್ಯ ಕಾರ್ಯಂ ಕರಣಂ ಚ ವಿದ್ಯತೇ | ನ ತತ್ ಸಮಶ್ಚಾಭ್ಯಧಿಕಶ್ಚ ದೃಶ್ಯತೇ ||” ಪರಮಪ್ರಭುವಾದ ಕೃಷ್ಣನಿಗೆ ಸಾಮಾನ್ಯ ಮನುಷ್ಯನಿಗಿರುವಂತೆಯೇ ಇಂದ್ರಿಯಗಳೂ ದೇಹವೂ ಉಂಟು. ಆದರೆ ಅವನ ಮಟ್ಟಿಗೆ ಅವನ ಇಂದ್ರಿಯಗಳು, ಅವನ ದೇಹ, ಅವನ ಮನಸ್ಸು ಮತ್ತು ಅವನು ಇವುಗಳ ನಡುವೆ ಯಾವುದೇ ವ್ಯತ್ಯಾಸವಿಲ್ಲ. ಕೃಷ್ಣನು ತನ್ನ ಆತ್ಮ, ಮನಸ್ಸು, ಹೃದಯ ಮತ್ತು ಬೇರೆ ಎಲ್ಲದರಿಂದ ಬೇರೆ ಎಂದು ಅವನನ್ನು ಪರಿಪೂರ್ಣವಾಗಿ ಅರ್ಥಮಾಡಿಕೊಳ್ಳಲಾರದ ಮೂಢರು ಹೇಳುತ್ತಾರೆ. ಕೃಷ್ಣನು ಪರಮ ಪ್ರಭುವು; ಆದುದರಿಂದ ಅವನ ಚಟುವಟಿಕೆಗಳು ಮತ್ತು ಸಾಮರ್ಥ್ಯವು ಪರಮವಾದವು. ನಮ್ಮ ಇಂದ್ರಿಯಗಳಂತೆ ಅವನಿಗೆ ಇಂದ್ರಿಯಗಳಿಲ್ಲದಿದ್ದರೂ ಆತನು ಎಲ್ಲ ಇಂದ್ರಿಯ ಕ್ರಿಯೆಗಳನ್ನು ಮಾಡಬಲ್ಲನು. ಆದುದರಿಂದ ಅವನ ಇಂದ್ರಿಯಗಳು ದೋಷಪೂರ್ಣವೂ ಅಲ್ಲ, ಮಿತವೂ ಅಲ್ಲ. ಅವನಿಗಿಂತ ಶ್ರೇಷ್ಠರು ಯಾರೂ ಇಲ್ಲ. ಅವನಿಗೆ ಯಾರೂ ಸಮಾನರಿಲ್ಲ ಮತ್ತು ಪ್ರತಿಯೊಬ್ಬರೂ ಅವನಿಗಿಂತ ಕೆಳಗಿರುವವರೇ. ದೇವೋತ್ತಮ ಪರಮ ಪುರುಷನ ಜ್ಞಾನ, ಶಕ್ತಿ ಮತ್ತು ಚಟುವಟಿಕೆಗಳೆಲ್ಲ ದಿವ್ಯವಾದವು. ಭಗವದ್ಗೀತೆಯಲ್ಲಿ (4.9) ಹೇಳಿದಂತೆ ಜನ್ಮ ಕರ್ಮ ಚ ಮೇ ದಿವ್ಯಮ್ ಏವಂ ಯೋ ವೇತ್ತಿ ತತ್ತ್ವತಃ | ತ್ಯಾ ದೇಹಂ ಪುನ‌ರ್ ಜನ್ಮ ನೈತಿ ಮಾಮ್ ಏತಿ ಸೋSರ್ಜುನ ||

ಕೃಷ್ಣನ ದಿವ್ಯಶರೀರ, ಚಟುವಟಿಕೆಗಳು ಮತ್ತು ಪರಿಪೂರ್ಣತೆಯನ್ನು ಬಲ್ಲ ಯಾರೇ ಆಗಲಿ ದೇಹವನ್ನು ತ್ಯಜಿಸಿದ ಅನಂತರ ಅವನ (ಕೃಷ್ಣನ) ಬಳಿಗೆ ಹಿಂತಿರುಗುತ್ತಾರೆ. ಈ ದುಃಖಮಯ ಜಗತ್ತಿಗೆ ಹಿಂದಿರುಗುವುದಿಲ್ಲ. ಆದುದರಿಂದ ಕೃಷ್ಣನ ಚಟುವಟಿಕೆಗಳು ಇತರರ ಚಟುವಟಿಕೆಗಳಿಗಿಂತ ಭಿನ್ನವಾದವು ಎನ್ನುವುದನ್ನು ತಿಳಿದುಕೊಳ್ಳಬೇಕು. ಅತ್ಯುತ್ತಮ ನೀತಿ ಎಂದರೆ ಕೃಷ್ಣನ ತತ್ವಗಳನ್ನು ಅನುಸರಿಸುವುದು; ಇದು ಮನುಷ್ಯನನ್ನು ಪರಿಪೂರ್ಣನನ್ನಾಗಿ ಮಾಡುತ್ತದೆ.

ಕೃಷ್ಣನಿಗೆ ಯಾರೂ ಒಡೆಯರಲ್ಲ, ಎಲ್ಲರೂ ಅವನ ಸೇವಕರು ಎಂದು ಹೇಳಿದೆ. ಚೈತನ್ಯ ಚರಿತಾಮೃತವು (ಆದಿ 5.142) ಇದನ್ನು ದೃಢಪಡಿಸುತ್ತದೆ – ಏಕಲೇ ಈಶ್ವರ ಕೃಷ್ಣ, ಆರ ಸಬ ನೃತ್ಯ– ಕೃಷ್ಣನೊಬ್ಬನೇ ದೇವರು, ಬೇರೆ ಪ್ರತಿಯೊಬ್ಬರೂ ಅವನ ಸೇವಕರು. ಪ್ರತಿಯೊಬ್ಬರೂ ಅವನ ಅಪ್ಪಣೆಯನ್ನು ನಡೆಸುತ್ತಾರೆ. ಅವನ ಅಪ್ಪಣೆಯನ್ನು ತಿರಸ್ಕರಿಸಬಲ್ಲವರು ಯಾರೂ ಇಲ್ಲ. ಪ್ರತಿಯೊಬ್ಬರೂ ಅವನ ಮೇಲ್ವಿಚಾರಣೆಯಲ್ಲಿ ಇರುವುದರಿಂದ ಅವನ ಮಾರ್ಗದರ್ಶನದಂತೆ ನಡೆದುಕೊಳ್ಳುತ್ತಾರೆ. ಬ್ರಹ್ಮ ಸಂಹಿತೆಯಲ್ಲಿ ಹೇಳಿರುವಂತೆ ಅವನು ಎಲ್ಲ ಕಾರಣಗಳ ಕಾರಣನು.

ಅಧ್ಯಾಯ - 11: ವಿಶ್ವರೂಪ – ಶ್ಲೋಕ - 44

ತಸ್ಮಾತ್ ಪ್ರಣಮ್ಯ ಪ್ರಣಿಧಾಯ ಕಾಯಮ್

ಪ್ರಸಾದಯೇ ತ್ವಾಮಹಮೀಶಮೀಡ್ಯಮ್ |

ಪಿತೇವ ಪುತ್ರಸ್ಯ ಸಖೇವ ಸಖ್ಯುಃ

ಪ್ರಿಯಃ ಪ್ರಿಯಾಯಾರ್ಹಸಿ ದೇವ ಸೋಢುಮ್ || 44 ||

ಅರ್ಥ: ಪ್ರತಿಯೊಂದು ಜೀವಿಯು ಪೂಜಿಸಬೇಕಾದ ಪರಮ ಪ್ರಭುವು ನೀನು. ನಾನು ಸಾಷ್ಟಾಂಗ ನಮಸ್ಕಾರ ಮಾಡಿ ನನ್ನ ಗೌರವಪೂರ್ವಕ ಪ್ರಣಾಮಗಳನ್ನು ಸಲ್ಲಿಸುತ್ತೇನೆ. ನಿನ್ನ ದಯೆಯನ್ನು ಬೇಡುತ್ತೇನೆ. ತಂದೆಯು ಮಗನ ಅವಿಧೇಯತೆಯನ್ನು, ಸ್ನೇಹಿತನು ಸ್ನೇಹಿತನ ಅಧಿಕ ಪ್ರಸಂಗವನ್ನು ಮತ್ತು ಹೆಂಡತಿಯು ತನ್ನ ಗಂಡನ ಸಲಿಗೆಯನ್ನು ಕ್ಷಮಿಸುವಂತೆ, ನೀನು ನಾನು ಮಾಡಿರಬಹುದಾದ ತಪ್ಪುಗಳನ್ನು ಕ್ಷಮಿಸು.

ಭಾವಾರ್ಥ: ಕೃಷ್ಣನ ಭಕ್ತರು ಕೃಷ್ಣನೊಂದಿಗೆ ಬೇರೆ ಬೇರೆ ಸಂಬಂಧಗಳನ್ನು ಸಾಧಿಸಿಕೊಳ್ಳುತ್ತಾರೆ. ಕೃಷ್ಣನನ್ನು ಮಗನಂತೆ, ಗಂಡನಂತೆ, ಸ್ನೇಹಿತನಂತೆ ಅಥವಾ ಒಡೆಯನಂತೆ ಕಾಣಬಹುದು. ಕೃಷ್ಣಾರ್ಜುನರದು ಸಖ್ಯಭಾವ. ತಂದೆ, ಗಂಡ ಅಥವಾ ಒಡೆಯನು ಸಹಿಸಿಕೊಳ್ಳುವಂತೆ ಕೃಷ್ಣನೂ ಸಹಿಸಿಕೊಳ್ಳುತ್ತಾನೆ.

(ಗಮನಿಸಿ: ಈ ಬರಹವು 'ಗೀತೋಪನಿಷದ್ ಭಗವದ್ಗೀತಾ ಯಥಾರೂಪ' ಪುಸ್ತಕದಲ್ಲಿರುವ ಮಾಹಿತಿಯನ್ನು ಆಧರಿಸಿದೆ. ಸಮಕಾಲೀನ ವಿಚಾರಗಳಿಗೆ ಅನ್ವಯಿಸಲು ಅರ್ಥದಲ್ಲಿ ತುಸು ವಿವರ ನೀಡಲಾಗಿದೆ. ಸಂದಿಗ್ಧ ಬಂದರೆ ಓದುಗರು ಮೂಲ ಪುಸ್ತಕವನ್ನೇ ಆಧರಿಸಿ, ಅನ್ವಯಿಸಿಕೊಳ್ಳಬೇಕು.)

Priyanka Gowda

eMail
Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.