ನಿರ್ಮಲವಾದ ಧ್ಯಾನ, ಉತ್ತಮ ಜ್ಞಾನ, ಫಲಾಪೇಕ್ಷೆಯಿಲ್ಲದೇ ಕರ್ಮ ಮಾಡುವುದರಿಂದ ಪರಮಾತ್ಮನನ್ನು ಕಾಣಲು ಸಾಧ್ಯ: ಭಗವದ್ಗೀತೆ
ಪರಮಾತ್ಮನ ಸಾಕ್ಷಾತ್ಕಾರದ ಅನ್ವೇಷಣೆಯಲ್ಲಿರುವ ಭಕ್ತರನ್ನು ತತ್ವಜ್ಞಾನಿಗಳು, ನಿಷ್ಕಾಮ ಕರ್ಮಿಗಳು ಎಂದು ಕರೆಯಲಾಗುತ್ತದೆ. ಭಗವದ್ಗೀತೆಯ ಅಧ್ಯಾಯ 13ರ 24 ಮತ್ತು 25 ನೇ ಶ್ಲೋಕಗಳ ಅರ್ಥವನ್ನು ತಿಳಿಯಿರಿ.

ಅಧ್ಯಾಯ 13, ಪ್ರಕೃತಿ, ಪುರುಷ ಹಾಗೂ ಪ್ರಜ್ಞೆ ಶ್ಲೋಕ - 24
ಯ ಏವಂ ವೇತ್ತಿ ಪುರುಷಂ ಪ್ರಕೃತಿಂ ಚ ಗುಣೈಃ ಸಹ |
ಸರ್ವಥಾ ವರ್ತಮಾನೋSಪಿ ನ ಸ ಭೂಯೋಭಿಜಾಯತೇ || 24 ||
ಅರ್ಥ: ಪ್ರಕೃತಿಯನ್ನೂ ಜೀವಿಯನ್ನೂ ಮತ್ತು ಗುಣಗಳ ಪರಸ್ಪರ ಪ್ರಕ್ರಿಯೆಯನ್ನೂ ಕುರಿತ ಈ ತತ್ವಜ್ಞಾನವನ್ನು ಅರ್ಥಮಾಡಿಕೊಂಡವನು ಮುಕ್ತಿಯನ್ನು ಪಡೆಯುವುದು ನಿಶ್ಚಯ. ಅವನ ಪ್ರಸ್ತುತ ಸ್ಥಿತಿ ಏನೇ ಆಗಿರಲಿ, ಅವನು ಇಲ್ಲಿ ಮತ್ತೆ ಹುಟ್ಟುವುದಿಲ್ಲ.
ಭಾವಾರ್ಥ: ಐಹಿಕ ಪ್ರಕೃತಿ, ಪರಮಾತ್ಮ, ಜೀವಿ ಮತ್ತು ಅವರ ಪರಸ್ಪರ ಪ್ರತಿಕ್ರಿಯೆ ಇವನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬೇಕು. ಇದರಿಂದ ಮನುಷ್ಯನು ಮತ್ತೆ ಈ ಐಹಿಕ ಪ್ರಕೃತಿಗೆ ಹಿಂದಿರುಗುವ ಒತ್ತಾಯವಿಲ್ಲದೆ ಮುಕ್ತನಾಗುವುದಕ್ಕೆ ಆಧ್ಯಾತ್ಮಿಕ ವಾತಾವರಣಕ್ಕೆ ತಿರುಗಲು ಅರ್ಹನಾಗುತ್ತಾನೆ. ಇದು ಜ್ಞಾನದ ಫಲ. ಜೀವಿಯು ಅಕಸ್ಮಾತ್ತಾಗಿ ಈ ಐಹಿಕ ಅಸ್ತಿತ್ವದಲ್ಲಿ ಬಿದ್ದು ಬಿಟ್ಟಿದ್ದಾನೆ ಎನ್ನುವುದನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳುವುದು ಜ್ಞಾನದ ಉದ್ದೇಶ. ಅಧಿಕಾರಿಗಳು, ಸಂತಸದೃಶ ಜನರು ಮತ್ತು ಗುರು ಇವರ ಸಹವಾಸದಲ್ಲಿ ಮನುಷ್ಯನು ತಾನೇ ಪ್ರಯತ್ನಿಸಿ ತನ್ನ ಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕು; ಅನಂತರ ದೇವೋತ್ತಮ ಪುರುಷನು ವಿವರಿಸಿದಂತೆ ಭಗವದ್ಗೀತೆಯನ್ನು ಅರ್ಥಮಾಡಿಕೊಂಡು ಆಧ್ಯಾತ್ಮಿಕ ಪ್ರಜ್ಞೆಗೆ ಅಥವಾ ಕೃಷ್ಣಪ್ರಜ್ಞೆಗೆ ಹಿಂದಿರುಗಬೇಕು. ಆಗ ಆತನು ಮತ್ತೆ ಈ ಐಹಿಕ ಅಸ್ತಿತ್ವಕ್ಕೆ ಬರುವುದಿಲ್ಲ ಎನ್ನುವುದು ನಿಶ್ಚಯ; ಆತನು ನಿತ್ಯಜ್ಞಾನಾನಂದದ ಬದುಕಿಗಾಗಿ ದಿವ್ಯಲೋಕಕ್ಕೆ ಸ್ಥಳಾಂತರ ಹೊಂದುವನು.
ಅಧ್ಯಾಯ 13, ಪ್ರಕೃತಿ, ಪುರುಷ ಹಾಗೂ ಪ್ರಜ್ಞೆ ಶ್ಲೋಕ - 25
ಧ್ಯಾನೇನಾತ್ಮನಿ ಪಶ್ಯನ್ತಿ ಕೇಚಿದಾತ್ಮಾನಮಾತ್ಮನಾ |
ಅನ್ಯೇ ಸಾನ್ಖ್ಯೇನ ಯೋಗೇನ ಕರ್ಮಯೋಗೇನ ಚಾಪರೇ || 25 ||
ಅರ್ಥ: ಕೆಲವರು ಧ್ಯಾನದಿಂದ, ಮತ್ತೆ ಕೆಲವರು ಜ್ಞಾನವನ್ನು ಬೆಳೆಸಿಕೊಂಡು, ಇನ್ನು ಕೆಲವರು ನಿಷ್ಕಾಮಕರ್ಮದಿಂದ ತಮ್ಮೊಳಗಿರುವ ಪರಮಾತ್ಮನನ್ನು ಕಾಣುತ್ತಾರೆ.
ಭಾವಾರ್ಥ: ಆತ್ಮಸಾಕ್ಷಾತ್ಕಾರಕ್ಕಾಗಿ ಮನುಷ್ಯನ ಅನ್ವೇಷಣೆಯ ದೃಷ್ಟಿಯಿಂದ ಬದ್ಧಾತ್ಮಗಳನ್ನು ಎರಡು ವರ್ಗಗಳಾಗಿ ವಿಭಾಗಿಸಬಹುದು ಎಂದು ಕೃಷ್ಣನು ಅರ್ಜುನನಿಗೆ ತಿಳಿಸುತ್ತಾನೆ. ನಾಸ್ತಿಕರು, ಅಜೇಯತಾವಾದಿಗಳು ಮತ್ತು ಸಂದೇಹವಾದಿಗಳು ಆಧ್ಯಾತ್ಮಿಕ ತಿಳುವಳಿಕೆಗೆ ದೂರವಾದವರು. ಆದರೆ ಆಧ್ಯಾತ್ಮಿಕ ಬದುಕನ್ನು ಅರ್ಥಮಾಡಿಕೊಳ್ಳುವುದರಲ್ಲಿ ನಿಷ್ಠರಾದ ಇತರರು ಇದ್ದಾರೆ; ಅವರನ್ನು ಆತ್ಮಪರೀಕ್ಷೆ ಮಾಡಿಕೊಳ್ಳುವ ಭಕ್ತರು, ತತ್ವಜ್ಞಾನಿಗಳು ಮತ್ತು ನಿಷ್ಕಾಮ ಕರ್ಮಿಗಳು ಎಂದು ಕರೆಯುತ್ತಾರೆ. ಅದೈತ ಸಿದ್ಧಾಂತವನ್ನು ಸ್ಥಾಪಿಸಲು ಸದಾ ಯತ್ನಿಸುವವರನ್ನು ನಾಸ್ತಿಕರಲ್ಲಿ ಮತ್ತು ಅಜೇಯತಾವಾದಿಗಳಲ್ಲಿ ಸೇರಿಸಲಾಗುತ್ತದೆ ಎಂದರೆ ದೇವೋತ್ತಮ ಪರಮ ಪುರುಷನ ಭಕ್ತರು ಮಾತ್ರ ಆಧ್ಯಾತ್ಮಿಕ ತಿಳುವಳಿಕೆಯಲ್ಲಿ ಅತ್ಯುತ್ತಮವಾಗಿ ನೆಲೆಗೊಂಡವರು; ಏಕೆಂದರೆ ಈ ಐಹಿಕ ಪ್ರಕೃತಿಯಾಚೆ ದಿವ್ಯಜಗತ್ತಿದೆ; ಪರಮಾತ್ಮನಾಗಿ, ವಿಸ್ತ್ರತನಾದ ಮತ್ತು ಎಲ್ಲರಲ್ಲಿರುವ ಪರಮಾತ್ಮನಾಗಿ, ಸರ್ವಾಂತರ್ಯಾಮಿಯಾದ ದೇವೋತ್ತಮನಾಗಿ ದೇವೋತ್ತಮ ಪರಮ ಪುರುಷನಿದ್ದಾನೆ ಎಂದು ಅವರು ಅರ್ಥಮಾಡಿಕೊಂಡಿದ್ದಾರೆ.
ನಿಜ, ಜ್ಞಾನವನ್ನು ಬೆಳೆಸಿಕೊಂಡು ಪರಮ ಪರಿಪೂರ್ಣ ಸತ್ಯವನ್ನು ಅರಿಯಲು ಪ್ರಯತ್ನ ಮಾಡುವವರಿದ್ದಾರೆ; ಅವರನ್ನು ಶ್ರದ್ಧಾವಂತರ ವರ್ಗಕ್ಕೇ ಸೇರಿಸಬಹುದು. ಸಾಂಖ್ಯ ದಾರ್ಶನಿಕರು ಐಹಿಕ ಜಗತ್ತನ್ನು ಇಪ್ಪತ್ನಾಲ್ಕು ತತ್ವಗಳಲ್ಲಿ ವಿಶ್ಲೇಷಣೆ ಮಾಡುತ್ತಾರೆ; ಜೀವಾತ್ಮನನ್ನು ಇಪ್ಪತ್ತೈದನೆಯ ತತ್ವವಾಗಿ ಪರಿಗಣಿಸುತ್ತಾರೆ; ಜೀವಾತ್ಮನ ಸ್ವಭಾವವು ಐಹಿಕ ತತ್ವಗಳನ್ನು ಮೀರಿದುದು ಎಂದು ಅವರು ಅರ್ಥಮಾಡಿಕೊಳ್ಳಬೇಕು. ಆಗ ಅವರಿಗೆ ಜೀವಾತ್ಮನ ಮೇಲೆ ದೇವೋತ್ತಮ ಪರಮ ಪುರುಷನಿದ್ದಾನೆ ಎಂದು ಅರ್ಥವಾಗುತ್ತದೆ. ಆತನು ಇಪ್ಪತ್ತಾರನೆಯ ತತ್ವ. ಆಗ ಅವರು ಕ್ರಮೇಣ ಕೃಷ್ಣ ಪ್ರಜ್ಞೆಯಲ್ಲಿ ಭಕ್ತಿಸೇವೆಯ ಮಟ್ಟಕ್ಕೆ ಬರುತ್ತಾರೆ. ನಿಷ್ಕಾಮಕರ್ಮಿಗಳು ಮನೋಧರ್ಮದಲ್ಲಿ ಪರಿಪೂರ್ಣರು. ಅವರಿಗೆ ಕೃಷ್ಣಪ್ರಜ್ಞೆಯಲ್ಲಿ ಭಕ್ತಿಸೇವೆಯ ನೆಲೆಗೆ ಬರಲು ಅವಕಾಶ ದೊರೆಯುತ್ತದೆ. ಶುದ್ಧ ಪ್ರಜ್ಞೆಯವರಾಗಿದ್ದು ಧ್ಯಾನದಿಂದ ತಮ್ಮೊಳಗಿನ ಪರಮಾತ್ಮನನ್ನು ಕಂಡುಕೊಳ್ಳಲು ಪ್ರಯತ್ನಿಸುವ ಕೆಲವರು ಜನರಿದ್ದಾರೆ. ಅವರು ತಮ್ಮೊಳಗೆ ಪರಮಾತ್ಮನನ್ನು ಕಂಡುಕೊಂಡಾಗ ಅವರಿಗೆ ಆಧ್ಯಾತ್ಮಿಕ ನೆಲೆ ದೊರೆಯುತ್ತದೆ. ಹೀಗೆಂದು ಇಲ್ಲಿ ಹೇಳಿದೆ. ಇದೇ ರೀತಿಯಲ್ಲಿ ಜ್ಞಾನವನ್ನು ಬೆಳೆಸಿಕೊಂಡು ಪರಮಾತ್ಮನನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುವವರಿದ್ದಾರೆ. ಹಠಯೋಗ ಪದ್ದತಿಯನ್ನು ಅಭ್ಯಾಸ ಮಾಡುವ ಇತರರು ದೇವೋತ್ತಮ ಪರಮ ಪುರುಷನನ್ನು ತಮ್ಮ ಬಾಲಿಶ ಚಟುವಟಿಕೆಗಳಿಂದ ತೃಪ್ತಿಪಡಿಸಲು ಪ್ರಯತ್ನಿಸುತ್ತಾರೆ.
(ಗಮನಿಸಿ: ಈ ಬರಹವು 'ಗೀತೋಪನಿಷದ್ ಭಗವದ್ಗೀತಾ ಯಥಾರೂಪ' ಪುಸ್ತಕದಲ್ಲಿರುವ ಮಾಹಿತಿಯನ್ನು ಆಧರಿಸಿದೆ. ಸಮಕಾಲೀನ ವಿಚಾರಗಳಿಗೆ ಅನ್ವಯಿಸಲು ಅರ್ಥದಲ್ಲಿ ತುಸು ವಿವರ ನೀಡಲಾಗಿದೆ. ಸಂದಿಗ್ಧ ಬಂದರೆ ಓದುಗರು ಮೂಲ ಪುಸ್ತಕವನ್ನೇ ಆಧರಿಸಿ, ಅನ್ವಯಿಸಿಕೊಳ್ಳಬೇಕು.)