Bhagavad Gita: ಪರಮಾತ್ಮನು ಅತ್ಯಂತ ಕರುಣಾಮಯಿ, ಅದಕ್ಕೆ ಅರ್ಜುನನೊಂದಿಗಿನ ಅವನ ಬಾಂಧವ್ಯವೇ ಸಾಕ್ಷಿ; ಗೀತೆಯ ಅರ್ಥ ತಿಳಿಯಿರಿ
Bhagavad Gita: ಸರ್ವವ್ಯಾಪಿಯಾಗಿರುವ ಪರಮಾತ್ಮನು ಅಧ್ಯಾತ್ಮಿಕ ಜಗತ್ತಿಗೆ ಕಾರಣನು ಹಾಗೂ ಅಲೌಕಿಕ ಜಗತ್ತಿಗೆ ಅವನೇ ಪ್ರಧಾನನಾಗಿದ್ದಾನೆ. ಭಗವದ್ಗೀತೆ ಅಧ್ಯಾಯ 11, ವಿಶ್ವರೂಪ, ಶ್ಲೋಕ 38 ರಿಂದ 42 ರವರೆಗಿನ ಭಾವಾರ್ಥ ಹೀಗಿದೆ.

ಅಧ್ಯಾಯ - 11: ವಿಶ್ವರೂಪ – ಶ್ಲೋಕ - 38
ತ್ವಮಾದಿದೇವಃ ಪುರುಷಃ ಪುರಾಣಸ್
ತ್ವಮಸ್ಯ ವಿಶ್ವಸ್ಯ ಪರಂ ನಿಧಾನಮ್ |
ವೇತ್ತಾಸಿ ವೇದ್ಯಂ ಚ ಪರಂ ಚ ಧಾಮ
ತ್ವಯಾ ತತಂ ವಿಶ್ವಮನನ್ತರೂಪ || 38 ||
ಅರ್ಥ: ನೀನು ಆದಿ ದೇವೋತ್ತಮ ಪುರುಷನು; ಪುರಾಣ ಪುರುಷನು; ಈ ಪ್ರಕಟಿತ ವಿಶ್ವದ ಕಟ್ಟಕಡೆಯ ಆಶ್ರಯ ನೀನು. ಎಲ್ಲವನ್ನೂ ತಿಳಿದವನು ನೀನು; ತಿಳಿಯಲು ಸಾಧ್ಯವಿರುವುದೆಲ್ಲ ನೀನೇ. ಭೌತಿಕ ಗುಣಗಳನ್ನು ಮೀರಿದ ಪರಂಧಾಮನು ನೀನು. ಹೇ ಅನಂತರೂಪನೆ! ಈ ವಿಶ್ವವನ್ನೆಲ್ಲ ನೀನು ವ್ಯಾಪಿಸಿರುವೆ!
ಭಾವಾರ್ಥ: ಎಲ್ಲವೂ ದೇವೋತ್ತಮ ಪರಮ ಪುರುಷನನ್ನು ಅವಲಂಬಿಸಿದೆ. ಆದುದರಿಂದ ಅವನೇ ಕಡೆಯ ಶಾಂತಿಯ ತಾಣ. ನಿಧಾನಮ್ ಎಂದರೆ ಎಲ್ಲವೂ, ಬ್ರಹ್ಮಜ್ಯೋತಿಯೂ ಸಹ, ದೇವೋತ್ತಮ ಪರಮ ಪುರುಷನಾದ ಕೃಷ್ಣನನ್ನೇ ಅವಲಂಬಿಸಿದೆ ಎಂದು ಅರ್ಥ. ಈ ಪ್ರಪಂಚದಲ್ಲಿ ನಡೆಯುವುದೆಲ್ಲವನ್ನೂ ತಿಳಿದವನು ಅವನು. ಜ್ಞಾನಕ್ಕೆ ಕೊನೆ ಏನಾದರೂ ಇದ್ದರೆ ಅದು ಅವನೇ. ಆದುದರಿಂದ ಅವನೇ ಜ್ಞಾನ ಮತ್ತು ಜ್ಞೇಯ. ಅವನೇ ಜ್ಞಾನದ ಗುರಿ. ಏಕೆಂದರೆ ಅವನು ಸರ್ವವ್ಯಾಪಿ. ಅವನೇ ಆಧ್ಯಾತ್ಮಿಕ ಜಗತ್ತಿನಲ್ಲಿ ಕಾರಣನು. ಆದುದರಿಂದ ಅವನು ದಿವ್ಯನು. ಅಲೌಕಿಕ ಜಗತ್ತಿನಲ್ಲಿ ಅವನೇ ಪ್ರಧಾನನು.
ಅಧ್ಯಾಯ - 11: ವಿಶ್ವರೂಪ – ಶ್ಲೋಕ - 39
ವಾಯುರ್ಯಮೋsಗ್ನಿರ್ವರುಣಃ ಶಶಾಂಕಃ
ಪ್ರಜಾಪತಿಂ ಪ್ರಪಿತಾಮಹಶ್ಚ |
ನಮೋ ನಮಸ್ತೇsಸ್ತು ಸಹಸ್ರಕೃತ್ವಃ
ಪುನಶ್ಚ ಭೂಯೋಪಿ ನಮೋ ನಮಸ್ತೇ || 39 ||
ಇದನ್ನೂ ಓದಿ: ಈ ತಿಂಗಳಿನಿಂದ 3 ರಾಶಿಯವರು ಶನಿ ದೋಷದಿಂದ ಮುಕ್ತರಾಗುತ್ತಾರೆ; ಸಂಪತ್ತು, ಸಂತೋಷ ಸೇರಿ ಹಲವು ಪ್ರಯೋಜನಗಳಿವೆ
ಅರ್ಥ: ನೀನೇ ವಾಯುವು, ನೀನೇ ಯಮ! ನೀನೇ ಅಗ್ನಿ, ನೀನೇ ಜಲ, ನೀನೇ ಚಂದ್ರನು! ನೀನು ಪ್ರಥಮ ಜೀವಿಯಾದ ಬ್ರಹ್ಮ. ನೀನು ಪ್ರಪಿತಾಮಹ, ನಿನಗೆ ಸಹಸ್ರ ಬಾರಿ ಗೌರವದಿಂದ ಪ್ರಣಾಮ ಮಾಡುತ್ತೇನೆ. ಮತ್ತೆ ಮತ್ತೆ ನಿನಗೆ ನಮಸ್ಕಾರ!
ಭಾವಾರ್ಥ: ಪ್ರಭುವನ್ನು ಇಲ್ಲಿ ವಾಯು ಎಂದು ಸಂಬೋಧಿಸಿದೆ. ಏಕೆಂದರೆ ವಾಯುವು ಎಲ್ಲ ದೇವತೆಗಳಲ್ಲಿ ಅತ್ಯಂತ ಮುಖ್ಯವಾದ ಸ್ವರೂಪ. ಅದು ಎಲ್ಲೆಲ್ಲಿಯೂ ಇದೆ. ಅರ್ಜುನನು ಕೃಷ್ಣನನ್ನು ಪ್ರಪಿತಾಮಹನೆಂದೂ ಸಂಬೋಧಿಸುತ್ತಾನೆ. ಏಕೆಂದರೆ ಅವನು ವಿಶ್ವದ ಪ್ರಥಮ ಜೀವಿಯಾದ ಬ್ರಹ್ಮನ ತಂದೆ.
ಅಧ್ಯಾಯ - 11: ವಿಶ್ವರೂಪ – ಶ್ಲೋಕ - 40
ನಮಃ ಪುರಸ್ತಾದಥ ಪೃಷ್ಠತಸ್ತೇ
ನಮೋsಸ್ತು ತೇ ಸರ್ವತ ಏವ ಸರ್ವ |
ಅನನ್ತವೀರ್ಯಾಮಿತವಿಕ್ರಮಸ್ತ್ವಂ
ಸರ್ವಂ ಸಮಾಪ್ನೋಷಿ ತತೋsಸಿ ಸರ್ವಃ || 40 ||
ಅರ್ಥ: ನಿನಗೆ ಮುಂದಿನಿಂದ, ಹಿಂದಿನಿಂದ, ಎಲ್ಲ ಕಡೆಗಳಿಂದ ಪ್ರಣಾಮಗಳು! ಅನಂತವೀರ್ಯನೆ, ನೀನು ಅನಂತ ಪರಾಕ್ರಮದ ಪ್ರಭು! ನೀನು ಸರ್ವವ್ಯಾಪಿ. ಆದುದರಿಂದ ಎಲ್ಲವೂ ನೀನೇ.
ಭಾವಾರ್ಥ: ತನ್ನ ಗೆಳೆಯನಾದ ಕೃಷ್ಣನ ವಿಷಯದಲ್ಲಿ ಪ್ರೀತಿಯ ಹರ್ಷೋನ್ಮಾದದಲ್ಲಿ ಅರ್ಜುನನು ಕೃಷ್ಣನಿಗೆ ಎಲ್ಲ ಕಡೆಗಳಿಂದ ನಮಸ್ಕಾರವನ್ನು ಅರ್ಪಿಸುತ್ತಾನೆ. ಎಲ್ಲ ಶಕ್ತಿ ಸಾಮರ್ಥ್ಯಗಳ ಪ್ರಭು ಅವನು. ರಣರಂಗದಲ್ಲಿ ನೆರೆದಿರುವ ಎಲ್ಲ ಯೋಧರಿಗಿಂತ ಶ್ರೇಷ್ಠನಾದವನು ಎನ್ನುವುದನ್ನು ಅವನು ಒಪ್ಪುತ್ತಾನೆ. ವಿಷ್ಣು ಪುರಾಣದಲ್ಲಿ ಹೀಗೆ ಹೇಳಿದೆ (1.9.69) – ಯೋsಯಂ ತವಾಗತೋ ದೇವ ಸಮೀಪಂ ದೇವತಾಗಣಃ | ಸ ತ್ವಂ ಏವ ಜಗತ್ ಸ್ರಷ್ಟಾ ಯತಃ ಸರ್ವ ಗತೋ ಭವಾನ್ || "ದೇವೋತ್ತಮ ಪರಮ ಪುರುಷನೆ, ನಿನ್ನ ಮುಂದೆ ಯಾರೇ ಬರಲಿ, ಅವರು ದೇವತೆಗಳೇ ಆಗಿದ್ದರೂ, ಅವರನ್ನು ಸೃಷ್ಟಿಸಿದವನು ನೀನೇ."
ಅಧ್ಯಾಯ - 11: ವಿಶ್ವರೂಪ – ಶ್ಲೋಕ - 41
ಸಖೇತಿ ಮತ್ವಾ ಪ್ರಸಭಂ ಯದುಕ್ತಮ್
ಹೇ ಕೃಷ್ಣ ಹೇ ಯಾದವ ಹೇ ಸಖೇತಿ |
ಅಜಾನತಾ ಮಹಿಮಾನಂ ತವೇದಮ್
ಮಯಾ ಪ್ರಮಾದಾತ್ ಪ್ರಣಯೇನ ವಾಪಿ || 41 ||
ಅಧ್ಯಾಯ - 11: ವಿಶ್ವರೂಪ – ಶ್ಲೋಕ - 42
ಯಚ್ಚಾವಹಾಸಾರ್ಥಮಸತ್ಕೃತೋsಸಿ
ವಿಹಾರಶಯ್ಯಾಸನಭೋಜನೇಷು |
ಏಕೋsಥವಾಪ್ಯಚ್ಯುತ ತತ್ಸಮಕ್ಷಮ್
ತತ್ ಕ್ಷಾಮಯೇ ತ್ವಾಮಹಮಪ್ರಮೇಯಮ್ || 42 ||
ಅರ್ಥ: ನಿನ್ನ ಮಹಿಮೆಗಳನ್ನು ತಿಳಿಯದೆ, ನೀನು ನನ್ನ ಸಖನೆಂದು ಭಾವಿಸಿ, ಯೋಚನೆ ಮಾಡದೆ ನಿನ್ನನ್ನು 'ಕೃಷ್ಣಾ', 'ಯಾದವ', 'ಓ ಗೆಳೆಯಾ' ಎಂದೆಲ್ಲ ಕರೆದಿದ್ದೇನೆ. ಪ್ರಮಾದದಿಂದಾಗಲಿ ಪ್ರೀತಿಯಿಂದಾಗಲಿ ನಾನು ಮಾಡಿರುವ ಅಪರಾಧಗಳನ್ನು ಕ್ಷಮಿಸು. ವಿಹಾರದಲ್ಲಿ, ಒಂದೇ ಹಾಸಿಗೆಯಲ್ಲಿ ಮಲಗಿದ್ದಾಗ, ನಾವಿಬ್ಬರೇ ಇದ್ದಾಗ, ಸ್ನೇಹಿತರ ಮುಂದೆ ನಾನು ನಿನ್ನನ್ನು ಅನೇಕ ಬಾರಿ ಅಪಹಾಸ್ಯ ಮಾಡಿದ್ದೇನೆ. ಅಚ್ಯುತನೇ, ಇವಕ್ಕೆಲ್ಲ ನಾನು ನಿನ್ನ ಕ್ಷಮೆ ಬೇಡುತ್ತೇನೆ.
ಭಾವಾರ್ಥ: ಕೃಷ್ಣನು ತನ್ನ ವಿಶ್ವರೂಪದಲ್ಲಿ ಅರ್ಜುನನ ಮುಂದೆ ಪ್ರಕಟನಾದರೂ, ಅರ್ಜುನನು ಕೃಷ್ಣನೊಡನೆ ತನ್ನ ಗೆಳೆತನದ ಸಂಬಂಧವನ್ನು ಸ್ಮರಿಸಿಕೊಂಡು ಕ್ಷಮೆ ಬೇಡುತ್ತಾನೆ. ಸ್ನೇಹದಿಂದ ಮಾಡುವ ಸಲಿಗೆಯ ಹಲವು ರೀತಿಗಳಿಗಾಗಿ ತನ್ನನ್ನು ಕ್ಷಮಿಸುವಂತೆ ಕೇಳಿಕೊಳ್ಳುತ್ತಾನೆ. ಕೃಷ್ಣನು ತನ್ನ ಆತ್ಮೀಯ ಸಖನಾಗಿ ಎಲ್ಲವನ್ನೂ ವಿವರಿಸಿದ್ದರೂ, ಅವನು ಇಂತಹ ವಿಶ್ವರೂಪವನ್ನು ಧರಿಸಬಲ್ಲ ಎಂದು ತನಗೆ ತಿಳಿದಿರಲಿಲ್ಲ ಎಂದು ಒಪ್ಪಿಕೊಳ್ಳುತ್ತಾನೆ. ಕೃಷ್ಣನ ಸಿರಿಯನ್ನು ಗುರುತಿಸದೆ, ಅವನನ್ನು 'ಗೆಳೆಯಾ', 'ಕೃಷ್ಣಾ', 'ಯಾದವಾ' ಎಂದು ಸಂಬೋಧಿಸಿ ಎಷ್ಟು ಬಾರಿ ಅವನಿಗೆ ಅಪಮಾನ ಮಾಡಿರುವನೋ ಅರ್ಜುನನಿಗೆ ತಿಳಿಯದು. ಆದರೆ ಕೃಷ್ಣನು ಎಷ್ಟು ದಯಾಮಯ ಮತ್ತು ಕರುಣಾಳು ಎಂದರೆ ಇಷ್ಟು ಸಿರಿ ಇದ್ದೂ ಅರ್ಜುನನೊಡನೆ ಗೆಳೆಯನಾಗಿ ಆಡಿದ. ಭಕ್ತ ಮತ್ತು ಭಗವಂತರ ನಡುವೆ ಇರುವ ಪರಸ್ಪರ ದಿವ್ಯಪ್ರೀತಿ ಇಂತಹದು. ಜೀವಿ ಮತ್ತು ಕೃಷ್ಣನ ನಡುವಣ ಬಾಂಧವ್ಯವು ನಿರಂತರವಾದದ್ದು. ಅರ್ಜುನನ ವರ್ತನೆಯಲ್ಲಿ ನಾವು ಕಾಣುವಂತೆ, ಅದನ್ನು ಮರೆಯಲು ಸಾಧ್ಯವಿಲ್ಲ. ಅರ್ಜುನನು ವಿಶ್ವರೂಪದ ಸಿರಿಯನ್ನು ಕಂಡಿದ್ದರೂ ಕೃಷ್ಣನೊಡನೆ ತನಗಿರುವ ಸ್ನೇಹದ ಸಂಬಂಧವನ್ನು ಅವನು ಮರೆಯಲಾರ.
(ಗಮನಿಸಿ: ಈ ಬರಹವು 'ಗೀತೋಪನಿಷದ್ ಭಗವದ್ಗೀತಾ ಯಥಾರೂಪ' ಪುಸ್ತಕದಲ್ಲಿರುವ ಮಾಹಿತಿಯನ್ನು ಆಧರಿಸಿದೆ. ಸಮಕಾಲೀನ ವಿಚಾರಗಳಿಗೆ ಅನ್ವಯಿಸಲು ಅರ್ಥದಲ್ಲಿ ತುಸು ವಿವರ ನೀಡಲಾಗಿದೆ. ಸಂದಿಗ್ಧ ಬಂದರೆ ಓದುಗರು ಮೂಲ ಪುಸ್ತಕವನ್ನೇ ಆಧರಿಸಿ, ಅನ್ವಯಿಸಿಕೊಳ್ಳಬೇಕು.)
