ಜೀವಿಗಳ ದೇಹ ಅಸ್ತಿತ್ವಕ್ಕೆ ಬರಲು ಕಾರಣವಾದ ಆತ್ಮ, ಆಧ್ಯಾತ್ಮಿಕ ಸಾಕ್ಷಾತ್ಕಾರಕ್ಕೆ ಮೆಟ್ಟಿಲು: ಭಗವದ್ಗೀತೆ
ಒಂದೇ ಸ್ಥಳದಲ್ಲಿ ಇರುವ ಸೂರ್ಯ ಇಡೀ ವಿಶ್ವವನ್ನು ಹೇಗೆ ಬೆಳಗುತ್ತಾನೋ ಅದೇ ರೀತಿ ದೇಹದೊಳಗಿರುವ ಆತ್ಮವು ಇಡೀ ದೇಹವನ್ನು ಬೆಳಗುತ್ತದೆ. ಭಗವದ್ಗೀತೆ ಅಧ್ಯಾಯ 13 ಶ್ಲೋಕ 34 ಮತ್ತು 35 ರಿಂದ ತಿಳಿಯಿರಿ.

ಅಧ್ಯಾಯ 13, ಪ್ರಕೃತಿ, ಪುರುಷ ಹಾಗೂ ಪ್ರಜ್ಞೆ ಶ್ಲೋಕ - 34
ಯಥಾ ಪ್ರಕಾಶಯತ್ಯೇಕಃ ಕೃತ್ಸ್ನ ಲೋಕಮಿಮಂ ರವಿಃ |
ಕ್ಷೇತ್ರಂ ಕ್ಷೇತ್ರೀ ತಥಾ ಕೃತ್ಸ್ನಂ ಪ್ರಕಾಶಯತಿ ಭಾರತ || 34 ||
ಅರ್ಥ: ಭರತ ವಂಶಜನಾದ ಅರ್ಜುನನೆ, ಒಬ್ಬನೇ ಸೂರ್ಯನು ಇಡೀ ವಿಶ್ವವನ್ನು ಹೇಗೆ ಬೆಳಗುತ್ತಾನೋ ಹಾಗೆಯೇ ದೇಹದೊಳಗಿರುವ ಜೀವಿಯು ಪ್ರಜ್ಞೆಯಿಂದ ಇಡೀ ದೇಹವನ್ನು ಬೆಳಗುತ್ತಾನೆ.
ಭಾವಾರ್ಥ: ಪ್ರಜ್ಞೆಯನ್ನು ಕುರಿತು ಹಲವಾರು ಊಹೆಗಳಿವೆ. ಭಗವದ್ಗೀತೆಯು ಇಲ್ಲಿ ಸೂರ್ಯ ಮತ್ತು ಸೂರ್ಯ ಪ್ರಕಾಶಗಳ ಉದಾಹರಣೆಯನ್ನು ಕೊಟ್ಟಿದೆ. ಸೂರ್ಯನು ಒಂದೇ ಸ್ಥಳದಲ್ಲಿರುತ್ತಾನೆ. ಆದರೂ ಇಡೀ ವಿಶ್ವಕ್ಕೆ ಬೆಳಕು ಕೊಡುತ್ತಾನೆ; ಹಾಗೆಯೇ ಜೀವಾತ್ಮನ ಒಂದು ಸಣ್ಣಕಣವು ಈ ದೇಹದ ಹೃದಯದಲ್ಲಿ ಇದ್ದರೂ ಪ್ರಜ್ಞೆಯ ಮೂಲಕ ಇಡೀ ದೇಹವನ್ನು ಬೆಳಗುತ್ತದೆ. ಸೂರ್ಯಪ್ರಕಾಶ ಅಥವಾ ಬೆಳಕು ಸೂರ್ಯನಿದ್ದಾನೆ ಎನ್ನುವುದಕ್ಕೆ ಪುರಾವೆಯಾದಂತೆ, ಪ್ರಜ್ಞೆಯು ಆತ್ಮನ ಇರುವಿಕೆಗೆ ಪುರಾವೆ. ದೇಹದಲ್ಲಿ ಆತ್ಮವಿದ್ದಾಗ ದೇಹದಲ್ಲಿ ಎಲ್ಲೆಲ್ಲಿಯೂ ಪ್ರಜ್ಞೆ ಇರುತ್ತದೆ; ಆತ್ಮವು ದೇಹವನ್ನು ಬಿಡುತ್ತಲೇ ಪ್ರಜ್ಞೆಯು ಇರುವುದಿಲ್ಲ. ಬುದ್ದಿವಂತನಾದ ಯಾವುದೇ ಮನುಷ್ಯನು ಇದನ್ನು ಸುಲಭವಾಗಿ ಅರ್ಥಮಾಡಿಕೊಳ್ಳಬಲ್ಲ. ಆದುದರಿಂದ ಪ್ರಜ್ಞೆಯು ಜಡವಸ್ತುವಿನ ಸಂಯೋಜನೆಯಿಂದ ಆದದ್ದಲ್ಲ. ಅದು ಜೀವಿಯ ಲಕ್ಷಣ. ಜೀವಿಯು ಗುಣಾತ್ಮಕವಾಗಿ ಪರಮಾತ್ಮನೊಂದಿಗೆ ಒಂದಾದರೂ ಅವನು ಪರಮೋನ್ನತನಲ್ಲ. ಏಕೆಂದರೆ ಒಂದು ದೇಹದ ಪ್ರಜ್ಞೆಯು ಇನ್ನೊಂದು ದೇಹದ ಪ್ರಜ್ಞೆಯೊಂದಿಗೆ ಪಾಲುಗೊಳ್ಳುವುದಿಲ್ಲ. ಆದರೆ ಜೀವಾತ್ಮನ ಗೆಳೆಯನಾಗಿ ಎಲ್ಲ ದೇಹಗಳಲ್ಲಿರುವ ಪರಮಾತ್ಮನಿಗೆ ಎಲ್ಲ ದೇಹಗಳ ಪ್ರಜ್ಞೆ ಇರುತ್ತದೆ. ಪರಮ ಪ್ರಜ್ಞೆಗೂ ವೈಯಕ್ತಿಕ ಪ್ರಜ್ಞೆಗೂ ಇರುವ ವ್ಯತ್ಯಾಸ ಇದೇ.
ಅಧ್ಯಾಯ 13, ಪ್ರಕೃತಿ, ಪುರುಷ ಹಾಗೂ ಪ್ರಜ್ಞೆ ಶ್ಲೋಕ - 35
ಕ್ಷೇತ್ರಕ್ಷೇತ್ರಜ್ಞಯೋರೇವಮನ್ತರಂ ಜ್ಞಾನಚಕ್ಷುಷಾ |
ಭೂತಪ್ರಕೃತಿಮೋಕ್ಷಂ ಚ ಯೇ ವಿದುರ್ಯಾನ್ತಿ ತೇ ಪರಮ್ || 35 ||
ಅರ್ಥ: ಜ್ಞಾನದ ಕಣ್ಣುಗಳಿಂದ ಕ್ಷೇತ್ರ ಮತ್ತು ಕ್ಷೇತ್ರಜ್ಞನ ನಡುವಣ ವ್ಯತ್ಯಾಸವನ್ನು ಕಾಣಬಲ್ಲವರು ಮತ್ತು ಐಹಿಕ ಪ್ರಕೃತಿಯಲ್ಲಿ ಬಂಧನದಿಂದ ಮೋಕ್ಷ ಪಡೆಯುವ ಪ್ರಕ್ರಿಯೆಯನ್ನು ಅರ್ಥಮಾಡಿಕೊಳ್ಳಬಲ್ಲವರು ಪರಮ ಗುರಿಯನ್ನು ಮುಟ್ಟುತ್ತಾರೆ.
ಭಾವಾರ್ಥ: ಕ್ಷೇತ್ರ, ಕ್ಷೇತ್ರಜ್ಞ ಮತ್ತು ಪರಮಾತ್ಮ - ಇವುಗಳ ನಡುವಣ ವ್ಯತ್ಯಾಸವನ್ನು ಮನುಷ್ಯನು ತಿಳಿದುಕೊಳ್ಳಬೇಕೆಂಬುದೇ ಈ ಹದಿಮೂರನೆಯ ಅಧ್ಯಾಯದ ಭಾವಾರ್ಥ ಎಂಟರಿಂದ ಹನ್ನೆರಡನೆಯ ಶ್ಲೋಕದವರೆಗೆ ವರ್ಣಿಸಿರುವಂತೆ ಮೋಕ್ಷದ ಪ್ರಕ್ರಿಯೆಯನ್ನು ತಿಳಿದುಕೊಳ್ಳಬೇಕು. ಆಗ ಪರಮ ಗುರಿಯ ಕಡೆಗೆ ಸಾಗಬಹುದು.
ಶ್ರದ್ದಾವಂತ ಮನುಷ್ಯನು ಮೊಟ್ಟಮೊದಲನೆಯದಾಗಿ ದೇವರ ವಿಷಯವನ್ನು ಕೇಳಲು ಒಳ್ಳೆಯ ಸಹವಾಸವನ್ನು ಪಡೆಯಬೇಕು. ಹೀಗೆ ಕ್ರಮವಾಗಿ ಜ್ಞಾನೋದಯವನ್ನು ಸಾಧಿಸಬೇಕು. ಮನುಷ್ಯನು ಒಬ್ಬ ಗುರುವನ್ನು ಸ್ವೀಕರಿಸಿದರೆ ಜಡವಸ್ತು ಮತ್ತು ಚೇತನಗಳ ನಡುವೆ ವ್ಯತ್ಯಾಸವನ್ನು ಕಾಣಲು ಕಲಿಯಬಹುದು; ಇನ್ನೂ ಹೆಚ್ಚಿನ ಆಧ್ಯಾತ್ಮಿಕ ಸಾಕ್ಷಾತ್ಕಾರಕ್ಕೆ ಇದು ಮೆಟ್ಟಿಲಾಗುತ್ತದೆ. ಹಲವಾರು ಉಪದೇಶಗಳಿಂದ ಗುರುವು ತನ್ನ ಶಿಷ್ಯನಿಗೆ ಬದುಕಿನ ಐಹಿಕ ಪರಿಕಲ್ಪನೆಯಿಂದ ಬಿಡುಗಡೆಯಾಗಲು ಹೇಳಿಕೊಡುತ್ತಾನೆ. ಉದಾಹರಣೆಗೆ ಭಗವದ್ಗೀತೆಯಲ್ಲಿ ಕೃಷ್ಣನು ಅರ್ಜುನನನ್ನು ಐಹಿಕ ಪರಿಗಣನೆಗಳಿಂದ ಬಿಡುಗಡೆ ಮಾಡಲು ಉಪದೇಶಿಸುತ್ತಿರುವುದನ್ನು ಕಾಣುತ್ತೇವೆ.
ದೇಹವು ಜಡವಸ್ತು ಎನ್ನುವುದನ್ನು ಅರ್ಥಮಾಡಿಕೊಳ್ಳಬಹುದು. ಇದನ್ನು ಅದರ ಇಪ್ಪತ್ನಾಲ್ಕು ಘಟಕಾಂಶಗಳೊಂದಿಗೆ ವಿಶ್ಲೇಷಣೆ ಮಾಡಬಹುದು. ದೇಹವು ಜಡ ಅಭಿವ್ಯಕ್ತಿ. ಮನಸ್ಸು ಮತ್ತು ಮಾನಸಿಕ ಪರಿಣಾಮಗಳು ಸೂಕ್ಷ್ಮ ಅಭಿವ್ಯಕ್ತಿ, ಈ ಲಕ್ಷಣಗಳ ಪರಸ್ಪರ ಪ್ರತಿಕ್ರಿಯೆಯು ಬದುಕಿನ ಲಕ್ಷಣ. ಆದರೆ ಇದನ್ನು ಮೀರಿ ಆತ್ಮನಿದ್ದಾನೆ; ಪರಮಾತ್ಮನೂ ಇದ್ದಾನೆ. ಆತ್ಮನೂ ಪರಮಾತ್ಮನೂ ವಿಭಿನ್ನರು. ಆತ್ಮ ಮತ್ತು ಇಪ್ಪತ್ನಾಲ್ಕು ಘಟಕಾಂಶಗಳು ಇವುಗಳ ಸಂಯೋಜನೆಯಿಂದ ಈ ಐಹಿಕ ಜಗತ್ತು ಕೆಲಸ ಮಾಡುತ್ತಿದೆ. ಇಡೀ ಐಹಿಕ ಅಭಿವ್ಯಕ್ತಿಯನ್ನು ಆತ್ಮ ಮತ್ತು ಘಟಕಾಂಶಗಳ ಸಂಯೋಜನೆ ಎಂದು ಕಾಣಬಲ್ಲವನು ಮತ್ತು ಪರಮಾತ್ಮನ ಸ್ಥಾನವನ್ನು ಕಾಣಬಲ್ಲವನು ದಿವ್ಯಲೋಕಕ್ಕೆ ಸಾಗಿಹೋಗಲು ಅರ್ಹನಾಗುತ್ತಾನೆ. ಇವುಗಳನ್ನು ಹೇಳಿರುವುದು ಚಿಂತನೆ ಮಾಡುವುದಕ್ಕೆ ಮತ್ತು ಸಾಕ್ಷಾತ್ಕಾರ ಮಾಡಿಕೊಳ್ಳುವುದಕ್ಕೆ. ಮನುಷ್ಯನು ಗುರುವಿನ ನೆರವಿನಿಂದ ಈ ಅಧ್ಯಾಯವನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳಬೇಕು. ಇಲ್ಲಿಗೆ ಶ್ರೀಮದ್ಭಗವದ್ಗೀತೆಯ 'ಪ್ರಕೃತಿ, ಪುರುಷ ಹಾಗೂ ಪ್ರಜ್ಞೆ' ಎಂಬ ಹದಿಮೂರನೆಯ ಅಧ್ಯಾಯವು ಸಂಪೂರ್ಣವಾಗುತ್ತದೆ.
(ಗಮನಿಸಿ: ಈ ಬರಹವು 'ಗೀತೋಪನಿಷದ್ ಭಗವದ್ಗೀತಾ ಯಥಾರೂಪ' ಪುಸ್ತಕದಲ್ಲಿರುವ ಮಾಹಿತಿಯನ್ನು ಆಧರಿಸಿದೆ. ಸಮಕಾಲೀನ ವಿಚಾರಗಳಿಗೆ ಅನ್ವಯಿಸಲು ಅರ್ಥದಲ್ಲಿ ತುಸು ವಿವರ ನೀಡಲಾಗಿದೆ. ಸಂದಿಗ್ಧ ಬಂದರೆ ಓದುಗರು ಮೂಲ ಪುಸ್ತಕವನ್ನೇ ಆಧರಿಸಿ, ಅನ್ವಯಿಸಿಕೊಳ್ಳಬೇಕು.)