ಕಲ್ಮಶ ಮನಸ್ಸಿನಿಂದ ಮುಕ್ತರಾಗಿ, ಪರಿಶುದ್ಧ ಸೇವೆ ಮಾಡುವವರು ಪರಮಾತ್ಮನಿಗೆ ಪ್ರಿಯರು: ಗೀತೆಯ ಅರ್ಥ ಹೀಗಿದೆ
ಪರಮಾತ್ಮ ಕೃಷ್ಣನನ್ನು ಕಲ್ಮಶ ಚಿಂತನೆಗಳಿಂದ ಮುಕ್ತರಾಗಿ, ಪರಿಶುದ್ಧ ಭಕ್ತಿ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತಾರೋ ಅವರಿಗೆ ಖಂಡಿತವಾಗಿಯೂ ಪರಮಾತ್ಮನ ಸಾನಿಧ್ಯ ದೊರಕುತ್ತದೆ.ಭಗವದ್ಗೀತೆ ಅಧ್ಯಾಯ 11, ವಿಶ್ವರೂಪ ಶ್ಲೋಕ 55ರ ತಾತ್ಪರ್ಯ ಹೀಗಿದೆ.

ಅಧ್ಯಾಯ - 11: ವಿಶ್ವರೂಪ – ಶ್ಲೋಕ - 55
ಮತ್ಕರ್ಮಕೃನ್ಮತ್ಪರಮೋ ಮದ್ಭಕ್ತಃ ಸನ್ಗವರ್ಜಿತಃ |
ನಿರ್ವೈರಃ ಸ್ವಭೂತೇಷು ಯಃ ಸ ಮಾಮೇತಿ ಪಾಣ್ದವ || 55||
ಅರ್ಥ: ಪ್ರಿಯ ಅರ್ಜುನ, ಕಾಮ್ಯಕರ್ಮದ ಮತ್ತು ಊಹಾತ್ಮಕ ಚಿಂತನೆಗಳ ಕಶ್ಮಲದಿಂದ ಮುಕ್ತರಾಗಿ ಯಾರು ನನ್ನ ಪರಿಶುದ್ಧ ಭಕ್ತಿಸೇವೆಯಲ್ಲಿ ತೊಡಗಿರುವನೋ, ಯಾರು ನನಗಾಗಿ ಕರ್ಮಗಳನ್ನು ಮಾಡುವನೋ, ನನ್ನನ್ನು ತನ್ನ ಬದುಕಿನ ಪರಮ ಗುರಿಯನ್ನಾಗಿ ಮಾಡಿಕೊಳ್ಳುವನೋ ಮತ್ತು ಎಲ್ಲ ಜೀವಿಗಳ ಮಿತ್ರನೋ ಅವನು ನಿಶ್ಚಯವಾಗಿಯೂ ನನ್ನಲ್ಲಿಗೆ ಬರುವನು.
ಭಾವಾರ್ಥ: ದೇವೋತ್ತಮ ಪರುಷರಲ್ಲಿ ಪರಮೋಚ್ಛ ಭಗವಂತನು ಆಧ್ಯಾತ್ಮಿಕ ಗಗನದ ಕೃಷ್ಣಲೋಕದಲ್ಲಿರುತ್ತಾನೆ. ಯಾರಾದರೂ ಅವನ ಬಳಿ ಸಾಗಲು ಬಯಸಿದರೆ ಮತ್ತು ಪರಮ ಪುರುಷನಾದ ಕೃಷ್ಣನೊಂದಿಗೆ ಆತ್ಮೀಯ ಸಂಬಂಧವನ್ನು ಸ್ಥಾಪಿಸಲು ಬಯಸಿದರೆ, ಭಗವಂತನೇ ಇಲ್ಲಿ ಹೇಳಿರುವಂತೆ ಈ ಸೂತ್ರವನ್ನು ಅನುಸರಿಸಬೇಕು. ಆದ್ದರಿಂದ ಈ ಶ್ಲೋಕವನ್ನು ಭಗವದ್ಗೀತೆಯ ಸಾರವೆಂದು ಪರಿಗಣಿಸುತ್ತಾರೆ. ಬದ್ಧಜೀವಿಗಳು ಪ್ರಕೃತಿಯ ಮೇಲೆ ಪ್ರಭುತ್ವ ಸಾಧಿಸಲು ಐಹಿಕ ಜಗತ್ತಿನಲ್ಲಿ ಮುಳುಗಿರುತ್ತಾರೆ. ಅವರಿಗೆ ನಿಜವಾದ ಆಧ್ಯಾತ್ಮಿಕ ಬದುಕು ತಿಳಿಯದು.
ಇವರಿಗಾಗಿಯೇ ಇರುವ ಗ್ರಂಥ ಭಗವದ್ಗೀತೆ. ಮನುಷ್ಯನು ತನ್ನ ಆಧ್ಯಾತ್ಮಿಕ ಅಸ್ತಿತ್ವವನ್ನು ಅರ್ಥಮಾಡಿಕೊಳ್ಳುವುದು ಹೇಗೆ ಎನ್ನುವುದನ್ನು, ಪರಮ ಆಧ್ಯಾತ್ಮಿಕ ಪುರುಷನೊಂದಿಗೆ ತನ್ನ ನಿತ್ಯ ಸಂಬಂಧವನ್ನು ಅರ್ಥಮಾಡಿಕೊಳ್ಲುವುದು ಹೇಗೆ ಎನ್ನುವುದನ್ನು, ಭಗವದ್ಧಾಮಕ್ಕೆ ಹೋಗುವುದು ಹೇಗೆ ಎನ್ನುವುದನ್ನು ತೋರಿಸಿಕೊಡುವುದು ಭಗವದ್ಗೀತೆಯ ಉದ್ದೇಶ. ಮನುಷ್ಯನು ತನ್ನ ಆಧ್ಯಾತ್ಮಿಕ ಚಟುವಟಿಕೆಯಾದ ಭಕ್ತಿಸೇವೆಯಲ್ಲಿ ಯಶಸ್ಸನ್ನು ಪಡೆಯಲು ಅವಶ್ಯವಾದ ಪ್ರಕ್ರಿಯೆಯನ್ನು ಸ್ಪಷ್ಟವಾಗಿ ವಿವರಿಸುವ ಶ್ಲೋಕ ಇದು.
ಕರ್ಮದ ಮಟ್ಟಿಗೆ ಮನುಷ್ಯನು ತನ್ನ ಶಕ್ತಿಯನ್ನು ಸಂಪೂರ್ಣವಾಗಿ ಕೃಷ್ಣಪ್ರಜ್ಞೆಯ ಚಟುವಟಿಕೆಗಳಿಗೆ ವರ್ಗಾಯಿಸಬೇಕು. ಕೃಷ್ಣನ ಸಂಬಂಧವಿಲ್ಲದ ಯಾವುದೇ ಕೆಲಸವನ್ನು ಯಾರೂ ಮಾಡಬಾರದು. ಇದಕ್ಕೆ ಕೃಷ್ಣಕರ್ಮ ಎಂದು ಹೆಸರು. ಮನುಷ್ಯನು ಹಲವು ಕರ್ಮಗಳನ್ನು ತೊಡಗಿರಬಹುದು; ಆದರೆ ತನ್ನ ಕೆಲಸದ ಫಲದಲ್ಲಿ ಆಸಕ್ತಿಯಿರಬಾರದು. ಫಲವನ್ನು ಅವನಿಗೇ ಬಿಡಬೇಕು. ಸಂಗ ವರ್ಜಿತಃ ಎನ್ನುವ ಮಾತು ಅರ್ಥವತ್ತಾದದ್ದು. ಕೃಷ್ಣನ ವಿರೋಧಿಗಳಿಂದ ಮನುಷ್ಯನು ದೂರವಿರಬೇಕು. ನಾಸ್ತಿಕರು ಮಾತ್ರವೇ ಕೃಷ್ಣನ ವಿರೋಧಿಗಳಲ್ಲ, ಫಲಾಪೇಕ್ಷೆಯಿರುವ ಕರ್ಮಗಳ ಮತ್ತು ಊಹಾತ್ಮಕ ಚಿಂತನೆಯಿಂದ ಆಕರ್ಷಿತರಾಗುವವರೂ ವಿರೋಧಿಗಳೇ..
ಒಟ್ಟಿನಲ್ಲಿ, ಸ್ವಲ್ಪ ಕಾಲದ ಅಭಿವ್ಯಕ್ತಿಯಾದ ವಿಶ್ವರೂಪ, ಎಲ್ಲವನ್ನೂ ನುಂಗುವ ಕಾಲದ ರೂಪ, ನಾಲ್ಕು ಕೈಗಳ ವಿಷ್ಣುವಿನ ರೂಪ – ಎಲ್ಲವನ್ನೂ ಕೃಷ್ಣನು ತೋರಿದ್ದಾನೆ. ಹೀಗೆ ಕೃಷ್ಣನು ಈ ಎಲ್ಲ ಅಭಿವ್ಯಕ್ತಿಗಳ ಮೂಲ. ಕೃಷ್ಣನು ಮೂಲ ವಿಶ್ವರೂಪದ ಅಥವಾ ವಿಷ್ಣುರೂಪದ ಅಭಿವ್ಯಕ್ತಿ ಎಂದು ಅರ್ಥವಲ್ಲ. ಕೃಷ್ಣನೇ ಎಲ್ಲ ರೂಪಗಳ ಮೂಲನು. ನೂರಾರು ಸಾವಿರಾರು ವಿಷ್ಣುಗಳಿದ್ದಾರೆ. ಆದರೆ ಕೃಷ್ಣಭಕ್ತನಿಗೆ ಮೂಲ ರೂಪವಾದ ಎರಡು ಕೈಗಳ ಶ್ಯಾಮಸುಂದರ ರೂಪವನ್ನು ಬಿಟ್ಟು ಬೇರೆ ಯಾವುದೂ ಮುಖ್ಯವಲ್ಲ ಭ್ರಹ್ಮಸಂಹಿತೆಯಲ್ಲಿ ಪ್ರೀತಿ ಭಕ್ತಿಗಳಿಂದ, ಶ್ಯಾಮಸುಂದರ ರೂಪವನ್ನು ಮೆಚ್ಚಿದವರು ತಮ್ಮ ಹೃದಯದಲ್ಲಿ ಆತನನ್ನು ಸದಾ ಕಾಣುತ್ತಾರೆ. ಅವರಿಗೆ ಬೇರೇನೂ ಕಾಣುವುದಿಲ್ಲ ಎಂದು ಹೇಳಿದೆ. ಹನ್ನೊಂದನೆಯ ಅಧ್ಯಾಯದ ಭಾವಾರ್ಥವೆಂದರೆ ಕೃಷ್ಣರೂಪವು ಅಗತ್ಯ ಮತ್ತು ಪರಮವಾದದ್ದು ಎನ್ನುವುದನ್ನು ತಿಳಿದುಕೊಳ್ಳಬೇಕು.
(ಗಮನಿಸಿ: ಈ ಬರಹವು 'ಗೀತೋಪನಿಷದ್ ಭಗವದ್ಗೀತಾ ಯಥಾರೂಪ' ಪುಸ್ತಕದಲ್ಲಿರುವ ಮಾಹಿತಿಯನ್ನು ಆಧರಿಸಿದೆ. ಸಮಕಾಲೀನ ವಿಚಾರಗಳಿಗೆ ಅನ್ವಯಿಸಲು ಅರ್ಥದಲ್ಲಿ ತುಸು ವಿವರ ನೀಡಲಾಗಿದೆ. ಸಂದಿಗ್ಧ ಬಂದರೆ ಓದುಗರು ಮೂಲ ಪುಸ್ತಕವನ್ನೇ ಆಧರಿಸಿ, ಅನ್ವಯಿಸಿಕೊಳ್ಳಬೇಕು.)