Bhagavad Gita: ಯಾರ ಕಣ್ಣುಗಳಿಗೆ ಪ್ರೇಮದ ಅಂಜನ ಹಚ್ಚಿದೆಯೋ, ಅವರು ಮಾತ್ರ ಕೃಷ್ಣನ ಸುಂದರ ರೂಪ ಕಾಣಬಹುದು; ಗೀತೆಯ ಈ ಶ್ಲೋಕಗಳ ಅರ್ಥ ಹೀಗಿದೆ
Bhagavad Gita: ಪರಮಾತ್ಮನ ಘೋರ ರೂಪವಾದ ವಿಶ್ವರೂಪವನ್ನು ನೋಡಿ ದಿಗ್ಭ್ರಾಂತನಾದ ಅರ್ಜುನ ಪುನಃ ಶಾಂತರೂಪಕ್ಕೆ ಬರಲು ಶ್ರೀಕೃಷ್ಣನನ್ನು ಕೋರಿಕೊಂಡನು. ಆಗ ಪರಮಾತ್ಮನು ತನ್ನ ಸುಂದರ ರೂಪವನ್ನು ತೋರಿಸಿದನು. (ಬರಹ: ಅರ್ಚನಾ ವಿ.ಭಟ್)

ಅಧ್ಯಾಯ - 11: ವಿಶ್ವರೂಪ – ಶ್ಲೋಕ - 49
ಮಾ ತೇ ವ್ಯಥಾ ಮಾ ಚ ವಿಮೂಢಭಾವೋ
ದೃಷ್ಟ್ವಾ ರೂಪಂ ಘೋರಮೀದೃಜ್ ಮಮೇದಮ್ |
ವ್ಯಪೇತಭೀಃ ಪ್ರೀತಮನಾಃ ಪುನಸ್ತ್ವಮ್
ತದೇವ ಮೇ ರೂಪಮಿದಂ ಪ್ರಪಶ್ಯ || 49 ||
ಅರ್ಥ: ನನ್ನ ಈ ಘೋರ ರೂಪವನ್ನು ನೋಡಿ ನೀನು ತಳಮಳಗೊಂಡಿದ್ದೀಯೆ ಮತ್ತು ದಿಗ್ಭ್ರಾಂತನಾಗಿದ್ದೀಯೆ. ಈಗ ಇದು ಮುಕ್ತಾಯವಾಗಲಿ. ನನ್ನ ಭಕ್ತನೆ, ಮತ್ತೆ ಎಲ್ಲ ಅಶಾಂತಿಯಿಂದ ಮುಕ್ತನಾಗು. ಶಾಂತವಾದ ಮನಸ್ಸಿನಿಂದ ಈಗ ನೀನು ಅಪೇಕ್ಷಿಸಿದ ರೂಪವನ್ನು ಕಾಣಬಹುದು.
ಭಾವಾರ್ಥ: ಭಗವದ್ಗೀತೆಯ ಪ್ರಾರಂಭದಲ್ಲಿ ತನ್ನ ಪೂಜ್ಯ ತಾತ ಮತ್ತು ಗುರುಗಳು ಭೀಷ್ಮ, ದ್ರೋಣರನ್ನು ಕೊಲ್ಲುವ ವಿಷಯದಲ್ಲಿ ಅರ್ಜುನನಿಗೆ ಚಿಂತೆಯುಂಟಾಗಿತ್ತು. ಆದರೆ ಕೃಷ್ಣನು ತನ್ನ ತಾತನನ್ನು ಕೊಲ್ಲುವ ವಿಷಯದಲ್ಲಿ ಅವನು ಭಯಪಡಬೇಕಾಗಿಲ್ಲ ಎಂದನು. ಧೃತರಾಷ್ಟ್ರನ ಮಕ್ಕಳು ಕುರುಸಭೆಯಲ್ಲಿ ದೌಪದಿಯ ಸೀರೆಯನ್ನು ಸೆಳೆದಾಗ ಭೀಷ್ಮರೂ ದ್ರೋಣರೂ ಮೌನವಾಗಿದ್ದರು. ಹೀಗೆ ಕರ್ತವ್ಯವನ್ನು ಅಲಕ್ಷ್ಯಮಾಡಿದ್ದಕ್ಕಾಗಿ ಅವರನ್ನು ಕೊಲ್ಲಬೇಕು. ತಮ್ಮ ಅನ್ಯಾಯದ ಕಾರ್ಯದಿಂದ ಅವರು ಆಗಲೇ ಸತ್ತಿದ್ದಾರೆ ಎನ್ನುವುದನ್ನು ತೋರಿಸುವುದಕ್ಕಾಗಿಯೇ ಕೃಷ್ಣನು ಅರ್ಜುನನಿಗೆ ತನ್ನ ವಿಶ್ವರೂಪವನ್ನು ತೋರಿಸಿದನು. ಭಕ್ತರು ಯಾವಾಗಲೂ ಶಾಂತರು ಮತ್ತು ಇಂತಹ ಘೋರ ಕಾರ್ಯಗಳನ್ನು ಮಾಡಲಾರರು. ಆದುದರಿಂದ ಅರ್ಜುನನಿಗೆ ಈ ದೃಶ್ಯವನ್ನು ತೋರಿಸಲಾಯಿತು. ವಿಶ್ವರೂಪದ ಪ್ರಕಟಣೆಯ ಉದ್ದೇಶವನ್ನು ತೋರಿಸಿದ್ದಾಯಿತು; ಈಗ ಅರ್ಜುನನು ಚತುರ್ಭುಜ ಸ್ವರೂಪವನ್ನು ನೋಡಲು ಬಯಸಿದನು ಮತ್ತು ಕೃಷ್ಣನು ಅದನ್ನು ತೋರಿಸಿದನು. ಭಕ್ತನಿಗೆ ವಿಶ್ವರೂಪವನ್ನು ನೋಡುವುದರಲ್ಲಿ ಆಸಕ್ತಿಯಿಲ್ಲ. ಏಕೆಂದರೆ ಅದು ಪ್ರೀತಿಯ ಭಾವನೆಗಳನ್ನು ಪರಸ್ಪರ ತೋರಿಸಲು ಅವಕಾಶ ನೀಡುವುದಿಲ್ಲ. ಭಕ್ತನು ತನ್ನ ಭಕ್ತಿಭಾವಗಳನ್ನು ಅರ್ಪಿಸಲು ಬಯಸುತ್ತಾನೆ. ಇಲ್ಲವೇ ದೇವೋತ್ತಮ ಪರಮ ಪುರುಷನ ಪ್ರೇಮ ಪೂರ್ವಕ ಸೇವೆಯಲ್ಲಿ ವಿನಿಮಯ ಮಾಡಿಕೊಳ್ಳಲು ಸಾಧ್ಯವಾಗುವಂತೆ ಕೃಷ್ಣನ ಎರಡು ಕೈಗಳ ರೂಪವನ್ನು ನೋಡಲು ಬಯಸುತ್ತಾನೆ.
ಅಧ್ಯಾಯ - 11: ವಿಶ್ವರೂಪ – ಶ್ಲೋಕ - 50
ಸಂಜಯ ಉವಾಚ
ಇತ್ಯರ್ಜುನಂ ವಾಸುದೇವಸ್ತಥೋಕ್ತ್ವಾ
ಸ್ವಕಂ ರೂಪಂ ದರ್ಶಯಾಮಾಸ ಭೂಯಃ |
ಆಶ್ವಾಸಯಾಮಾಸ ಚ ಭೀತಮೇನಮ್
ಭೂತ್ವಾ ಪುನಃ ಸೌಮ್ಯವಪುರ್ಮಹಾತ್ಮಾ || 50 ||
ಅರ್ಥ: ಸಂಜಯನು ದೃತರಾಷ್ಟ್ರನಿಗೆ ಹೇಳಿದನು – ದೇವೋತ್ತಮ ಪರಮ ಪುರುಷನಾದ ಕೃಷ್ಣನು ಅರ್ಜುನನಿಗೆ ಹೀಗೆ ಹೇಳಿ, ತನ್ನ ನಿಜವಾದ ಚತುರ್ಭುಜ ರೂಪವನ್ನು ತೋರಿದನು ಮತ್ತು ಕಟ್ಟಕಡೆಗೆ ತನ್ನ ಎರಡು ಕೈಗಳ ರೂಪವನ್ನು ತೋರಿ ಭಯಗೊಂಡಿದ್ದ ಅರ್ಜುನನಿಗೆ ಧೈರ್ಯವನ್ನು ಕೊಟ್ಟನು.
ಭಾವಾರ್ಥ: ಕೃಷ್ಣನು ವಸುದೇವ-ದೇವಕಿಯರ ಮಗನಾಗಿ ಕಾಣಿಸಿಕೊಂಡಾಗ ಮೊದಲು ನಾಲ್ಕು ಕೈಗಳ ನಾರಾಯಣನಾಗಿ ಕಾಣಿಸಿಕೊಂಡ. ತನ್ನ ತಂದೆ ತಾಯಿಗಳ ಪ್ರಾರ್ಥನೆಯಂತೆ ಸಾಮಾನ್ಯ ಮಗುವಿನ ರೂಪವನ್ನು ತಳೆದ. ಹೀಗೆಯೇ, ಅರ್ಜುನನಿಗೆ ಚತುರ್ಭುಜ ರೂಪವನ್ನು ಕಾಣುವ ಆಸಕ್ತಿ ಇರಲಿಲ್ಲ ಎಂದು ಕೃಷ್ಣನಿಗೆ ತಿಳಿದಿತ್ತು. ಆದರೆ ಅರ್ಜುನನು ಚತುರ್ಭುಜ ರೂಪವನ್ನು ಕಾಣಬೇಕೆಂದು ಕೇಳಿಕೊಂಡದ್ದರಿಂದ, ಕೃಷ್ಣನು ಅವನಿಗೆ ಮತ್ತೆ ಈ ರೂಪವನ್ನು ತೋರಿಸಿ ಅನಂತರ ತನ್ನ ಎರಡು ಕೈಗಳ ರೂಪದಲ್ಲಿ ಕಾಣಿಸಿಕೊಂಡ. ಸೌಮ್ಯವಪುಃ ಎನ್ನುವ ಮಾತು ಬಹು ಅರ್ಥವತ್ತಾದದ್ದು. ಸೌಮ್ಯವಪುಃ ಎಂದರೆ ಬಹು ಸುಂದರ ರೂಪ; ಇದು ಅತ್ಯಂತ ಮೋಹಕ ರೂಪ ಎಂದು ಪ್ರಸಿದ್ದಿ. ಕೃಷ್ಣನಿದ್ದಲ್ಲಿ ಪ್ರತಿಯೊಬ್ಬರೂ ಅವನ ರೂಪದಿಂದಲೇ ಆಕರ್ಷಿತರಾಗುತ್ತಿದ್ದರು. ಕೃಷ್ಣನು ವಿಶ್ವದ ಸೂತ್ರಧಾರಿಯಾದದ್ದರಿಂದ ಆತನು ತನ್ನ ಭಕ್ತನಾದ ಅರ್ಜುನನ ಭಯವನ್ನು ತೊಡೆದು ಹಾಕಿದನು ಮತ್ತು ಅವನಿಗೆ ಮತ್ತೆ ಕೃಷ್ಣನ ಸುಂದರ ರೂಪವನ್ನೂ ತೋರಿದನು. ಬ್ರಹ್ಮಸಂಹಿತೆಯಲ್ಲಿ ಪ್ರೇಮಾಂಜನಚ್ಛುರಿತ ಭಕ್ತಿ ವಿಲೋಚನೇನ - ಯಾರ ಕಣ್ಣುಗಳಿಗೆ ಪ್ರೇಮದ ಅಂಜನವನ್ನು ಹಚ್ಚಿದೆಯೋ, ಅವರು ಮಾತ್ರ ಶ್ರೀಕೃಷ್ಣನ ಸುಂದರ ರೂಪವನ್ನು ಕಾಣಬಲ್ಲರು ಎಂದು ಹೇಳಿದೆ.
(ಗಮನಿಸಿ: ಈ ಬರಹವು 'ಗೀತೋಪನಿಷದ್ ಭಗವದ್ಗೀತಾ ಯಥಾರೂಪ' ಪುಸ್ತಕದಲ್ಲಿರುವ ಮಾಹಿತಿಯನ್ನು ಆಧರಿಸಿದೆ. ಸಮಕಾಲೀನ ವಿಚಾರಗಳಿಗೆ ಅನ್ವಯಿಸಲು ಅರ್ಥದಲ್ಲಿ ತುಸು ವಿವರ ನೀಡಲಾಗಿದೆ. ಸಂದಿಗ್ಧ ಬಂದರೆ ಓದುಗರು ಮೂಲ ಪುಸ್ತಕವನ್ನೇ ಆಧರಿಸಿ, ಅನ್ವಯಿಸಿಕೊಳ್ಳಬೇಕು.)
