Bhagavad Gita: ಯಾವ ರೀತಿ ಕೆಲಸ ಮಾಡಿದರೆ ಯಶಸ್ಸು ಸಿಗುತ್ತೆ: ಭಗವದ್ಗೀತೆಯ ಈ ಉಪದೇಶದಲ್ಲಿನ ಸುಲಭ ಮಾರ್ಗ ಅನುಸರಿಸಿ
Bhagavad Gita: ಭಗವದ್ಗೀತೆಯ ಬೋಧನೆಗಳು ಯಾವುದೇ ದುರಾಸೆ ಅಥವಾ ಸ್ವಾರ್ಥವಿಲ್ಲದೆ ಬದುಕುವ ಕಲೆಯನ್ನು ಮನುಷ್ಯನಿಗೆ ಕಲಿಸುತ್ತವೆ. ಮನುಷ್ಯ ಯಾವುದನ್ನು ಅರ್ಥಮಾಡಿಕೊಂಡರೆ ಜೀವನದಲ್ಲಿ ಯಶಸ್ಸುಗಳಿಸಬಹುದು ಎಂಬುದು ಭಗವದ್ಗೀತೆಯ ಈ ಉಪದೇಶಗಳಲ್ಲಿದೆ.

ಭಗವದ್ಗೀತೆಯನ್ನು ಹಿಂದೂ ಧರ್ಮದ ಅತ್ಯುತ್ತಮ ಗ್ರಂಥಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಇದು ಜೀವನ, ಧರ್ಮ, ಕರ್ಮ, ಯೋಗ, ಭಕ್ತಿ ಮತ್ತು ಆತ್ಮಸಾಕ್ಷಾತ್ಕಾರದ ಬೋಧನೆಗಳನ್ನು ಒಳಗೊಂಡಿದೆ. ಜೀವನದ ವಿವಿಧ ಅಂಶಗಳನ್ನು ವಿವರಿಸಲು ಸಹಾಯ ಮಾಡುತ್ತದೆ. ಭಗವದ್ಗೀತೆಯಲ್ಲಿ ಹೇಳಿರುವ ಬೋಧನೆಗಳನ್ನು ಅನುಸರಿಸುವ ವ್ಯಕ್ತಿಯು ತನ್ನ ಜೀವನವನ್ನು ಉನ್ನತ ಉದ್ದೇಶ ಮತ್ತು ಮಾರ್ಗದರ್ಶನದೊಂದಿಗೆ ಬದುಕಲು ಕಲಿಯುತ್ತಾನೆ. ಮನುಷ್ಯನಿಗೆ ಯಾವುದೇ ದುರಾಸೆ ಅಥವಾ ಸ್ವಾರ್ಥವಿಲ್ಲದೆ ಬದುಕುವ ಕಲೆಯನ್ನು ಕಲಿಸುತ್ತದೆ. ಭಗವದ್ಗೀತೆಯನ್ನು ಸರಿಯಾಗಿ ಅರ್ಥಮಾಡಿಕೊಂಡರೆ ವ್ಯಕ್ತಿಯ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ. ಇದಲ್ಲದೆ, ಯಾವುದೇ ರೀತಿಯ ಕಷ್ಟಕರವಾದ ಕೆಲಸವನ್ನು ಸುಲಭವಾಗಿ ನಿರ್ವಹಿಸಲು ಸಹಾಯ ಮಾಡುತ್ತದೆ. ಒಟ್ಟಾರೆಯಾಗಿ ಭಗವದ್ಗೀತೆಯು ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿಯೂ ಜೀವನವನ್ನು ಸರಿಯಾಗಿ ನಡೆಸಲು ಸಹಾಯ ಮಾಡುತ್ತದೆ. ಕಠಿಣ ಪರಿಸ್ಥಿತಿಗಳನ್ನು ದಾಟಿ ಜಯಶಾಲಿಗಳಾಗಲು ಶ್ರೀಕೃಷ್ಣನು ಗೀತೆಯಲ್ಲಿ ಹೇಳಿರುವ ಸಂದೇಶಗಳೇನು ಎಂಬುದನ್ನು ತಿಳಿದುಕೊಳ್ಳೋಣ.
ಒಟ್ಟಿಗೆ ಕೆಲಸ ಮಾಡಿ
ಭಗವದ್ಗೀತೆಯ ಪ್ರಕಾರ, ಯಾವುದೇ ಕಾರ್ಯದಲ್ಲಿ ಸಂಪೂರ್ಣವಾಗಿ ಯಶಸ್ಸನ್ನು ಸಾಧಿಸಲು, ಒಟ್ಟಿಗೆ ಕೆಲಸ ಮಾಡುವುದು ಬಹಳ ಮುಖ್ಯ. ಅಂದರೆ ಒಗ್ಗಟ್ಟಿನಲ್ಲಿ ಬಲವಿದೆ ಎಂಬ ಮಾತನ್ನು ಗೀತೆಯು ಹೇಳುತ್ತದೆ. ಮಹಾಭಾರತದಲ್ಲಿ ಕೌರವರು ಪಾಂಡವರಿಗಿಂತ ದೊಡ್ಡ ಸೈನ್ಯವನ್ನು ಹೊಂದಿದ್ದರು. ಆದರೆ ಅವರ ಸೈನ್ಯದಲ್ಲಿ ಒಗ್ಗಟ್ಟಿನ ಕೊರತೆಯಿತ್ತು. ಹಾಗಾಗಿ ಕಡಿಮೆ ಸೈನ್ಯವನ್ನು ಹೊಂದಿದ್ದರೂ ಪಾಂಡವರು ಯುದ್ಧದಲ್ಲಿ ಜಯಶಾಲಿಗಳಾದರು. ಆದ್ದರಿಂದ ಟೀಮ್ ವರ್ಕ್‌ನಂತಹ ಪರಿಸ್ಥಿತಿಯಲ್ಲಿ ಎಲ್ಲರೂ ಒಗ್ಗಟ್ಟನ್ನು ಹೊಂದಿರುವುದು ಬಹಳ ಮುಖ್ಯವಾಗಿದೆ.
ಜವಾಬ್ದಾರಿಯನ್ನು ಸರಿಯಾಗಿ ಅರ್ಥಮಾಡಿಕೊಳ್ಳಿ
ಭಗವದ್ಗೀತೆಯ ಪ್ರಕಾರ, ಯಾವುದೇ ಕೆಲಸವಿರಬಹುದು ಅದರಲ್ಲಿ ಯಶಸ್ಸನ್ನು ಗಳಿಸಲು ಯಾರಾದರೂ ಒಬ್ಬರು ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು. ಆ ಜವಾಬ್ದಾರಿಗೆ ಧಕ್ಕೆ ಬರದಂತೆ ಕೆಲಸವನ್ನು ನಿರ್ವಹಿಸಬೇಕು. ಕೆಲಸದ ಜವಾಬ್ದಾರಿಯನ್ನು ಅರ್ಥಮಾಡಿಕೊಂಡ ವ್ಯಕ್ತಿಯು ಒಂದು ದಿನ ಖಂಡಿತವಾಗಿಯೂ ಯಶಸ್ಸನ್ನು ಪಡೆಯುತ್ತಾನೆ. ಮಹಾಭಾರತದ ಕಥೆಯನ್ನು ಉದಾಹರಣೆಯಾಗಿರಿಸಿಕೊಂಡರೆ, ಕೌರವರಲ್ಲಿ ಅನೇಕ ಮಹಾನ್ ಯೋಧರಿದ್ದರು. ಆದರೆ ಯಾರು ಯಾವ ಕೆಲಸವನ್ನು ನಿರ್ವಹಿಸಬೇಕು ಎಂಬುದರ ಬಗ್ಗೆ ಅವರಲ್ಲಿ ಸಂಶಯವಿತ್ತು. ನಾಯಕನ ಜವಾಬ್ದಾರಿಗಳೇನು ಎಂಬುದು ಸ್ಪಷ್ಟವಾಗಿರಲಿಲ್ಲ. ಆದರೆ ಪಾಂಡವರಲ್ಲಿ ಪ್ರತಿಯೊಬ್ಬರೂ ಅವರ ಜವಾಬ್ದಾರಿಗಳು ಸರಿಯಾಗಿ ಅರಿತುಕೊಂಡಿದ್ದರು. ಅದರಿಂದ ಪಾಂಡವರು ಜಯಶಾಲಿಗಳಾದರು.
ಗುರಿ ಇಟ್ಟುಕೊಂಡು ಕೆಲಸ ಮಾಡಿ
ಮನುಷ್ಯ ತನ್ನ ಜೀವನದಲ್ಲಿ ಒಂದು ಗುರಿಯನ್ನು ಹೊಂದಿರಬೇಕು. ಅದನ್ನು ಸಾಧಿಸಲು ನಿರಂತಹ ಶ್ರಮವಹಿಸಬೇಕು ಎಂದು ಶ್ರೀಕೃಷ್ಣನು ಹೇಳುತ್ತಾನೆ. ವ್ಯಕ್ತಿಯ ಮನಸ್ಸು ಗುರಿಯತ್ತ ಕೇಂದ್ರೀಕೃತವಾಗಿದ್ದರೆ ಮುಂದೊಂದು ದಿನ ಯಶಸ್ಸು ಅವನಿಗೆ ಖಂಡಿತ ಒಲಿಯುತ್ತದೆ. ಗುರಿ ಮತ್ತು ಯೋಜನೆ ಸರಿಯಾಗಿದ್ದರೆ ಆ ವ್ಯಕ್ತಿಯು ಎಂದೂ ಸೋಲನ್ನು ಅನುಭವಿಸುವುದಿಲ್ಲ.
ಸಮಯವನ್ನು ಬುದ್ದಿವಂತಿಕೆಯಿಂದ ಬಳಸಿ
ಸಮಯವು ತುಂಬಾ ಶಕ್ತಿಯುತವಾಗಿದೆ. ಸಮಯವನ್ನು ಗೌರವಿಸುವ ವ್ಯಕ್ತಿಯು ತಾನು ಬಯಸಿದ ಕೆಲಸದಲ್ಲಿ ಯಶಸ್ಸನ್ನು ಪಡೆಯುತ್ತಾನೆ. ಸಮಯ ಕಳೆದರೆ ಯಾವ ಕೆಲಸವೂ ಆಗುವುದಿಲ್ಲ. ಸರಿಯಾದ ಸಮಯಕ್ಕೆ ಭಗವದ್ಗೀತೆಯನ್ನು ಉಪದೇಶಿಸುವ ಮೂಲಕ ಶ್ರೀಕೃಷ್ಣನು ಅರ್ಜುನನನ್ನು ಯುದ್ಧಭೂಮಿಯಲ್ಲಿ ಯುದ್ಧಕ್ಕೆ ಸಿದ್ಧಪಡಿಸಿದನು. ಆದ್ದರಿಂದ ಸಮಯವನ್ನು ಗೌರವಿಸಿ.
ಒಳ್ಳೆಯ ಉದ್ದೇಶ ಇಟ್ಟುಕೊಳ್ಳಿ
ಯಾರ ಆಲೋಚನೆಗಳು ಮತ್ತು ಉದ್ದೇಶಗಳು ಒಳ್ಳೆಯದಾಗಿದೆಯೋ, ದೇವರು ಸ್ವತಃ ಯಾವುದಾದರೂ ಒಂದು ರೂಪದಲ್ಲಿ ಅವನ ಸಹಾಯಕ್ಕೆ ಬರುತ್ತಾನೆ ಎಂದು ಗೀತೆ ಹೇಳುತ್ತದೆ. ಆದ್ದರಿಂದ ಸದಾ ಸತ್ಕಾರ್ಯಗಳನ್ನು ಮಾಡುವತ್ತ ಗಮನ ಹರಿಸಬೇಕು.
(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟಿಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.)
