Bhagavad Gita: ಐಹಿಕ ಚಟುವಟಿಕೆಯಲ್ಲಿ ಭಗವಂತನು ಸದಾ ನಿರ್ಲಿಪ್ತನಾಗಿರುತ್ತಾನೆ: ಭಗವದ್ಗೀತೆಯ ಈ ಶ್ಲೋಕಗಳ ಅರ್ಥ ತಿಳಿಯಿರಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ಐಹಿಕ ಚಟುವಟಿಕೆಯಲ್ಲಿ ಭಗವಂತನು ಸದಾ ನಿರ್ಲಿಪ್ತನಾಗಿರುತ್ತಾನೆ: ಭಗವದ್ಗೀತೆಯ ಈ ಶ್ಲೋಕಗಳ ಅರ್ಥ ತಿಳಿಯಿರಿ

Bhagavad Gita: ಐಹಿಕ ಚಟುವಟಿಕೆಯಲ್ಲಿ ಭಗವಂತನು ಸದಾ ನಿರ್ಲಿಪ್ತನಾಗಿರುತ್ತಾನೆ: ಭಗವದ್ಗೀತೆಯ ಈ ಶ್ಲೋಕಗಳ ಅರ್ಥ ತಿಳಿಯಿರಿ

Bhagavad Gita Upadesh: ಭಗವಂತನು ಈ ಜಗತ್ತಿನಲ್ಲಿ ನಡೆಯುವ ಐಹಿಕ ಚಟುವಟಿಕೆಯಲ್ಲಿ ಸದಾ ತಟಸ್ಥನಾಗಿರುತ್ತಾನೆ ಎಂಬುದರ ಅರ್ಥವನ್ನು ಭಗವದ್ಗೀತೆಯ 9 ನೇ ಅಧ್ಯಾಯ, ಶ್ಲೋಕ 9 ಮತ್ತು 10 ರಲ್ಲಿ ವಿವರಿಸಲಾಗಿದೆ.

ಭಗವದ್ಗೀತೆ
ಭಗವದ್ಗೀತೆ

ಅಧ್ಯಾಯ - 9: ರಹಸ್ಯತಮ ಜ್ಞಾನ - ಶ್ಲೋಕ - 9

ನ ಚ ಮಾಂ ತಾನಿ ಕರ್ಮಾಣಿ ನಿಬಧ್ನಿನ್ತಿ ಧನಞ್ಜಯ |
ಉದಾಸೀನವದಾಸೀನಮಸಕ್ತಂ ತೇಷು ಕರ್ಮಸು || 9 ||

ಅರ್ಥ: ಧನಂಜಯನೆ, ಈ ಎಲ್ಲ ಕಾರ್ಯವು ನನ್ನನ್ನು ಬಂಧಿಸುವುದಿಲ್ಲ. ನಾನು ತಟಸ್ಥನಂತೆ ಕುಳಿತಿದ್ದು ಈ ಎಲ್ಲ ಐಹಿಕ ಚಟುವಟಿಕೆಗಳ ಬಗ್ಗೆ ನಿರ್ಲಿಪ್ತನಾಗಿರುತ್ತೇನೆ.

ಭಾವಾರ್ಥ: ಭಗವಂತನಿಗೆ ಯಾವ ಕೆಲಸವೂ ಇಲ್ಲ ಎಂಬುದು ಈ ಶ್ಲೋಕದ ಅರ್ಥವಲ್ಲ. ಪರಮಾತ್ಮನ ದಿವ್ಯಜಗತ್ತಿನಲ್ಲಿ ಅವನು ಸದಾ ಕಾರ್ಯತತ್ಪರನಾಗಿರುತ್ತಾನೆ. ಆತನು ಯಾವಾಗಲೂ ತನ್ನ ಶಾಶ್ವತವಾದ, ಆನಂದಮಯವಾದ, ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ತೊಡಗಿರುತ್ತಾನೆ. ಆದರೆ ಈ ಐಹಿಕ ಚಟುವಟಿಕೆಗಳಿಗೂ ಅವನಿಗೂ ಯಾವುದೇ ಸಂಬಂಧವಿಲ್ಲ. ಐಹಿಕ ಚಟುವಟಿಕೆಗಳನ್ನು ಅವನ ಬೇರೆ ಬೇರೆ ಶಕ್ತಿಗಳು ನಡೆಸಿಕೊಂಡು ಹೋಗುತ್ತವೆ. ಜಗತ್ತಿನ ಐಹಿಕ ಕ್ರಿಯೆಗಳ ವಿಷಯದಲ್ಲಿ ಪ್ರಭುವು ಯಾವಾಗಲೂ ತಟಸ್ಥನು. ಅದನ್ನು ಇಲ್ಲಿ ಉದಾಸೀನವತ್ ಎನ್ನುವ ಪದದಿಂದ ಹೇಳಿದೆ. ಅವನಿಗೆ ಐಹಿಕ ಕ್ರಿಯೆಗಳ ಪ್ರತಿಯೊಂದು ವಿವರದ ಮೇಲೂ ಹತೋಟಿಯಿದೆ. ಆದರೂ ತಟಸ್ಥನಂತೆ ಕುಳಿತಿರುತ್ತಾನೆ. ತನ್ನ ಆಸನದಲ್ಲಿ ಕುಳಿತಿರುವ ಉಚ್ಚ ನ್ಯಾಯಾಲಯದ ನ್ಯಾಯಾಧೀಶನ ನಿದರ್ಶನವನ್ನು ಇಲ್ಲಿ ಕೊಡಬಹುದು. ಅವನ ಆಜ್ಞೆಯಂತೆ ಎಷ್ಟೋ ಸಂಗತಿಗಳು ನಡೆಯುತ್ತವೆ.

ಯಾರನ್ನೋ ನೇಣುಹಾಕುತ್ತಿರುತ್ತಾರೆ, ಇನ್ಯಾರನ್ನೋ ಸೆರೆಮನೆಗೆ ಕಳಿಸುತ್ತಾರೆ, ಮತ್ತೊಬ್ಬರಿಗೆ ಅಪಾರ ಧನವನ್ನು ಕೊಡುತ್ತಾರೆ. ಆದರೆ ನ್ಯಾಯಾಧೀಶನರು ತಟಸ್ಥರಾಗಿರುತ್ತಾರೆ. ಈ ಲಾಭನಷ್ಟಗಳಿಗೂ ಅವನಿಗೂ ಯಾವುದೇ ಸಂಬಂಧವಿಲ್ಲ. ಹೀಗೆಯೇ ಪ್ರತಿಯೊಂದು ಕ್ರಿಯೆಯಲ್ಲೂ ಭಗವಂತನ ಕೈಯಿದ್ದರೂ ಅವನು ಸದಾ ತಟಸ್ಥ. ಪರಮಾತ್ಮನು ಐಹಿಕ ಜಗತ್ತಿನ ದ್ವಂದ್ವಗಳಲ್ಲಿ ಸಿಲುಕಿಲ್ಲ. ಈ ಐಹಿಕ ಜಗತ್ತಿನ ಸೃಷ್ಟಿ ಮತ್ತು ನಾಶಗಳ ವಿಷಯದಲ್ಲಿ ನಿರ್ಲಿಪ್ತನು. ಜೀವಿಗಳು ತಮ್ಮ ಹಿಂದಿನ ಕ್ರಿಯೆಗಳಿಗೆ ಅನುಗುಣವಾಗಿ ವಿವಿಧ ಜೀವವರ್ಗಗಳಲ್ಲಿ ಬೇರೆ ಬೇರೆ ರೂಪಗಳನ್ನು ಪಡೆಯುತ್ತಾರೆ. ಭಗವಂತನು ಆ ವಿಷಯಗಳಲ್ಲಿ ಕೈ ಹಾಕುವುದಿಲ್ಲ.

ಅಧ್ಯಾಯ - 9, ರಹಸ್ಯತಮ ಜ್ಞಾನ, ಶ್ಲೋಕ -10

ಮಯಾಧ್ಯಕ್ಷೇಣ ಪ್ರಕೃತಿಃ ಸೂಯತೇ ಸಚರಾಚರಮ್ |
ಹೇತುನಾನೇನ ಕೌನ್ಸೆಯ ಜಗದ್ ವಿಪರಿವರ್ತತೇ || 10 ||

ಅರ್ಥ: ಕುಂತಿಯ ಮಗನಾದ ಅರ್ಜುನನೆ, ನನ್ನ ಶಕ್ತಿಗಳಲ್ಲಿ ಒಂದಾದ ಈ ಐಹಿಕ ಪ್ರಕೃತಿಯು ಎಲ್ಲ ಚರಾಚರ ವಸ್ತುಗಳನ್ನು ನನ್ನ ಅಪ್ಪಣೆಯಂತೆ ಸೃಷ್ಟಿಸಿ ಕೆಲಸ ಮಾಡುತ್ತದೆ. ಈ ಅಭಿವ್ಯಕ್ತಿಯು ಅದರ ನಿಯಮಕ್ಕೆ ಅನುಗುಣವಾಗಿ ಮತ್ತೆ ಮತ್ತೆ ಸೃಷ್ಟಿಯಾಗುತ್ತದೆ ಮತ್ತು ನಾಶವಾಗುತ್ತದೆ.

ಭಾವಾರ್ಥ: ಪರಮಾತ್ಮನು ಐಹಿಕ ಜಗತ್ತಿನ ಎಲ್ಲ ಚಟುವಟಿಕೆಗಳಿಂದ ದೂರವಾಗಿದ್ದರೂ ಅದರ ಪರಮ ನಿರ್ದೇಶಕನಾಗಿ ಉಳಿಯುತ್ತಾನೆ ಎನ್ನುವುದನ್ನು ಇಲ್ಲಿ ಸ್ಪಷ್ಟವಾಗಿ ಹೇಳಿದೆ. ಪರಮ ಪ್ರಭುವೇ ಪರಮ ಸಂಕಲ್ಪ ಮತ್ತು ಈ ಐಹಿಕ ಅಭಿವ್ಯಕ್ತಿಯ ಹಿನ್ನೆಲೆ. ಆದರೆ ಐಹಿಕ ಪ್ರಕೃತಿಯು ಇದನ್ನು ನಿರ್ವಹಿಸುತ್ತದೆ. ಭಗವದ್ಗೀತೆಯಲ್ಲಿ ಕೃಷ್ಣನೂ, ಬೇರೆ ಬೇರೆ ರೂಪಗಳಲ್ಲಿ ಜನಿಸುವ ಜೀವಿಗಳಿಗೆಲ್ಲ "ನಾನೇ ತಂದೆ" ಎಂದು ಹೇಳುತ್ತಾನೆ. ತಂದೆಯು ಮಗುವಿನ ಜನನಕ್ಕಾಗಿ ತಾಯಿಯ ಗರ್ಭಕ್ಕೆ ಬೀಜವನ್ನು ನೀಡುತ್ತಾನೆ. ಇದೇ ರೀತಿಯಲ್ಲಿ ಭಗವಂತನು ತನ್ನ ಕಡೆಗಣ್ಣಿನ ನೋಟ ಮಾತ್ರದಿಂದಲೇ ಐಹಿಕ ಪ್ರಕೃತಿಯ ಗರ್ಭದೊಳಗೆ ಎಲ್ಲ ಜೀವಿಗಳನ್ನೂ ಸೇರಿಸುತ್ತಾನೆ. ಅವರು ತಮ್ಮ ಹಿಂದಿನ ಆಸೆಗಳು ಮತ್ತು ಚಟುವಟಿಕೆಗಳು ಇವುಗಳಿಗೆ ಅನುಗುಣವಾಗಿ ಹೊರಕ್ಕೆ ಬರುತ್ತಾರೆ. ಈ ಎಲ್ಲ ಜೀವಿಗಳೂ ಪ್ರಭುವಿನ ಕಡೆಗಣ್ಣ ನೋಟದಲ್ಲಿ ಜನಿಸಿದ್ದರೂ ತಮ್ಮ ಹಿಂದಿನ ಕಾರ್ಯಗಳಿಗೆ ಮತ್ತು ಆಸೆಗಳಿಗೆ ಅನುಗುಣವಾಗಿ ಬೇರೆ ಬೇರೆ ದೇಹಗಳನ್ನು ಪಡೆಯುತ್ತಾರೆ. ಆದುದರಿಂದ ಪ್ರಭುವು ಈ ಐಹಿಕ ಸೃಷ್ಟಿಯಲ್ಲಿ ನೇರವಾಗಿ ಆಸಕ್ತನಲ್ಲ. ಆತನು ಐಹಿಕ ಪ್ರಕೃತಿಯತ್ತ ಕಣ್ಣೋಟ ಬೀರುತ್ತಾನೆ ಅಷ್ಟೇ. ಇದರಿಂದ ಐಹಿಕ ಪ್ರಕೃತಿಯು ಚುರುಕಾಗುತ್ತದೆ ಮತ್ತು ಕೂಡಲೇ ಎಲ್ಲವೂ ಸೃಷ್ಟಿಯಾಗುತ್ತವೆ.

ಐಹಿಕ ಪ್ರಕೃತಿಯತ್ತ ಕಣ್ಣೋಟ ಬೀರುವುದರಿಂದ ಪರಮ ಪ್ರಭುವು ನಿಶ್ಚಯವಾಗಿಯೂ ಚಟುವಟಿಕೆಯನ್ನು ತೋರಿಸುತ್ತಾನೆ. ಆದರೆ ಐಹಿಕ ಜಗತ್ತಿನ ಅಭಿವ್ಯಕ್ತಿಗೂ ಆತನಿಗೂ ನೇರವಾದ ಸಂಬಂಧವಿಲ್ಲ. ಸ್ಮೃತಿಯಲ್ಲಿ ಈ ಉದಾಹರಣೆಯನ್ನು ಕೊಟ್ಟಿದೆ. ಯಾರ ಮುಂದಾದರೂ ಒಂದು ಸುಗಂಧವಿರುವ ಹೂವಿದ್ದರೆ ಆತನ ಪ್ರಾಣಶಕ್ತಿಯನ್ನು ಸುಗಂಧವು ಸ್ಪರ್ಶಿಸುತ್ತದೆ. ಆದರೆ ಫ್ರಾಣವೂ ಹೂವೂ ಒಂದರಿಂದ ಇನ್ನೊಂದು ಬೇರೆಯಾಗಿರುತ್ತದೆ. ಐಹಿಕ ಜಗತ್ತಿಗೂ ದೇವೋತ್ತಮ ಪರಮ ಪುರುಷನಿಗೂ ಇಂತಹುದೇ ಸಂಬಂಧವಿದೆ. ವಾಸ್ತವವಾಗಿ ಆತನಿಗೆ ಈ ಐಹಿಕ ಜಗತ್ತಿನೊಡನೆ ಸಂಬಂಧವಿಲ್ಲ. ಆದರೆ ತನ್ನ ಕಣ್ಣೋಟದಿಂದ ಸೃಷ್ಟಿಮಾಡಿ ಜಗನ್ನಿಯಾಮಕನಾಗುತ್ತಾನೆ. ಸಂಗ್ರಹವಾಗಿ ಹೇಳಬೇಕೆಂದರೆ ದೇವೋತ್ತಮ ಪರಮ ಪುರುಷನ ಮೇಲ್ವಿಚಾರಣೆಯಿಲ್ಲದೆ ಐಹಿಕ ಪ್ರಕೃತಿಯು ಏನನ್ನೂ ಮಾಡಲಾರದು. ಆದರೂ ಪರಮ ಪುರುಷನು ಎಲ್ಲ ಐಹಿಕ ಚಟುವಟಿಕೆಗಳಿಂದ ದೂರವಾಗಿರುತ್ತಾನೆ.

(ಗಮನಿಸಿ: ಈ ಬರಹವು ಗೀತೋಪನಿಷದ್‌ ಭಗವದ್ಗೀತಾ ಯಥಾರೂಪ ಮಾಹಿತಿಯನ್ನು ಆಧರಿಸಿದೆ. ಈ ವಿಚಾರವನ್ನು ನಂಬುವ ಮೊದಲು ಪರಿಶೀಲಿಸಿ.)

Raghavendra M Y

TwittereMail
ರಾಘವೇಂದ್ರ ಎಂ.ವೈ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್ ಪ್ರೊಡ್ಯೂಸರ್. ರಾಶಿ ಭವಿಷ್ಯ (ಧರ್ಮ) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ, ಉದಯ ನ್ಯೂಸ್, ದಿಗ್ವಿಜಯ ನ್ಯೂಸ್, ಫಸ್ಟ್ ನ್ಯೂಸ್, ಡಿಡಿ ಚಂದನ ನ್ಯೂಸ್, ಈ-ಟಿವಿ ಭಾರತದಲ್ಲಿ ಬುಲೆಟಿನ್ ಪ್ರೊಡ್ಯೂಸರ್ ಸೇರಿ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಅನುಭವ. ಪುಸ್ತಕ, ಪತ್ರಿಕೆ ಓದುವುದು ಇಷ್ಟ. ವಾಣಿಜ್ಯ, ಕ್ರಿಕೆಟ್, ಗ್ರಾಮೀಣ ವಿದ್ಯಮಾನಗಳ ಬಗ್ಗೆ ಇಷ್ಟಪಟ್ಟು ಬರೆಯುತ್ತಾರೆ. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಿರುಪನಹಳ್ಳಿ ಇವರ ಸ್ವಂತ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.