ಸಂತೋಷದ ಮೂಲ ಯಾವುದು? ಶಾಶ್ವತ ಸಂತೋಷಕ್ಕಾಗಿ ಭಗವದ್ಗೀತೆಯ ಈ ಉಪದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಸಂತೋಷದ ಮೂಲ ಯಾವುದು? ಶಾಶ್ವತ ಸಂತೋಷಕ್ಕಾಗಿ ಭಗವದ್ಗೀತೆಯ ಈ ಉಪದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ

ಸಂತೋಷದ ಮೂಲ ಯಾವುದು? ಶಾಶ್ವತ ಸಂತೋಷಕ್ಕಾಗಿ ಭಗವದ್ಗೀತೆಯ ಈ ಉಪದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ

Bhagavad Gita: ಇಡೀ ಭಗವದ್ಗೀತೆಯೇ ಜ್ಞಾನದ ಮೂಲವಾಗಿದೆ. ಶ್ರೀಕೃಷ್ಣನು ಜೀವನಕ್ಕೆ ಬೇಕಾದ ಪ್ರಾಯೋಗಿಕ ಮಾರ್ಗವನ್ನು ಅದರಲ್ಲಿ ನೀಡಿದ್ದಾನೆ. ಗೀತೆಯ ಪ್ರಕಾರ ನೀವು ಸಂತೋಷವನ್ನು ಈ ರೀತಿಯಾಗಿ ಹುಡುಕಿಕೊಂಡರೆ ಅದು ಶಾಶ್ವತವಾಗಿ ನಿಮ್ಮೊಂದಿಗೆ ಇರುತ್ತದೆ ಎಂದು ಹೇಳಲಾಗಿದೆ. (ಬರಹ: ಅರ್ಚನಾ ವಿ. ಭಟ್)

ಸಂತೋಷದ ಮೂಲ ಯಾವುದು? ಶಾಶ್ವತ ಸಂತೋಷಕ್ಕಾಗಿ ಭಗವದ್ಗೀತೆಯ ಈ ಉಪದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ
ಸಂತೋಷದ ಮೂಲ ಯಾವುದು? ಶಾಶ್ವತ ಸಂತೋಷಕ್ಕಾಗಿ ಭಗವದ್ಗೀತೆಯ ಈ ಉಪದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ (PC: HT File Photo)

ಮೊದಲ ಬಾರಿಗೆ ಭಗವದ್ಗೀತೆಯನ್ನು ಓದಿದಾಗ ಅಥವಾ ಕೇಳಿದಾಗ, ‌ಅದು ಶ್ರೀಕೃಷ್ಣ ಮತ್ತು ಅರ್ಜುನನ ನಡುವಿನ ಸಂಭಾಷಣೆ ಎಂದು ಅನಿಸುತ್ತದೆ. ಅದನ್ನೇ ಹಲವು ಬಾರಿ ಓದಿದಾಗ ಅಥವಾ ಅದರಲ್ಲಿರುವ ಆಳವಾದ ಅರ್ಥಗಳನ್ನು ತಿಳಿಯಲು ಪ್ರಯತ್ನಿಸಿದಾಗ ನಿಮ್ಮ ಮನಸ್ಸಿನಲ್ಲಿ ಅನೇಕ ಪ್ರಶ್ನೆಗಳು ಉದ್ಭವಿಸಲು ಪ್ರಾರಂಭಿಸುತ್ತವೆ. ನೀವು ಅದನ್ನು ಧ್ಯಾನಿಸಲು ಮತ್ತು ಅದರ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಪ್ರಾರಂಭಿಸುತ್ತೀರಿ. ಸಂಪೂರ್ಣ ಶ್ರೀಮದ್ ಭಗವದ್ಗೀತೆಯು ಜ್ಞಾನದ ಮೂಲವಾಗಿದೆ. ಆದರೆ, ಜನರು ಅವರವರ ಅಗತ್ಯಗಳಿಗೆ ಅನುಗುಣವಾಗಿ ಅದರಲ್ಲಿರುವ ಕೆಲವು ಅಧ್ಯಾಯಗಳನ್ನು ಮಾತ್ರ ಓದುತ್ತಾರೆ. ಕೆಲವರು ಗೀತೆಯ 18 ನೇ ಅಧ್ಯಾಯವನ್ನು ಮುಖ್ಯವೆಂದು ಪರಿಗಣಿಸುತ್ತಾರೆ ಏಕೆಂದರೆ ಅದು ಗೀತೆಯ ಎಲ್ಲಾ ಬೋಧನೆಗಳ ಸಾರವನ್ನು ಒಳಗೊಂಡಿದೆ. 18ನೇ ಅಧ್ಯಾಯವು 78 ಉಪದೇಶಗಳನ್ನು ಹೊಂದಿದೆ. ಈ ಅಧ್ಯಾಯವು ಹಿಂದಿನ ಎಲ್ಲಾ ಅಧ್ಯಾಯಗಳ ಸಾರಾಂಶವಾಗಿದೆ. ಆದ್ದರಿಂದ ಈ ಅಧ್ಯಾಯದಲ್ಲಿ ಸಂಪೂರ್ಣ ಗೀತೆಯನ್ನು ಅರಿಯಬಹುದಾಗಿದೆ. ಭಗವದ್ಗೀತೆಯಲ್ಲಿ ಮನುಷ್ಯನು ಹೇಗೆ ಜೀವಿಸಬೇಕು? ಮತ್ತು ಯಾವುದನ್ನು ಅನುಸರಿಸುವುದರಿಂದ ಅವನಿಗೆ ಸಂತೋಷ ಅಥವಾ ಆನಂದ ಪ್ರಾಪ್ತಿಯಾಗುತ್ತದೆ ಎಂಬುದನ್ನು ಹೇಳಲಾಗಿದೆ. ಹಾಗಾದರೆ ಶ್ರೀಕೃಷ್ಣನು ಸಂತೋಷವಾಗಿರಲು ಹೇಳಿರುವ ಮಾರ್ಗಗಳೇನು ಇಲ್ಲಿದೆ ಓದಿ.

ಶಾಶ್ವತ ಸಂತೋಷಕ್ಕಾಗಿ ಭಗವದ್ಗೀತೆಯಲ್ಲಿ ಹೇಳಿರುವ ಮಾರ್ಗಗಳು

- ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ವ್ಯವಸ್ಥಿತವಾಗಿ ಜೀವನವನ್ನು ನಡೆಸುವುದು ಹೇಗೆ ಎಂದು ಹೇಳಿದ್ದಾನೆ. ಮನುಷ್ಯನು ಪ್ರತಿಯೊಂದು ಜೀವಿಯ ಹೃದಯ ಅಥವಾ ಕೇಂದ್ರದಲ್ಲಿ ನೆಲೆಸಿರುವ ದೇವರಲ್ಲಿ ನಂಬಿಕೆಯನ್ನು ಹೊಂದಬೇಕು. ಪ್ರಪಂಚದ ಎಲ್ಲಾ ಆಚರಣೆಗಳನ್ನು ನಿಷ್ಠೆಯಿಂದ ಅನುಸರಿಸುವ ಮೂಲಕ ದೇವರ ಇರುವಿಕೆಯನ್ನು ಅನುಭವಿಸಬೇಕು. ಇದು ಜೀವನ, ಜ್ಞಾನ ಮತ್ತು ಸಂತೋಷದ ಮೂಲವಾಗಿದೆ.

- 'ಇಂದ್ರಿಯಗಳ ಗ್ರಹಿಕೆಗೆ ನಿಲುಕದದ್ದು, ಮನಸ್ಸಿನಿಂದ ಸಾಧಿಸಲಾಗದದ್ದು, ಅವಿನಾಶಿ ಮತ್ತು ಆತ್ಮಜ್ಞಾನ - ಆ ಆನಂದವೇ ಗುರಿಯಾಗಬೇಕು, ಮತ್ತು ಅದನ್ನು ಸಾಧಿಸಿದಾಗ, ಅದು ನಮ್ಮಿಂದ ದೂರವಾಗುವುದಿಲ್ಲ. ಇದೇ ಸತ್ಯ'. ಭಗವದ್ಗೀತೆಯ ಪ್ರಕಾರ, ಆನಂದವು ಕೇವಲ ಕ್ಷಣಿಕ ಭಾವನೆ ಅಥವಾ ಬಾಹ್ಯ ಅಂಶಗಳಿಗೆ ಸಂಬಂಧಪಟ್ಟದ್ದಲ್ಲ. ಅದು ಆಧ್ಯಾತ್ಮಿಕ ಸಂಪರ್ಕ ಸಾಧಿಸುವ, ಆಂತರಿಕ ಶಾಂತಿ, ತೃಪ್ತಿ ಮತ್ತು ಒಬ್ಬರ ನಿಜವಾದ ಉದ್ದೇಶಗಳೊಂದಿಗೆ ನಡೆಸುವ ಜೀವನವಾಗಿದೆ.

- ನಿಜವಾದ ಆನಂದವು ನಮ್ಮ ಆಳವಾದ ಮೌಲ್ಯಗಳು ಮತ್ತು ಆಕಾಂಕ್ಷೆಗಳಿಗೆ ಅನುಗುಣವಾಗಿ ಜೀವಿಸುವುದರಿಂದ ಬರುತ್ತದೆಯೇ ವಿನಃ ಸಂತೋಷವು ಪ್ರತ್ಯೇಕವಾಗಿ ಕಂಡುಬರುವುದಿಲ್ಲ. ಆದರೆ ಆ ಆನಂದವನ್ನು ನಮ್ಮ ಕ್ರಿಯೆಗಳು ಮತ್ತು ಸಂವಹನಗಳ ಮೂಲಕ ಇತರರೊಂದಿಗೆ ಹಂಚಿಕೊಳ್ಳಲಾಗುತ್ತದೆ.

- ಅತಿಯಾದ ಆರಾಮ ಮತ್ತು ಅತಿಯಾದ ಪ್ರೇಮವು ಮನುಷ್ಯನಿಗೆ ಹಾನಿಯನ್ನುಂಟು ಮಾಡುತ್ತದೆ ಎಂದು ಶ್ರೀಕೃಷ್ಣನು ಗೀತೆಯಲ್ಲಿ ಹೇಳುತ್ತಾನೆ. ಆದ್ದರಿಂದ, ಅತಿಯಾದ ಆರಾಮ ಮತ್ತು ಪ್ರೀತಿಯನ್ನು ತಪ್ಪಿಸಬೇಕು, ಇಲ್ಲದಿದ್ದರೆ ಅದು ಅವನ ಜೀವನವನ್ನು ಹಾಳುಮಾಡುತ್ತದೆ.

- ಸಮಯವು ಯಾವಾಗ ಮತ್ತು ಹೇಗೆ ಬದಲಾಗುತ್ತದೆ ಎಂದು ಯಾರಿಗೂ ತಿಳಿದಿಲ್ಲ. ಇಲ್ಲದಿದ್ದರೆ ಪಟ್ಟಾಭಿಷೇಕದ ಕೊನೆಯ ಘಳಿಗೆಯಲ್ಲಿದ್ದ ಶ್ರೀರಾಮನಿಗೆ ವನವಾಸ ಹೇಗೆ ಪ್ರಾಪ್ತಿಯಾಗುತ್ತಿತ್ತು? ಹಾಗಾಗಿ ಸಮಯಕ್ಕೆ ತಕ್ಕಂತೆ ನಂಬಿಕೆಯಿಂದ ಕೆಲಸ ಮಾಡಬೇಕು.

- ಮನುಷ್ಯ ಕೇವಲ ಹಣದಿಂದ ಶ್ರೀಮಂತನಾಗುವುದಿಲ್ಲ. ಒಳ್ಳೆಯ ಆಲೋಚನೆಗಳು, ಉತ್ತಮ ನಡವಳಿಕೆ ಮತ್ತು ಸುಂದರವಾದ ಆಲೋಚನೆಗಳನ್ನು ಹೊಂದಿರುವವನೇ ನಿಜವಾದ ಶ್ರೀಮಂತ ಎಂದು ಶ್ರೀ ಕೃಷ್ಣ ಹೇಳುತ್ತಾನೆ. ಈ ಗುಣಗಳಿಲ್ಲದಿದ್ದರೆ, ಮನುಷ್ಯ ಯಾವಾಗಲೂ ಬಡವನಾಗಿರುತ್ತಾನೆ.

- ಸಂತೋಷವು ನಮ್ಮ ಆಲೋಚನೆಗಳು, ಕಾರ್ಯಗಳು ಮತ್ತು ವರ್ತನೆಗಳ ಮೂಲಕ ಅಭಿವೃದ್ಧಿಪಡಿಸಬಹುದಾದ ಒಂದು ಆಯ್ಕೆಯಾಗಿದೆ ಎಂದು ಗೀತೆಯು ಎತ್ತಿ ತೋರಿಸುತ್ತದೆ. ಒಟ್ಟಾರೆಯಾಗಿ, ಗೀತೆಯ ಬೋಧನೆಗಳು ನಮ್ಮ ಮತ್ತು ನಮ್ಮ ಸುತ್ತಲಿನ ಪ್ರಪಂಚದ ನಡುವೆ ಹೆಚ್ಚಿನ ಸಾಮರಸ್ಯ ಮತ್ತು ಸಮತೋಲನವನ್ನು ಸಾಧಿಸಲು ಸಂತೋಷದ ಮತ್ತು ತೃಪ್ತಿಕರವಾದ ಜೀವನವನ್ನು ನಡೆಸುವ ಪ್ರಾಮುಖ್ಯತೆಯನ್ನು ಒತ್ತಿಹೇಳುತ್ತದೆ.

(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟಿಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.)

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.