ಕ್ಷೇತ್ರ ಮತ್ತು ಕ್ಷೇತ್ರಜ್ಞರ ಸಂಯೋಗದಿಂದ ಮಾತ್ರ ಭೂಮಿಯ ಮೇಲೆ ಚರಾಚರವಸ್ತುಗಳ ಅಸ್ತಿತ್ವ ಸಾಧ್ಯ: ಭಗವದ್ಗೀತೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಕ್ಷೇತ್ರ ಮತ್ತು ಕ್ಷೇತ್ರಜ್ಞರ ಸಂಯೋಗದಿಂದ ಮಾತ್ರ ಭೂಮಿಯ ಮೇಲೆ ಚರಾಚರವಸ್ತುಗಳ ಅಸ್ತಿತ್ವ ಸಾಧ್ಯ: ಭಗವದ್ಗೀತೆ

ಕ್ಷೇತ್ರ ಮತ್ತು ಕ್ಷೇತ್ರಜ್ಞರ ಸಂಯೋಗದಿಂದ ಮಾತ್ರ ಭೂಮಿಯ ಮೇಲೆ ಚರಾಚರವಸ್ತುಗಳ ಅಸ್ತಿತ್ವ ಸಾಧ್ಯ: ಭಗವದ್ಗೀತೆ

ಸೃಷ್ಟಿಯ ಮೇಲಿರುವ ಮರ, ಗಿಡ, ಬೆಟ್ಟ, ಗುಡ್ಡ, ಜೀವ, ನಿರ್ಜೀವ ವಸ್ತುಗಳ ಅಸ್ತಿತ್ವಕ್ಕೆ ಪರಮ ಪುರುಷನಾದ ಮಹಾವಿಷ್ಣುವಿನ ಸಂಯೋಗವೇ ಕಾರಣ. ಭಗವದ್ಗೀತೆ ಅಧ್ಯಾಯ 13 ರ ಶ್ಲೋಕದಲ್ಲಿನ ಅರ್ಥವನ್ನು ತಿಳಿಯಿರಿ.

ಭಗವದ್ಗೀತೆ
ಭಗವದ್ಗೀತೆ

ಅಧ್ಯಾಯ 13, ಪ್ರಕೃತಿ, ಪುರುಷ ಹಾಗೂ ಪ್ರಜ್ಞೆ ಶ್ಲೋಕ - 26
ಅನ್ಯೇ ತ್ವೇವಮಜಾನನ್ತಃ ಶ್ರುತ್ವಾನ್ಯೇಭ್ಯ ಉಪಾಸತೇ |
ತೇsಪಿ ಚಾತಿತರನ್ಯ್ತೇವ ಮೃತ್ಯುಂ ಶ್ರುತಿಪರಾಯಣಾಃ || 26 ||

ಅರ್ಥ: ಇನ್ನು ಕೆಲವರಿದ್ದಾರೆ; ಅವರಿಗೆ ಹೆಚ್ಚು ಆಧ್ಯಾತ್ಮಿಕ ಜ್ಞಾನವಿರುವುದಿಲ್ಲ. ಆದರೂ ಪರಮ ಪುರುಷನ ವಿಷಯವನ್ನು ಇತರರಿಂದ ಕೇಳಿ ಅವನನ್ನು ಪೂಜಿಸಲು ಪ್ರಾರಂಭಿಸುತ್ತಾರೆ. ಆಚಾರ್ಯರಿಂದ ಕೇಳಿ ತಿಳಿದುಕೊಳ್ಳುವ ಪ್ರವೃತ್ತಿಯಿಂದ ಅವರು ಹುಟ್ಟು ಸಾವುಗಳನ್ನು ದಾಟುತ್ತಾರೆ.

ಭಾವಾರ್ಥ: ಈ ಶ್ಲೋಕವು ಆಧುನಿಕ ಸಮಾಜಕ್ಕೆ ವಿಶೇಷವಾಗಿ ಅನ್ವಯವಾಗುತ್ತದೆ. ಏಕೆಂದರೆ ಆಧುನಿಕ ಸಮಾಜದಲ್ಲಿ ಆಧ್ಯಾತ್ಮಿಕ ವಿಷಯಗಳಲ್ಲಿ ಶಿಕ್ಷಣವೇ ಇಲ್ಲ ಎನ್ನಬಹುದು. ಕೆಲವರು ನಾಸ್ತಿಕರಾಗಿ ಅಥವಾ ಅಜೇಯತಾವಾದಿಗಳಾಗಿ ಅಥವಾ ತತ್ವಜ್ಞಾನಿಗಳಾಗಿ ಕಾಣಬಹುದು; ಆದರೆ ವಾಸ್ತವವಾಗಿ ಅವರಿಗೆ ತತ್ವಜ್ಞಾನದ ತಿಳುವಳಿಕೆಯೇ ಇಲ್ಲ. ಸಾಮಾನ್ಯ ಮನುಷ್ಯನ ವಿಷಯ ಹೇಳುವುದಾದರೆ ಅವನು ಒಳ್ಳೆಯ ಮನುಷ್ಯನಾದರೆ ಕೇಳಿ ತಿಳಿದುಕೊಂಡು ಮುನ್ನಡೆಯುವ ಸಾಧ್ಯತೆಯುಂಟು. ಈ ಶ್ರವಣ ವಿಧಾನವು ಬಹು ಮುಖ್ಯವಾದದ್ದು. ಆಧುನಿಕ ಜಗತ್ತಿನಲ್ಲಿ ಕೃಷ್ಣಪ್ರಜ್ಞೆಯನ್ನು ಉಪದೇಶಿಸಿದ ಚೈತನ್ಯ ಮಹಾಪ್ರಭುಗಳು ಶ್ರವಣಕ್ಕೆ ಬಹಳ ಒತ್ತುಕೊಟ್ಟರು. ಇದಕ್ಕೆ ಕಾರಣ ಸಾಮಾನ್ಯ ಮನುಷ್ಯನು ಅಧಿಕಾರೀ ಮೂಲಗಳಿಂದ ಕೇಳಿ ತಿಳಿದುಕೊಂಡರೆ ಸಾಕು; ಆತನು ಮುಂದುವರಿಯಬಲ್ಲ.

ಚೈತನ್ಯ ಮಹಾಪ್ರಭುಗಳ ಪ್ರಕಾರ ವಿಶೇಷವಾಗಿ ಅವನು ಹರೇ ಕೃಷ್ಣ, ಹರೇ ಕೃಷ್ಣ, ಕೃಷ್ಣ ಕೃಷ್ಣ, ಹರೇ ಹರೇ / ಹರೇ ರಾಮ, ಹರೇ ರಾಮ, ರಾಮ ರಾಮ, ಹರೇ ಹರೇ ಎನ್ನುವ ದಿವ್ಯ ಸ್ಪಂದನಗಳನ್ನು ಕೇಳಿದರೆ ಮುಂದುವರಿಯಬಲ್ಲ. ಆದುದರಿಂದ ಸಾಕ್ಷಾತ್ಕಾರ ಪಡೆದ ವ್ಯಕ್ತಿಗಳಿಂದ ಕೇಳಿ ತಿಳಿದು ಪ್ರಯೋಜನ ಪಡೆದುಕೊಳ್ಳಬೇಕು. ಇದರಿಂದ ಕ್ರಮೇಣ ಎಲ್ಲವನ್ನೂ ಅರ್ಥಮಾಡಿಕೊಳ್ಳುವ ಶಕ್ತಿಯು ಬರುತ್ತದೆ ಎಂದು ಹೇಳಿದೆ. ಅದು ನಿಶ್ಚಯವಾಗಿಯೂ ಪರಮ ಪ್ರಭುವಿನ ಪೂಜೆಯೂ ಆಗುತ್ತದೆ. ಈ ಯುಗದಲ್ಲಿ ಯಾರೂ ತನ್ನ ಸ್ಥಿತಿಯನ್ನು ಬದಲಾಯಿಸಬೇಕಾಗಿಲ್ಲ. ಆದರೆ ಪರಿಪೂರ್ಣ ಸತ್ಯವನ್ನು ಊಹಾತ್ಮಕ ಚಿಂತನೆಯಿಂದ ಅರ್ಥಮಾಡಿಕೊಳ್ಳುವ ಪ್ರವೃತ್ತಿಯನ್ನು ಬಿಡಬೇಕು ಎಂದು ಚೈತನ್ಯ ಮಹಾಪ್ರಭುಗಳು ಹೇಳಿದ್ದಾರೆ.

ಪರಮ ಪ್ರಭುವನ್ನು ಅರಿತವರ ಸೇವಕನಾಗುವುದನ್ನು ಮನುಷ್ಯನು ಕಲಿಯಬೇಕು. ಪರಿಶುದ್ಧ ಭಕ್ತರೊಬ್ಬರ ಆಶ್ರಯ ದೊರೆತು ಅವರಿಂದ ಆತ್ಮಸಾಕ್ಷಾತ್ಕಾರದ ವಿಷಯ ಕೇಳಿ ಅವರ ಹೆಜ್ಜೆಗಳಲ್ಲಿ ನಡೆಯುವ ಅದೃಷ್ಟವು ಲಭ್ಯವಾದರೆ ಅಂತಹ ಮನುಷ್ಯನು ಕ್ರಮೇಣ ಪರಿಶುದ್ಧ ಭಕ್ತನ ಸ್ಥಿತಿಗೆ ಏರುತ್ತಾನೆ. ಈ ಶ್ಲೋಕದಲ್ಲಿ ವಿಶೇಷವಾಗಿ ಶ್ರವಣದ ಪ್ರಕ್ರಿಯೆಗೆ ಒತ್ತುಕೊಟ್ಟು ಸೂಚಿಸಲಾಗಿದೆ. ಇದು ಬಹಳ ಉಚಿತವಾಗಿದೆ. ಸಾಮಾನ್ಯ ಮನುಷ್ಯನು ತತ್ವಜ್ಞಾನಿಗಳು ಎನ್ನಿಸಿಕೊಂಡವರಷ್ಟು ಸಮರ್ಥನಲ್ಲ; ಆದರೂ ಅಧಿಕಾರಿಯಾದ ಮನುಷ್ಯನಿಂದ ಶ್ರದ್ಧೆಯಿಂದ ಕೇಳಿ ತಿಳಿದುಕೊಂಡರೆ ಅದು ಈ ಐಹಿಕ ಅಸ್ತಿತ್ವವನ್ನು ಮೀರಿ ಭಗವದ್ಧಾಮಕ್ಕೆ ಹಿಂದಿರುಗಲು ನೆರವಾಗುತ್ತದೆ.

ಅಧ್ಯಾಯ 13, ಪ್ರಕೃತಿ, ಪುರುಷ ಹಾಗೂ ಪ್ರಜ್ಞೆ ಶ್ಲೋಕ - 27
ಯಾವತ್‌ ಸಇ್ಞಾಯತೇ ಕಿನ್ಚಿತ್ ಸತ್ತ್ವಂ ಸ್ಥಾವರಜನ್ಗಮಮ್ |
ಕ್ಷೇತ್ರಕ್ಷೇತ್ರಜ್ಞಸಂಯೋಗಾತ್ ತದ್ವಿದ್ಧಿ ಭರತರ್ಷಭ || 27 ||

ಅರ್ಥ: ಭರತರಲ್ಲಿ ಶ್ರೇಷ್ಠನಾದ ಅರ್ಜುನನೆ, ಚರಾಚರಗಳಾಗಿ ಅಸ್ತಿತ್ವದಲ್ಲಿರುವ ಏನನ್ನೇ ನೀನು ಕಂಡರೂ ಅದು ಕ್ಷೇತ್ರ ಮತ್ತು ಕ್ಷೇತ್ರಜ್ಞರ ಸಂಯೋಗ ಎಂದು ತಿಳಿದುಕೊ.

ಭಾವಾರ್ಥ: ವಿಶ್ವದ ಸೃಷ್ಟಿಗೆ ಮೊದಲೇ ಅಸ್ತಿತ್ವದಲ್ಲಿದ್ದ ಐಹಿಕ ಪ್ರಕೃತಿ ಮತ್ತು ಜೀವಿಗಳನ್ನು ಈ ಶ್ಲೋಕದಲ್ಲಿ ವಿವರಿಸಿದೆ. ಸೃಷ್ಟಿಯಾದದ್ದೆಲ್ಲ ಜೀವಿ ಮತ್ತು ಪ್ರಕೃತಿಯ ಸಂಯೋಗ, ಮರಗಳಂತೆ, ಬೆಟ್ಟಗುಡ್ಡಗಳಂತೆ, ಚಲಿಸದಿರುವ ಅನೇಕ ಅಭಿವ್ಯಕ್ತಿಗಳಿವೆ; ಚಲಿಸುವ ಅನೇಕ ಅಸ್ತಿತ್ವಗಳು ಇವೆ; ಅವೆಲ್ಲವೂ ಪ್ರಕೃತಿಯ ಮತ್ತು ಅದಕ್ಕಿಂತ ಉತ್ತಮ ಸ್ವಭಾವದ ಪುರುಷನ ಸಂಯೋಗಗಳು ಮಾತ್ರ. ಉತ್ತಮ ಪ್ರಕೃತಿಯ ಸ್ಪರ್ಶವಿಲ್ಲದೆ ಯಾವುದೂ ಬೆಳೆಯಲಾರದು. ಐಹಿಕ ಪ್ರಕೃತಿ ಮತ್ತು ಉತ್ತಮ ಪ್ರಕೃತಿಗಳ ಸಂಬಂಧವು ನಿರಂತರವಾಗಿ ಮುಂದುವರಿಯುತ್ತದೆ. ಪರಮ ಪ್ರಭುವೇ ಹೀಗೆ ಒಟ್ಟುಗೂಡಿಸುತ್ತಾನೆ; ಆದುದರಿಂದ ಉತ್ತಮವಾದ ಮತ್ತು ಕೆಳದರ್ಜೆಯ ಪ್ರಕೃತಿಗಳೆರಡನ್ನು ನಿಯಂತ್ರಿಸುವವನು ಅವನೇ. ಐಹಿಕ ಪ್ರಕೃತಿಯನ್ನು ಅವನೇ ಸೃಷ್ಟಿಸಿದನು. ಉತ್ತಮ ಪ್ರಕೃತಿಯನ್ನು ಐಹಿಕ ಪ್ರಕೃತಿಯಲ್ಲಿ ಇರಿಸಲಾಗುತ್ತದೆ. ಈ ರೀತಿಯಲ್ಲಿ ಎಲ್ಲ ಚಟುವಟಿಕೆಗಳು ಅಭಿವ್ಯಕ್ತಿಗಳು ಜರುಗುತ್ತವೆ.

ಅಧ್ಯಾಯ 13, ಪ್ರಕೃತಿ, ಪುರುಷ ಹಾಗೂ ಪ್ರಜ್ಞೆ ಶ್ಲೋಕ - 28
ಸಮಂ ಸರ್ವೇಷು ಭೂತೇಷು ತಿಷ್ಠನ್ತಂ ಪರಮೇಶ್ವರಮ್ |
ವಿನಶ್ಯಸ್ತವಿನಶ್ಯನ್ತಂ ಯಃ ಪಶ್ಯತಿ ಸ ಪಶ್ಯತಿ || 28 ||

ಅರ್ಥ: ಎಲ್ಲ ದೇಹಗಳಲ್ಲಿ ಜೀವಾತ್ಮನ ಜೊತೆಗಿರುವ ಪರಮಾತ್ಮನನ್ನು ಕಂಡುಕೊಂಡು, ನಾಶವಾಗುವ ದೇಹದಲ್ಲಿರುವ ಜೀವಾತ್ಮನಾಗಲೀ ಪರಮಾತ್ಮನಾಗಲೀ ಅಳಿಯುವುದಿಲ್ಲ ಎನ್ನುವುದನ್ನು ಅರ್ಥಮಾಡಿಕೊಳ್ಳುವವನೇ ನಿಜವಾಗಿ ನೋಡುತ್ತಾನೆ.

ಭಾವಾರ್ಥ: ಒಳ್ಳೆಯ ಸಹಯೋಗದಿಂದ ಕ್ಷೇತ್ರ, ಕ್ಷೇತ್ರಜ್ಞ ಅಥವಾ ಜೀವಾತ್ಮ ಮತ್ತು ಜೀವಾತ್ಮನ ಗೆಳೆಯ ಮೂರನ್ನೂ ಒಂದಾಗಿ ನೋಡಬಲ್ಲವನು ಜ್ಞಾನದ ಸ್ಥಿತಿಯಲ್ಲಿದ್ದಾನೆ. ಆಧ್ಯಾತ್ಮಿಕ ವಿಷಯಗಳನ್ನು ನಿಜವಾಗಿ ತಿಳಿದವನ ಸಹಯೋಗವಿಲ್ಲದಿದ್ದರೆ ಇವನ್ನು ನೋಡಲಾಗುವುದಿಲ್ಲ. ಇಂತಹ ಸಹಯೋಗವಿಲ್ಲದಿದ್ದವರು ಅಜ್ಞಾನಿಗಳು; ಅವರು ದೇಹವನ್ನು ಮಾತ್ರ ಕಾಣುತ್ತಾರೆ ಮತ್ತು ದೇಹವು ನಾಶವಾದಾಗ ಎಲ್ಲವೂ ಮುಗಿದುಹೋಗುತ್ತದೆ ಎಂದು ಭಾವಿಸುತ್ತಾರೆ. ಆದರೆ ವಾಸ್ತವವಾಗಿ ಹೀಗಾಗುವುದಿಲ್ಲ. ದೇಹವು ನಾಶವಾದ ಮೇಲೆ ಆತ್ಮನೂ, ಪರಮಾತ್ಮನೂ ಇರುತ್ತಾರೆ ಮತ್ತು ಹಲವು ಚರಾಚರ ರೂಪಗಳಲ್ಲಿ ಮುಂದಕ್ಕೆ ಸಾಗುತ್ತಾರೆ. ಪರಮೇಶ್ವರ ಎನ್ನುವ ಸಂಸ್ಕೃತ ಶಬ್ದವನ್ನು 'ಜೀವಾತ್ಮ' ಎಂದು ಕೆಲವೊಮ್ಮೆ ಅನುವಾದ ಮಾಡುವುದುಂಟು. ಇದಕ್ಕೆ ಕಾರಣ ಆತ್ಮನು ದೇಹದ ಯಜಮಾನ, ಮತ್ತು ದೇಹವು ನಾಶವಾದ ಅನಂತರ ಅವನು ಮತ್ತೊಂದು ರೂಪಕ್ಕೆ ಹೋಗುತ್ತಾನೆ. ಆದುದರಿಂದ ಅವನು ಯಜಮಾನ. ಇನ್ನು ಕೆಲವರು ಪರಮೇಶ್ವರ ಎನ್ನುವುದನ್ನು ಪರಮಾತ್ಮ ಎಂದು ಅನುವಾದಿಸುತ್ತಾರೆ. ಹೇಗೆ ಮಾಡಿದರೂ ಪರಮಾತ್ಮನೂ, ಜೀವಾತ್ಮನೂ ಮುಂದುವರಿಯುತ್ತಾರೆ; ಅವರು ನಾಶವಾಗುವುದಿಲ್ಲ. ಈ ದೃಷ್ಟಿಯಿರುವವನು ಏನಾಗುತ್ತಿದೆ ಎನ್ನುವುದನ್ನು ಕಾಣಬಲ್ಲ.

(ಗಮನಿಸಿ: ಈ ಬರಹವು 'ಗೀತೋಪನಿಷದ್ ಭಗವದ್ಗೀತಾ ಯಥಾರೂಪ' ಪುಸ್ತಕದಲ್ಲಿರುವ ಮಾಹಿತಿಯನ್ನು ಆಧರಿಸಿದೆ. ಸಮಕಾಲೀನ ವಿಚಾರಗಳಿಗೆ ಅನ್ವಯಿಸಲು ಅರ್ಥದಲ್ಲಿ ತುಸು ವಿವರ ನೀಡಲಾಗಿದೆ. ಸಂದಿಗ್ಧ ಬಂದರೆ ಓದುಗರು ಮೂಲ ಪುಸ್ತಕವನ್ನೇ ಆಧರಿಸಿ, ಅನ್ವಯಿಸಿಕೊಳ್ಳಬೇಕು.)

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.