Chaitra Purnima 2025: ಚೈತ್ರ ಪೂರ್ಣಿಮಾ ದಿನ ದಾನ ಮಾಡಿದರೆ ಹೆಚ್ಚು ಶುಭಫಲಗಳಿವೆ; ಕಥೆ, ಮಹತ್ವದ ಮಾಹಿತಿ ತಿಳಿಯಿರಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Chaitra Purnima 2025: ಚೈತ್ರ ಪೂರ್ಣಿಮಾ ದಿನ ದಾನ ಮಾಡಿದರೆ ಹೆಚ್ಚು ಶುಭಫಲಗಳಿವೆ; ಕಥೆ, ಮಹತ್ವದ ಮಾಹಿತಿ ತಿಳಿಯಿರಿ

Chaitra Purnima 2025: ಚೈತ್ರ ಪೂರ್ಣಿಮಾ ದಿನ ದಾನ ಮಾಡಿದರೆ ಹೆಚ್ಚು ಶುಭಫಲಗಳಿವೆ; ಕಥೆ, ಮಹತ್ವದ ಮಾಹಿತಿ ತಿಳಿಯಿರಿ

ಏಪ್ರಿಲ್ 12ರ ಶನಿವಾರ ಚೈತ್ರ ಹುಣ್ಣಿಮೆ ಇದೆ. ಚಾಂದ್ರಮಾನ ಮಾಸದ ಶುಕ್ಲಪಕ್ಷದ ಕೊನೆಯ ದಿನದಂದು ಆಚರಿಸುವ ಚೈತ್ರ ಪೂರ್ಣಿಮಾದ ಮಹತ್ವ, ಕಥೆಯನ್ನು ಇಲ್ಲಿ ವಿವರಿಸಲಾಗಿದೆ. (ಬರಹ ಎಚ್. ಸತೀಶ್, ಜ್ಯೋತಿಷಿ)

ಚೈತ್ರ ಪೂರ್ಣಿಮಾದ ಮಹತ್ವ ಹಾಗೂ ಕಥೆಯನ್ನು ಇಲ್ಲಿ ನೀಡಲಾಗಿದೆ
ಚೈತ್ರ ಪೂರ್ಣಿಮಾದ ಮಹತ್ವ ಹಾಗೂ ಕಥೆಯನ್ನು ಇಲ್ಲಿ ನೀಡಲಾಗಿದೆ

Chaitra Purnima 2025: ಇಂದು (ಏಪ್ರಿಲ್ 12, ಶನಿವಾರ) ಚೈತ್ರ ಪೂರ್ಣಿಮಾವನ್ನು ಆಚರಿಸಲಾಗುತ್ತಿದೆ. ಪ್ರತಿ ವರ್ಷ ಚಾಂದ್ರಮಾನ ಮಾಸದ ಶುಕ್ಲ ಪಕ್ಷದ ಕೊನೆಯ ದಿನದಂದು ಚೈತ್ರ ಹುಣ್ಣಿಮೆ ಅಥವಾ ಚೈತ್ರ ಪೂರ್ಣಿಮಾವನ್ನು ಆಚರಿಸುತ್ತಾರೆ. ಹಿಂದೂ ಕ್ಯಾಲೆಂಡರ್ ಪ್ರಕಾರ ಇದು ವರ್ಷದ ಮೊದಲ ಹುಣ್ಣಿಮೆಯಾಗಿದೆ. ಇದು ಯುಗಾದಿ ಮತ್ತು ಗುಡಿ ಪಾಡ್ಯದ ನಂತರ ಬರುತ್ತದೆ. ಪ್ರತಿ ಹುಣ್ಣಿಮೆ ದಿನದಂದು ಏನಾದರೂ ಒಂದು ವಿಶೇಷ ಇರುತ್ತದೆ. ಅದರಂದೆ ಈ ಬಾರಿಯ ಹುಣ್ಣಿಮೆಯಂದು ಹನುಮ ಜಂಯತಿ ಇದೆ. ಹೀಗಾಗಿ ಈ ಚೈತ್ರ ಹುಣ್ಣಿಮೆಗೆ ತುಂಬಾ ಮಹತ್ವವಿದೆ.

ಪೂರ್ಣಿಮೆಯ ತಿಥಿಯು ಏಪ್ರಿಲ್ 12ರ ತಡರಾತ್ರಿ 3.21ಕ್ಕೆ ಆರಂಭವಾಗುತ್ತದೆ. ನಂತರ ಏಪ್ರಿಲ್ 13ರ ಬೆಳಿಗ್ಗೆ 5.51ಕ್ಕೆ ಕೊನೆಗೊಳ್ಳುತ್ತದೆ. ಹೀಗಾಗಿ ಚೈತ್ರ ಪೂರ್ಣಿಮಾವನ್ನು ಏಪ್ರಿಲ್ 12ರ ಶನಿವಾರ ಆಚರಿಸಲಾಗುತ್ತದೆ. ಇನ್ನು ಈ ದಿನ ಬ್ರಹ್ಮ ಮುಹೂರ್ತವನ್ನು ನೋಡುವುದಾದರೆ ಏಪ್ರಿಲ್ 12ರ ಬೆಳಗ್ಗೆ 4.29 ರಿಂದ 5.14ಕ್ಕೆ ಬ್ರಹ್ಮ ಮುಹೂರ್ತ ಇದೆ. ಮಧ್ಯಾಹ್ನ 2.30 ರಿಂದ 3.21 ರವರಿಗೆ ವಿಜಯ ಮುಹೂರ್ತ, ಸಂಜೆ 6.44 ರಿಂದ 7.06 ರವರೆಗೆ ಗೋಧೂಳಿ ಮುಹೂರ್ತ, ರಾತ್ರಿ 11.59 ರಿಂದ ತಡರಾತ್ರಿ 12.44 ರವರೆಗೆ ನಿಶಿತಾ ಮುಹೂರ್ತ ಇದೆ.

ಚೈತ್ರ ಪೂರ್ಣಿಮಾ ಮಹತ್ವ ಮತ್ತು ಕಥೆಯನ್ನು ಇಲ್ಲಿ ವಿವರಿಸಲಾಗಿದೆ

ಬ್ರಹ್ಮಪುರಾಣದಲ್ಲಿ ಚಿತ್ರಾ ಹುಣ್ಣಿಮೆ ಬಗ್ಗೆ ಸಂಪೂರ್ಣವಾದ ವಿವರಣೆ ದೊರೆಯುತ್ತದೆ. ಇದನ್ನು ಚೈತ್ರ ಪೂರ್ಣಿಮಾ ಎಂದೂ ಕರೆಯುತ್ತಾರೆ. ಹೆಸರೆ ತಿಳಿಸುವಂತೆ ಚೈತ್ರಮಾಸದ ಹುಣ್ಣಿಮೆಯ ದಿನದಂದು ಈ ಹಬ್ಬವನ್ನು ಆಚರಿಸಲಾಗುತ್ತದೆ. ಇದರ ಆಚರಣೆ ದೇಶ ವಿದೇಶಗಳಲ್ಲಿ ಬೇರೆ ಬೇರೆ ಹೆಸರಿಂದ ಆಚರಿಸುತ್ತಾರೆ. ಈ ದಿನದಂದು ದೇವೇಂದ್ರ, ಗುರುಗಳು , ಚಿತ್ರಗುಪ್ತ ಮತ್ತು ಶ್ರೀ ಸುಬ್ರಹ್ಮಣ್ಯಸ್ವಾಮಿಯ ಪೂಜೆಯನ್ನು ಆಚರಿಸುತ್ತೇವೆ. ಮುಖ್ಯವಾಗಿ ತಮಿಳುನಾಡಿನ ಮಧುರೈನಲ್ಲಿರುವ ಶ್ರೀ ಮೀನಾಕ್ಷಿ ದೇವಸ್ಥಾನದಲ್ಲಿ ಚಿತ್ರಾಪೌಣಿಮೆಯ ದಿನದಂದು ವಿಶೇಷವಾದ ಪೂಜೆಯನ್ನು ಸಲ್ಲಿಸುತ್ತಾರೆ. ಈ ದಿನ ಕೇವಲ ಪೂಜೆಯಲ್ಲದೆ ದಾನಗಳ ವಿಚಾರವೂ ಮುಖ್ಯವಾಗುತ್ತದೆ. ತಮಿಳುನಾಡಿನಲ್ಲಿ ಚೋಳರ ಕಾಲದಲ್ಲಿನ ಶಿಲಾಶಾಸನಗಳಲ್ಲಿ ಈ ಹಬ್ಬದ ಬಗ್ಗೆ ಹೆಚ್ಚಿನ ವಿವರಗಳು ನಮಗೆ ದೊರೆಯುತ್ತವೆ.

ಹಿಂದಿನ ದಂತಕತೆಯ ಪ್ರಕಾರ, ಈ ದಿನದಂದು ಗುರುವಿನ ಪೂಜೆಯು ಮುಖ್ಯವಾಗುತ್ತದೆ. ಯಾವುದೇ ಶುಭಾರಂಭದ ವೇಳೆ ಮೊದಲು ಶ್ರೀ ಗಣಪತಿಯ ಪೂಜೆಯನ್ನು ಮಾಡಲಾಗುತ್ತದೆ. ಆನಂತರ ಗುರುವಿನ ಪೂಜೆಯನ್ನು ಮಾಡಲೇಬೇಕು. ಆದರೆ ಇಂದ್ರನು ಒಮ್ಮೆ ಬೃಹಸ್ಪತಿಯನ್ನು ಕುರಿತು ನಿನ್ನಷ್ಟೇ ನಾನು ಸಹ ಮುಖ್ಯವಾದ ದೇವರು. ಆದ್ದರಿಂದ ನಿನಗೆ ಪೂಜೆಯನ್ನು ಸಲ್ಲಿಸದೇ ಹೋದರೂ ನನ್ನನು ಪೂಜಿಸುವುದು ಅವಶ್ಯಕ ಎನ್ನುತ್ತಾನೆ. ಹೋಮ ಹವನಾದಿಗಳಲ್ಲಿಯೂ ನನಗೆ ಹವಿಸ್ಸು ದೊರೆಯಬೇಕು ಎನ್ನುತ್ತಾನೆ. ಆದರೆ ಶಾಂತಿಪ್ರಿಯನಾದ ಗುರುವು ನಯವಾದ ಮಾತಿನಿಂದ ಇಂದ್ರನ ಮನಸ್ಸನ್ನು ಬದಲಾಯಿಸಲು ಪ್ರಯತ್ನಿಸುತ್ತಾನೆ. ಆದರೆ ಹಠದಿಂದ ಆತ್ಮಪ್ರಶಂಸೆ ಮಾಡಿಕೊಳ್ಳುತ್ತಾನೆ. ಇವನನ್ನು ಆವರಿಸಿದ ಮಾಯೆಯಿಂದ ಗುರುವನ್ನು ಅತಿಯಾಗಿ ನಿಂದಿಸುತ್ತಾನೆ. ತಾಯಿಯ ಶಾಪದಿಂದ ಪಾರಾಗಲು ಯಾರಿಂದಲೂ ಸಾಧ್ಯವಾಗುವುದಿಲ್ಲ. ತಾಯಿಯ ಶಾಪ ಮುಕ್ಕೋಟಿ ದೇವತೆಗಳ ಶಾಪಕ್ಕೆ ಸಮ ಎಂದು ಹೇಳಲಾಗುತ್ತದೆ. ಗುರುನಿಂದನೆಯಿಂದಲೂ ಇದೇ ರೀತಿಯ ತೊಂದರೆ ಉಂಟಾಗುತ್ತದೆ. ಗುರುವನ್ನು ನಿಂದಿಸಿದ ಇಂದ್ರನಿಗೆ ಆ ಕ್ಷಣವೇ ಅಂಧಕಾರ ಕವಿಯುತ್ತದೆ. ಇದರಿಂದ ಎಚ್ಚೆತ್ತು ಕೊಂಡ ಇಂದ್ರನು ಬೃಹಸ್ಪತಿಯಲ್ಲಿ ಕ್ಷಮೆಯನ್ನು ಯಾಚಿಸಿ ತನ್ನ ಅಂಧಕಾರವನ್ನು ದೂರಮಾಡುವಂತೆ ಕೇಳಿಕೊಳ್ಳುತ್ತಾನೆ. ಗುರುವು ತನ್ನ ಕೋಪದಿಂದ ಹೊರಬಂದು ತೀರ್ಥಯಾತ್ರೆಯನ್ನು ಮಾಡಲು ತಿಳಿಸುತ್ತಾನೆ.

ಈ ದಿನ ಶಿವನನ್ನು ಪೂಜಿಸಿದರೆ ಇಷ್ಟೊಂದು ಶುಭಫಲಗಳಿವೆ

ಗುರುವಿನ ಅಣತಿಯಂತೆ ತೀರ್ಥಯಾತ್ರೆಗೆ ತೆರಳುತ್ತಾನೆ. ಹಾದಿಯಲ್ಲಿ ಸಿಗುವ ಕದಂಬವನವನ್ನು ಪ್ರವೇಶಿಸುತ್ತಾನೆ. ತ್ರಿಪುರಾಸುರನನ್ನು ಶಿವನು ಸಂಹರಿಸಿದ ಸ್ಥಳವು ಇದಾಗಿರುತ್ತದೆ. ಅಲ್ಲದೆ ಶ್ರೀಕೃಷ್ಣ ಮತ್ತು ಬಲರಾಮರು ಆಟವಾಡಿದ ಸ್ಥಳವು ಇದಾಗಿರುತ್ತದೆ. ಆಲ್ಲದೆ ಇಲ್ಲಿ ಸಾಕ್ಷಾತ್ ಪಾರ್ವತೀವಿಯು ನೆಲೆಸಿರುತ್ತಾಳೆ. ಅಂತಹ ವನದಲ್ಲಿ ಇಂದ್ರನಿಗೆ ಶಿವಲಿಂಗವೊಂದು ಕಾಣುತ್ತದೆ. ಇಂದ್ರನು ತನಗೆ ಕಾಣುವ ಶಿವಲಿಂಗವನ್ನು ಪೂಜಿಸುತ್ತಾನೆ. ಇದರಿಂದ ಇಂದ್ರನಲ್ಲಿ ಇದ್ದ ಅಂಧಕಾರವು ಮರೆಯಾಗಿ ಹೊಸತನ ಉಂಟಾಗುತ್ತದೆ. ವನದಲ್ಲಿ ದೊರೆಯುವ ಪತ್ರೆಗಳನ್ನು ಮತ್ತು ಹೂಗಳಿಂದ ಪೂಜಿಸುತ್ತಾನೆ. ತಾವರೆಹೂಗಳನ್ನು ಶಿವನ ಪಾದಗಳಿಗೆ ಅರ್ಪಿಸುತ್ತಾನೆ. ಈ ಕಾರಣದಿಂದ ಶಿವನ ಪೂಜೆಯನ್ನು ಈ ದಿನದಂದು ಮಾಡಿದಲ್ಲಿ ನಮ್ಮಲ್ಲಿನ ಅಂದಕಾರ ದೂರವಾಗಿ ಬುದ್ದಿವಂತಿಕೆಯು ಹೆಚ್ಚುತ್ತದೆ. ಇದರಿಂದ ನಮ್ಮ ಜ್ಞಾಪಕಶಕ್ತಿಯು ಹೆಚ್ಚುತ್ತದೆ. ಈಶ್ವರಾನ್ ಸರ್ವ ವಿಧ್ಯಾನಾಂ ಎಂದು ವೇದದಲ್ಲಿದೆ. ಆದ್ದರಿಂದ ವಿದ್ಯಾರ್ಥಿಗಳು ಈ ದಿನದಂದು ಶಿವನನ್ನು ಪೂಜಿಸುವುದು ಹೆಚ್ಚು ಲಾಭಕರವಾಗಿದೆ.

ಕುಜಗ್ರಹವು ಧೈರ್ಯ, ಸಾಹಸ ಮತ್ತು ಆತ್ಮವಿಶ್ವಾಸಕ್ಕೆ ಕಾರಕನಾಗುತ್ತಾನೆ. ಆದ್ದರಿಂದ ಕುಜನ ಅಧಿದೇವತೆಯಾದ ಶ್ರೀಸುಬ್ರಹ್ಮಣ್ಯಸ್ವಾಮಿಯನ್ನು ಈ ದಿಂದದಂದು ಪೂಜಿಸುವುದು ಮುಖ್ಯವಾಗುತ್ತದೆ. ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿಯ ಪೂಜೆಯನ್ನೂ ಮಾಡಬಹುದು. ಇದರಿಂದ ಜನ್ಮಕುಂಡಲಿಯಲ್ಲಿ ಕುಜದೋಷವಿದ್ದಲ್ಲಿ ಪರಿಹಾರ ದೊರೆಯುತ್ತದೆ. ಕುಜದೋಷದಿಂದ ಮದುವೆಯ ವಿಚಾರದಲ್ಲಿ ತೊಂದರೆ ಇದ್ದಲ್ಲಿ ದೋಷ ಪರಿಹಾರವಾಗಿ ವಿವಾಹ ನಿಶ್ಚಯವಾಗುತ್ತದೆ. ಆತ್ಮವಿಶ್ವಾಸವು ಹೆಚ್ಚುವುದರಿಂದ ಜೀವನದಲ್ಲಿ ಹೊಸತನ ದೊರೆಯುತ್ತದೆ. ಗುರುಗಳ ಪೂಜೆಯಿಂದ ಉತ್ತಮ ಆರೋಗ್ಯವು ಲಭಿಸುತ್ತದೆ. ಹಯಗ್ರೀವಸ್ತೋತ್ರ ಅಥವಾ ದಕ್ಷಿಣಾಮೂರ್ತಿ ಸ್ತೋತ್ರ ಪಠಣೆಯಿಂದ ಉತ್ತಮ ಜ್ಞಾನ ಲಭಿಸುತ್ತದೆ.

ಈ ದಿನದಂದು ದಂಪತಿ ದಕ್ಷಿಣೆ ಸಮೇತ ತಾಂಬೂಲವನ್ನು ನೀಡುವುದು ಒಳ್ಳೆಯದು. ಅಶಕ್ತ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುವುದರಿಂದಲೂ ಉತ್ತಮ ಫಲಗಳು ದೊರೆಯುತ್ತವೆ. ಅಲ್ಲದೆ ವಯೋವೃದ್ಧರು ಹೊಸ ಪುಸ್ತಕ ಮತ್ತು ಲೇಖನಿಯನ್ನು ವೇದ ಬಲ್ಲವರಿಗೆ ದಾನ ನೀಡಬೇಕು. ಇದರೊಂದಿಗೆ ಪಾನಕ, ಹೆಸರುಬೇಳೆ, ನೀರುಮಜ್ಜಿಗೆ ಮತ್ತು ಬೀಸಣಿಗೆಯನ್ನು ನೀಡುವುದು ವಾಡಿಕೆ. ಇದರಿಂದ ಚಿತ್ರಗುಪ್ತನು ಅವರ ಜೀವನದಲ್ಲಿನ ಹೊಸ ಲೆಕ್ಕಾಚಾರವನ್ನು ಆರಂಭಿಸುತ್ತಾನೆ ಎಂಬ ನಂಬಿಕೆ ಇದೆ. ಯಾವುದೇ ಕಾರಣಕ್ಕೂ ಚಿಕ್ಕವಯಸ್ಸಿನವರು ಪುಸ್ತಕ ಮತ್ತು ಲೇಖನಿಯನ್ನು ನೀಡಬಾರದು. ಸೂರ್ಯೋದಯವಾದ ನಂತರ ಮತ್ತು ಸೂರ್ಯಾಸ್ತವಾಗುವ ಮುನ್ನ ಪೂಜೆ ಸಲ್ಲಿಸಿ ದಾನ ನೀಡುವುದು ಒಳ್ಳೆಯದು. ಬೆಳಗಿನ ವೇಳೆ ಬಲು ಶ್ರೇಷ್ಠವಾಗಿದೆ.

Raghavendra M Y

TwittereMail
ರಾಘವೇಂದ್ರ ಎಂ.ವೈ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್ ಪ್ರೊಡ್ಯೂಸರ್. ರಾಶಿ ಭವಿಷ್ಯ (ಧರ್ಮ) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ, ಉದಯ ನ್ಯೂಸ್, ದಿಗ್ವಿಜಯ ನ್ಯೂಸ್, ಫಸ್ಟ್ ನ್ಯೂಸ್, ಡಿಡಿ ಚಂದನ ನ್ಯೂಸ್, ಈ-ಟಿವಿ ಭಾರತದಲ್ಲಿ ಬುಲೆಟಿನ್ ಪ್ರೊಡ್ಯೂಸರ್ ಸೇರಿ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಅನುಭವ. ಪುಸ್ತಕ, ಪತ್ರಿಕೆ ಓದುವುದು ಇಷ್ಟ. ವಾಣಿಜ್ಯ, ಕ್ರಿಕೆಟ್, ಗ್ರಾಮೀಣ ವಿದ್ಯಮಾನಗಳ ಬಗ್ಗೆ ಇಷ್ಟಪಟ್ಟು ಬರೆಯುತ್ತಾರೆ. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಿರುಪನಹಳ್ಳಿ ಇವರ ಸ್ವಂತ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.