ಕುಕ್ಕೆ ಸುಬ್ರಹ್ಮಣ್ಯದಲ್ಲಿ ಚಂಪಾಷಷ್ಠಿ ವೈಭವ: 15 ದಿನ ಸರ್ಪ ಸಂಸ್ಕಾರ ಸೇವೆ ಸ್ಥಗಿತ, ರಥೋತ್ಸವದ ದಿನಾಂಕ,ವೈವಿಧ್ಯಮಯ ಉತ್ಸವಗಳ ವಿವರ ಇಲ್ಲಿದೆ
ಸುಪ್ರಸಿದ್ಧ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ ಚಂಪಾಷಷ್ಟಿ ಮಹೋತ್ಸವಕ್ಕೆ ಭರ್ಜರಿ ಸಿದ್ಧತೆಗಳು ನಡೆಯುತ್ತವೆ. ರಥೋತ್ಸವದ ದಿನಾಂಕ, ಉತ್ಸವಗಳು ಸೇರಿದಂತೆ 11 ದಿನಗಳ ಕಾರ್ಯಕ್ರಮಗಳ ಸಂಪೂರ್ಣ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ. ಬಸ್ಸು, ರೈಲು, ವಿಮಾನ ಮೂಲಕ ಕುಕ್ಕೆ ಸುಬ್ರಹ್ಮಣ್ಯಕ್ಕೆ ತಲುವ, ವಸತಿ ಗೃಹಗಳ ಮಾಹಿತಿ ಇಲ್ಲಿದೆ.
ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕಿನಲ್ಲಿರುವ ಸುಪ್ರಸಿದ್ಧ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಇದೀಗ ಚಂಪಾಷಷ್ಠಿ ಮಹೋತ್ಸವಕ್ಕೆ ಸಿದ್ಧತೆಗಳು ನಡೆಯುತ್ತಿವೆ. ಎಲ್ಲಾ ಸರ್ಪಗಳ ಅಧಿಪತಿಯಾದ ಕಾರ್ತಿಕೇಯನನ್ನು ಇಲ್ಲಿ ಸುಬ್ರಹ್ಮಣ್ಯ ರೂಪದಲ್ಲಿ ಪೂಜಿಸಲಾಗುತ್ತದೆ. ನವೆಂಬರ್ 27ರ ಬುಧವಾರದಿಂದ ಡಿಸೆಂಬರ್ 12 ಗುರುವಾರದವರಿಗೆ ಒಟ್ಟು 11 ದಿನಗಳ ಕಾಲ ಕುಕ್ಕೆಯಲ್ಲಿ ಜಾತ್ರಾ ಮಹೋತ್ಸವ ನಡೆಯಲಿದೆ. ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ದೇವಾಲಯದಲ್ಲಿ ಸರ್ಪ ಸಂಸ್ಕಾರ ಸೇವೆ ನಡೆಯುವುದಿಲ್ಲ ಎಂದು ದೇವಳದ ಪ್ರಕರಣೆಯಲ್ಲಿ ತಿಳಿಸಲಾಗಿದೆ. ದೇವಾಲಯದಲ್ಲಿ ಆಡಳಿತ ಮಂಡಳಿ ಬಿಡುಗಡೆ ಮಾಡಿರುವ ಆಹ್ವಾನ ಪತ್ರಿಯ ಪ್ರಕಾರ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ ನಡೆಯಲಿರುವ 11 ದಿನಗಳ ಕಾರ್ಯಕ್ರಮಗಳ ವಿವರಗಳನ್ನು ಇಲ್ಲಿ ನೀಡಲಾಗಿದೆ.
ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ ನಡೆಯಲಿರುವ 11 ದಿನಗಳ ಕಾರ್ಯಕ್ರಮಗಳ ವಿವರ
- ನವೆಂಬರ್ 27, ಬುಧವಾರ - ಕೊಪ್ಪರಿಗೆ ಏರುವುದು, ರಾತ್ರಿ ಶೇಷವಾಹನಯುಕ್ತ ಬಂಡಿ ಉತ್ಸವ
- ನವೆಂಬರ್ 30, ಶನಿವಾರ - ಲಕ್ಷ್ಮದೀಪೋತ್ಸವ
- ಡಿಸೆಂಬರ್ 1, ಭಾನುವಾರ - ಶೇಷವಾಹನೋತ್ಸವ
- ಡಿಸೆಂಬರ್ 2, ಸೋಮವಾರ - ಅಶ್ವವಾಹನೋತ್ಸವ
- ಡಿಸೆಂಬರ್ 3, ಮಂಗಳವಾರ - ಮಯೂರ ವಾಹನೋತ್ಸವ
- ಡಿಸೆಂಬರ್ 4, ಬುಧವಾರ - ಶೇಷವಾಹನೋತ್ಸವ
- ಡಿಸೆಂಬರ್ 5, ಗುರುವಾರ - ಹೂವಿನ ತೇರಿನ ಉತ್ಸವ
- ಡಿಸೆಂಬರ್ 6, ಶುಕ್ರವಾರ - ಪಂಚಮಿ ರಥೋತ್ಸವ
- ಡಿಸೆಂಬರ್ 7, ಶನಿವಾರ - ಪ್ರಾತಃ ಕಾಲ ಚಂಪಾಷಷ್ಟಿ ಮಹಾರಥೋತ್ಸವ
- ಡಿಸೆಂಬರ್ 8, ಭಾನುವಾರ - ಅವಭೃತೋತ್ಸವ, ನೌಕಾವಿಹಾರ
- ಡಿಸೆಂಬರ್ 12, ಗುರುವಾರ - ಕೊಪ್ಪರಿಗೆ ಇಳಿಯುವುದು, ರಾತ್ರಿ ನೀರು ಬಂಡಿ ಉತ್ಸವ, ದೈವಗಳ ನಡಾವಳಿ
ಚಂಪಾಷಷ್ಟಿ ಮಹತ್ವ: ಹಿಂದೂ ಪುರಾಣಗಳ ಪ್ರಕಾರ, ಶಿವನ ಯೋಧ ಅವತಾರ ಭಗವಾನ್ ಖಂಡೋಬಾನನ್ನು ಪೂಜಿಸಲಾಗುತ್ತದೆ. ಈ ಹಬ್ಬವು ದುಷ್ಟ ರಾಕ್ಷಸರಾದ ಮಲ್ಲ ಮತ್ತು ಮಾಲಿಯ ವಿರುದ್ಧ ಭಗವಾನ್ ಖಂಡೋಬಾನ ವಿಜಯವನ್ನು ಸೂಚಿಸುತ್ತದೆ. ತಮ್ಮನ್ನು ಎಲ್ಲ ದುಷ್ಟ ಶಕ್ತಿಗಳಿಂದ ರಕ್ಷಣೆ ಮಾಡುವಂತೆ ಭಕ್ತರು ದೇವರಲ್ಲಿ ಪ್ರಾರ್ಥಿಸುತ್ತಾರೆ. ಮಹಾರಾಷ್ಟ್ರ ಮತ್ತು ಕರ್ನಾಟಕದ ಕೆಲ ಗ್ರಾಮೀಣ ಪ್ರದೇಶಗಳಲ್ಲಿ ಖಂಡೋಬನನ್ನು ರೈತರು, ಬೇಟೆಗಾರರು ಹಾಗೂ ಯೋಧರ ಅಧಿಪತಿಯಾಗಿ ನೋಡಲಾಗುತ್ತದೆ. ಅನಾದಿಕಾಲದಿಂದಲೂ ನಾಗ ಪೂಜೆಗೆ ಪ್ರಸಿದ್ಧವಾಗಿರುವ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ ನಡೆಯುವ ಚಂಪಾಷಷ್ಠಿಗೆ ತುಂಬಾ ಮಹತ್ವವಿದೆ.
ಬೆಂಗಳೂರು, ಮಂಗಳೂರು, ಉತ್ತರ ಕರ್ನಾಟಕದಿಂದ ಕುಕ್ಕೆ ಸುಬ್ರಹ್ಮಣ್ಯ ದೇವಾಲಯ ತಲುವುದು ಹೇಗೆ
ಬೆಂಗಳೂರಿನಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಸ್ಸು ಹಾಗೂ ರೈಲಿನ ಮೂಲಕ ತಲುಪಬಹುದು. ರೈಲು ಸಂಖ್ಯೆ 16515 - ಕಾರವಾರ ಎಕ್ಸ್ ಪ್ರೆಸ್ ರೈಲು ವಾರದಲ್ಲಿ ಮೂರು ದಿನ ಅಂದರೆ ಸೋಮವಾರ, ಬುಧವಾರ ಹಾಗೂ ಶುಕ್ರವಾರ ಸಂಚಾರ ನಡೆಸಲಿದೆ. ಬೆಂಗಳೂರಿನ ಯಶ್ವಂತಪುರ ಜಂಕ್ಷನ್ ನಿಂದ ಬೆಳಗ್ಗೆ 7 ಗಂಟೆಗೆ ಹೊರಟು ಮಧ್ಯಾಹ್ನ 2.20ಕ್ಕೆ ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣ ತಲುಪಲಿದೆ. ಸುಬ್ರಹಮಣ್ಯ ರೋಡ್ ರೈಲು ನಿಲ್ದಾಣದಿಂದ ಸುಬ್ರಹ್ಮಣ್ಯ ದೇವಾಲಯಕ್ಕೆ 12 ಕಿಲೋ ಮೀಟರ್ ಅಂತರವಿದ್ದು ಧರ್ಮಸ್ಥಳ ಮಾರ್ಗವಾಗಿ ರಸ್ತೆ ಮೂಲಕ ತಲುಪಬಹುದು.
ಪಂಚಗಂಗಾ ಸೂಪರ್ ಎಕ್ಸಪ್ರೆಸ್ ರೈಲು ವಾರದ ಎಲ್ಲಾ ದಿನಗಳಲ್ಲಿ ಬೆಂಗಳೂರಿನಿಂದ ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣ ಮಾರ್ಗವಾಗಿ ಸಂಚರಿಸುತ್ತದೆ. 16595 ಸಂಖ್ಯೆಯ ಈ ರೈಲು ಬೆಂಗಳೂರಿನ ಯಶ್ವಂತಪುರ ಜಂಕ್ಷನ್ ನಲ್ಲಿ ಪ್ರತಿದಿನ ಸಂಜೆ 7 ಗಂಟೆಗೆ ಹೊರಟು ಮರು ದಿನ ಬೆಳಗ್ಗೆ 1.20ಕ್ಕೆ ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣ ತಲುಪಲಿದೆ.
ರೈಲು ಸಂಖ್ಯೆ 16585 - ಮುರ್ಡೇಶ್ವರ ಎಕ್ಸ್ ಪ್ರೆಸ್ ರೈಲು ವಾರದ ಎಲ್ಲಾ ದಿನಗಳಲ್ಲಿ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜಂಕ್ಷನ್ ನಿಂದ ರಾತ್ರಿ 8.25ಕ್ಕೆ ಹೊರಟು ಮರುದಿನ ಬೆಳಗ್ಗೆ 6 ಗಂಟೆಗೆ ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣ ತಲುಪಲಿದೆ. ಬೆಂಗಳೂರಿನಿಂದ ಸುಬ್ರಹ್ಮಣ್ಯ ರೋಡ್ ನಿಲ್ದಾಣಕ್ಕೆ ಹಲವಾರು ರೈಲುಗಳ ಸೇವೆ ಲಭ್ಯವಿದೆ. ಬೆಂಗಳೂರಿನಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಕೆಎಸ್ ಆರ್ ಟಿಸಿಯಿಂದ ನೇರ ಬಸ್ ಸೌಲಭ್ಯವಿದೆ. ಖಾಸಗಿ ಬಸ್ ಗಳ ಸೇವೆಯೂ ಲಭ್ಯವಿದೆ. ಬೆಂಗಳೂರಿನಿಂದ ಮಂಗಳೂರಿಗೆ ವಿಮಾನ ಮೂಲಕ ತೆರಳಿ ಅಲ್ಲಿಂದ ಬಸ್ ಅಥವಾ ರೈಲು ಮೂಲಕ ಕುಕ್ಕೆ ತಲುಪಬಹುದು.
ಮಂಗಳೂರಿನಿಂದ ಕುಕ್ಕೆ ಸುಬ್ರಹ್ಮಣ್ಯ: ಇನ್ನೂ ಮಂಗಳೂರಿನಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ 105 ಕಿಲೋ ಮೀಟರ್ ಅಂತರವಿದ್ದು ಕಡಬ ಮಾರ್ಗವಾಗಿ ದೇವಾಲಯವನ್ನು ತಲುಪಬಹುದು. ಈ ಮಾರ್ಗದಲ್ಲಿ ಸಾಕಷ್ಟು ಬಸ್ ಸೌಲಭ್ಯವಿದೆ. ಮಂಗಳೂರಿನಿಂದ ಸುಬ್ರಹ್ಮಣ್ಯಕ್ಕೆ ರೈಲು ಸೌಲಭ್ಯವನ್ನು ನೋಡುವುದಾದರೆ ರೈಲು ಸಂಖ್ಯೆ 16576 - ಗೊಮ್ಮಟೇಶ್ವರ ಎಕ್ಸ್ ಪ್ರೆಸ್ ವಾರದಲ್ಲಿ ಮೂರು ದಿನ ಅಂದರೆ ಸೋಮವಾರ ಬುಧವಾರ ಹಾಗೂ ಶುಕ್ರವಾರ ಸಂಚರಿಸುತ್ತೆ, ರೈಲು ಸಂಖ್ಯೆ 06489 ಮಂಗಳೂರು ಸೆಂಟ್ರಲ್ - ಸುಬ್ರಹ್ಮಣ್ಯ ರೋಡ್ ಎಕ್ಸೆ ಪ್ರೆಸ್ ವಿಶೇಷ ರೈಲು ವಾರದ ಎಲ್ಲಾ ದಿನಗಳಲ್ಲಿ ಹಾಗೂ 07378 ಸಂಖ್ಯೆಯ ವಿಜಯಪುರ ಸ್ಪೆಷಲ್ ರೈಲು ವಾರದ ಎಲ್ಲಾ ದಿನಗಳಲ್ಲಿ ಮಂಗಳೂರಿನಿಂದ ಮಧ್ಯಾಹ್ನ 2.50ಕ್ಕೆ ಹೊರಟು ಸಂಜೆ 4.55ಕ್ಕೆ ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣ ತಲುಪಲಿದೆ. ಎಸ್ ಎಂವಿಟಿ ಬೆಂಗಳೂರು ಎಕ್ಸ್ ಪ್ರೆಸ್ ರೈಲು ಸೇರಿ ಹಲವು ರೈಲುಗಳು ಮಂಗಳೂರಿನಿಂದ ಸುಬ್ರಹ್ಮಣ್ಯಕ್ಕೆ ಸಂಪರ್ಕ ಕಲ್ಪಿಸುತ್ತಿವೆ.
ಭಟ್ಕಳದಿಂದ ಕುಕ್ಕೆ ಸುಬ್ರಹ್ಮಣ್ಯ: ಭಟ್ಕಳದಿಂದ ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣಕ್ಕೆ 2 ರೈಲುಗಳು ಸಂಚಾರವಿದೆ. 16586 ಸಂಖ್ಯೆಯ ಎಸ್ ಎಂವಿಟಿ ಬೆಂಗಳೂರು ಎಕ್ಸ್ ಪ್ರೆಸ್ ರೈಲು ವಾರದ ಎಲ್ಲಾ ದಿನಗಳಂದು ಭಟ್ಕಳದಲ್ಲಿ ಮಧ್ಯಾಹ್ನ 2.24ಕ್ಕೆ ಹೊರಟು ರಾತ್ರಿ 8.40ಕ್ಕೆ ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣ ತಲುಪಲಿದೆ. ರೈಲು ಸಂಖ್ಯೆ 16596 - ಪಂಚಗಂಗಾ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರೈಲು ವಾರದ ಎಲ್ಲಾ ದಿನಗಳಲ್ಲಿ ಭಟ್ಕಳದಿಂದ ಸಂಜೆ 6 ಗಂಟೆಗೆ ಹೊರಟು ಮಧ್ಯರಾತ್ರಿ 12.10ಕ್ಕೆ ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣ ತಲುಪುತ್ತದೆ. ಭಟ್ಕಳದಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಸ್ ಗಳ ಸೌಲಭ್ಯವಿದೆ.
ಉತ್ತರ ಕರ್ನಾಟದಿಂದ ಕುಕ್ಕೆ ಸುಬ್ರಹ್ಮಣ್ಯ: ಬೆಳಗಾವಿ, ವಿಜಯಪುರ, ಬಾಗಲಕೋಟೆ, ಬೀದರ್, ಬಳ್ಳಾರಿ, ವಿಜಯನಗರ ಕಲಬುರಗಿ ಹಾಗೂ ರಾಯಚೂರು ಸೇರಿದಂತೆ ಉತ್ತರ ಕರ್ನಾಟಕ ಭಾಗದಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ವಾಯು ಕರ್ನಾಟಕ ಸಾರಿಗೆ, ರೈಲು ಹಾಗೂ ವಿಮಾನ ಸೌಲಭ್ಯವೂ ಇದೆ. ಬೆಳಗಾವಿಯಿಂದ ಮಂಗಳೂರಿಗೆ ವಿಮಾನದಲ್ಲಿ ಹೊರಟು ಅಲ್ಲಿಂದ ಬಸ್ ಅಥವಾ ರೈಲು ಮಾರ್ಗವಾಗಿ ಕುಕ್ಕೆ ತಲುಪಬಹುದು.
ಕುಕ್ಕೆ ಸುಬ್ರಹ್ಮಣ್ಯ ದೇವಾಲಯ ದರ್ಶನಕ್ಕೆ ಬಂದರೆ ಉಳಿದುಕೊಳ್ಳುವುದು ಹೇಗೆ? ವಸತಿ ಗೃಹಗಳ ವಿವರ ಇಲ್ಲಿದೆ
ಸುಬ್ರಹ್ಮಣ್ಯ ದೇವಾಲಯದ ಸಮೀಪದಲ್ಲೇ ಇರುವ ಅನಘಾ ಅತಿಥಿ ಗೃಹದಲ್ಲಿ ಉಳಿದುಕೊಳ್ಳಬಹುದು. ಇದು ಮುಖ್ಯ ದೇವಸ್ಥಾನ ಮತ್ತು ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಿಂದ 300 ಮೀಟರ್ ದೂರದಲ್ಲಿದೆ. ಮತ್ತೊಂದು ಅಕ್ಷರ ಅತಿಥಿ ಗೃಹವಿದೆ. ಇದು ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದ ಮುಂಭಾಗದಲ್ಲೇ ಇದೆ.
ಕುಕ್ಕೆ ಸುಬ್ರಹ್ಮಣ್ಯ ಸಮೀಪದಲ್ಲಿರು ಪ್ರವಾಸಿ ತಾಣಗಳು: ಸುಬ್ರಹ್ಮಣ್ಯ ದೇವಾಸ್ಥಾನಕ್ಕೆ ಹೋದಾಗ ಸಮೀಪದಲ್ಲೇ ಇರುವ ಕುಮಾರ ಪರ್ವತ, ಬಿಲದ್ವಾರ ಗುಹೆ, ಶಂಗೇರಿ ಮಠ, ಹೊಸಲಿಗಮ್ಮ ದೇವಾಲಯ, ಮತ್ಸ್ಯ ಮತ್ತು ಪಂಚಮಿ ತೀರ್ಥಗಳನ್ನು ಕಣ್ತುಂಬಿಕೊಳ್ಳಬಹುದು.