ಆದಿ ಲಕ್ಷ್ಮಿಯಿಂದ ಧಾನ್ಯ ಲಕ್ಷ್ಮಿವರೆಗೆ; ಅಷ್ಟಲಕ್ಷ್ಮಿಯರ ರೂಪಗಳು, ಯಾರ ಕೈಯಲ್ಲಿ ಏನಿರುತ್ತೆ? ಅರ್ಥವನ್ನು ತಿಳಿಯಿರಿ-spiritual culture adilakshmi to dhanya lakshmi ashtalakshmi faces hands meaning and blessing ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಆದಿ ಲಕ್ಷ್ಮಿಯಿಂದ ಧಾನ್ಯ ಲಕ್ಷ್ಮಿವರೆಗೆ; ಅಷ್ಟಲಕ್ಷ್ಮಿಯರ ರೂಪಗಳು, ಯಾರ ಕೈಯಲ್ಲಿ ಏನಿರುತ್ತೆ? ಅರ್ಥವನ್ನು ತಿಳಿಯಿರಿ

ಆದಿ ಲಕ್ಷ್ಮಿಯಿಂದ ಧಾನ್ಯ ಲಕ್ಷ್ಮಿವರೆಗೆ; ಅಷ್ಟಲಕ್ಷ್ಮಿಯರ ರೂಪಗಳು, ಯಾರ ಕೈಯಲ್ಲಿ ಏನಿರುತ್ತೆ? ಅರ್ಥವನ್ನು ತಿಳಿಯಿರಿ

ಅಷ್ಟಲಕ್ಷ್ಮಿಯರಲ್ಲಿ ಯಾವ ಲಕ್ಷ್ಮಿಯ ರೂಪ ಹೇಗಿದೆ. ದೇವತೆಗಳ ಆಶೀರ್ವಾದ, ವರಗಳು ಹೇಗಿವೆ. ಯಾವ ಲಕ್ಷ್ಮಿಯಿಂದ ಏನೆಲ್ಲಾ ಶುಭ ಫಲಗಳಿವೆ ಹಾಗೂ ಅಷ್ಟಲಕ್ಷ್ಮಿಯರ ಇತಿಹಾಸದ ಸಂಪೂರ್ಣ ಮಾಹಿತಿಯನ್ನು ಜ್ಯೋತಿಷಿ ಸತೀಶ್ ಭಾರದ್ವಾಜ್ ಅವರು ಬರೆದಿದ್ದಾರೆ.

ಆದಿ ಲಕ್ಷ್ಮಿಯಿಂದ ಧಾನ್ಯ ಲಕ್ಷ್ಮಿವರೆಗೆ; ಅಷ್ಟಲಕ್ಷ್ಮಿಯರ ರೂಪಗಳು, ಯಾರ ಕೈಯಲ್ಲಿ ಏನಿರುತ್ತೆ? ಅರ್ಥವನ್ನು ತಿಳಿಯಿರಿ
ಆದಿ ಲಕ್ಷ್ಮಿಯಿಂದ ಧಾನ್ಯ ಲಕ್ಷ್ಮಿವರೆಗೆ; ಅಷ್ಟಲಕ್ಷ್ಮಿಯರ ರೂಪಗಳು, ಯಾರ ಕೈಯಲ್ಲಿ ಏನಿರುತ್ತೆ? ಅರ್ಥವನ್ನು ತಿಳಿಯಿರಿ

ಮಹಾಲಕ್ಷ್ಮಿಯ ಜನನದ ಬಗ್ಗೆ ಹಲವು ಮೂಲಗಳು ದೊರೆಯುತ್ತವೆ. ಸಮುದ್ರಮಥನದ ವೇಳೆಯಲ್ಲಿ ಶ್ರೀ ಮಹಾಲಕ್ಷಿಯ ಜನನವಾಗುತ್ತದೆ. ಆಂದರೆ ಮಹಾಲಕ್ಷ್ಮಿಯು ಕ್ಷೀರಸಾಗರದಲ್ಲಿ ಜನಿಸಿದವಳೆಂದು ತಿಳಿದುಬರುತ್ತದೆ. ಈಕೆಯು ಶ್ರೀಮನ್ನಾರಾಯಣದ ಪತ್ನಿ. ಇದಕ್ಕೂ ಮೊದಲು ಲಕ್ಷ್ಮಿಯು ಭೃಗು ಮಹರ್ಷಿಯ ಪತ್ನಿಯಾದ ಖ್ಯಾತಿಯ ಗರ್ಭದಲ್ಲಿ ಜನಿಸಿದವಳು ಎಂಬ ಉಲ್ಲೇಖವಿದೆ. ಸೂರ್ಯವಂಶದ ಅಂಬರೀಷನ ಮಗಳಾದ ಶ್ರೀಮತಿಯೂ ಲಕ್ಷ್ಮಿಯ ಸ್ವರೂಪ ಎಂದು ರಾಮಾಯಣದಿಂದ ತಿಳಿದುಬರುತ್ತದೆ. ಸೂರ್ಯದೇವನು ಬ್ರಹ್ಮ, ವಿಷ್ಣು ಮತ್ತು ಮಹೇಶ್ವರನ ರೂಪ ಎನ್ನಲಾಗಿದೆ. ಸೂರ್ಯನು ವಿಷ್ಣುವಿನ ರೂಪದಲ್ಲಿದ್ದಾಗ ತಾವರೆಹೂವಿನಲ್ಲಿ ಮಹಾಲಕ್ಷ್ಮಿಯ ಜನನವಾಯಿತೆಂದು ತಿಳಿದುಬರುತ್ತದೆ. ಇದೇ ರೀತಿ ಸೀತಾಮಾತೆ, ರುಕ್ಮಿಣಿ ಮತ್ತು ಭೂದೇವಿಯರು ಮಹಾಲಕ್ಷ್ಮಿಯ ಸ್ವರೂಪ ಎಂದು ಗ್ರಂಥಗಳಲ್ಲಿ ನಿರೂಪಿಸಲ್ಪಟ್ಟಿದೆ. ಅಷ್ಟ ಲಕ್ಷ್ಮಿಯರ ವಿವರ ಇಲ್ಲಿದೆ.

ಆದಿಲಕ್ಷ್ಮಿ

ಭೃಗು ಮಹರ್ಷಿಯು ಪ್ರಾಚೀನ ಭಾರತದ ಸಪ್ತರ್ಷಿಗಳಲ್ಲಿ ಒಬ್ಬರಾಗಿದ್ದರೆ. ಧಾರ್ಮಿಕ ಗ್ರಂಥಗಳ ಅನ್ವಯ ಬ್ರಹ್ಮನು ಸೃಷ್ಟಿಸಿದ ಪ್ರಜಾಪತಿಗಳಲ್ಲಿ ಭೃಗು ಮಹರ್ಷಿಗಳು ಸಹ ಒಬ್ಬರು. ತ್ರೇತಾಯುಗದಲ್ಲಿ ಇವರು ಬರೆದ ಭೃಗು ಸಂಹಿತವು ಇಂದಿಗೂ ಜನಪ್ರಿಯತೆಯನ್ನು ಪಡೆದಿದೆ. ಇವರನ್ನು ಬ್ರಹ್ಮನ ಮಾನಸ ಪುತ್ರನೆಂದು ಪರಿಗಣಿಸಲಾಗಿದೆ. ಇವರ ಪಾದದಲ್ಲಿ ಮೂರನೆ ಕಣ್ಣಿರುತ್ತದೆ. ಭಗವಾನ್ ವಿಷ್ಣುವು ಈ ಕಣ್ಣನ್ನು ಕೈಯಿಂದ ಬಲವಂತವಾಗಿ ತೆಗೆಯುತ್ತಾನೆ. ಆಗ ಇವರಲ್ಲಿದ್ದ ತಾನೆಂಬ ಭಾವನೆ ದೂರವಾಗುತ್ತದೆ. ಇವರ ಮಗಳಾಗಿ ಹುಟ್ಟುವವಳೇ ಶ್ರೀ ಆದಿಲಕ್ಷ್ಮಿ. ಎರಡುಕೈಗಳಲ್ಲಿ ತಾವರೆಯ ಹೂವು ಮತ್ತು ಬಿಳಿ ಬಣ್ಣದ ಧ್ವಜವನ್ನು ಹಿಡಿದುಕೊಂಡಿದ್ದಾಳೆ. ಈಕೆಯ ಕೈಗಳಲ್ಲಿ ಅಭಯದ ಯೋಗಮುದ್ರೆ ಕಾಣುತ್ತದೆ. ಮತ್ತೊಂದು ಕೈಯಲ್ಲಿ ವರದಾ ಮುದ್ರೆ ಇದೆ. ಆದಿ ಎಂದರೆ ಆರಂಭ ಅಥವ ಮೊದಲು ಎಂಬ ಅರ್ಥ ಬರುತ್ತದೆ. ಆದಿಲಕ್ಷ್ಮಿಯನ್ನು ಪೂಜಿಸಿದಲ್ಲಿ ಮನದ ದುಗುಡವು ಮರೆಯಾಗುತ್ತದೆ. ನಗು ತುಂಬಿರುವ ಮನೆಯಲ್ಲಿ ಈಕೆ ನೆಲೆಸಿರುತ್ತಾಳೆ. ಈಕೆಯ ಸ್ತುತಿಯಿಂದ ಆರಂಭಿಸಿದ ಕೆಲಸ ಕಾರ್ಯಗಳಲ್ಲಿನ ಅಡಚಣೆಗಳು ದೂರವಾಗುತ್ತವೆ.

ಧನ ಲಕ್ಷ್ಮಿ

ಧನಲಕ್ಷ್ಮಿಯ ಮೊಗವು ಬಂಗಾರದಂತೆ ಹೊಳೆಯುತ್ತಿರುತ್ತದೆ. ಈಕೆಯು ಧನ, ಕನಕಗಳಿಂದ ಕೂಡಿದ ಸಂಪತ್ತಿನ ಪ್ರತೀಕವಾಗಿದ್ದಾಳೆ. ಸಂಪತ್ತಿನ ದೇವತೆಯಾದ ಈಕೆಯ ಆವಾಸ ಸ್ಥಾನ ಮನೆಯ ಮುಂಬಾಗಿಲಿನ ಹೊಸಿಲು. ಈ ಕಾರಣಕ್ಕಾಗಿಯೇ ಮನೆಯ ಹಿರಿಯರು ಹೊಸಿಲನ್ನು ತುಳಿಯಬಾರದು ಎಂದು ಹೇಳುವುದು. ಹಣದ ತೊಂದರೆ ಇರುವವರು ಪ್ರತಿದಿನವು ಮುಂಬಾಗಿಲನ್ನು ಮನೆಯ ಹೊರಗಿನಿಂದ ಶುಚಿಗೊಳಿಸಿ ತಾವರೆ ಹೂ ಅಥವಾ ಯಾವುದೇ ಬಿಳಿ ಹೂವನ್ನು ಇಡುತ್ತಾಬಂದರೆ ಅವರ ದಾರಿಧ್ಯವು ದೂರವಾಗುವುದು. ಧನ ಲಕ್ಷ್ಮಿ ದೇವಿಯಕೈಯಲ್ಲಿ ಆರು ಮಾದರಿಯ ಶಸ್ತ್ರಗಳು ಇರುತ್ತವೆ. ಕೆಂಪು ಬಣ್ಣದ ಉಡುಪಿನಲ್ಲಿ, ಕಾಣುವ ಈಕೆ ತನ್ನ ಕೈಯಲ್ಲಿ ಚಕ್ರ, ಶಂಖ, ಮಾವಿನ ಎಲೆಗಳಿಂದ ಅಲಂಕರಿಸಲ್ಪಟ್ಟ ತೆಂಗಿನ ಕಾಯಿಯನ್ನು ಹೊಂದಿರುವ ಸುಂದರವಾದ ಕಳಶವನ್ನು ಹೊಂದಿರುತ್ತಾಳೆ. ಈ ಕಳಶವನ್ನು ಅಮೃತ ಕಳಶ ಎಂದು ಕೆಲವು ಧಾರ್ಮಿಕ ಗ್ರಂಥಗಳಿಂದ ತಿಳಿದುಕೊಳ್ಳಬಹುದು. ಇದಲ್ಲದೆ ಬಿಲ್ಲು-ಬಾಣ, ಕಮಲ ಮತ್ತು ಅಭಯ ಮುದ್ರೆಯನ್ನು ಹೊಂದಿರುತ್ತಾಳೆ. ಮತ್ತೊಂದು ಕೈಯಲ್ಲಿ ನೆಲದ ಮೇಲೆ ಬೀಳುತ್ತಿರುವ ಚಿನ್ನದ ನಾಣ್ಯಗಳು ಇರುತ್ತವೆ. ಧನಲಕ್ಷ್ಮಿಗೆ ಸಿಹಿಭರಿತ ಅಡುಗೆಯನ್ನು ನೇವೇಧ್ಯ ಮಾಡುವುದರಿಂದ ಹಣಕಾಸಿನ ತೊಂದರೆಯು ದೂರವಾಗುತ್ತವೆ.

ಧಾನ್ಯಲಕ್ಷ್ಮಿ

ಧನ್ಯಾಲಕ್ಷ್ಮಿ ಹೆಸರೇ ಸೂಚಿಸುವಂತೆ ಈಕೆ ಕೃಷಿಕಾರ್ಯದ ಅಧಿಪತಿ. ಈಕೆಯು ಕೃಷಿ ಸಂಪತ್ತಿನ ದೇವತೆ. ಮನೆಯಲ್ಲಿ ಈಕೆಯ ಆವಾಸಸ್ಥಾನ ಮನೆಯ ಹಿತ್ತಲು. ಈ ಕಾರಣದಿಂದಲೇ ಹಿಂದಿನ ಕಾಲದಲ್ಲಿ ಮನೆಯ ಹಿತ್ತಲಿನಲ್ಲಿ ತರಕಾರಿ ಮತ್ತು ಹೂಗಳನ್ನು ಬೆಳೆಸುತ್ತಿದ್ದರು. ಈ ಕಾರಣದಿಂದಲೇ ಮುಂಬಾಗಿಲಿಗೆ ಸರಿಸಮಾನವಾಗಿ ಮನೆಯ ಹಿಂಬಾಗಿಲನ್ನು ನಿರ್ಮಿಸುತ್ತಿದ್ದರು. ಸಾಮಾನ್ಯವಾಗಿ ಈ ದಿನಗಳಲ್ಲಿಯೂ ಹಳ್ಳಿಗಳಲ್ಲಿ ಮನೆಯ ಮುಂಬಾಗಿಲ ಬಳಿ ಮತ್ತು ಹಿತ್ತಲಬಾಗಿಲ ಬಳಿ ತುಳಸಿಕಟ್ಟೆ ಕಟ್ಟುತ್ತಾರೆ. ಧಾನ್ಯಲಕ್ಷ್ಮಿಯು ಧರಿಸುವ ಉಡುಪು ಹಸಿರುಬಣ್ಣದಿಂದ ಕೂಡಿರುತ್ತದೆ. ಈಕೆಯ ಕೈಯಲ್ಲಿ ಎಂಟು ರೀತಿಯ ಶಸ್ತ್ರವಿರುತ್ತದೆ. ಎರಡು ತಾವರೆಯ ಹೂಗಳಿರುತ್ತವೆ. ಉತ್ತಮ ಬೆಳೆಯನ್ನು ಸೂಚಿಸುವ ಭತ್ತ ಮತ್ತು ಕಬ್ಬನ್ನು ಕೈಯಲ್ಲಿ ಹಿಡಿದಿರುತ್ತದೆ. ಇದಲ್ಲದೆ ಈಕೆಯ ಕೈಯಲ್ಲಿ ಹಣ್ಣುಗಳು ಇರುತ್ತವೆ. ಈಕೆಯ ಕೈಗಳಲ್ಲಿ ಅಭಯ ಮತ್ತು ವರದಾ ಮುದ್ರೆಯು ರಾರಾಜಿಸುತ್ತಿರುತ್ತವೆ. ಧಾನ್ಯಲಕ್ಷ್ಮಿಯ ಪೂಜೆ ಮಾಡುವ ಮನೆಯಲ್ಲಿ ಧನ ಧಾನ್ಯವು ಸಮೃದ್ಧಿಯಾಗಿ ಇರುತ್ತದೆ. ಸುಖ ಸಂತೋಷದಿಂದ ಜೀವನ ನಡೆಸುತ್ತಾರೆ. ಅನುಪಯುಕ್ತ ತರಕಾರಿ ಮತ್ತು ಹಣ್ಣುಗಳನ್ನು ಮನೆಯಿಂದ ಹೊರಗೆ ಇಡುವುದರಿಂದ ಧಾನ್ಯಲಕ್ಷ್ಮಿಯು ಮನೆಯಲ್ಲಿ ಶಾಶ್ವತವಾಗಿ ನೆಲೆಸುತ್ತಾಳೆ. ಒಣಗಿದ ತರಕಾರಿಗಳಿಗೆ ಯಾವುದೇ ಕಾರಣಕ್ಕೂ ಬೆಂಕಿಯನ್ನು ಹಚ್ಚಬಾರದು.

ಗಜ ಲಕ್ಷ್ಮಿ

ಗಜ ಎಂದರೆ ಆನೆ ಎಂಬ ಅರ್ಥ ಬರುತ್ತದೆ. ಅಂದರೆ ಗಜಲಕ್ಷ್ಮಿಯ ಪೂಜೆಯಿಂದ ಮನೆಯಲ್ಲಿ ಪ್ರಾಣಿ ಸಂಪತ್ತು ಹೆಚ್ಚುತ್ತದೆ. ಮನೆಯಲ್ಲಿ ಸಾಕಿರುವ ಪ್ರಾಣಿಗಳಿಗಿರುವ ತೊಂದರೆ ದೂರವಾಗುತ್ತವೆ. ಇದಲ್ಲದೆ ಕುಟುಂಬದ ಜವಾಬ್ದಾರಿಯು ದೊರೆಯುತ್ತದೆ. ವಂಶದ ಹಿರಿಯನ ಪಟ್ಟವು ದೊರೆಯುತ್ತದೆ. ಉದ್ಯೋಗದಲ್ಲಿ ಉನ್ನತ ಅಧಿಕಾರ ಲಭಿಸುತ್ತದೆ. ಇಂದ್ರನು ಕಳೆದುಕೊಂಡ ಸಂಪತ್ತನ್ನು ಗಜಲಕ್ಷ್ಮಿಯ ಪೂಜೆಯ ನಂತರ ಸಾಗರದಿಂದ ಮರಳಿ ಗಳಿಸುತ್ತಾನೆ. ಗಜಲಕ್ಷ್ಮಿಯು ಕೆಂಪಾದ ಉಡುಪಿನಲ್ಲಿ ನಾಲ್ಕು ಶಸ್ತ್ರಗಳನ್ನೂ, ಎರಡು ಕೈಗಳಲ್ಲಿ ತಾವರೆ ಹೂಗಳನ್ನು ಹೊಂದಿರುತ್ತಾಳೆ. ಇದರ ಜೊತೆ ಅಭಯ ಮುದ್ರಾ ಮತ್ತು ವರದಾ ಮುದ್ರೆಯನ್ನೂ ಕೈಯಲ್ಲಿ ಧರಿಸಿದ್ದಾಳೆ. ಇದಲ್ಲದೆ ಮುಖ್ಯವಾಗಿ ಗಜಲಕ್ಷ್ಮಿಯ ಅಕ್ಕ ಪಕ್ಕ ಎರಡು ಆನೆಗಳು ನೀರಿನ ಮಡಕೆಗಳಿಂದ ಸ್ನಾನ ಮಾಡುತ್ತಿರುವಂತೆ ಕಂಡುಬರುತ್ತದೆ.

ಸಂತಾನ ಲಕ್ಷ್ಮಿ

ಹೆಸರೇ ಸೂಚಿಸುವಂತೆ ಸಂತಾನ ಲಕ್ಷ್ಮಿಯು ಒಳ್ಳೆಯ ಸಂತಾನವನ್ನು ಕರುಣಿಸುವ ದೇವತೆ ಆಗಿದ್ದಾಳೆ. ಈಕೆಯ ಕೈಯಲ್ಲಿ ಆರು ರೀತಿಯ ಶಸ್ತ್ರಗಳು ಇರುತ್ತವೆ. ಆಕೆಯ ಕೈಯಲ್ಲಿ ನೀರು, ಮಾವಿನ ಎಲೆಗಳು ಮತ್ತು ನೀರಿನಿಂದ ಇರುವ ಎರಡು ಕಳಶಗಳು ಸಂತಾನ ಲಕ್ಷ್ಮಿಯ ಕೈಯಲ್ಲಿದೆ. ಅವಳ ತೊಡೆಯ ಮೇಲೆ ಒಂದು ಮಗುವಿದ್ದು ಒಂದು ಕೈಯಿಂದ ಮಗುವನ್ನು ಹಿಡಿದಿದೆ. ಮತ್ತೊಂದು ಕೈಯಲ್ಲಿ ಅಭಯ ಮುದ್ರೆ ಕಂಡುಬರುತ್ತದೆ. ತನ್ನ ಸಂತಾನಕ್ಕಾಗಿ ಯಾವುದೇ ಹೋರಾಟಕ್ಕೂ ಸೈ ಎಂಬ ಸಂದೇಶವನ್ನು ಆಕೆಯು ನೀಡುತ್ತಾಳೆ. ಮಗುವು ತನ್ನ ಕೈಯಲ್ಲಿ ಕಮಲವನ್ನು ಹಿಡಿದಿರುತ್ತದೆ. ಮುಖ್ಯವಾಗಿ ನವವಿವಾಹಿತರು ಸಂತಾನ ಲಕ್ಷ್ಮಿಯ ಪೂಜೆಯನ್ನು ಮಾಡಿದಲ್ಲಿ ಸಂತಾನ ಲಭಿಸುತ್ತದೆ. ಈಕೆಯ ಪೂಜೆಯಿಂದ ಕುಟುಂಬದ ಮಕ್ಕಳ ಆರೋಗ್ಯದಲ್ಲಿ ಸ್ಥಿರತೆ ಕಂಡುಬರುತ್ತದೆ. ಒಂದು ವೇಳೆ ತಾಯಿ ಮತ್ತು ಮಕ್ಕಳ ನಡುವೆ ಉತ್ತಮ ಬಾಂಧವ್ಯ ಇರದೆ ಇದ್ದಲ್ಲಿ ಸಂತಾನ ಲಕ್ಷ್ಮಿಯ ಪೂಜೆಯನ್ನು ಮಾಡಿದರೆ ಉತ್ತಮ ಅನುಬಂದ ಮರುಕಳಿಸುತ್ತದೆ.

ಧೈರ್ಯ ಲಕ್ಷ್ಮಿ

ಶೌರ್ಯ ಸಾಹಸದ ಪ್ರತೀಕವೇ ಧೈರ್ಯ ಲಕ್ಷ್ಮಿ. ಹಿಂದಿನ ಕಾಲದಲ್ಲಿ ಯುದ್ದದ ಸಮಯದಲ್ಲಿ ರಾಜ ಮಹಾರಾಜರು ಧೈರ್ಯಲಕ್ಷ್ಮಿಯ ಪೂಜೆಯನ್ನು ಮಾಡುತ್ತಿದ್ದರು. ಪ್ರಸಕ್ತ ಸನ್ನಿವೇಶದಲ್ಲಿ ನಮ್ಮ ನಿತ್ಯ ಜೀವನದಲ್ಲಿ ಎದುರಾಗುವ ತೊಂದರೆಗಳನ್ನು ನಿವಾರಿಸಲು ಧೈರ್ಯ ಮತ್ತು ಆತ್ಮಶಕ್ತಿಯನ್ನು ಗಳಿಸಲು ಈಕೆಯನ್ನು ಪೂಜಿಸುವ ಅವಶ್ಯಕತೆ ಇದೆ. ಕೆಂಪು ಬಣ್ಣದ ಉಡುಪಿನಲ್ಲಿರುವ ಧೈರ್ಯಲಕ್ಷ್ಮಿಯು ತನ್ನ ಕೈಯಲ್ಲಿ ಚಕ್ರ, ಶಂಖ, ಬಿಲ್ಲು ಬಾಣ, ತಿಶೂಲ, ಕತ್ತಿಯನ್ನು ತನ್ನ ಕೈಯಲ್ಲಿ ಹಿಡಿದ್ದಾಳೆ. ಓಲೆಗರಿಯ ಒಂದು ಕಟ್ಟು ಒಂದು ಕೈಯಲ್ಲಿ ಇದೆ. ಅಭಯ ಮುದ್ರಾ ಮತ್ತು ವರದ ಮುದ್ರೆಯು ಉಳಿದ ಕೈಗಳಲ್ಲಿ ಇವೆ. ಈಕೆಯ ಪೂಜೆಯಿಂದ ಆತ್ಮವಿಶ್ವಾಸವು ಹೆಚ್ಚುತ್ತದೆ.

ವಿಜಯ ಲಕ್ಷ್ಮಿ

ವಿಜಯ ಲಕ್ಷ್ಮಿಗೆ ಜಯ ಲಕ್ಷ್ಮಿ ಎಂಬ ಮತ್ತೊಂದು ಹೆಸರಿದೆ. ರಾಜ ಮಹಾರಾಜರ ಕಾಲದಲ್ಲಿ ಯುದ್ದವನ್ನು ಆರಂಭಿಸುವ ಮುನ್ನ ವಿಜಯಲಕ್ಷ್ಮಿಯ ಪೂಜೆಯನ್ನು ಮಾಡುತ್ತಿದ್ದರು. ಇದರಿಂದ ಜಯವು ಲಭಿಸುತ್ತದೆ ಎಂಬ ನಂಬಿಕೆ ಇತ್ತು. ಜಯವು ದೊರೆಯುತ್ತಿತ್ತು. ಈಕೆಯು ಕೆಂಪು ಉಡುಪಿನಲ್ಲಿ ಇದ್ದು ತನ್ನ ಕೈಗಳಲ್ಲಿ ಚಕ್ರ, ಶಂಖು, ಕತ್ತಿ, ಗುರಾಣಿ, ತಾವರೆಹೂಗಳನ್ನು ಹೊಂದಿರುತ್ತಾಳೆ. ತನ್ನ ಉಳಿದ ಕೈಗಳಲ್ಲಿ ಅಭಯ ಮುದ್ರಾ ಮತ್ತು ವರದಾ ಮುದ್ರೆಯು ಕಾಣುತ್ತದೆ. ಕುಟುಂಬದ ಜವಾಬ್ದಾರಿಯು ದೊರೆತು ಯಶಸ್ಸನ್ನು ಗಳಿಸಲು ವಿಜಲಕ್ಷ್ಮಿಯ ಪೂಜೆ ಅತಿ ಮುಖ್ಯವಾಗುತ್ತದೆ. ಉದ್ಯೋಗದಲ್ಲಿ ಉನ್ನತ ಅಧಿಕಾರ ಗಳಿಸಲು ಮತ್ತು ಸಹೋದ್ಯೋಗಿಗಳ ನಡುವೆ ಉತ್ತಮ ಬಾಂಧವ್ಯ ಉಂಟಾಗಲು ಈಕೆಯ ಪೂಜೆಯು ಸಹಕಾರಿಯಾಗುತ್ತದೆ.

ಐಶ್ವರ್ಯ ಲಕ್ಷ್ಮಿ

ಐಶ್ವರ್ಯ ಲಕ್ಷ್ಮಿಯ ಮೊಗದಲ್ಲಿ ಗೆಲುವಿನ ಕಾಂತಿ ಹೊಳೆದಿರುತ್ತದೆ. ಈಕೆಯ ಮುಖವು ಬಂಗಾರದಂತೆ ಕಾಣುತ್ತದೆ. ಈಕೆಯು ಸಂಪತ್ತನ್ನು ಪ್ರತಿಪಾದಿಸುವ ದೇವತೆ ಆಗುತ್ತಾಳೆ. ಹಣ, ಚಿನ್ನ ಬೆಳ್ಳಿಯ ಒಡವೆಗಳು, ಭೂಮಿ, ವಾಹನವನ್ನು ಸಹ ಈಕೆಯ ಅನುಗ್ರಹದಿಂದ ಪ್ರಾಪ್ತಿಯಾಗುತ್ತದೆ. ಹೊಸಿಲನ್ನು ಪೊರಕೆಯಿಂದ ಗುಡಿಸಬಾರದು. ಕಾರಣ ಹೊಸಿಲೆ ಲಕ್ಷ್ಮಿಯ ವಾಸಸ್ಥಾನ. ದೀಪವನ್ನು ಹಚ್ಚುವ ವೇಳೆ ಮನೆಯನ್ನು ಲಕ್ಷ್ಮಿಯು ಪ್ರವೇಶಿಸುತ್ತಾಳೆ. ಈ ಕಾರಣದಿಂದಾಗಿ ದೀಪ ಹಚ್ಚುವ ವೇಳೆ ಮನೆಯ ಕಸವನ್ನು ಗುಡಿಸಿ ಮನೆಯಿಂದ ಹೊರಗೆ ಎಸೆಯಬಾರದು. ಕೆಂಪು ಮತ್ತು ಹಸಿರು ಬಣ್ಣದ ಉಡುಪನ್ನು ಧರಿಸಿರುತ್ತಾಳೆ. ತಾವರೆ ಹೂವು ಮತ್ತು ಐಶ್ವರ್ಯತುಂಬಿದ ಚಿನ್ನದ ಕಳಶ ಈಕೆಯ ಕೈಯಲ್ಲಿ ಇರುತ್ತದೆ. ಲಕ್ಷ್ಮಿ ದೇವಿಯಕೈಯಲ್ಲಿ ಚಕ್ರ, ಶಂಖ, ಮಾವಿನ ಎಲೆಗಳಿಂದ ಅಲಂ ಕರಿಸಲ್ಪಟ್ಟ ತೆಂಗಿನ ಕಾಯಿಯನ್ನು ಹೊಂದಿರುವ ವಸುಂದರವಾದ ಕಳಶವನ್ನು ಹೊಂದಿರುತ್ತಾಳೆ. ಬಿಳಿ ಮತ್ತು ಕೆಂಪುಬಣ್ಣದ ಹೂಗಳಿಂದ ಪೂಜೆಮಾಡುವುದು. ಹೆಚ್ಚು ಲಾಭಕರ. ಪೂಜೆಯ ವೇಳೇ ಐಶ್ವರ್ಯಲಕ್ಷ್ಮಿಗೆ ಸಕ್ಕರೆ ಅಥವ ಬೆಲ್ಲವನ್ನು ಉಪಯೋಗಿಸಿ ತಯಾರಿಸಿದ ಅನ್ನವನ್ನು ಸಮರ್ಪಿಸುವುದು ಬಲು ಮುಖ್ಯ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.