ದಶರಥ ವಿರಚಿತ ಶನಿ ಸ್ತೋತ್ರ ಪಠಿಸಿದರೆ ದೋಷ ನಿವಾರಣೆಯಾಗುತ್ತೆ; ಆಡಿಯೊ ಕೇಳಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ದಶರಥ ವಿರಚಿತ ಶನಿ ಸ್ತೋತ್ರ ಪಠಿಸಿದರೆ ದೋಷ ನಿವಾರಣೆಯಾಗುತ್ತೆ; ಆಡಿಯೊ ಕೇಳಿ

ದಶರಥ ವಿರಚಿತ ಶನಿ ಸ್ತೋತ್ರ ಪಠಿಸಿದರೆ ದೋಷ ನಿವಾರಣೆಯಾಗುತ್ತೆ; ಆಡಿಯೊ ಕೇಳಿ

Shani Stotra: ಕರ್ಮಫಲಗಳಲ್ಲಿ ಶುಭ, ಅಶುಭ ಫಲಗಳನ್ನ ಕೊಡುವವನು ಶನಿ. ಸಾಡೇಸಾತಿ ಎಂದರೆ ಆಸ್ತಿಕರು ಸಂಕಷ್ಟಕ್ಕೆ ಬೆದರುತ್ತಾರೆ. ಶನಿ ದೋಷದಿಂದ ಮುಕ್ತಿ ಹೊಂದಲು ದಶರಥ ವಿರಚಿತ ಶನಿ ಸೋತ್ರಗಳನ್ನು ಪಠಿಸಿ.

ಶನಿ ದೋಷ ನಿವಾರಣೆಗೆ ದಶರಥ ವಿರಚಿತ ಶನಿ ಸ್ತೋತ್ರ ಪಠಿಸಿ. ಇಲ್ಲಿ ಆಡಿಯೊವನ್ನು ನೀಡಲಾಗಿದೆ.
ಶನಿ ದೋಷ ನಿವಾರಣೆಗೆ ದಶರಥ ವಿರಚಿತ ಶನಿ ಸ್ತೋತ್ರ ಪಠಿಸಿ. ಇಲ್ಲಿ ಆಡಿಯೊವನ್ನು ನೀಡಲಾಗಿದೆ.

Shani Stotra: ಜ್ಯೋತಿಷ್ಯದಲ್ಲಿ, ಶನಿಯನ್ನು ನ್ಯಾಯದ ದೇವರು ಮತ್ತು ಕರ್ಮದ ಫಲಿತಾಂಶಗಳನ್ನು ನೀಡುವ ದೇವರು ಎಂದು ಪರಿಗಣಿಸಲಾಗುತ್ತದೆ. ಗ್ರಹಗಳ ಪೈಕಿ ಅತ್ಯಂತ ನಿಧಾನವಾಗಿ ಚಲಿಸುವ ಗ್ರಹ ಶನಿ. ವೈದಿಕ ಜ್ಯೋತಿಷ್ಯದಲ್ಲಿ, ಶನಿಯನ್ನು ನ್ಯಾಯದ ದೇವರು ಮತ್ತು ಕರ್ಮದ ಫಲಿತಾಂಶಗಳನ್ನು ನೀಡುವ ದೇವರು ಎಂದು ಪರಿಗಣಿಸಲಾಗುತ್ತದೆ. ಶನಿ ಎಲ್ಲರಿಗೂ ಅವರ ಕರ್ಮಗಳಿಗೆ ಅನುಗುಣವಾಗಿ ಫಲವನ್ನು ನೀಡುತ್ತಾನೆ.

ಕರ್ಮಫಲಗಳಲ್ಲಿ ಶುಭ ಹಾಗೂ ಅಶುಭ ಫಲಗಳಿಗೇನೂ ಕೊರತೆ ಇಲ್ಲ. ಶನಿದೆಸೆ, ಸಾಡೇಸಾತಿ ಎಂದರೆ ಆಸ್ತಿಕರು ಸಂಕಷ್ಟಕ್ಕೆ ಬೆದರುತ್ತಾರೆ. ಆಗ ಪರಿಹಾರಕ್ಕೆ ದಶರಥ ಮಹಾರಾಜ ಶನಿದೇವನನ್ನು ಸ್ತುತಿಸಲು ರಚಿಸಿದ ಶನಿಸ್ತೋತ್ರವನ್ನು ಹೇಳುವಂತೆ ಸೂಚಿಸಲಾಗುತ್ತದೆ. ಶನಿದೇವರನ್ನು ಮೆಚ್ಚಿಸಲು ದಶರಥ ಮಹಾರಾಜ ಶನಿದೇವನನ್ನು ಸ್ತುತಿಸಲು ರಚಿಸಿದ ಶನಿಸ್ತೋತ್ರ ಹೇಳಬೇಕು ಎನ್ನುತ್ತಾರೆ ಹಿರೀಕರು. ಇದಕ್ಕೆ ಕಾರಣವೂ ಇಲ್ಲದಿಲ್ಲ. ಪಿಪ್ಪಲಾದ ಮುನಿಯು ಶನಿದೇವನನ್ನು ಹತ್ತು ಹೆಸರುಗಳಿಂದ ಸ್ತುತಿಸಿದ್ದು, ಆ ಹತ್ತು ಹೆಸರುಗಳ ನಿತ್ಯಪಠಣ ಮಾಡಿದರೆ ಅದುವೇ ನಮ್ಮನ್ನು ಶನಿಪೀಡೆಯಿಂದ ಪಾರುಮಾಡುತ್ತದೆ ಎಂದು ದಶರಥ ಮಹಾರಾಜ ಹೇಳಿದ್ದ ಎಂಬ ಉಲ್ಲೇಖ ಪುರಾಣದಲ್ಲಿದೆ. ಹಾಗಾದರೆ, ದೃಶರಥ ಕೃತ ಶನಿಸ್ತೋತ್ರ ಯಾವುದು? ಇಲ್ಲಿ ಅರ್ಥದೊಂದಿಗೆ ವಿವರವಾಗಿ ನೀಡಲಾಗಿದೆ.

ಅಸ್ಯ ಶ್ರೀ ಶನೈಶ್ಚರ ಸ್ತೋತ್ರಸ್ಯ | ದಶರಥ ಋಷಿಃ |

ಶನೈಶ್ಚರೋ ದೇವತಾ | ತ್ರಿಷ್ಟುಪ್ ಛಂದಃ |

ಶನೈಶ್ಚರ ಪ್ರೀತ್ಯರ್ಥಂ ಜಪೇ ವಿನಿಯೋಗಃ ||

ಭಾವಾರ್ಥ: ಈ ಶನೈಶ್ಚರ ಸ್ತೋತ್ರದ ದ್ರಷ್ಟಾರ ಅಥವಾ ಕರ್ತೃ ದಶರಥನೂ, ಸ್ತೋತ್ರ ದೇವತೆ ಶನಿಯೂ ಆಗಿದ್ದಾರೆ. ಇದು ತ್ರಿಷ್ಟುಪ್ ಛಂದಸ್ಸಿನ ರಚನೆ. ಶನೈಶ್ಚರನನ್ನು ಸಂಪ್ರೀತಗೊಳಿಸಲು ಈ ಸ್ತೋತ್ರ ಪಠಿಸಲಾಗುತ್ತದೆ.

ದಶರಥ ಉವಾಚ:

ಕೋಣೋ ಅಂತಕೋ ರೌದ್ರಯಮೋSಥ ಬಭ್ರುಃ |

ಕೃಷ್ಣಃ ಶನಿಃ ಪಿಂಗಲ ಮಂದ ಸೌರಿ ||

ನಿತ್ಯಂ ಸ್ಮೃತೋಯೋ ಹರತೇ ಚ ಪೀಡಾಂ |

ತಸ್ಮೈನಮಃ ಶ್ರೀ ರವಿನಂದನಾಯ || 1 ||

ಭಾವಾರ್ಥ: ಕೋಣ, ಅಂತಕ, ರೌದ್ರ, ಯಮ, ಬಭ್ರು, ಕೃಷ್ಣ, ಶನಿ, ಪಿಂಗಲ, ಮಂದ, ಸೌರಿ ಇವು ಶನಿದೇವನ ಹತ್ತು ಹೆಸರುಗಳು. ಇವುಗಳನ್ನು ನಿತ್ಯವೂ ಪಠಿಸುವುದರಿಂದ ಯಾರು ಸಂಪ್ರೀತನಾಗಿ ಪೀಡೆಗಳನ್ನು ಪರಿಹರಿಸುವನೋ ಅಂಥ ರವಿತನಯನಿಗೆ ನನ್ನ ನಮಸ್ಕಾರ.

ಸುರಾಸುರಾಃ ಕಿಂ ಪುರುಷೋರಗೇಂದ್ರಾ|

ಗಂಧರ್ವ ವಿದ್ಯಾಧರ ಪನ್ನಗಾಶ್ಚ ||

ಪೀಡ್ಯಂತಿ ಸರ್ವೆ ವಿಷಮಸ್ಥಿತೇನ |

ತಸ್ಮೈ ನಮಃ ಶ್ರೀರವಿನಂದನಾಯ || 2 ||

ಭಾವಾರ್ಥ: ದೇವತೆಗಳು, ಅಸುರರು, ಕಿಂಪುರುಷರು, ಸರ್ಪ ಕುಲ, ಗಂಧರ್ವ – ವಿದ್ಯಾಧರರು, ಪನ್ನಗರೇ ಆದಿಯಾಗಿ ಯಾರು ಕೂಡಾ ವಿಷಮಸ್ಥಾನ ಸ್ಥಿತನಾಗಿರುವ ಇವನ ಪೀಡೆಯಿಂದ ತಪ್ಪಿಸಿಕೊಳ್ಳುವುದು ಅಸಾಧ್ಯ. ಅಂಥ ಪ್ರಭಾವಿ ರವಿಪುತ್ರನಿಗೆ ನನ್ನ ನಮಸ್ಕಾರ.

ನರಾನರೇಂದ್ರಾಃ ಪಶವೋಮೃಗೇಂದ್ರಾ |

ವನ್ಯಾಶ್ಚಯೇ ಕೀಟ ಪತಂಗ ಭೃಂಗಾಃ ||

ಪೀಡ್ಯಂತಿ ಸರ್ವೆ ವಿಷಮಸ್ಥಿತೇನ |

ತಸ್ಮೈ ನಮಃ ಶ್ರೀರವಿನಂದನಾಯ || 3 ||

ಭಾವಾರ್ಥ: ಮನುಷ್ಯರು, ರಾಜರು, ಪಶುಗಳು, ಮೃಗರಾಜ ಸಿಂಹನಾದಿಯಾಗಿ ಎಲ್ಲ ಪ್ರಾಣಿಗಳು, ಕೀಟಗಳು, ಪತಂಗಗಳು, ಭ್ರಮರಗಳು ಕೂಡಾ ವಿಷಮಸ್ಥಾನ ಸ್ಥಿತನಾದ ಈತನಿಂದ ಪೀಡಿಸಲ್ಪಡುವರು. ಅಂಥ ಪ್ರಭಾವಿ ರವಿಪುತ್ರನಿಗೆ ನನ್ನ ನಮಸ್ಕಾರ.

ದೇಶಾಶ್ಚ ದುರ್ಗಾಣಿ ವನಾನಿಯತ್ರ |

ಸೇನಾನಿವೇಶಾಃ ಪುರಪತ್ತನಾನಿ ||

ಪೀಡ್ಯಂತಿ ಸರ್ವೆ ವಿಷಮಸ್ಥಿತೇನ |

ತಸ್ಮೈ ನಮಃ ಶ್ರೀರವಿನಂದನಾಯ || 4 ||

ಭಾವಾರ್ಥ: ದೇಶಗಳು, ಕೋಟೆ ಕೊತ್ತಲಗಳು, ವನಗಳು, ಸೈನಿಕರ ನೆಲೆಗಳು, ನಗರ – ಪಟ್ಟಣಗಳು ಇವೆಲ್ಲವೂ ವಿಷಮಸ್ಥಾನ ಸ್ಥಿತನಾದ ಈತನ ಬಾಧೆಗೆ ಒಳಗಾಗುವರು. ಅಂತಹಾ ಪ್ರಭಾವಿ ರವಿಪುತ್ರನಿಗೆ ನನ್ನ ನಮಸ್ಕಾರ.

ತಿಲೈರ್ಯವೈರ್ಮಾಷ ಗುಡಾನ್ನ ದಾನೈ |

ರ್ಲೋಹೇನ ನೀಲಾಂಬರದಾನತೋ ವಾ ||

ಪ್ರೀಣಾತಿ ಮಂತ್ರೈರ್ನಿಜವಾಸರೇ ಚ |

ತಸ್ಮೈ ನಮಃ ಶ್ರೀರವಿನಂದನಾಯ || 5 ||

ಭಾವಾರ್ಥ: ಶನೈಶ್ಚರನ ವಾರವಾಗಿರುವ ಶನಿವಾರದಂದು ಎಳ್ಳು, ಗೋಧಿ, ಉದ್ದು, ಬೆಲ್ಲ, ಅನ್ನದಾನ ಮಾಡುವುದರಿಂದ; ಶನೈಶ್ಚರನ ಮಂತ್ರಗಳನ್ನು ಪಠಿಸುತ್ತಾ ಕಬ್ಬಿಣ, ನೀಲವರ್ಣದ ವಸ್ತ್ರ ದಾನ ಮಾಡುವುದರಿಂದ ಸುಪ್ರೀತನಾಗುವ ದೇವನು ಈತನೆ. ಅಂತಹಾ ಪ್ರಭಾವಿ ರವಿಪುತ್ರನಿಗೆ ನನ್ನ ನಮಸ್ಕಾರ.

ಪ್ರಯಾಗ ಕೂಲೇ ಯಮುನಾತಟೇ ಚ |

ಸರಸ್ವತಿ ಪುಣ್ಯ ಜಲೇ ಗುಹಾಯಾಮ್ ||

ಯೋ ಯೋಗೀನಾಂ ಧ್ಯಾನಗತೋSಪಿ ಸೂಕ್ಷ್ಮಃ |

ತಸ್ಮೈ ನಮಃ ಶ್ರೀರವಿನಂದನಾಯ || 6 ||

ಭಾವಾರ್ಥ: ಪ್ರಯಾಗದ ದಂಡೆಯ ಮೇಲೆ, ಯಮುನಾ ನದಿಯ ದಡದಲ್ಲಿ, ಸರಸ್ವತಿ ನದಿಯ ಪುಣ್ಯ ತೀರ್ಥದಲ್ಲಿ, ಮತ್ತು ಗುಹೆಗಳಲ್ಲಿ ನೆಲೆಸಿರುವ ಮಹಾಯೋಗಿಗಳ ಧ್ಯಾನದ ಸೂಕ್ಷ್ಮರೂಪಿಯಾಗಿ ಯಾರು ಅಂತರ್ಗತರಾಗಿರುವರೋ ಅಂತಹಾ ಪ್ರಭಾವಿ ರವಿಪುತ್ರನಿಗೆ ನನ್ನ ನಮಸ್ಕಾರ.

ಅನ್ಯ ಪ್ರದೇಶಾತ್ ಸ್ವಗ್ರಹಂ ಪ್ರವಿಷ್ಟಃ |

ತದೀಯ ವಾರೇಸ ನರಃ ಸುಖೀಸ್ಯಾತ್ ||

ಗ್ರಹಾದ್ಗತೋಯೋನ ಪುನಃ ಪ್ರಯಾತಿ |

ತಸ್ಮೈ ನಮಃ ಶ್ರೀರವಿನಂದನಾಯ || 7 ||

ಭಾವಾರ್ಥ: ಶನಿವಾರದಂದು ಬೇರೆ ಊರಿನಿಂದ ತನ್ನ ಸ್ವಗೃಹಕ್ಕೆ ಬರುವ ಮನುಜನು ಸುಖಿ. ಆ ದಿನ ಮನೆಯಿಂದ ಹೊರಗೆ ಹೋದವನು ಮತ್ತೆ ಬರಲಾರ. ಇಂಥ ಫಲವನ್ನು ಉಂಟುಮಾಡುವ ಪ್ರಭಾವಿ ರವಿಪುತ್ರನಿಗೆ ನನ್ನ ನಮಸ್ಕಾರ.

ಸೃಷ್ಟಾ ಸ್ವಯಂ ಭೂರ್ಬುವನತ್ರಯಸ್ಯ |

ತ್ರಾತಾ ಹರೀಶೋ ಹರಿತೇ ಪಿನಾಕಿ ||

ಏಕಸ್ತ್ರಿಧಾ ಋಗ್ಯಜುಃ ಸಾಮಮೂರ್ತಿಃ |

ತಸ್ಮೈ ನಮಃ ಶ್ರೀರವಿನಂದನಾಯ || 8 ||

ಭಾವಾರ್ಥ: ಸ್ವರ್ಗ, ಮರ್ತ್ಯ, ಪಾತಾಳಗಳೆಂಬ ಮೂರು ಲೋಕಗಳನ್ನು ಸೃಷ್ಟಿಸಿದ ಬ್ರಹ್ಮ, ಪಾಲಕ ಶ್ರೀಹರಿ, ಲಯಕರ್ತ ಮಹಾದೇವ ಸ್ವರೂಪಿಯೂ; ಋಗ್ ಯಜು ಸಾಮಗಳೆಂಬ ವೇದತ್ರಯಗಳ ಮೂರ್ತರೂಪವೂ ಆಗಿರುವ ಪ್ರಭಾವಿ ರವಿಪುತ್ರನಿಗೆ ನನ್ನ ನಮಸ್ಕಾರ.

ಶನ್ಯಷ್ಟಕಂ ಯಃ ಪ್ರಯತಃ ಪ್ರಭಾತೇ |

ನಿತ್ಯಂ ಸುಪುತ್ರೈಃ ಪಶು ಬಾಂಧವೈಶ್ಚ ||

ಪಠೇತ್ತು ಸೌಖ್ಯಂ ಭುವಿಭೋಗಯುಕ್ತಃ |

ಪ್ರಾಪ್ನೋತಿ ನಿರ್ವಾಣ ಪದಂ ತದಂತೇ || 9 ||

ಭಾವಾರ್ಥ: ಶನೈಷ್ಚರನ ಈ ಅಷ್ಟಕ ಸ್ತೋತ್ರಗಳನ್ನು ಯಾರು ನಿತ್ಯವೂ ಉಷಃಕಾಲದಲ್ಲಿ ಪಠಿಸುವರೋ ಅವರು ಸದ್ಗುಣಿಗಳಾದ ಪುತ್ರರು, ಪಶುಗಳು, ಬಾಂಧವರೊಂದಿಗೆ ಭೂಮಿಯಲ್ಲಿ ಸಮಸ್ತ ಭೋಗಗಳನ್ನು ಹೊಂದಿ, ಸುಖಸೌಖ್ಯಾದಿಗಳನ್ನು ಅನುಭವಿಸುವರು. ಅಷ್ಟು ಮಾತ್ರವಲ್ಲ ಮರಣಾನಂತರ ಮೋಕ್ಷವನ್ನೂ ಹೊಂದುವರು.

ಕೋಣಸ್ಥೈಃ ಪಿಂಗಲೋ ಬಭ್ರುಃ |

ಕೃಷ್ಣೋರೌದ್ರೋ ಅಂತಕೋ ಯಮಃ ||

ಸೌರಿಃ ಶನೈಶ್ಚರೋ ಮಂದಃ |

ಪಿಪ್ಪಲಾದೇನ ಸಂಸ್ತುತಃ || 10 ||

ಭಾವಾರ್ಥ: ಪಿಪ್ಪಲಾದ ಮುನಿಯು ಶನಿದೇವನನ್ನು ಕೋಣಸ್ಥ, ಪಿಂಗಲ, ಬಭ್ರು, ಕೃಷ್ಣ, ರೌದ್ರ, ಅಂತಕ, ಯಮ, ಸೌರಿ, ಶನೈಶ್ಚರ, ಮಂದ ಎಂಬ ಹೆಸರುಗಳಿಂದ ಸ್ತುತಿಸಿದ್ದಾರೆ.

ಏತಾನಿ ದಶನಾಮಾನಿ |

ಪ್ರಾತರುತ್ಥಾಯ ಯಃ ಪಠೇತ್ ||

ಶನೈಶ್ಚರ ಕೃತಾಪೀಡಾ |

ನ ಕದಾಚಿತ್ ಭವಿಷ್ಯತಿ || 11 ||

ಭಾವಾರ್ಥ: ಉಷಃಕಾಲದಲ್ಲಿ ಎದ್ದು ಶನೈಶ್ಚರನ ಈ ಹತ್ತು ಹೆಸರುಗಳನ್ನು ಪಠಿಸುವವರಿಗೆ ಶನೈಶ್ಚರನಿಂದ ಯಾವುದೇ ಬಗೆಯ ಅನಿಷ್ಟವೂ ಉಂಟಾಗದು.

(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ)

ಈ ಸ್ತೋತ್ರವನ್ನು ಪಠಿಸುವ ಕ್ರಮಕ್ಕೆ ಈ ಕೆಳಗಿನ ಆಡಿಯೊವನ್ನು ಕೇಳಿಸಿಕೊಳ್ಳಬಹುದು.

Raghavendra M Y

TwittereMail
ರಾಘವೇಂದ್ರ ಎಂ.ವೈ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್ ಪ್ರೊಡ್ಯೂಸರ್. ರಾಶಿ ಭವಿಷ್ಯ (ಧರ್ಮ) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ, ಉದಯ ನ್ಯೂಸ್, ದಿಗ್ವಿಜಯ ನ್ಯೂಸ್, ಫಸ್ಟ್ ನ್ಯೂಸ್, ಡಿಡಿ ಚಂದನ ನ್ಯೂಸ್, ಈ-ಟಿವಿ ಭಾರತದಲ್ಲಿ ಬುಲೆಟಿನ್ ಪ್ರೊಡ್ಯೂಸರ್ ಸೇರಿ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಅನುಭವ. ಪುಸ್ತಕ, ಪತ್ರಿಕೆ ಓದುವುದು ಇಷ್ಟ. ವಾಣಿಜ್ಯ, ಕ್ರಿಕೆಟ್, ಗ್ರಾಮೀಣ ವಿದ್ಯಮಾನಗಳ ಬಗ್ಗೆ ಇಷ್ಟಪಟ್ಟು ಬರೆಯುತ್ತಾರೆ. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಿರುಪನಹಳ್ಳಿ ಇವರ ಸ್ವಂತ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.