ಕುಂಭಕೋಣಂ ಸಮೀಪದ ಕಂಜನೂರ್ ನಲ್ಲಿರುವ ಅಗ್ನೀಶ್ವರ ಸ್ವಾಮಿ ದೇವಾಲಯದ ಇತಿಹಾಸ ಮತ್ತು ಮಹತ್ವ ತಿಳಿಯಿರಿ
ತಮಿಳುನಾಡಿನ ಕುಂಬಕೋಣಂ ಬಳಿ ಇರುವ ಕಂಜನೂರ್ ಗ್ರಾಮದಲ್ಲಿ ಅಗ್ನೀಶ್ವರ ಸ್ವಾಮಿ ದೇವಾಲಯವಿದೆ. ಇಲ್ಲಿ ಶಿವನಿಗೆ ಪೂಜೆ ಮಾಡಿದರೆ ಸ್ವಂತ ಜಮೀನು ಇದ್ದರೂ ಮನೆಯನ್ನು ಕಟ್ಟಲು ಸಾಧ್ಯವಾಗದಿರುವುದು ಸೇರಿದಂತೆ ಹಲವು ಸಮಸ್ಯೆಗಳಿಗೆ ಪರಿಹಾರ ಸಿಗುತ್ತೆ ಎಂಬ ನಂಬಿಕ ಇದೆ.

ಹೆಸರೆ ಸೂಚಿಸುವುದಂತೆ ಈ ದೇವಾಲಯವು ಶಿವನಿಗೆ ಸಂಬಂಧಿಸಿದೆ. ಶಿವನು ಲಯಕರ್ತ. ತನ್ನ ಮೂರನೆಯ ಕಣ್ಣಿನಲ್ಲಿ ಬೆಂಕಿಯನ್ನೇ ಹೊಂದಿದ್ದಾನೆ. ಆದ್ದರಿಂದ ಶಿವನಿಗೆ ಅಗ್ನೀಶ್ವರ ಸ್ವಾಮಿ ಎಂಬ ಹೆಸರು ಇರುವ ಬಗ್ಗೆ ಗ್ರಂಥಗಳಲ್ಲಿ ಉಲ್ಲೇಖಿತವಾಗಿದೆ. ಅಗ್ನೀಶ್ವರಸ್ವಾಮಿ ದೇವಾಲಯವು ತಮಿಳುನಾಡಿನಲ್ಲಿದೆ. ಕುಂಬಕೋಣಂ ಬಳಿ ಇರುವ ಕಂಜನೂರ್ ಗ್ರಾಮದಲ್ಲಿ ಈ ದೇವಾಲಯವಿದೆ. ಈ ದೇವಾಲಯವು ಶುಕ್ರನಿಗೆ ಸಂಬಂಧಿಸಿದರೂ ಶಿವನು ಪ್ರಧಾನ ದೇವತೆ ಆಗಿದ್ದಾನೆ. ಶಿವನು ಜಗತ್ತಿನ ಎಲ್ಲೆಡೆ ಇದ್ದಾನೆ ಎಂಬ ನಂಬಿಕೆ ಇದೆ. ಆದ್ದರಿಂದಲೇ ಶಿವನನ್ನು ಸರ್ವವ್ಯಾಪಿ ಎಂದು ಕರೆಯುತ್ತೇವೆ. ಈ ದೇವಾಲಯವನ್ನು ಮಧ್ಯಕಾಲೀನ ಚೋಳರು ನಿರ್ಮಿಸಿದ್ದಾರೆ. ಆ ನಂತರ ವಿಜಯನಗರದ ರಾಜರು ಇದರ ಜೀರ್ಣೋದ್ದಾರ ಮಾಡಿ ನವೀಕರಣ ಮಾಡಿದ್ದಾರೆ. ಈ ದೇವಾಲಯದಲ್ಲಿ ಐದು ಹಂತದಲ್ಲಿ ನಿರ್ಮಿಸಿರುವ ರಾಜಗೋಪುರ ಇದೆ. ಈ ದೇವಾಲಯದಲ್ಲಿ ಪುರಾಣಕ್ಕೆ ಸಂಬಂಧಿಸಿದ ಪೌರಾಣಿಕ ಕತೆ ಇದೆ.
ಅಗ್ನೀಶ್ವರಸ್ವಾಮಿ ದೇವಾಲಯ ಕುರಿತ ಪೌರಾಣಿಕ ಕತೆ
ಪರಾಶರ ಮಹರ್ಷಿಗೆ ಶುಕ್ರನ ದೋಷ ಉಂಟಾಗುತ್ತದೆ. ಶಿವನ ಪರಮಭಕ್ತರಾದ ಪರಾಶರ ಮಹರ್ಷಿಗಳು ಶಿವನನ್ನು ಕುರಿತು ಘೋರ ತಪಸ್ಸನ್ನು ಆಚರಿಸುತ್ತಾರೆ. ಇವರ ಭಕ್ತಿಯನ್ನು ಮೆಚ್ಚಿದ ಶಿವನು ಶುಕ್ರನ ರೂಪದಲ್ಲಿ ಪ್ರತ್ಯಕ್ಷನಾಗುತ್ತಾನೆ. ಈ ಕಾರಣದಿಂದಾಗಿ ಈ ದೇಗುಲದಲ್ಲಿ ಶಿವನ ಹೊಟ್ಟೆಯಲ್ಲಿ ಶುಕ್ರನು ನೆಲೆಸಿದ್ದಾನೆ ಎನ್ನಲಾಗಿದೆ. ಈ ಕಾರಣದಿಂದಾಗಿ ಜನ್ಮಕುಂಡಲಿಯಲ್ಲಿ ಶುಕ್ರನ ದೋಷ ಇದ್ದಲ್ಲಿ ಈ ದೇವಾಲಯದಲ್ಲಿ ಪೂಜಿಸುವುದು ಲಾಭದಾಯಕ. ಈ ದೇವಾಲಯುವು ಕಾವೇರಿ ನದಿಯ ದಡದಲ್ಲಿ ಇದೆ. ಈ ದೇವಾಲಯವು ತಮಿಳುನಾಡಿನ ನವಗ್ರಹ ದೇಗುಲಗಳಲ್ಲಿ ಪ್ರಾಮುಖ್ಯ ಪಡೆದಿದೆ.
- ನದಿ ಸ್ನಾನವನ್ನು ಮಾಡಿದ ನಂತರ ಶಿವನ ದೇಗುಲದಲ್ಲಿ ಪೂರ್ವಾಭಿಮುಖಿಯಾಗಿ ಕುಳಿತು ಶಿವ ಪಂಚಾಕ್ಷರಿ ಮಂತ್ರವನ್ನು 108 ಅಥವಾ 1008 ಬಾರಿ ಜಪಿಸಬೇಕು. ಇದರಿಂದ ನೆನಪಿನ ಶಕ್ತಿಯು ಹೆಚ್ಚುತ್ತದೆ. ವಿದ್ಯಾರ್ಥಿಗಳಿಗೆ ಕಲಿಯುವ ವಿಷಯಗಳನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯವು ಹೆಚ್ಚುತ್ತದೆ. ಜ್ಞಾನವೃದ್ಧಿಯಾಗುತ್ತದೆ.
- ಈ ದೇವಾಲಯದಲ್ಲಿ ಕುಳಿತು ಮಹಾ ಮೃತ್ಯುಂಜಯ ಮಂತ್ರವನ್ನು ಕನಿಷ್ಠಪಕ್ಷ 108 ಬಾರಿ ಪಠಿಸುವುದರಿಂದ ಆರೋಗ್ಯದಲ್ಲಿ ಸ್ಥಿರತೆ ಕಂಡುಬರುತ್ತದೆ. ಇದರಿಂದ ಅಪಮುತ್ಯು ಪರಿಹಾರ ಆಗುತ್ತದೆ ಎಂಬ ನಂಬಿಕೆಯಿದೆ. ಸಾಮಾನ್ಯವಾಗಿ ಜನಸಾಮಾನ್ಯರು ದೃಷ್ಠಿಯಿಂದ ಬಳಲುತ್ತಾರೆ. ಈ ದೇವಾಲಯದಲ್ಲಿ 48 ಬಾರಿ ಶೀ ಇಂದ್ರಾಕ್ಷಿ ಮಂತ್ರವನ್ನು ಪಠಿಸಿದಲ್ಲಿ ದೃಷ್ಠಿದೋಷದಿಂದ ಪಾರಾಗಬಹುದು.
- ಕೆಲವರಿಗೆ ಹಣದ ತೊಂದರೆ ಇರುವುದಿಲ್ಲ. ಸ್ವಂತ ಜಮೀನು ಇದ್ದರೂ ಮನೆಯನ್ನು ಕಟ್ಟಲು ಸಾಧ್ಯವಾಗುವುದಿಲ್ಲ. ಇಂತಹ ಪರಿಸ್ಥಿಯಲ್ಲಿ ಈ ದೇವಾಲಯದಲ್ಲಿ ಶೀ ಶಿವನ ಪೂಜೆಯನ್ನು ಮಾಡಿದಲ್ಲಿ ಇರುವ ಅಡ್ಡಿ ಆತಂಕಗಳು ದೂರವಾಗಿ ಮನೆಯನ್ನು ಕಟ್ಟಿಸಲು ಸಾಧ್ಯವಾಗುತ್ತದೆ. ಮನೆತನದ ಭೂವಿವಾದದಿಂದ ಪರಿಹಾರವನ್ನು ಪಡೆಯಬಹುದು.
- ಗರ್ಭಿಣಿ ಸ್ತ್ರೀಯರು ಈ ದೇಗುಲದಲ್ಲಿ ಪೂಜೆ ಸಲ್ಲಿಸುವುದರಿಂದ ಸುಖಪ್ರಸವವಾಗುತ್ತದೆ. ಗರ್ಭಪಾತದ ತೊಂದರೆಯಿಂದಲೂ ಪಾರಾಗಬಹುದು.
- ಶುಕ್ರಗ್ರಹವು ಕುಟುಂಬದಲ್ಲಿನ ಸುಖ ಶಾಂತಿ ನೆಮ್ಮದಿಯನ್ನು ಸೂಚಿಸುತ್ತದೆ. ಆದ್ದರಿಂದ ಈ ದೇವಾಲಯದಲ್ಲಿ ಪೂಜೆ ಸಲ್ಲಿಸಿದಲ್ಲಿ ಕುಟುಂಬದಲ್ಲಿನ ಮನಸ್ತಾಪವು ಕೊನೆಗೊಳ್ಳುತ್ತದೆ. ದಂಪತಿ ನಡುವೆ ಉತ್ತಮ ಹೊಂದಾಣಿಕೆ ಮೂಡುತ್ತದೆ. ಕೌಟುಂಬಿಕ ಹಣಕಾಸಿನ ವ್ಯವಹಾರದಲ್ಲಿ ಒಮ್ಮತದ ನಿರ್ಧಾರವನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ.
- ಜನ್ಮಕುಂಡಲಿಯಲ್ಲಿ ಕುಜದೋಷದ ತೊಂದರೆಯಿಂದ ವಿವಾಹಕಾರ್ಯವು ನಡೆಯದೆ ಹೋದಲ್ಲಿ, ಶಿವನಿಗೆ ಪೂಜೆ ಸಲ್ಲಿಸುತ್ತಾರೆ. ಇದರಿಂದ ವಿವಾಹದಲ್ಲಿನ ವಿಳಂಬವನ್ನು ದೂರಮಾಡಬಹುದು. ಗಂದ ಮತ್ತು ಗುಲಾಬಿನೀರಿನಿಂದ ಶಿವನನ್ನು ಪೂಜಿಸಲಾಗುತ್ತದೆ. ಅಮಾವಾಸ್ಯೆಯ ದಿನದಂದು ಶಿವನಿಗೆ ವಿಭೂತಿಯನ್ನು ಸಮರ್ಪಿಸುವುದು ಒಳ್ಳೆಯದು. ಇದರಿಂದ ಮನೆತನದ ಕೀರ್ತಿ ಪತಿಷ್ಠೆ ಹೆಚ್ಚುತ್ತದೆ. ಈ ದೇಗುಲದಲ್ಲಿ ರುದ್ರಾಭಿಷೇಕವನ್ನು ಮಾಡಿಸಿದಲ್ಲಿ ಅರೋಗ್ಯದ ಸಮಸ್ಯೆಯು ದೂರವಾಗಿ ನೆಮ್ಮದಿಯ ಜೀವನವನ್ನು ನಡೆಸಬಹುದಾಗಿದೆ.
ಬರಹ: ಹೆಚ್. ಸತೀಶ್, ಜ್ಯೋತಿಷಿ, ಬೆಂಗಳೂರು