ದೇಗುಲ ದರ್ಶನ: ಇಷ್ಟಾರ್ಥಗಳನ್ನು ನೆರೆವೇರಿಸುವ ನವನೀತೇಶ್ವರ ದೇವಾಲಯಕ್ಕೆ ನಿತ್ಯ ಬರುತ್ತೆ ಭಕ್ತರ ದಂಡು; ನಾಗಪಟ್ಟಣಂನ ಸಿಕ್ಕಲ್ ದೇವಾಲಯದ ಕಥೆ
ತಮಿಳನಾಡಿನಲ್ಲಿರುವ ಸಿಕ್ಕಲ್ ನವನೀತೇಶ್ವರ ದೇವಾಲಯದಲ್ಲಿ ನಡೆಯುವ ವಿಶೇಷ ಪೂಜಾ ಕಾರ್ಯಕ್ರಮಗಳ ದಿನ ನೂರಾರು ಭಕ್ತರು ಬಂದು ದೇವರ ದರ್ಶನ ಪಡೆಯುತ್ತಾರೆ. ಇಲ್ಲಿಗೆ ಬಂದು ದೇವರಿಗೆ ಪೂಜೆ ಸಲ್ಲಿಸಿದರೆ ತಮ್ಮ ಇಷ್ಟಾರ್ಥಗಳು ಈಡೇರುತ್ತವೆ ಎಂಬುದು ಭಕ್ತರ ನಂಬಿಕೆ. ನವನೀತೇಶ್ವರ ದೇವಾಲಯದ ಕಥೆಯನ್ನು ತಿಳಿಯಿರಿ. (ಬರಹ: ಎಚ್. ಸತೀಶ್, ಜ್ಯೋತಿಷಿ)
ಅತಿ ಹೆಚ್ಚು ದೇವಾಲಯಗಳನ್ನು ಹೊಂದಿರುವ ದಕ್ಷಿಣ ಭಾರತದ ರಾಜ್ಯಗಳಲ್ಲಿ ತಮಿಳುನಾಡಿಗೆ ಪ್ರಮುಖ ಸ್ಥಾನವಿದೆ. ಅತ್ಯಂತ ಪ್ರಾಚೀನ ಕಾಲದ ದೇವಾಲಯಗಳನ್ನು ನೆರೆಯ ತಮಿಳುನಾಡಿನಲ್ಲಿ ಕಾಣಬಹುದು. ವಿವಿಧ ಶೈಲಿಯ ಇತಿಹಾಸ ಪ್ರಸಿದ್ಧ ದೇವಾಲಯಗಳು ಇಲ್ಲಿವೆ. ಗೋಪುರ ಶೈಲಿಯ ದೇವಾಲಯಗಳಿಗೆ ಹೆಸರುವಾಸಿಯಾಗಿರುವ ತಮಿಳುನಾಡಿನಲ್ಲಿ ನವನೀತೇಶ್ವರ ದೇವಾಲಯ ಎಲ್ಲರ ಗಮನ ಸೆಳೆಯುತ್ತದೆ. ಈ ದೇವಾಲಯದ ಕುರಿತು ಕಥೆಯನ್ನು ಇಲ್ಲಿ ವಿವರಿಸಲಾಗಿದೆ. ನವನೀತ ಎಂದರೆ ಬೆಣ್ಣೆ. ಇಲ್ಲಿರುವುದು ಈಶ್ವರನ ದೇವಸ್ಥಾನ. ಆದರೆ ಬೆಣ್ಣೆಗೂ ಈ ದೇವಾಲಯಕ್ಕೂ ವಿಶೇಷವಾದ ಸಂಬಂಧವಿದೆ. ತಮಿಳುನಾಡಿನ ನಾಗಪಟ್ಟಣಂ ನಗರದ ಬಳಿ ಚಿಕ್ಕಲ್ ಎಂಬ ಸ್ಥಳವಿದೆ. ಇದನ್ನು ಸಿಕ್ಕಲ್ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ.
ನವನೀತೇಶ್ವರ ದೇವಾಲಯದ ಇತಿಹಾಸ ಮತ್ತು ಇಂದಿನ ಅಲ್ಲಿನ ಭಕ್ತರು ನಂಬಿರುವಂತೆ ಕಥೆಯನ್ನು ನೋಡುವುದಾದರೆ, ಸ್ವರ್ಗಲೋಕದಲ್ಲಿ ಎಲ್ಲಾ ರೀತಿಯ ಅನುಕೂಲಗಳು ಇರುತ್ತವೆ. ದಿನನಿತ್ಯದ ಪೂಜೆಗಾಗಿ ಗೋವಿನ ಅವಶ್ಯಕತೆಯೂ ಸ್ವರ್ಗವಾಸಿಗಳಿಗೆ ಉಂಟಾಗುತ್ತದೆ. ಆಗ ಸಕಲ ದೇವತೆಗಳು ಬ್ರಹ್ಮನನ್ನು ತಮಗಿರುವ ಕೊರತೆಯನ್ನು ನೀಗಿಸಲು ಬ್ರಹ್ಮನಲ್ಲಿ ವಿನಂತಿಸಿಕೊಳ್ಳುತ್ತಾರೆ. ಇವರ ಮಾತಿಗೆ ಒಪ್ಪಿಗೆ ಸೂಚಿಸಿದ ಬ್ರಹ್ಮದೇವನು ದೇವತೆಗಳ ಪೂಜೆಗೆ ಗೋವನ್ನು ಸೃಷ್ಟಿ ಮಾಡುವುದಾಗಿ ತಿಳಿಸುತ್ತಾನೆ. ಆ ಕ್ಷಣದಲ್ಲಿ ಬ್ರಹ್ಮನ ಮುಖದಿಂದ ಗೋವಿನ ಜನನವಾಗುತ್ತದೆ. ಈ ಪವಿತ್ರ ಹಸುವೆ ಕಾಮಧೇನು. ಧಾರ್ಮಿಕ ಗ್ರಂಥಗಳ ಪ್ರಕಾರ ಇಂದಿಗೂ ಸಹ ಕಾಮಧೇನು ಜೀವಂತವಾಗಿದೆ ಎಂದು ಹೇಳಲಾಗಿದೆ. ಈ ಕಾಮಧೇನುವಿಗೆ ನಾಲ್ಕು ಮಕ್ಕಳಿರುತ್ತವೆ. ಆ ಮಕ್ಕಳೇ ಸುರೂಪ, ಹಂಸಿಕ, ಸುಮಧ್ರಾ ಮತ್ತು ಸರ್ವಕಾಮದುಘ. ಎಲ್ಲರೂ ತಿಳಿದಂತೆ ಕಾಮಧೇನುವಿನಲ್ಲಿ ಸಕಲ ದೇವತೆಗಳು ನೆಲೆಸಿದ್ದಾರೆ.
ಅಮೃತವನ್ನು ಪಡೆದುಕೊಳ್ಳಲು ದೇವತೆಗಳು ಮತ್ತು ಅಸುರರ ನಡುವೆ ದೊಡ್ಡ ಯುದ್ಧವೆ ನಡೆಯುತ್ತದೆ. ಆ ಸಂದರ್ಭದಲ್ಲಿ ಸಮುದ್ರಮಂಥನದ ಕಾರ್ಯವು ನಡೆಯುತ್ತದೆ. ಆ ವೇಳೆಯಲ್ಲಿ ದೇವೇಂದ್ರನಿಗೆ ಕಲ್ಪವೃಕ್ಷ ಸಹಿತವಾಗಿ ಅನೇಕ ಬೆಲೆಬಾಳುವ ವಸ್ತುಗಳು ಲಭ್ಯವಾಗುತ್ತವೆ. ಅವುಗಳ ಜೊತೆ ದೇವೇಂದ್ರನಿಗೆ ನಂದಿನಿ ಎಂಬ ಹೆಸರಿನ ಹಸು ಸಹ ದೊರೆಯುತ್ತದೆ. ಈ ಹಸುವೇ ಕಾಮಧೇನು. ದೇವೇಂದ್ರನಿಗೆ ಇದರ ಬಗ್ಗೆ ಹೆಚ್ಚಿನ ವಿಷಯವು ತಿಳಿದಿರುವುದಿಲ್ಲ. ಆದರೆ ಕಾಮಧೇನು ಅಚ್ಚರಿಯ ಬೆಳವಣಿಗೆಗಳನ್ನು ಸೃಷ್ಟಿಸುತ್ತದೆ. ದಿಲೀಪ ಮಹಾರಾಜನಿಗೆ ಎಲ್ಲಾ ರೀತಿಯ ಅನುಕೂಲತೆಗಳಿದ್ದರೂ ಸಂತಾನ ಲಭಿಸಿರುವುದಿಲ್ಲ. ಆಗ ಕಾಮಧೇನುವಿನ ಅನುಗ್ರಹದಿಂದ ದಿಲೀಪನಿಗೆ ಸಂತಾನ ಲಭಿಸುತ್ತದೆ.
ಇದರ ಬಗ್ಗೆ ಸಂಪೂರ್ಣ ವಿವರಗಳನ್ನು ತಿಳಿದ ವಿಶ್ವಾಮಿತ್ರ ಮುನಿಯು ಕಾಮಧೇನುವನ್ನು ತನ್ನೊಂದಿಗೆ ಕರೆದುಕೊಂಡು ಹೋಗಲು ಪ್ರಯತ್ನಿಸುತ್ತಾರೆ. ಅದೇ ವೇಳೆಗೆ ಪರಶಿವನ ಭಕ್ತರಾದ ವಶಿಷ್ಠರು ಸಹ ಆಗಮಿಸುತ್ತಾರೆ. ಅವರು ಸಹ ಕಾಮಧೇನುವನ್ನು ತಮ್ಮ ವಶ ಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ ಇವರಿಬ್ಬರ ನಡುವೆ ಬಿಗುವಿನ ವಾತಾವರಣ ಉಂಟಾಗುತ್ತದೆ. ಅಂತಿಮವಾಗಿ ವಶಿಷ್ಠರು ವಿಶ್ವಾಮಿತ್ರರನ್ನು ಸೋಲಿಸಿ ಕಾಮಧೇನುವನ್ನು ತಮ್ಮ ವಶಕ್ಕೆ ತೆಗೆದುಕೊಳ್ಳುತ್ತಾರೆ. ಕಾಮಧೇನುವಿನ ಪೂರ್ಣ ಜವಾಬ್ದಾರಿಯು ವಶಿಷ್ಠರ ಪಾಲಾಗುತ್ತದೆ.
ಒಮ್ಮೆ ಬ್ರಹ್ಮ ಮತ್ತು ವಿಷ್ಣುಗಳಿಗೆ ಶಿವನು ತನ್ನ ರೌದ್ರಾಕಾರದಿಂದ ತ್ರಿಲೋಕಗಳ ಅಂತ್ಯವನ್ನು ಹೇಗೆ ಮಾಡುವನೆಂದು ನೋಡಬೇಕೆಂಬ ಮನಸಾಗುತ್ತದೆ. ಬ್ರಹ್ಮನು ತಾನು ಶಿವನ ತಲೆಯನ್ನು ನೋಡಿರುವುದಾಗಿ ಸುಳ್ಳನ್ನು ಹೇಳುತ್ತಾನೆ. ಬ್ರಹ್ಮನು ಸುಳ್ಳು ಹೇಳುತ್ತಿರುವ ವಿಚಾರವು ವಿಷ್ಣುವಿಗೆ ತಿಳಿಯುತ್ತದೆ. ಇದರಿಂದ ಕೋಪಗೊಂಡು ನಿನಗೆ ಇನ್ನು ಮುಂದೆ ಮೂರ್ತಿ ಪೂಜೆ ಇಲ್ಲದೆ ಹೋಗಲಿ ಎಂದು ಶಪಿಸುತ್ತಾನೆ. ತಾನೊಬ್ಬನೆ ತಪ್ಪು ಮಾಡುವುದಲ್ಲದೆ ಕಾಮಧೇನುವನ್ನು ಸುಳ್ಳನ್ನು ಹೇಳಲು ಪ್ರೇರೇಪಿಸುತ್ತಾನೆ. ಇದರಿಂದ ಕಾಮಧೇನು ಶಾಪವೊಂದಕ್ಕೆ ಗುರಿಯಾಗುತ್ತದೆ. ಅದಕ್ಕೆ ತಿನ್ನಲು ಸರಿಯಾದ ಆಹಾರವು ಸಮಯಕ್ಕೆ ತಕ್ಕಂತೆ ಸಿಗದೇ ಹೋಗುತ್ತದೆ. ಈ ಕಾಮಧೇನುವನ್ನು ವಶಿಷ್ಠರು ತಮ್ಮೊಂದಿಗೆ ಕರೆದೊಯ್ಯುತ್ತಾರೆ.
ಕಾಮಧೇನುವಿನೊಂದಿಗೆ ಚಿಕ್ಕಲ್ ಗೆ ಆಗಮಿಸಿದ ವಿಶಿಷ್ಠರು
ಇದೇ ಕಾಮಧೇನುವಿನ ಜೊತೆಯಲ್ಲಿ ವಶಿಷ್ಠರು ಚಿಕ್ಕಲ್ ಊರಿಗೆ ಬರುತ್ತಾರೆ. ವಶಿಷ್ಠರಿಗೆ ಆ ಸ್ಥಳದಲ್ಲಿ ಶಿವನ ಪೂಜೆ ಮಾಡಬೇಕೆನ್ನುವ ಹಂಬಲ ಉಂಟಾಗುತ್ತದೆ. ಆದರೆ ಆ ಸ್ಥಳದ ಸುತ್ತಮುತ್ತ ಶಿವನ ದೇಗುಲವು ಕಾಣುವುದಿಲ್ಲ. ಆಗ ವಶಿಷ್ಠರು ಕಾಮಧೇನುವಿನಿಂದ ಪಡೆದ ಹಾಲಿನಿಂದ ಬೆಣ್ಣೆಯನ್ನು ತಯಾರಿಸಿ ಅದರಿಂದ ಶಿವನ ಲಿಂಗವನ್ನು ಮಾಡುತ್ತಾರೆ. ಅಲ್ಲಿಯೇ ನೆಲದ ಮೇಲೆ ಶಿವಲಿಂಗವ್ಬನ್ನು ಪ್ರತಿಷ್ಠೆ ಮಾಡಿ ಪೂಜೆಯನ್ನು ಮಾಡುತ್ತಾರೆ. ಪೂಜೆಯು ಸಂಪೂರ್ಣವಾದ ಬಳಿಕ ತಮ್ಮೊಂದಿಗೆ ತೆಗೆದುಕೊಂಡು ಹೋಗಲು ಲಿಂಗವನ್ನು ತೆಗೆಯಲು ಪ್ರಯತ್ನಿಸುತ್ತಾರೆ. ಆದರೆ ಆ ಲಿಂಗವು ಆ ಸ್ಥಳದಲ್ಲಿಯೇ ಸಿಕ್ಕಿಕೊಳ್ಳುತ್ತದೆ. ಈ ಕಾರಣದಿಂದಲೇ ಚಿಕ್ಕಲ್ ಎಂಬ ಊರು ಸಿಕ್ಕಲ್ ಎಂದು ಬದಲಾಗುತ್ತದೆ.
ಇಲ್ಲಿರುವ ಈಶ್ವರನಿಗೆ ಈ ಕಾರಣಕ್ಕೆ ನವನೀತೇಶ್ವರ ಎಂಬ ಹೆಸರು ಬರುತ್ತದೆ. ಇದರೊಂದಿಗೆ ಪಾರ್ವತಿಯು ಸತ್ಯದಾಕ್ಷಿ ಎಂಬ ಹೆಸರಿನಿಂದ ನೆಲೆಸಿದ್ದಾಳೆ. ಗಣಪತಿ ಮತ್ತು ದಂಡಪಾಣಿ ಸುಬ್ರಹ್ಮಣ್ಯರ ದೇಗುಲಗಳೂ ಇಲ್ಲಿವೆ. ಇಲ್ಲಿರುವ ಪುಷ್ಕರಣಿಯನ್ನು ಕ್ಷೀರ ಪುಷ್ಕರಣಿ ಎಂದು ಕರೆಯುತ್ತಾರೆ. ಕ್ಷೀರ ಎಂದರೆ ಹಾಲು ಎಂಬ ಅರ್ಥವಿದೆ. ಇದಲ್ಲದೆ ಗಯಾ ತೀರ್ಥ ಎಂಬ ಕಲ್ಯಾಣಿ ಇದೆ. ಈ ಕಲ್ಯಾಣಿಗಳಲ್ಲಿ ಸ್ನಾನವನ್ನು ಮಾಡಿದ ನಂತರ ಇಲ್ಲಿನ ದೇವರುಗಳಿಗೆ ಪೂಜೆಯನ್ನು ಸಲ್ಲಿಸಿದಲ್ಲಿ ಉತ್ತಮ ಆರೋಗ್ಯ ಲಭಿಸುತ್ತದೆ. ವಿದ್ಯಾರ್ಥಿಗಳಿಗೆ ಉತ್ತಮ ವಿದ್ಯೆಯು ಲಭ್ಯವಾಗುತ್ತದೆ, ತಮ್ಮ ಇಷ್ಟಾರ್ಥಗಳು ನೆರವೇರುತ್ತವೆ ಎಂಬುದನ್ನು ಭಕ್ತರ ನಂಬಿಕೆಯಾಗಿದೆ (ಬರಹ: ಎಚ್. ಸತೀಶ್, ಜ್ಯೋತಿಷಿ)
(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ)