ಯಶಸ್ಸಿನ ಮೊದಲ ಮೆಟ್ಟಿಲು ಶಿಸ್ತು: ಜಯಶಾಲಿಯಾಗಲು ಶ್ರೀಕೃಷ್ಣನು ಹೇಳಿದ 5 ಪ್ರೇರಣಾದಾಯಕ ನುಡಿಗಳು ಹೀಗಿವೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಯಶಸ್ಸಿನ ಮೊದಲ ಮೆಟ್ಟಿಲು ಶಿಸ್ತು: ಜಯಶಾಲಿಯಾಗಲು ಶ್ರೀಕೃಷ್ಣನು ಹೇಳಿದ 5 ಪ್ರೇರಣಾದಾಯಕ ನುಡಿಗಳು ಹೀಗಿವೆ

ಯಶಸ್ಸಿನ ಮೊದಲ ಮೆಟ್ಟಿಲು ಶಿಸ್ತು: ಜಯಶಾಲಿಯಾಗಲು ಶ್ರೀಕೃಷ್ಣನು ಹೇಳಿದ 5 ಪ್ರೇರಣಾದಾಯಕ ನುಡಿಗಳು ಹೀಗಿವೆ

Bhagavad Gita: ಜೀವನದಲ್ಲಿ ಸಾಧನೆ ಮಾಡಲು ಮನುಷ್ಯನಿಗೆ ಒಂದು ಗುರಿಯಿರಬೇಕು. ಆದರೆ ಆ ಗುರಿ ತಲುಪಲು ಮೊದಲು ಶಿಸ್ತನ್ನು ರೂಢಿಸಿಕೊಳ್ಳಬೇಕು. ಶ್ರೀಕೃಷ್ಣನು ಭಗವದ್ಗೀತೆಯಲ್ಲಿ ಜಯಶಾಲಿಗಳಾಗಲು ಏನು ಮಾಡಬೇಕು ಎಂದು ಹೇಳಿದ್ದಾನೆ. ಗೀತೆಯಲ್ಲಿ ಹೇಳಿರುವ 5 ಪ್ರೇರಣಾದಾಯಕ ನುಡಿಗಳನ್ನು ನೀವೂ ಅಳವಡಿಸಿಕೊಳ್ಳಿ.

Bhagavad Gita: ಯಶಸ್ಸಿನ ಮೊದಲ ಮೆಟ್ಟಿಲು ಶಿಸ್ತು: ಜಯಶಾಲಿಗಳಾಗಲು ಶ್ರೀಕೃಷ್ಣನು ಹೇಳಿದ 5 ಪ್ರೇರಣಾದಾಯಕ ನುಡಿಗಳು ಹೀಗಿವೆ
Bhagavad Gita: ಯಶಸ್ಸಿನ ಮೊದಲ ಮೆಟ್ಟಿಲು ಶಿಸ್ತು: ಜಯಶಾಲಿಗಳಾಗಲು ಶ್ರೀಕೃಷ್ಣನು ಹೇಳಿದ 5 ಪ್ರೇರಣಾದಾಯಕ ನುಡಿಗಳು ಹೀಗಿವೆ (PC: HT File Photo)

ಪ್ರತಿ ದಿನದ ಸೂರ್ಯೋದಯವು ತನ್ನೊಂದಿಗೆ ಕೆಲವು ಸವಾಲು ಮತ್ತು ಹೋರಾಟಗಳನ್ನು ಹೊತ್ತುತರುತ್ತದೆ. ಆ ಸವಾಲು ಮತ್ತು ಹೋರಾಟಗಳನ್ನು ಎದುರಿಸಲು ಸರಿಯಾದ ಮಾರ್ಗದರ್ಶನದ ಅವಶ್ಯಕತೆಯಿರುತ್ತದೆ. ಆಗ ಅವುಗಳನ್ನು ಬಹಳ ಸುಲಭವಾಗಿ ಜಯಿಸಬಹುದು. ಆದರೆ, ಸರಿಯಾದ ಮಾರ್ಗದರ್ಶನ ಎಲ್ಲಿಂದ ಸಿಗುತ್ತದೆ? ಯಾರು ಕೊಡುತ್ತಾರೆ? ಎಂಬ ಪ್ರಶ್ನೆ ಎಲ್ಲರ ಮನದಲ್ಲಿ ಮೂಡುತ್ತದೆ. ಅದಕ್ಕೆ ಶ್ರೀಕೃಷ್ಣನು ಕುರುಕ್ಷೇತ್ರದ ಯುದ್ಧಭೂಮಿಯಲ್ಲಿ ಅರ್ಜುನನಿಗೆ ಮಾರ್ಗದರ್ಶನ ನೀಡಿದ ಭಗವದ್ಗೀತೆಯ ಉಪದೇಶಗಳಲ್ಲಿ ಉತ್ತರವಿದೆ. ಭಗವದ್ಗೀತೆಯು ಎಲ್ಲರ ಮನದಲ್ಲೂ ಹುಟ್ಟುವ ಅನೇಕ ಸವಾಲುಗಳಿಗೆ ಮಾರ್ಗದರ್ಶನ ನೀಡುತ್ತದೆ. ಭಗವದ್ಗೀತೆಯನ್ನು ಸರಿಯಾಗಿ ಓದಿ, ಅರ್ಥೈಸಿಕೊಂಡ ವ್ಯಕ್ತಿಗೆ ಜಯವು ಮರೀಚಿಕೆಯೆಂದು ಅನಿಸುವುದಿಲ್ಲ. ಭಗವದ್ಗೀತೆಯ ಶ್ಲೋಕಗಳು ಪ್ರೇರಣಾದಾಯಕವಾಗಿರುವುದರ ಜೊತೆಗೆ ಜಯಶಾಲಿಗಳಾಗುವ ಮಾರ್ಗವನ್ನು ತೋರುತ್ತದೆ.

ಜಯಶಾಲಿಗಳಾಗಲು ಶ್ರೀಕೃಷ್ಣನು ಹೇಳಿದ 5 ಪ್ರೇರಣಾದಾಯಕ ನುಡಿಗಳು

ಭಗವದ್ಗೀತೆಯಲ್ಲಿ ಮನುಷ್ಯನು ಬದಲಾವಣೆಯನ್ನು ಹೇಗೆ ಸ್ವೀಕರಿಸಬೇಕು ಎಂಬುದನ್ನು ತಿಳಿದಿರಬೇಕು ಎಂದು ಬರೆಯಲಾಗಿದೆ. ಬದಲಾವಣೆ ಪ್ರಕೃತಿಯ ನಿಯಮ. ಪ್ರತಿಯೊಂದು ಪರಿಸ್ಥಿತಿಯಲ್ಲಿಯೂ ಬದಲಾವಣೆ ಸಂಭವಿಸುತ್ತದೆ ಮತ್ತು ಈ ಬದಲಾವಣೆಗಳೊಂದಿಗೆ ಸಮಾಜ ಮತ್ತು ಜನರು ಸಹ ಬದಲಾಗುತ್ತಲೇ ಇರುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ಒಬ್ಬ ವ್ಯಕ್ತಿಯು ಪರಿಸ್ಥಿತಿಯನ್ನು ಒಪ್ಪಿಕೊಳ್ಳಬೇಕು ಮತ್ತು ಮುಂದುವರಿಯಬೇಕು. ಅದಕ್ಕೆ ತಕ್ಕನಾಗಿ ಹೊಂದಿಕೊಳ್ಳಲು ಕಲಿಯಬೇಕು.

ಮನುಷ್ಯನು ತನ್ನ ಗುರಿಯನ್ನು ಸಾಧಿಸಲು ನಿರಂತರವಾಗಿ ಶ್ರಮಿಸುತ್ತಲೇ ಇರಬೇಕು ಎನ್ನುತ್ತಾನೆ ಶ್ರೀಕೃಷ್ಣ. ಮನುಷ್ಯನು ತನಗೆ ಬೇಕಾದುದನ್ನು ಸಾಧಿಸಲು ಹಗಲಿರುಳು ಶ್ರಮಿಸಬೇಕು, ಏಕೆಂದರೆ ತನ್ನ ಕೆಲಸವನ್ನು ಸಮರ್ಪಣಾ ಮತ್ತು ಏಕಾಗ್ರತೆಯಿಂದ ಮಾಡುವ ಮನುಷ್ಯನಿಗೆ ಖಂಡಿತವಾಗಿಯೂ ಒಂದು ದಿನ ಯಶಸ್ಸು ಸಿಗುತ್ತದೆ.

ಶ್ರೀಕೃಷ್ಣನು ಹೇಳುವ ಪ್ರಕಾರ ವ್ಯಕ್ತಿಯು ತನ್ನನ್ನು ತಾನು ನಂಬಬೇಕು. ಅಂದರೆ ವ್ಯಕ್ತಿಯು ತನ್ನ ಸಾಮರ್ಥ್ಯ ಮತ್ತು ದೌರ್ಬಲ್ಯ ಇವೆರಡನ್ನೂ ಚೆನ್ನಾಗಿ ತಿಳಿದಿರಬೇಕು. ಆಗ ಮಾತ್ರ ಅವನಿಗೆ ಬೇಕಾದ್ದನ್ನು ಖಂಡಿತವಾಗಿ ಪಡೆದುಕೊಳ್ಳಬಹುದು. ಇದಕ್ಕಾಗಿ, ಪ್ರತಿಯೊಂದು ಸಂದರ್ಭದಲ್ಲೂ ನಿಮ್ಮ ಮೇಲೆ ನಿಮಗೆ ನಂಬಿಕೆಯಿರಲಿ. ಜೀವನದ ಯಾವುದೇ ಹಂತದಲ್ಲೂ ನಿಮ್ಮ ಸಾಮರ್ಥ್ಯದ ಬಗ್ಗೆ ಅನುಮಾನ ಪಡಬಾರದು.

ಭಗವದ್ಗೀತೆಯ ಪ್ರಕಾರ, ವ್ಯಕ್ತಿಯ ಯಶಸ್ಸಿನ ಮೊದಲ ಮೆಟ್ಟಿಲು ಶಿಸ್ತು ಆಗಿರುತ್ತದೆ. ಶಿಸ್ತಿನಿಂದ ತನ್ನ ಜೀವನವನ್ನು ನಡೆಸುವವನು ಪ್ರತಿಯೊಂದು ಪ್ರಯತ್ನದಲ್ಲೂ ಯಶಸ್ವಿಯಾಗುತ್ತಾನೆ. ಶಿಸ್ತುಬದ್ಧ ಜೀವನ ನಡೆಸುವುದರಿಂದ ಪ್ರತಿಯೊಂದು ಕಾರ್ಯವೂ ಒಂದರ ಹಿಂದೆ ಒಂದರಂತೆ ಪೂರ್ಣಗೊಳ್ಳುತ್ತದೆ.

ಭಗವದ್ಗೀತೆಯಲ್ಲಿ ಕೃಷ್ಣನು, ಮನುಷ್ಯನು ತನ್ನ ಮನಸ್ಸನ್ನು ಹೇಗೆ ನಿಯಂತ್ರಿಸಬೇಕು ಎಂಬುದನ್ನು ತಿಳಿದಿರಬೇಕು ಎಂದು ಹೇಳಲಾಗಿದೆ. ತನ್ನ ಮನಸ್ಸನ್ನು ಗೆದ್ದವನು ಪ್ರಪಂಚದ ಎಲ್ಲಾ ಸವಾಲುಗಳನ್ನು ಗೆಲ್ಲುತ್ತಾನೆ. ಜೀವನದ ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿಯೂ ಗೆಲುವುನ್ನು ಸಾಧಿಸುತ್ತಾನೆ.

(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟಿಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.)

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.