ಕಷ್ಟ ಎಂದು ಕೈಕಟ್ಟಿ ಕುಳಿತುಕೊಳ್ಳಬೇಡಿ: ಭಗವದ್ಗೀತೆಯಲ್ಲಿನ ಈ 5 ಸಂದೇಶಗಳು ಭರವಸೆ ಮೂಡಿಸುತ್ತವೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಕಷ್ಟ ಎಂದು ಕೈಕಟ್ಟಿ ಕುಳಿತುಕೊಳ್ಳಬೇಡಿ: ಭಗವದ್ಗೀತೆಯಲ್ಲಿನ ಈ 5 ಸಂದೇಶಗಳು ಭರವಸೆ ಮೂಡಿಸುತ್ತವೆ

ಕಷ್ಟ ಎಂದು ಕೈಕಟ್ಟಿ ಕುಳಿತುಕೊಳ್ಳಬೇಡಿ: ಭಗವದ್ಗೀತೆಯಲ್ಲಿನ ಈ 5 ಸಂದೇಶಗಳು ಭರವಸೆ ಮೂಡಿಸುತ್ತವೆ

ಮನುಷ್ಯನ ಸಂಪೂರ್ಣ ಜೀವನ ಸುಖದಿಂದ ಕೂಡಿರುವುದಿಲ್ಲ. ಅಲ್ಲಿ ಕಷ್ಟ, ದುಃಖ, ಖಿನ್ನತೆ, ಹತಾಶೆಗಳು ಇರುತ್ತವೆ. ಕಷ್ಟ ಬಂದಿದೆ ಎಂದು ಕೈಕಟ್ಟಿ ಕುಳಿತರೆ, ಜೀವನ ಹಾಳಾಗುತ್ತದೆ. ಆದರೆ ಅಲ್ಲಿಂದ ಹೊರಬರಲು ಒಂದು ಪ್ರೋತ್ಸಾಹ ಅಗತ್ಯವಿರುತ್ತದೆ. ಭಗವದ್ಗೀತೆಯ ಈ ಉಪದೇಶಗಳು ಕಷ್ಟದಿಂದ ಹೊರಬರಲು ನಿಮಗೆ ಪ್ರೇರಣೆ ನೀಡುತ್ತವೆ.

ಕಷ್ಟ ಎಂದು ಕೈಕಟ್ಟಿ ಕುಳಿತುಕೊಳ್ಳಬೇಡಿ: ಭಗವದ್ಗೀತೆಯಲ್ಲಿರುವ ಭರವಸೆಯ ಕಿರಣ ಮೂಡಿಸುವ ಈ 5 ಸಂದೇಶಗಳನ್ನೊಮ್ಮೆ ಓದಿ
ಕಷ್ಟ ಎಂದು ಕೈಕಟ್ಟಿ ಕುಳಿತುಕೊಳ್ಳಬೇಡಿ: ಭಗವದ್ಗೀತೆಯಲ್ಲಿರುವ ಭರವಸೆಯ ಕಿರಣ ಮೂಡಿಸುವ ಈ 5 ಸಂದೇಶಗಳನ್ನೊಮ್ಮೆ ಓದಿ (PC: HT File Photo)

ಭಗವದ್ಗೀತೆಯು ಕೇವಲ ಅಧ್ಯಾತ್ಮಿಕ ಗ್ರಂಥವಲ್ಲ. ಕಷ್ಟದ ಸಮಯದಲ್ಲಿ ಪ್ರೇರಣೆ, ಭರವಸೆ ನೀಡುವ ಬೆಳಕಿನ ಕಿರಣವಾಗಿದೆ.‍ ಭಗವದ್ಗೀತೆಯು ಪ್ರಾಪಂಚಿಕ ಜೀವನದಲ್ಲಿ ಅಡಕವಾಗಿರುವ ಆಳವಾದ ರಹಸ್ಯವನ್ನು ನಮಗೆ ತಿಳಿಸಿಕೊಡುತ್ತದೆ. ಅರ್ಜುನನ ದುಃಖವನ್ನು ತೊಡೆದು ಹಾಕುವ ಕೆಲಸವನ್ನು ಮಾಡಿದ ಭಗವದ್ಗೀತೆಯು ಇಂದಿನ ದಿನಗಳಲ್ಲೂ ಸಹ ದುಃಖದಿಂದ ಹೊರಬರಲು ಇರುವ ದಾರಿದೀಪವಾಗಿದೆ. ಗೀತೆಯು ಮಾನವರಿಗೆ ಉತ್ತಮ ಮಾರ್ಗದರ್ಶಿಯಾಗಿದೆ. ಜೀವನದ ಯಾವುದಾದರೊಂದು ಸಮಯದಲ್ಲಿ ದುಃಖ, ಖಿನ್ನತೆಗಳು ಕಾಡಬಹುದು. ಜೀವನದುದ್ದಕ್ಕೂ ಯಾವಾಗಲೂ ಸುಖ, ಸಂತೋಷಗಳೇ ತುಂಬಿರುವುದಿಲ್ಲ. ಅಂತಹ ಸಮಯದಲ್ಲಿ ಇವುಗಳನ್ನು ದೂರಮಾಡುವ ಪ್ರೋತ್ಸಾಹ ಅಗತ್ಯವಿರುತ್ತದೆ. ಗೀತೆಯಲ್ಲಿರುವ ಈ ಐದು ಉಪದೇಶಗಳು ಕಷ್ಟದ ಸಮಯದಲ್ಲಿ ಭರವಸೆಯ ಕಿರಣವಾಗಿ ಜೀವನಕ್ಕೆ ಹೊಸ ಬೆಳಕನ್ನು ತರುತ್ತವೆ.

ಭಗವದ್ಗೀತೆಯಲ್ಲಿರುವ ಭರವಸೆಯ ಕಿರಣ ಮೂಡಿಸುವ 5 ಸಂದೇಶಗಳು

ಈ ಜಗತ್ತಿನಲ್ಲಿ ಯಾವುದೂ ಶಾಶ್ವತವಲ್ಲ. ಸುಖ-ದುಃಖಗಳು ಕ್ಷಣಿಕ. ಇಂದು ಇರುವ ದುಃಖದ ಸಮಯ ನಾಳೆ ಸಂತೋಷದ ದಿನಗಳಾಗಿ ಬದಲಾಗುತ್ತವೆ ಎಂದು ಶ್ರೀಕೃಷ್ಣನು ಅರ್ಜುನನಿಗೆ ಹೇಳುತ್ತಾನೆ. ಇಂದು ನಿಮ್ಮ ಕಾರ್ಯದಲ್ಲಿ ವಿಫಲರಾಗಿದ್ದೀರಿ ಎಂದು ಆ ಕೆಲಸವನ್ನು ನಿಲ್ಲಿಸಬೇಡಿ. ಏಕೆಂದರೆ ಒಳ್ಳೆಯ ಕೆಲಸ ಮಾಡುತ್ತಲೇ ಇದ್ದರೆ ಮುಂದೊಂದು ದಿನ ಯಶಸ್ಸು ಖಂಡಿತ ಸಿಗುತ್ತದೆ. ಜೀವನದಲ್ಲಿ ಎಷ್ಟೇ ಕೆಟ್ಟ ಸಮಯ ಬಂದರೂ, ವ್ಯಕ್ತಿ ತನ್ನ ಕರ್ತವ್ಯವನ್ನು ಮಾಡುತ್ತಲೇ ಇರಬೇಕು.

ಭಗವದ್ಗೀತೆಯ ಪ್ರಕಾರ, ಜೀವನದಲ್ಲಿ ಯಶಸ್ವಿಯಾಗಲು ಕನಸು ಕಾಣಬೇಕು. ವ್ಯಕ್ತಿಯು ಯಾವಾಗಲೂ ದೊಡ್ಡ ಕನಸನ್ನೇ ಕಾಣಬೇಕು. ಏಕೆಂದರೆ ಕನಸು ಕಂಡಾಗ ಮಾತ್ರ ಅದನ್ನು ಪೂರೈಸಲು ಪ್ರಯತ್ನಿಸುತ್ತಾನೆ. ಕನಸು ಅಥವಾ ಗುರಿ ಇಲ್ಲದ ವ್ಯಕ್ತಿ ಜೀವನದಲ್ಲಿ ಏನನ್ನೂ ಮಾಡಲು ಸಾಧ್ಯವಿಲ್ಲ. ಕನಸು ಅಥವಾ ಗುರಿ ಇದ್ದಾಗ ಮಾತ್ರ ಅದನ್ನು ಪೂರೈಸುವ ಸಲುವಾಗಿ ನಿರಂತರವಾಗಿ ಶ್ರಮಿಸುತ್ತಾನೆ. ಆದ್ದರಿಂದ ಜೀವನದಲ್ಲಿ ಯಾವುದಾದರೂ ಒಂದು ಕನಸು ಅಥವಾ ಗುರಿಯಿರಬೇಕು ಮತ್ತು ಅದನ್ನು ಆಗಾಗ ನೆನಪಿಸಿಕೊಳ್ಳುತ್ತಿರಬೇಕು. ಆಗ ಯಶಸ್ಸು ಖಂಡಿತ ಸಿಗುತ್ತದೆ.

ಭಗವದ್ಗೀತೆಯ ಪ್ರಕಾರ, ಸಹನೆ ಮತ್ತು ಕ್ಷಮೆ ಇದು ಮನುಷ್ಯನಿಗೆ ಇರಲೇಬೇಕಾದ ಗುಣಗಳಾಗಿವೆ. ಕಷ್ಟ ಬಂದಾಗ ಸಹನೆ ಮತ್ತು ತಾಳ್ಮೆಯಿಂದಿರಬೇಕು. ಅದೇರೀತಿ ತಪ್ಪು ಮಾಡಿದ ವ್ಯಕ್ತಿ ಕ್ಷಮೆಯನ್ನು ಯಾಚಿಸಿ ಬಂದಾಗ ಸುಲಭವಾಗಿ ಕ್ಷಮಿಸುವ ಗುಣ ಬೆಳೆಸಿಕೊಳ್ಳಬೇಕು. ನಮ್ಮಿಂದ ತಪ್ಪಾದಾಗ ಕ್ಷಮೆ ಕೇಳುವುದನ್ನು ಮರೆಯಬಾರದು. ಅನಗತ್ಯ ವಿಷಯಗಳ ಬಗ್ಗೆ ಚಿಂತಿಸಬಾರದು. ದ್ವೇಷದ ಭಾವನೆಯನ್ನು ತೊಡೆದು ಹಾಕಲು ಸಹನೆ ಮತ್ತು ಕ್ಷಮೆ ಬಹಳ ಅಗತ್ಯವಾಗಿದೆ.

ಬದಲಾವಣೆ ಜಗತ್ತಿನ ನಿಯಮ ಎಂದು ಶ್ರೀಕೃಷ್ಣನು ಗೀತೋಪದೇಶದಲ್ಲಿ ಹೇಳುತ್ತಾನೆ. ಕಠಿಣ ಪರಿಸ್ಥಿತಿಯಲ್ಲಿ ಯಶಸ್ವಿಯಾಗಲು, ಆ ಸಮಯಕ್ಕೆ ತಕ್ಕಂತೆ ವ್ಯಕ್ತಿಯು ತನ್ನನ್ನು ತಾನು ಬದಲಾಯಿಸಿಕೊಳ್ಳಬೇಕು. ಸಮಯದೊಂದಿಗೆ ಚಲಿಸುವ ವ್ಯಕ್ತಿಯು ಎಂದಿಗೂ ನಿರಾಶೆಗೊಳ್ಳುವುದಿಲ್ಲ. ಅಂಥವರು ಒಂದಲ್ಲ ಒಂದು ದಿನ ತಮ್ಮ ಕೆಲಸದಲ್ಲಿ ಖಂಡಿತಾ ಯಶಸ್ವಿಯಾಗುತ್ತಾರೆ.

ಶ್ರೀಕೃಷ್ಣನ ಪ್ರಕಾರ, ಮಾನವನ ಪ್ರತಿಯೊಂದು ಸಮಸ್ಯೆಯ ಮೂಲ ಅವನ ಕೋಪವಾಗಿದೆ. ಕೋಪದ ಮೇಲೆ ನಿಯಂತ್ರಣವನ್ನು ಸಾಧಿಸಬೇಕು. ಸಮಾಧಾನದಿಂದ ಯೋಚಿಸುವ ವ್ಯಕ್ತಿ ಯಾವುದೇ ರೀತಿಯ ಗಂಭೀರ ಸಮಸ್ಯೆಗಳನ್ನು ಎದುರಿಸುವುದಿಲ್ಲ. ಪ್ರತಿಯೊಂದು ಸಮಸ್ಯೆಗೂ ಸಮರ್ಪಕವಾದ ಉತ್ತರವನ್ನು ಕಂಡುಕೊಳ್ಳುತ್ತಾನೆ. ಆದ್ದರಿಂದ ಕೋಪವನ್ನು ತ್ಯಜಿಸಬೇಕು.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.