ಶಿವ ಪಾರ್ವತಿಯ ಪ್ರೇಮಕಥೆ ಓದಿದ್ದೀರಾ? ಭಕ್ತಿ, ತಾಳ್ಮೆ , ತ್ಯಾಗಕ್ಕೆ ಸಂಬಂಧಿಸಿದ ಆಸಕ್ತಿದಾಯಕ ಕಥೆಗಳು ಇಲ್ಲಿವೆ
ಪುರಾಣದ ಕಥೆಗಳಲ್ಲಿ ಶಿವ ಪಾರ್ವತಿಯ ಪ್ರೇಮಕಥೆ ಅತ್ಯಂತ ಸ್ವಾರಸ್ಯಕರವಾಗಿದೆ. ಅದು ಕೇವಲ ಪ್ರೇಮಕಥೆಯಷ್ಟೇ ಅಲ್ಲ, ಅದರಲ್ಲಿ ಭಕ್ತಿ, ತಾಳ್ಮೆ, ತ್ಯಾಗ, ಪರಸ್ಪರ ಸಮರ್ಪಣೆಯಿದೆ. ಶಿವ ಪಾರ್ವತಿಯ ಪ್ರೇಮಕಥೆ ಓದಿ.

ಶಿವ ಪಾರ್ವತಿಯ ಪ್ರೇಮಕಥೆ ತಿಳಿಯದವರು ಕಡಿಮೆ. ಇವರಿಬ್ಬರ ಪ್ರೇಮಕಥೆ ಭಕ್ತಿ, ತಾಳ್ಮೆ ಮತ್ತು ತ್ಯಾಗದ ಕಥೆಯಾಗಿದೆ. ಶಿವನ ಪ್ರೀತಿಯನ್ನು ಗೆಲ್ಲಲು ಪಾರ್ವತಿಯು ಕಠಿಣ ತಪಸ್ಸನ್ನು ಮಾಡಿದಳು. ಅದೇ ಶಿವನು ಬ್ರಹ್ಮಾಂಡವನ್ನು ಉಳಿಸಲು ವಿಷವನ್ನೇ ಕುಡಿದನು. ಪುರಾಣಗಳ ಕಥೆಯ ಪ್ರಕಾರ ಇವರ ಪ್ರೇಮ ಸುದೀರ್ಘವಾದದ್ದು. ಅಲ್ಲಿ ಅವರಿಬ್ಬರು ಅನೇಕ ಸಲ ಬೇರೆಯಾದರೂ ಮತ್ತೆ ಒಂದಾದ ಅನೇಕ ಕಥೆಗಳಿವೆ. ಜೊತೆಗೆ ಮಗ ಗಣೇಶನ ಶಿರಚ್ಛೇದದ ಹೃದಯವಿದ್ರಾವಕ ಪರೀಕ್ಷೆಗಳಿವೆ. ದುಷ್ಟತನವನ್ನು ನಾಶ ಮಾಡಲು ಪಾರ್ವತಿಯು ತನ್ನ ಉಗ್ರ ರೂಪವಾದ ಕಾಳಿಯಾದ ಕಥೆಯಿದೆ. ಶಿವ–ಪಾರ್ವತಿಯ ಪ್ರೇಮದಲ್ಲಿ ತ್ಯಾಗ, ಕರ್ತವ್ಯ, ಸಮರ್ಪಣೆ, ಅಚಲವಾದ ಪ್ರೀತಿಯನ್ನು ಕಾಣಬಹುದಾಗಿದೆ. ಅವರ ಪ್ರೇಮದ ಕಥೆ ನಿಜವಾದ ಪ್ರೀತಿಗೆ ಸ್ಫೂರ್ತಿಯಾಗಿದೆ.
ಪ್ರೀತಿಯೆಂದರೆ ಪರಸ್ಪರ ಸಮರ್ಪಣೆ, ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳುವುದು ಮತ್ತು ಕಷ್ಟದ ಸಮಯ ಬಂದಾಗ ಬೆಂಬಲವಾಗಿ ನಿಲ್ಲುವುದು ಎಂದು ತಮ್ಮ ತ್ಯಾಗಗಳ ಮೂಲಕ ನೆನಪಿಸುತ್ತಾರೆ. ಶಿವ–ಪಾರ್ವತಿಯ ಪ್ರೇಮಕಥೆ ಭಕ್ತರಿಗೆ ಇವತ್ತಿಗೂ ಸ್ಫೂರ್ತಿನೀಡುತ್ತದೆ. ಹಿಂದೂ ಪುರಾಣಗಳಲ್ಲಿ ಶಿವ ಪಾರ್ವತಿಯರ ಪ್ರೇಮಕಥೆ ಅತ್ಯಂತ ಸ್ವಾರಸ್ಯಕರವಾಗಿದೆ. ಬ್ರಹ್ಮಾಂಡದ ಒಳಿತಿಗಾಗಿ ಅವರು ಮಾಡಿದ ತ್ಯಾಗ, ಸಮರ್ಪಣೆ ಶಾಶ್ವತ ಪ್ರೀತಿಯ ಆಳವನ್ನು ಎತ್ತಿ ತೋರಿಸುತ್ತದೆ. ಶಿವ ಪಾರ್ವತಿಗೆ ಸಂಬಂಧಿಸಿ 5 ಸ್ವಾರಸ್ಯಕರ ಕಥೆಗಳನ್ನು ಓದಿ.
1. ಶಿವನ ಪ್ರೀತಿಯನ್ನುಪಡೆಯಲು ಪಾರ್ವತಿ ಮಾಡಿದ ಕಠಿಣ ತಪಸ್ಸು
ರಾಜ ಹಿಮವಂತ ಮತ್ತು ರಾಣಿ ಮೀನಾಳ ಮಗಳಾಗಿ ಜನಿಸಿದ ಪಾರ್ವತಿ, ಶಿವನ ಮೊದಲ ಪತ್ನಿ ಸತಿಯ ಅವತಾರ. ಪಾರ್ವತಿಯ ಹುಟ್ಟಿದಾಗಿನಿಂದಲೇ ಶಿವನನ್ನು ಪ್ರೀತಿಸುತ್ತಿದ್ದಳು. ಆದ್ದರಿಂದ ಅವನನ್ನು ಮದುವೆಯಾಗಲು ಉತ್ಸುಕಳಾಗಿದ್ದಳು. ಆದರೆ ಶಿವನು ಸತಿಯ ಮರಣದ ನಂತರ ಲೌಕಿಕ ಬಂಧಗಳನ್ನು ತ್ಯಜಿಸಿ ಘೋರ ಧ್ಯಾನದಲ್ಲಿ ಮಗ್ನನಾಗಿದ್ದನು. ಶಿವನ ಪ್ರೀತಿಯನ್ನು ಪಡೆಯಲು ನಿರ್ಧರಿಸಿದ ಪಾರ್ವತಿಯು ಕಠಿಣ ತಪಸ್ಸು ಮಾಡಲು ಪ್ರಾರಂಭಿಸಿದಳು. ಅರಮನೆಯ ಎಲ್ಲಾ ವೈಭೋಗಗಳನ್ನು ತ್ಯಜಿಸಿ, ಪರ್ವತದಲ್ಲಿ ಹಲವು ವರ್ಷಗಳ ಕಾಲ ಧ್ಯಾನ ಮಾಡಿದಳು. ಪಾರ್ವತಿಯ ತಪಸ್ಸನ್ನು ಕಂಡು ದೇವಾನುದೇವತೆಗಳು ಸಹ ಆಘಾತಕ್ಕೆ ಒಳಗಾದರು. ಕೊನೆಗೆ ಪಾರ್ವತಿಯ ಭಕ್ತಿಯು ಶಿವನನ್ನು ತಲುಪಿತು. ನಂತರ ಶಿವನು ಪಾರ್ವತಿಯನ್ನು ತನ್ನ ಹೆಂಡತಿಯನ್ನಾಗಿ ಸ್ವೀಕರಿಸಿದನು. ಪಾರ್ವತಿ ದೇವಿಯು ಮಾಡಿದ ತ್ಯಾಗವು ಪ್ರೀತಿ, ಪರಿಶ್ರಮ ಮತ್ತು ನಂಬಿಕೆಯ ಶಕ್ತಿಯನ್ನು ಹೇಳುತ್ತದೆ.
2. ವಿಶ್ವವನ್ನು ಉಳಿಸಲು ವಿಷವನ್ನೇ ಕುಡಿದು ವಿಷಕಂಠನಾದ ಶಿವ
ದೇವತೆಗಳು ಮತ್ತು ರಾಕ್ಷಸರು ಸೇರಿ ಸಮುದ್ರ ಮಂಥನ ಮಾಡುವಾಗ ಕ್ಷೀರಸಾಗರದ ಆಳದಿಂದ ಹಾಲಾಹಲ ಎಂಬ ವಿಷ ಹೊರಬಂದಿತು. ಆ ವಿಷವು ಇಡೀ ಸೃಷ್ಟಿಯನ್ನೇ ನಾಶಮಾಡುವಷ್ಟು ಭಯಂಕರವಾಗಿತ್ತು. ವಿಷದ ಪ್ರಭಾವವನ್ನು ಅರಿತ ದೇವತೆಗಳು ಮತ್ತು ರಾಕ್ಷಸರು ಶಿವನ ಮೊರೆ ಹೋದರು. ಇದನ್ನು ಕೇಳಿದ ಶಿವ ಮತ್ತೇನನ್ನೂ ಯೋಚಿಸದೇ ಬ್ರಹ್ಮಾಂಡವನ್ನು ಕಾಪಾಡಲು ಹಾಲಾಹಲ ವಿಷವನ್ನೇ ಕುಡಿದನು. ಈ ವಿಷಯವನ್ನು ಅರಿತ ಪಾರ್ವತಿಯು ಅಲ್ಲಿಗೆ ಧಾವಿಸಿ ಬಂದಳು. ವಿಷ ಶಿವನ ದೇಹವನ್ನು ಆವರಿಸುವುದನ್ನು ತಡೆಯಲು ಪಾರ್ವತಿಯು ಶಿವನ ಕುತ್ತಿಗೆಯನ್ನು ಒತ್ತಿ ಹಿಡಿದಳು. ವಿಷವು ಶಿವನ ಗಂಟಲಿನಲ್ಲಿ ಹೆಪ್ಪುಗಟ್ಟಿ ನೀಲಿಯಾಕಾರಕ್ಕೆ ತಿರುಗಿತು. ಈ ಕಾರಣದಿಂದ ಶಿವನನ್ನು ನೀಲಕಂಠ ಎಂದು ಕರೆಯತೊಡಗಿದರು. ಶಿವ ಪಾರ್ವತಿ ಮಾಡಿದ ತ್ಯಾಗವು ವಿಶ್ವದ ವಿನಾಶವನ್ನು ತಪ್ಪಿಸಿತು. ಶಿವನಿಗೆ ಎದುರಾಗುವ ತೊಂದರೆಯನ್ನು ತಪ್ಪಿಸಲು ಪಾರ್ವತಿ ನಡೆದುಕೊಂಡ ರೀತಿ ಅವರಿಬ್ಬರ ಅಚಲ ಪ್ರೇಮವನ್ನು ಹೇಳುತ್ತದೆ.
3. ಶಿವನಿಗಾಗಿ ಪಾರ್ವತಿಯ ದೀರ್ಘ ಅಗಲಿಕೆ
ಶಿವ–ಪಾರ್ವತಿಯರು ವಿವಾಹದ ನಂತರ ಸಂತೋಷದಿಂದ ಕೈಲಾಸ ಪರ್ವತದಲ್ಲಿ ನೆಲೆಸಿದರು. ತ್ರಿಮೂರ್ತಿಗಳಲ್ಲಿ ಒಬ್ಬನಾದ ಶಿವನು ಬ್ರಹ್ಮಾಂಡ ಲಯಕಾರನು ಮತ್ತು ಸೃಷ್ಟಿಕರ್ತನು ಆಗಿರುವನು. ವಿಶ್ವದ ಒಳಿತಿಗಾಗಿ ಅವನು ನಿರ್ವಹಿಸಬೇಕಾದ ಅನೇಕ ಜವಾಬ್ದಾರಿಗಳಿದ್ದವು. ಅಂತಹ ಸಂದರ್ಭದಲ್ಲಿ ಪಾರ್ವತಿಯು ಶಿವನ ದೀರ್ಘ ಅಗಲುವಿಕೆಯನ್ನು ಸಹಿಸಬೇಕಾಗಿತ್ತು. ಒಮ್ಮೆ ಶಿವನು ಋಷಿಮುನಿಗಳಿಗೆ ಜ್ಞಾನವನ್ನು ನೀಡುತ್ತಿದ್ದಾಗ, ತನ್ನ ಪ್ರೀತಿಯ ಹೆಂಡತಿ ಪಾರ್ವತಿಯಿಂದ ದೂರವಿದ್ದನು. ಪಾರ್ವತಿ ಶಿವನಿಗಾಗಿ ನಿರಂತರವಾಗಿ ಕಾಯುತ್ತಿದ್ದಳು. ಆದರೂ ಪಾರ್ವತಿ ಶಿವನ ಕರ್ತವ್ಯವನ್ನು ಗೌರವಿಸಿದಳು ಮತ್ತು ತಾಳ್ಮೆಯಿಂದ ಕಾಯತೊಡಗಿದಳು. ಮತ್ತೊಮ್ಮೆ ಮಗ ಕಾರ್ತಿಕೇಯನ ಜನನದ ನಂತರ ಪಾರ್ವತಿಯು ಅವನ್ನು ಪಾಲನೆ ಪೋಷಣೆ ಮಾಡುವ ಸಮಯದಲ್ಲಿ ಶಿವನು ಧ್ಯಾನಾವಸ್ಥೆಗೆ ಪ್ರವೇಶಿದನು. ಅವನ ಅಗಲಿಕೆ ಮತ್ತೆ ಪಾರ್ವತಿಗೆ ತೀವ್ರ ನೋವುಂಟು ಮಾಡಿದರೂ ಅವಳು ಸಮಾಧಾನವಾಗಿ ಶಿವನಿಗಾಗಿ ಕಾದಳು. ಶಿವನ ಉದ್ದೇಶ ಮತ್ತು ಕೆಲಸಗಳನ್ನು ಅರ್ಥಮಾಡಿಕೊಂಡಳು. ಇದು ಪಾರ್ವತಿಗೆ ಶಿವನ ಮೇಲಿರುವ ಪ್ರೀತಿ ಮತ್ತು ಭಕ್ತಿಯನ್ನು ಹೇಳುತ್ತದೆ.
4. ಧರ್ಮವನ್ನು ಎತ್ತಿಹಿಡಿಯಲು ಮಗ ಗಣೇಶನ ಶಿರಚ್ಛೇದನ
ಶಿವ–ಪಾರ್ವತಿಯ ಪ್ರೇಮಕಥೆಯಲ್ಲಿ ಅತ್ಯಂತ ದುಃಖಕರವಾದ ತ್ಯಾಗವೆಂದರೆ ಅದು ಅವರ ಮಗ ಗಣೇಶನ ಶಿರಚ್ಛೇದನ. ಪಾರ್ವತಿ ತನ್ನ ರಕ್ತ–ಮಾಂಸದಿಂದ ಗಣೇಶನನ್ನು ಸೃಷ್ಟಿಸಿ, ಅವನನ್ನು ತನ್ನ ರಕ್ಷಕನನ್ನಾಗಿ ನೇಮಿಸದಳು. ಅವಳು ತಾನು ಸ್ನಾನ ಮಾಡುವಾಗ ಯಾರನ್ನೂ ಹೊಸ್ತಿಲು ದಾಟಬಾರದು ಎಂದು ಆದೇಶಿಸಿದಳು. ಶಿವನು ಕೈಲಾಸಕ್ಕೆ ಹಿಂತಿರುಗಿದಾಗ, ಗಣೇಶನು ಅವನನ್ನು ಗುರುತಿಸದೇ ಒಳಗೆ ಪ್ರವೇಶಿಸಲು ಬಿಡಲಿಲ್ಲ. ಇದರಿಂದ ಕೋಪಗೊಂಡ ಶಿವನು ಅವನ ಶಿರಚ್ಛೇದನ ಮಾಡಿದನು. ಇದರಿಂದ ಪಾರ್ವತಿಗೆ ತೀವ್ರ ದುಃಖವುಂಟಾಯಿತು. ನಿರ್ಜನ ಪ್ರದೇಶದಲ್ಲಿ ಪಾರ್ವತಿಯನ್ನು ಒಂಟಿಯಾಗಿ ಬಿಟ್ಟು ಹೋಗಿರುವ ತಪ್ಪು ಶಿವನಿಗೆ ಅರ್ಥವಾಯಿತು. ಗಣೇಶನಿಗೆ ಜೀವ ನೀಡುವುದಾಗಿ ಭರವಸೆ ನೀಡಿದನು. ಗಣೇಶನಿಗೆ ಆನೆಯ ತಲೆಯನ್ನು ತಂದು ಅಂಟಿಸಲಾಯಿತು. ನಂತರ ಗಣೇಶನು ಎಲ್ಲ ವಿಘ್ನಗಳನ್ನು ನಿವಾರಿಸುವ ವಿಘ್ನೇಶ್ವರನಾಗಿ ಆಶೀರ್ವದಿಸಲ್ಪಟ್ಟನು. ಈ ಘಟನೆಯು ಶಿವನ ಧರ್ಮದ ಕರ್ತವ್ಯವನ್ನು ನಿರೂಪಿಸುತ್ತದೆ. ಅದೇ ಸಮಯದಲ್ಲಿ ಪಾರ್ವತಿಯ ಮೇಲಿರುವ ಅಪಾರವಾದ ಪ್ರೀತಿಯನ್ನು ಬಹಿರಂಗಪಡಿಸುತ್ತದೆ.
5. ವಿಶ್ವ ರಕ್ಷಣೆಗೆ ಕಾಳಿಯ ರೂಪ ತಾಳಿದ ಪಾರ್ವತಿ
ರಾಕ್ಷಸರಿಗೆ ಮತ್ತು ದೇವತೆಗಳಿಗೆ ನಿರಂತರ ಯುದ್ಧ ನಡೆಯಿತು. ರಾಕ್ಷಸರು ದಿನದಿಂದ ದಿನಕ್ಕೆ ಬಲಿಷ್ಠರಾಗುತ್ತಾ ಹೋದರು. ದೇವತೆಗಳೆಲ್ಲರು ಶಕ್ತಿ ಕಳೆದುಕೊಳ್ಳತೊಡಗಿದರು. ದುಷ್ಟ ಶಕ್ತಿಯ ನಿರ್ಮೂಲನೆಗಾಗಿ ಪಾರ್ವತಿಯು ತನ್ನ ಉಗ್ರ ರೂಪ ತಾಳಿದಳು. ಕಾಳಿಯಾಗಿ ರಾಕ್ಷಸರನ್ನು ಸದೆಬಡಿದಳು. ಯುದ್ಧ ಮುಗಿದರೂ ಅವಳ ಉಗ್ರ ಕೋಪ ಶಮನವಾಗಲಿಲ್ಲ. ಬ್ರಹ್ಮಾಂಡದ ಸಮತೋಲನ ತಪ್ಪತೊಡಗಿತು. ಕಾಳಿ ತನಗೆ ಎದುರಾದ ಎಲ್ಲ ವಸ್ತುಗಳ ನಾಶ ಮಾಡುತ್ತಾ ಹೊರಟಳು. ಈ ಸ್ಥಿತಿಯು ಇನ್ನೊಂದು ವಿನಾಶದ ಮುನ್ಸೂಚನೆ ಎಂದು ಅರಿತ ಶಿವ ಅವಳ ದಾರಿಗೆ ಅಡ್ಡಲಾಗಿ ಮಲಗಿದನು. ಇದನ್ನು ಅರಿಯದ ಕಾಳಿ ಶಿವನನ್ನು ತುಳಿದಳು. ತನ್ನ ಗಂಡನನ್ನು ತುಳಿದ ಅರಿವಾಗುತ್ತಿದ್ದಂತೆ ಕಾಳಿಯು ಶಾಂತಚಿತ್ತಳಾದಳು. ಪಾರ್ವತಿಯು ವಿಶ್ವವನ್ನು ಉಳಿಸಲು ಉಗ್ರರೂಪ ತಾಳಿದಳು. ಆದರೆ ಶಿವನು ಅವಳ ಕೋಪವನ್ನು ತಣಿಸಲು ಮತ್ತು ಅವಳ ನಿಜವಾದ ಅಸ್ತಿತ್ವವನ್ನು ತಿಳಿಯಪಡಿಸಲು ಈ ತ್ಯಾಗ ಮಾಡಿದನು. ಕೋಪಕ್ಕಿಂತ ಪ್ರೀತಿಯ ಶಕ್ತಿ ದೊಡ್ಡದು ಎಂದು ತೋರಿಸಿದನು.
(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟಿಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ)
