ಟೀಕೆಗೆ ಭಯಪಡದಿರಿ, ನಿಮ್ಮ ಯಶಸ್ಸಿನ ನಂತರ ಅಭಿಪ್ರಾಯ ಬದಲಾಗುತ್ತದೆ: ಮಾದರಿ ವ್ಯಕ್ತಿಯಾಗಲು ಭಗವದ್ಗೀತೆಯ ಈ 6 ಸೂತ್ರಗಳನ್ನು ಅಳವಡಿಸಿಕೊಳ್ಳಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಟೀಕೆಗೆ ಭಯಪಡದಿರಿ, ನಿಮ್ಮ ಯಶಸ್ಸಿನ ನಂತರ ಅಭಿಪ್ರಾಯ ಬದಲಾಗುತ್ತದೆ: ಮಾದರಿ ವ್ಯಕ್ತಿಯಾಗಲು ಭಗವದ್ಗೀತೆಯ ಈ 6 ಸೂತ್ರಗಳನ್ನು ಅಳವಡಿಸಿಕೊಳ್ಳಿ

ಟೀಕೆಗೆ ಭಯಪಡದಿರಿ, ನಿಮ್ಮ ಯಶಸ್ಸಿನ ನಂತರ ಅಭಿಪ್ರಾಯ ಬದಲಾಗುತ್ತದೆ: ಮಾದರಿ ವ್ಯಕ್ತಿಯಾಗಲು ಭಗವದ್ಗೀತೆಯ ಈ 6 ಸೂತ್ರಗಳನ್ನು ಅಳವಡಿಸಿಕೊಳ್ಳಿ

Bhagavad Gita: ಶ್ರೀಕೃಷ್ಣನ ಉಪದೇಶಗಳು ಮನುಷ್ಯನಿಗೆ ಶಾಂತಿ, ಸಂತೋಷ ಮತ್ತು ಮುಕ್ತಿಯನ್ನು ಪಡೆಯಲು ಇರುವ ಸಾಧನವಾಗಿದೆ. ಭಗವದ್ಗೀತೆಯ ಉಪದೇಶಗಳು ಮನುಷ್ಯನಲ್ಲಿ ಕಾಡುವ ಭಯ, ಹಿಂಜರಿಕೆಗಳನ್ನು ಹೋಗಲಾಡಿಸುತ್ತದೆ. ಕೆಲವು ವಿಷಯಗಳ ಬಗ್ಗೆ ಚಿಂತಿಸುವುದನ್ನು ಬಿಟ್ಟರೆ, ಇತರರಿಗೆ ಮಾದರಿಯಾಗಿ ಬದುಕಬಹುದು ಎಂದು ಹೇಳುತ್ತದೆ. (ಬರಹ: ಅರ್ಚನಾ ವಿ. ಭಟ್‌)

ಟೀಕೆಗೆ ಭಯಪಡಬೇಡಿ, ನಿಮ್ಮ ಯಶಸ್ಸಿನ ನಂತರ ಅಭಿಪ್ರಾಯ ಬದಲಾಗುತ್ತದೆ: ಭಗವದ್ಗೀತೆ ಈ 6 ಉಪದೇಶಗಳು ನಿಮ್ಮನ್ನು ಮಾದರಿ ವ್ಯಕ್ತಿಯನ್ನಾಗಿಸುತ್ತದೆ
ಟೀಕೆಗೆ ಭಯಪಡಬೇಡಿ, ನಿಮ್ಮ ಯಶಸ್ಸಿನ ನಂತರ ಅಭಿಪ್ರಾಯ ಬದಲಾಗುತ್ತದೆ: ಭಗವದ್ಗೀತೆ ಈ 6 ಉಪದೇಶಗಳು ನಿಮ್ಮನ್ನು ಮಾದರಿ ವ್ಯಕ್ತಿಯನ್ನಾಗಿಸುತ್ತದೆ (PC: HT File Photo)

ಶ್ರೀಮದ್‌ ಭಗವದ್ಗೀತೆಯು ಜ್ಞಾನದ ಭಂಡಾರವಾಗಿದೆ. ಇದು ಮನುಷ್ಯನಿಗೆ ಜೀವನದ ಸರಿಯಾದ ದಿಕ್ಕನ್ನು ತೋರಿಸುತ್ತದೆ. ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ. ಕುರುಕ್ಷೇತ್ರದ ಯುದ್ಧಭೂಮಿಯಲ್ಲಿ ಅರ್ಜುನನಿಗೆ ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಭಗವದ್ಗೀತೆಯ ಉಪದೇಶಗಳು ಸಹಾಯ ಮಾಡಿದವು. ಅಷ್ಟೇ ಅಲ್ಲದೇ ಶ್ರೀಕೃಷ್ಣ ಪರಮಾತ್ಮನು ತನ್ನ ವಿಶ್ವರೂಪವನ್ನು ತೋರಿಸಿದನು. ಭಗವದ್ಗೀತೆಯನ್ನು ಓದುವುದರಿಂದ ಅಪಾರವಾದ ಜ್ಞಾನ ಸಿಗುವುದರ ಜೊತೆಗೆ ಮನಸ್ಸಿಗೆ ಶಾಂತಿ, ನೆಮ್ಮದಿ ಮತ್ತು ಸಂತೋಷವು ದೊರಕುತ್ತದೆ. ಇದು ನಿಜವಾದ ಅರ್ಥದಲ್ಲಿ ಮುಕ್ತಿಯನ್ನು ಪಡೆಯುವ ಮಾರ್ಗವನ್ನು ತೋರಿಸುತ್ತದೆ. ಕೆಲವರು ಒಂದಲ್ಲಾ ಒಂದು ವಿಚಾರಕ್ಕೆ ಸದಾ ಚಿಂತಿಸುತ್ತಿರುತ್ತಾರೆ. ನಿರಾಶೆ, ಹತಾಶೆಯ ಭಾವನೆಗಳನ್ನು ಬೆಳೆಸಿಕೊಂಡಿರುತ್ತಾರೆ. ಗೀತೆಯಲ್ಲಿ ಇಂತಹ ವಿಷಯಗಳ ಬಗ್ಗೆ ಹೆಚ್ಚು ಯೋಚಿಸಬಾರದು. ಆಗ ಮಾತ್ರ ಮನುಷ್ಯ ಉತ್ತಮನಾಗಿ ಬಾಳಲು ಸಾಧ್ಯ ಎಂದು ಹೇಳಲಾಗಿದೆ.

ಮಾದರಿ ವ್ಯಕ್ತಿಯಾಗಲು ಈ 6 ಸೂತ್ರಗಳನ್ನು ಅಳವಡಿಸಿಕೊಳ್ಳಿ

1. ಜೀವನದಲ್ಲಿ ಹಿಂದೆ ನಡೆದದ್ದೆಲ್ಲವೂ, ಈಗ ಆಗುತ್ತಿರುವುದು, ಹಾಗೂ ಮುಂದೆ ನಡೆಯುವುದು ಎಲ್ಲವೂ ಒಳ್ಳೆಯದೇ ಆಗುತ್ತದೆ ಎಂದು ಶ್ರೀಕೃಷ್ಣನು ಗೀತೆಯಲ್ಲಿ ಹೇಳಿದ್ದಾನೆ. ಆದ್ದರಿಂದ ಕಠಿಣ ಪರಿಸ್ಥಿತಿಯಲ್ಲಿಯೂ ಯಾವುದರ ಬಗ್ಗೆಯೂ ದುಃಖ ಅಥವಾ ಚಿಂತೆ ಮಾಡಬಾರದು. ಇದನ್ನು ಚೆನ್ನಾಗಿ ತಿಳಿದವನು ಮೋಕ್ಷ ಹೊಂದುತ್ತಾನೆ.

2. ಶ್ರೀಕೃಷ್ಣನ ಪ್ರಕಾರ, ಯಾವುದೇ ವ್ಯಕ್ತಿಯು ಹುಟ್ಟುವಾಗ ದೊಡ್ಡ ವ್ಯಕ್ತಿಯಾಗಿ ಹುಟ್ಟುವುದಿಲ್ಲ. ಆದರೆ ಅವನು ಮಾಡುವ ಕಾರ್ಯಗಳು ಅವನನ್ನು ಶ್ರೇಷ್ಠನನ್ನಾಗಿ ಮಾಡುತ್ತವೆ. ಕಠಿಣ ಪರಿಸ್ಥಿತಿಯಲ್ಲಿ ಸರಿಯಾದ ಮಾರ್ಗವನ್ನು ಅನುಸರಿಸಿ ಒಳ್ಳೆಯ ಕೆಲಸ ಮಾಡಬೇಕು. ಕೆಟ್ಟ ಕೆಲಸಗಳಲ್ಲಿ ಸಿಕ್ಕಿಬಿದ್ದ ವ್ಯಕ್ತಿಯು ಅವುಗಳಿಂದ ಎಂದಿಗೂ ಹೊರಬರಲು ಸಾಧ್ಯವಿಲ್ಲ. ಇದು ಅವನ ಇಡೀ ಜೀವನವನ್ನು ಹಾಳುಮಾಡುತ್ತದೆ.

3. ಯಶಸ್ಸಿನಲ್ಲಿ ಅಹಂಕಾರವಿಲ್ಲದೆ ಮತ್ತು ವೈಫಲ್ಯದಲ್ಲಿ ನಿರಾಶೆ ಅಥವಾ ಅತೃಪ್ತಿ ಹೊಂದದ ವ್ಯಕ್ತಿಯು ಜೀವನದಲ್ಲಿ ಖಂಡಿತವಾಗಿಯೂ ಯಶಸ್ವಿಯಾಗುತ್ತಾನೆ ಎಂದು ಶ್ರೀಮದ್ ಭಗವದ್ಗೀತೆಯಲ್ಲಿ ಹೇಳಲಾಗಿದೆ. ಏಕೆಂದರೆ ಈ ಎರಡೂ ಸಂದರ್ಭಗಳಲ್ಲಿ ವ್ಯಕ್ತಿಯ ಮೆದುಳು ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ. ಆಗ ಆ ವ್ಯಕ್ತಿಗೆ ದಿನದಿಂದ ದಿನಕ್ಕೆ ಹಿನ್ನಡೆಯಾಗುತ್ತದೆ.

4. ಭಗವದ್ಗೀತೆಯ ಉಪದೇಶದಲ್ಲಿ, ಇಡೀ ಪ್ರಪಂಚದ ಶಕ್ತಿಯು, ನಿಮ್ಮದು ಎನಿಸಿರುವ ವಸ್ತುವನ್ನು ನಿಮ್ಮಿಂದ ತೆಗೆದುಕೊಳ್ಳಲು ಎಷ್ಟೇ ಪ್ರಯತ್ನಿಸಿದರೂ ಅದನ್ನು ಕಸಿದುಕೊಳ್ಳಲಾಗುವುದಿಲ್ಲ. ಈ ವಿಷಯವನ್ನು ಚೆನ್ನಾಗಿ ಅರಿತುಕೊಂಡವನು ಯಾವುದರ ಬಗ್ಗೆಯೂ ಚಿಂತಿಸುವುದಿಲ್ಲ. ನಿಮ್ಮಿಂದ ದೂರವಾದ ವ್ಯಕ್ತಿ ಎಂದಿಗೂ ನಿಮ್ಮವನಲ್ಲ. ಇದನ್ನು ಅರ್ಥಮಾಡಿಕೊಳ್ಳಬೇಕು ಎಂದು ಶ್ರೀಕೃಷ್ಣನು ಹೇಳುತ್ತಾನೆ.

5. ಮನುಷ್ಯನು ತನ್ನ ಸಮಯ ಮತ್ತು ಹಣೆಬರಹಕ್ಕಿಂತ ಹೆಚ್ಚಿನದನ್ನು ಎಂದಿಗೂ ಪಡೆಯುವುದಿಲ್ಲ ಎಂದು ಶ್ರೀಕೃಷ್ಣನು ಶ್ರೀಮದ್‌ ಭಗವದ್ಗೀತೆಯಲ್ಲಿ ಹೇಳಿದ್ದಾನೆ. ಇಂತಹ ಪರಿಸ್ಥಿತಿಯಲ್ಲಿ ಜನರು ಯಾವುದರ ಬಗ್ಗೆಯೂ ಯೋಚಿಸದೆ ತಮ್ಮ ಕೆಲಸವನ್ನು ಮುಂದುವರಿಸಬೇಕು. ಯಾವಾಗ ಏನು ಸಂಭವಿಸಬೇಕೋ ಅದು ಸಂಭವಿಸುತ್ತದೆ. ಭವಿಷ್ಯದ ವಿಷಯಗಳ ಬಗ್ಗೆ ಚಿಂತಿಸಬಾರದು.

6. ಭಗವದ್ಗೀತೆಯ ಪ್ರಕಾರ, ಮನುಷ್ಯನು ಎಂದಿಗೂ ಟೀಕೆಗೆ ಭಯಪಡಬಾರದು. ಇಂದು ನಿಮ್ಮನ್ನು ಟೀಕಿಸುವ ಅಥವಾ ನಿಂದಿಸುವ ವ್ಯಕ್ತಿಯ ಅಭಿಪ್ರಾಯವು ನಿಮ್ಮ ಯಶಸ್ಸಿನ ನಂತರ ಬದಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ವಿಮರ್ಶಕರ ಮಾತುಗಳಿಗೆ ಹೆಚ್ಚು ಗಮನ ಕೊಡಬಾರದು ಎಂದು ಕೃಷ್ಣನು ಹೇಳಿದ್ದಾನೆ.

(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟಿಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.)

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.