ಮಾನಸಿಕ ಶಕ್ತಿಯಿಂದ ಆತ್ಮವಿಶ್ವಾಸ ಹೆಚ್ಚಳದವರೆಗೆ; ಮಹಿಳೆಯರು ಹಣೆಗೆ ಕುಂಕುಮ ಇಡುವುದರಿಂದ ಏನೆಲ್ಲಾ ಪ್ರಯೋಜನಗಳಿವೆ
ಕುಂಕುಮ ಹೆಣ್ಣು ಮಕ್ಕಳ ಸಿಂಗಾರದ ವಸ್ತುಗಳಲ್ಲಿ ಒಂದು. ಹಣೆಗೆ ಕುಂಕುಮ ಹಚ್ಚುವುದರಿಂದ ಒಳ್ಳೆಯದಾಗುತ್ತೆ ಎಂಬ ನಂಬಿಕೆ ಇದೆ. ಮಹಿಳೆಯರು ಹಣೆಗೆ ಕುಂಕುಮ ಇಡುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳೋಣ.

ಆರೋಗ್ಯದ ವಿಚಾರದಲ್ಲಿ ಮತ್ತು ಬಿಡುವಿಲ್ಲದೆ ಕೆಲಸ ನಿರ್ವಹಿಸುವ ಶಕ್ತಿಯನ್ನು ಸ್ತ್ರೀಯರು ಪಡೆದಿರುತ್ತಾರೆ. ಕೆಲವೊಂದು ಧಾರ್ಮಿಕ ಗ್ರಂಥಗಳಲ್ಲಿ ಪ್ರತಿಯೊಬ್ಬ ಸ್ತ್ರೀಯರಲ್ಲಿಯೂ ಶ್ರೀ ದುರ್ಗೆಯ ಅಂಶ ಇರುತ್ತದೆ ಎಂದು ತಿಳಿದುಬರುತ್ತದೆ. ಈ ಕಾರಣದಿಂದಾಗಿ ಭಾರತೀಯ ಸಂಸ್ಕೃತಿಯಲ್ಲಿ ಹೆಣ್ಣು ಮಕ್ಕಳಿಗೆ ವಿಶೇಷವಾದ ಪ್ರಾಧಾನ್ಯತೆ ನೀಡಿದ್ದಾರೆ. ಮುಖ್ಯವಾಗಿ ಹೆಣ್ಣುಮಕ್ಕಳಿಗೆ ಇಂತಹ ದೈಹಿಕ ಮತ್ತು ಮಾನಸಿಕ ಶಕ್ತಿ ದೊರೆಯಲು ಕಾರಣ ಅವರ ಹಣೆಯಲ್ಲಿ ಶೋಭಾಯಮಾನವಾದ ಕುಂಕುಮ. ಕೈಯಲ್ಲಿರುವ ಬಳೆಗಳು. ಕುಂಕುಮ ಮತ್ತು ಬಳೆಗಳನ್ನು ಧರಿಸಿದವರ ಬಳಿ ಯಾವುದೇ ದೃಷ್ಟ ಶಕ್ತಿಗಳು ಸಹ ದೂರ ಉಳಿಯುವುದೆಂಬ ನಂಬಿಕೆ ನಮ್ಮಲ್ಲಿದೆ. ಕೆನ್ನೆ ಮತ್ತು ಕೈಗಳಿಗೆ ಅರಿಶಿನವನ್ನು ಹಚ್ಚುತ್ತಾರೆ. ಧಾರ್ಮಿಕತೆಗೆ ಸಂಬಂಧಿಸಿದಂತೆ ಹೆಣ್ಣುಮಕ್ಕಳ ಆರೋಗ್ಯ ಮತ್ತು ಯಶಸ್ಸಿಗೆ ಇದೆ ಕಾರಣವಾಗುತ್ತದೆ. ಇದು ನಂಬಿಕೆಯ ವಿಚಾರವಾಗುತ್ತದೆ.
ಸಾಮಾನ್ಯವಾಗಿ ಪುರುಷರಾಗಲಿ ಸ್ತ್ರೀಯರಾಗಲಿ ಕುಂಕುಮವನ್ನು ಹಣೆಯ ಭಾಗದಲ್ಲಿ ಧರಿಸುತ್ತಾರೆ. ಕುಂಕುಮದಲ್ಲಿ ಆಕರ್ಷಣಾ ಗುಣವಿರುತ್ತದೆ. ಯೋಗಾಸನದಲ್ಲಿ ಬರುವ ಆಜ್ಞಾಚಕ್ರವು ಹಣೆಯ ಭಾಗದಲ್ಲಿ ಇರುತ್ತದೆ. ಪ್ರಜ್ಜೆ ಎಂದರೆ ಕೋಪ ಅರಿವು ಜಾಗರೂಕತೆ ಮುಂತಾದವು. ಈ ಚಕ್ರವು ಕೋಪವನ್ನು ಪ್ರತಿಬಿಂಬಿಸುತ್ತದೆ. ಅತೀಂದ್ರಿಯ ಶಕ್ತಿಯನ್ನು ಸಹ ಇದರಿಂದ ತಿಳಿಯಬಹುದು. ಇದನ್ನು ಮೂರನೇ ಕಣ್ಣು ಎಂದೂ ಕರೆಯುತ್ತೇವೆ. ಶಿವನು ಮೂರನೇ ಕಣ್ಣನ್ನು ತನ್ನ ಹಣೆಯ ಭಾಗದಲ್ಲಿ ಹೊಂದಿರುತ್ತಾನೆ. ಶಿವನಿಗೆ ಕೋಪ ಬಂದಾಗ ಆ ಕಣ್ಣು ತೆರೆದು ಕೋಪಕ್ಕೆ ಕಾರಣವಾದ ವಸ್ತುವು ಸುಡುತ್ತಾನೆ ಎಂದು ತಿಳಿದಿದ್ದೇವೆ. ಇದು ನಾವೆಲ್ಲರೂ ತಿಳಿದಿರುವ ಧಾರ್ಮಿಕ ಸಂಗತಿ. ಈ ಚಕ್ರದಿಂದ ಜಾಗೃತಿಯನ್ನು ಸಹ ಪಡೆಯಬಹುದಾಗಿದೆ. ಈ ಸ್ಥಳದಲ್ಲಿ ಕುಂಕುಮವನ್ನು ಧರಿಸಿದಲ್ಲಿ ಕೋಪವು ಕ್ಷೀಣಿಸಿ ಶಾಂತಿ ಸಹನೆಯ ಗುಣವು ಜಾಗೃತಗೊಳ್ಳುತ್ತದೆ. ಇದರಿಂದಾಗಿ ಕುಂಕುಮವನ್ನು ಸಹ ಯಂತ್ರವೆಂದು ಕರೆಯಲಾಗುತ್ತದೆ.
- ಸಾಮಾನ್ಯವಾಗಿ ಕುಂಕುಮವು ಕೆಂಪು ಬಣ್ಣದಿಂದ ಕೂಡಿರುತ್ತದೆ. ಸ್ತ್ರೀಯರಾಗಲಿ ಪುರುಷರಾಗಲಿ ಕೆಲವರು ಕುಂಕುಮವನ್ನು ಹುಬ್ಬುಗಳ ಮಧ್ಯೆ ಇಡುತ್ತಾರೆ. ಇದರಿಂದ ಅವರಲ್ಲಿನ ರೋಷಾ ದ್ವೇಷಗಳು ದೂರವಾಗುತ್ತವೆ. ಆವರಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ. ಎಲ್ಲರ ಜೊತೆಯಲ್ಲಿ ಶಾಂತಿ ಸಹನೆಯಿಂದ ವರ್ತಿಸುತ್ತಾರೆ. ಇವರಿಗೆ ಹೊಂದಿಕೊಳ್ಳುವ ಜನರು ಮಾತ್ರ ಇವರ ಸ್ನೇಹವನ್ನು ಬೆಳೆಸುತ್ತಾರೆ. ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸವು ಮೂಡುತ್ತದೆ. ಆರೋಗ್ಯದ ಸಮಸ್ಯೆ ಕಡಿಮೆಯಾಗುತ್ತದೆ.
- ಕೆಲವರು ಕುಂಕುಮವನ್ನು ಹುಬ್ಬಿನ ಮೇಲ್ಭಾಗದಲ್ಲಿ ಅಂದರೆ ಹಣೆಯ ಮಧ್ಯದಲ್ಲಿ ಧರಿಸುತ್ತಾರೆ. ಇವರು ತಮ್ಮ ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಆಸಕ್ತಿ ತೋರುತ್ತಾರೆ. ಬೇರೊಬ್ಬರನ್ನು ಆಶಯಿಸುವುದಿಲ್ಲ. ಇದರ ಪ್ರತಿಫಲವೆಂಬಂತೆ ಆತ್ಮವಿಶ್ವಾಸವು ಹೆಚ್ಚುತ್ತದೆ. ಇವರು ಸಮಯ ಸಂದರ್ಭವನ್ನು ಅರ್ಥೈಸಿಕೊಂಡು ಬುದ್ಧಿವಂತಿಕೆಯಿಂದ ವರ್ತಿಸುತ್ತಾರೆ. ಇವರ ಕೆಲಸ ಕಾರ್ಯಗಳಲ್ಲಿ ನಿಶ್ಚಿತ ಯಶಸ್ಸು ದೊರೆಯುತ್ತದೆ.
- ಕುಂಕುಮವನ್ನು ಅರ್ಧಚಂದ್ರಾಕಾರವಾಗಿ ಕೆಲವರು ಧರಿಸುತ್ತಾರೆ. ಇವರು ತಮ್ಮ ತಪ್ಪನ್ನು ತಾವೆ ಸಪಡಿಸಿಕೊಳ್ಳುತ್ತಾರೆ. ಇವರ ಜೀವನದಲ್ಲಿನ ಕೆಲಸ ಕಾರ್ಯಗಳು ಕಮೇಣವಾಗಿ ಯಶಸ್ಸನ್ನು ಗಳಿಸುತ್ತದೆ. ಆದರೆ ಇವರು ದೃಢವಾದ ಮನಸ್ಥಿತಿಯನ್ನು ಹೊಂದಿರುವುದಿಲ್ಲ.
- ಕೆಲವರು ಕುಂಕುಮವನ್ನು ವೃತ್ತಾಕಾರದಲ್ಲಿ ಧರಿಸಿರುತ್ತಾರೆ. ಇಂತಹವರ ಜೀವನದಲ್ಲಿನ ಸಮಸ್ಯೆಗಳನ್ನು ಸುಲಭರೀತಿಯಲ್ಲಿ ಪೂರ್ಣಗೊಳಿಸುತ್ತಾರೆ. ಇವರ ಮನದ ಆಸೆ ಆಕಾಂಕ್ಷೆಗಳನ್ನು ಪೂರೈಸಲು ಆತ್ಮೀಯರು ಪ್ರಯತ್ನಿಸುತ್ತಾರೆ. ಆದರೆ ಸದಾಕಾಲ ಇವರು ಕೆಲಸ ಕಾರ್ಯಗಳಲ್ಲಿ ನಿರತರಾಗಿರುತ್ತಾರೆ. ಇದರಿಂದ ವಿಶ್ರಾಂತಿಯು ದೂರವಾಗುತ್ತದೆ.
- ಕುಂಕುಮವನ್ನು ಪದ್ಮಾಕಾರದಲ್ಲಿ ಇರುವಂತೆ ಕೆಲವರು ಧರಿಸುತ್ತಾರೆ. ಇವರು ಸಮಯ ಸಂದರ್ಭಕ್ಕೆ ತಕ್ಕಂತೆ ವರ್ತಿಸಿ ಸುಖ ಜೀವನ ನಡೆಸುತ್ತಾರೆ. ಒಂದು ಕೆಲಸವನ್ನು ಪೂರೈಸಿದ ನಂತರ ವಿಶ್ರಾಂತಿ ತೆಗೆದುಕೊಳ್ಳುವುದು ಇವರ ಹವ್ಯಾಸ. ಇವರು ನೇರವಾದ ಮಾತಿಗೆ ಒಗ್ಗಿಹೋಗುತ್ತಾರೆ. ಕೆಲವರು ಕುಂಕುಮವನ್ನು ಧರಿಸುವ ವೇಳೆ ದುರ್ಗಾಮಾತೆಗೆ ಸಂಬಂಧಿಸಿದ ಅಥವಾ ಶ್ರೀ ಮಹಾಲಕ್ಷ್ಮಿಗೆ ಸಂಬಂಧಿಸಿದ ಮಂತ್ರಗಳನ್ನು ಪಠಿಸುತ್ತಾರೆ. ಇದರಿಂದ ಕುಂಕುಮಕ್ಕೆ ವಿಶೇಷ ಶಕ್ತಿ ಲಭಿಸುತ್ತದೆ ಎಂದು ಕೆಲವು ಧಾರ್ಮಿಕ ಗ್ರಂಥಗಳಲ್ಲಿ ಉಲ್ಲೇಖವಿದೆ.
(ಬರಹ: ಎಚ್ ಸತೀಶ್, ಜ್ಯೋತಿಷಿ)