ಜನವರಿ 5ಕ್ಕೆ ಘಾಟಿ ಸುಬ್ರಹ್ಮಣ್ಯ ಅದ್ಧೂರಿ ಬ್ರಹ್ಮ ರಥೋತ್ಸವ; ಮಧ್ಯಾಹ್ನ 12ರ ನಂತರದ ಶುಭ ಮುಹೂರ್ತದಲ್ಲಿ ತೇರು, ಸಕಲ ಸಿದ್ಧತೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಜನವರಿ 5ಕ್ಕೆ ಘಾಟಿ ಸುಬ್ರಹ್ಮಣ್ಯ ಅದ್ಧೂರಿ ಬ್ರಹ್ಮ ರಥೋತ್ಸವ; ಮಧ್ಯಾಹ್ನ 12ರ ನಂತರದ ಶುಭ ಮುಹೂರ್ತದಲ್ಲಿ ತೇರು, ಸಕಲ ಸಿದ್ಧತೆ

ಜನವರಿ 5ಕ್ಕೆ ಘಾಟಿ ಸುಬ್ರಹ್ಮಣ್ಯ ಅದ್ಧೂರಿ ಬ್ರಹ್ಮ ರಥೋತ್ಸವ; ಮಧ್ಯಾಹ್ನ 12ರ ನಂತರದ ಶುಭ ಮುಹೂರ್ತದಲ್ಲಿ ತೇರು, ಸಕಲ ಸಿದ್ಧತೆ

2025ರ ಜನವರಿ 5ರ ಭಾನುವಾರ ಮಧ್ಯಾಹ್ನ 12.10 ರಿಂದ 12.20ರ ಶುಭ ಮುಹೂರ್ತದಲ್ಲಿ ಇತಿಹಾಸ ಪ್ರಸಿದ್ಧ ಘಾಟಿ ಸುಬ್ರಹ್ಮಣ್ಯ ರಥೋತ್ಸವಕ್ಕೆ ಚಾಲನೆ ನೀಡಲಾಗುತ್ತದೆ. ಸಾವಿರಾರು ಭಕ್ತರು ರಥೋತ್ಸವದಲ್ಲಿ ಭಾಗವಹಿಸಲಿದ್ದಾರೆ.

ದೊಡ್ಡಬಳ್ಳಾಪುರದ ಘಾಟಿಯಲ್ಲಿರುವ ಸುಬ್ರಹ್ಮಣ್ಯ ದೇವಸ್ಥಾನ
ದೊಡ್ಡಬಳ್ಳಾಪುರದ ಘಾಟಿಯಲ್ಲಿರುವ ಸುಬ್ರಹ್ಮಣ್ಯ ದೇವಸ್ಥಾನ

ದೊಡ್ಡಬಳ್ಳಾಪುರದ ಇತಿಹಾಸ ಪ್ರಸಿದ್ಧ ಘಾಟಿ ಸುಬ್ರಹ್ಮಣ್ಯ ರಥೋತ್ಸವಕ್ಕೆ ಕೆಲವೇ ದಿನಗಳು ಬಾಕಿ ಇದ್ದು, ಅಂತಿಮ ಹಂತದ ಸಿದ್ಧತೆಗಳು ನಡೆಯುತ್ತಿವೆ. ಸಾಮಾನ್ಯವಾಗಿ ಘಾಟಿ ಸುಬ್ರಹ್ಮಣ್ಯ ರಥೋತ್ಸವ ಷಷ್ಠಿಯಂದು ನಡೆಯುತ್ತದೆ. ಅದರಂತೆ ಈ ಬಾರಿ 2025ರ ಜನವರಿ 5 ರಂದು ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ನಡೆಯಲಿದೆ.

ರಥೋತ್ಸವಕ್ಕೆ ರಾಜ್ಯದ ನಾನಾ ಭಾಗಗಳಿಂದ ಭಕ್ತರು ಆಗಮಿಸುತ್ತಿದ್ದಾರೆ. ಜನವರಿ 5ರ ಭಾನುವಾರ ಮಧ್ಯಾಹ್ನ 12.10 ರಿಂದ 12.20 ಶುಭ ಮುಹೂರ್ತದಲ್ಲಿ ತೇರಿಗೆ ಚಾಲನೆ ನೀಡಲಾಗುತ್ತದೆ. ಈ ವೇಳೆ ಭಕ್ತರು ರಥಕ್ಕೆ ಬಾಳೆಹಣ್ಣು, ದವನ ಎಸೆದು ಭಕ್ತಿಯನ್ನು ಸಮರ್ಪಿಸುತ್ತಾರೆ. ಕಳೆದ ಕೆಲವು ದಿನಗಳಿಂದಲೇ ಘಾಟಿಯಲ್ಲಿ ರಥವನ್ನು ಕಟ್ಟುವ ಕೆಲಸಗಳು ನಡೆಯುತ್ತಿವೆ.

ರಥೋತ್ಸವಕ್ಕೆ ದೂರದ ಊರುಗಳಿಂದ ಬರುವವರಿಗೆ ಅನ್ನದಾಸೋಹವನ್ನು ಏರ್ಪಡಿಸಲಾಗಿರುತ್ತೆ. ದೊಡ್ಡಬಳ್ಳಾಪುರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ ಸೇರಿದಂತೆ ರಾಜ್ಯದ ಮತ್ತಿತರ ಕಡೆಗಳಿಂದ ಭಕ್ತರು ರಥೋತ್ಸವಕ್ಕಾಗಿ ಬರುತ್ತಾರೆ. ಬೆಂಗಳೂರು ನಗರ ಹಾಗೂ ಸಮೀಪದ ಜಿಲ್ಲೆಗಳಿಗೆ ವಿಶೇಷ ಬಸ್ ವ್ಯವಸ್ಥೆಯನ್ನು ಮಾಡಲಾಗಿದೆ.

ಘಾಟಿ ಸುಬ್ರಹ್ಮಣ್ಯ ಕ್ಷೇತ್ರದ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ರಥೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಕೆಎಚ್ ಮುನಿಯಪ್ಪ, ಸಂಸದ ಡಾ ಕೆ ಸುಧಾಕರ್ ಸೇರಿದಂತೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಉಪಸ್ಥಿತಿ ಇರಲಿದ್ದಾರೆ. ರಥೋತ್ಸವಕ್ಕೆ ಸಾವಿರಾರು ಮಂದಿ ಭಕ್ತರು ಸೇರುವ ನಿರೀಕ್ಷೆ ಇದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸ್ಥಳದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ದೇವಾಲಯದಿಂದ ಒಂದು ಕಿಲೋ ಮೀಟರ್ ದೂರದಲ್ಲಿ ಬೈಕು, ಕಾರು ಹಾಗೂ ಬಸ್‌ಗಳಿಗೆ ಪ್ರತ್ಯೇಕವಾಗಿ ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಲಾಗಿದೆ.

ಘಾಟಿ ಸುಬ್ರಹ್ಮಣ್ಯ ಸ್ವಾಮಿಯ ದರ್ಶನ ಪಡೆಯುವುದರಿಂದ ಕುಜ ದೋಷ, ಸರ್ಪ ದೋಷ ದೂರವಾಗುತ್ತದೆ, ರಾಹು–ಕೇತು ಸಮಸ್ಯೆಗಳಿಂದ ಮುಕ್ತಿ ಪಡೆದು ಶುಭ ಫಲಗಳು ದೊರೆಯುತ್ತವೆ ಎಂಬ ನಂಬಿಕೆಯಿಂದ ಭಕ್ತರು ಇಲ್ಲಿಗೆ ಬರುತ್ತಾರೆ. ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸುತ್ತಾರೆ. ಇಲ್ಲಿನ ದೇವಾಲಯದಲ್ಲಿ ಸರ್ಪ ರೂಪದಲ್ಲಿರುವ ಸುಬ್ರಹ್ಮಣ್ಯ ಸ್ವಾಮಿ ಮತ್ತು ಲಕ್ಷ್ಮಿ ನರಸಿಂಹ ಸ್ವಾಮಿಯ ಮೂರ್ತಿಗಳು ಏಕಶಿಲೆಯಲ್ಲಿರುವುದನ್ನು ಕಾಣಬಹುದು.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.