ಉತ್ತಮ ಆರೋಗ್ಯದಿಂದ ವಿವಾಹ ಯೋಗದವರೆಗೆ; ವೆಂಕಟಾದ್ರಿ ಬೆಟ್ಟದಲ್ಲಿ ಪೂಜೆ ಮಾಡುವುದರಿಂದ ಏನೆಲ್ಲಾ ಲಾಭಗಳಿವೆ
ತಿರುಪತಿಯ ವೆಂಕಟೇಶ್ವರನ ಸನ್ನಿಧಾನದ ಸಮೀಪದಲ್ಲೇ ಇರುವ ವೆಂಕಟಾದ್ರಿ ಬೆಟ್ಟದಲ್ಲಿ ಪೂಜೆ ಮಾಡುವುದರಿಂದ ಸಾಕಷ್ಟು ಪ್ರಯೋಜನಗಳಿವೆ ಎಂಬುದು ಭಕ್ತರ ನಂಬಿಕೆಯಾಗಿದೆ. ಇಲ್ಲಿ ಪೂಜೆ ಮಾಡುವುದರಿಂದ ಏನೆಲ್ಲಾ ಲಾಭಗಳಿವೆ ಎಂಬುದನ್ನು ತಿಳಿಯಿರಿ.

ವೆಂಕಟಾದ್ರಿ ಬೆಟ್ಟ ತಿರುಪತಿಯಲ್ಲಿರುವ ಬೆಟ್ಟವಾಗಿದೆ. ಕಲಿಯುಗದಲ್ಲಿ ಈ ಬೆಟ್ಟವನ್ನು ವೆಂಕಟಾದ್ರಿ ಮತ್ತು ವೆಂಕಟಾಚಲ ಎಂಬ ಹೆಸರಿಂದ ಕರೆಯಲಾಗುತ್ತದೆ. ಈ ಬೆಟ್ಟದ ಬಗ್ಗೆ ಸಂಪೂರ್ಣ ವಿವರಣೆ ನಮಗೆ ಬ್ರಂಹಾಂಡ ಪುರಾಣದಲ್ಲಿ ದೊರೆಯುತ್ತದೆ. ತಿರುಪತಿಯಲ್ಲಿ ಪುಣ್ಯಸ್ನಾನ ಮಾಡಲು ಸ್ನಾನದ ಘಟ್ಟಗಳಿವೆ. ಇಲ್ಲಿ ಪುಣ್ಯಸ್ನಾನವನ್ನು ಮಾಡಿದಲ್ಲಿ ಯಾವುದೇ ವ್ಯಕ್ತಿಯು ತನಗೆ ತಿಳಿದೊ ತಿಳಿದೆಯೋ ಮಾಡಿದ ಪಾಪಕೃತ್ಯಗಳು ನಶಿಸಿಹೋಗುತ್ತವೆ. ತಿನ್ನುವ ಆಹಾರವನ್ನು ಅವಮಾನಿಸುವ ಕಾರಣ ಅನೇಕರು ವಯಸ್ಸು ಹೆಚ್ಚುತ್ತಿದ್ದಂತೆ ಆಹಾರ ಸೇವಿಸುವ ಶಕ್ತಿಯನ್ನು ಕಳೆದುಕೊಳ್ಳುತ್ತಾರೆ. ಇನ್ನೂ ಕೆಲವರಿಗೆ ಸೇವಿಸುವ ಆಹಾರವು ಜೀರ್ಣವಾಗುವುದೇ ಇಲ್ಲ. ಇಂಥವರು ತಿರುಪತಿಯಲ್ಲಿ ಪೂಜೆಯನ್ನು ಸಲ್ಲಿಸಿದಲ್ಲಿ ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತದೆ. ಕುಟುಂಬದಲ್ಲಿ ಮಕ್ಕಳ ಕಾರಣದಿಂದ ಆತಂಕದ ಪರಿಸ್ಥಿತಿಯು ಉಂಟಾಗುತ್ತದೆ. ಆದರೆ ಕುಟುಂಬ ಸಮೇತರಾಗಿ ವೆಂಕಟಾದ್ರಿ ಬೆಟ್ಟವನ್ನು ತಲುಪಿ, ಪುಣ್ಯಸ್ನಾನದ ನಂತರ ಭಗವಂತನನ್ನು ದರ್ಶಿಸಿದಲ್ಲಿ ಕುಟುಂಬದ ಮನಸ್ತಾಪಗಳು ದೂರವಾಗುತ್ತವೆ. ಕುಟುಂಬದಲ್ಲಿನ ಶಾಂತಿಯು ಮರುಕಳಿಸುತ್ತದೆ.
ಶ್ರೀಶೈಲದ ಪಶ್ಚಿಮ ಭಾಗದಲ್ಲಿ ಪುರಂದರ ಎಂಬ ಬ್ರಾಹ್ಮಣನೊಬ್ಬ ನೆಲೆಸಿರುತ್ತಾನೆ. ಇವನ ಮಗನ ಹೆಸರೇ ಮಾಧವ. ಸ್ವತಃ ಪುರಂದರನೇ ಮಾಧವನಿಗೆ ಸಕಲ ಶಾಸ್ತ್ರವನ್ನು ಕಲಿಸುತ್ತಾನೆ. ಮಾಧವನು ವಯಸ್ಕನಾಗುವ ವೇಳೆಗೆ ಸಕಲ ವಿದ್ಯಾ ಪಾರಂಗತನಾಗುತ್ತದೆ. ಆತನಿಗೆ ಚಂದ್ರರೇಖೆ ಎಂಬ ವಧುವಿನ ಜೊತೆಯಲ್ಲಿ ವಿವಾಹವಾಗುತ್ತದೆ. ಜೀವನದಲ್ಲಿ ಅನೇಕ ಕಾರಣಗಳಿಂದ ಮಾಧವನು ತನ್ನ ಆಚಾರ ವಿಚಾರಗಳನ್ನು ತೊರೆಯುತ್ತಾನೆ. ಐಹಿಕ ಭೋಗಾಲಾಸೆಗಲಳೂ ಹೆಚ್ಚುತ್ತವೆ. ಇವನು ಅನ್ಯಸ್ತ್ರೀಯೊಬ್ಬಳಿಂದ ಮೋಹಿತನಾಗುತ್ತಾನೆ. ಆಕೆಗೆ ಒಡವೆ ವಸ್ತ್ರಗಳನ್ನು ಕಾಣಿಕೆಯನ್ನಾಗಿ ನೀಡುತ್ತಾನೆ. ಕ್ರಮೇಣವಾಗಿ ತನ್ನ ತಪ್ಪಿನ್ನು ಅರಿತ ಮಾಧವನು ಪಶ್ಚಾತಪಕ್ಕೆ ಒಳಗಾಗುತ್ತಾನೆ. ಇದರಿಂದ ಬರಿಗಾಲಿನಲ್ಲಿ ವೆಂಕಟಾಚಲ ಬೆಟ್ಟವನ್ನು ಹತ್ತುತ್ತಾನೆ. ಆಗ ಅವನಲ್ಲಿದ್ದ ಪಾಪಕರ್ಮಗಳು ಸುಟ್ಟು ಹೋಗುತ್ತದೆ. ಅಲ್ಲಿಯೇ ಘೋರ ತಪಸ್ಸನ್ನು ಸಹ ಆಚರಿಸುತ್ತಾನೆ. ಅವನ ದೇಹದಲ್ಲಿ ಹೊಸ ಕಾಂತಿಯೊಂದು ಹೊರಹೊಮ್ಮುತ್ತದೆ. ದಿನ ಕಳೆದಂತೆ ಒಂದು ದಿನ ತನ್ನ ಪ್ರಾಣತ್ಯಾಗವನ್ನು ಮಾಡುತ್ತಾನೆ.
ನಾರಾಯಣ ಎಂಬ ಹೆಸರಿನ ಮಹರ್ಷಿಯೊಬ್ಬರು ತಿರುಪತಿ ಬಾಲಾಜಿಯ ಅನನ್ಯ ಭಕ್ತರಾಗಿರುತ್ತಾರೆ. ಸತತ ಪ್ರಯತ್ನ ಮತ್ತು ಪೂಜೆ ಮುನಸ್ಕಾರಗಳಿಂದಲೂ ತಿರುಪತಿಯ ದೇವನನ್ನು ಕಾಣಲು ಸಾಧ್ಯವಾಗುವುದಿಲ್ಲ. ಬ್ರಹ್ಮನು ಈತನಿಗೆ ವೆಂಕಟಾದ್ರಿಯಲ್ಲಿ ತಪಸ್ಸನ್ನು ಆಚರಿಸುವಂತೆ ಸೂಚಿಸುತ್ತಾನೆ. ಆಗ ನಾರಾಯಣ ಮಹರ್ಷಿಯು ಆ ಬೆಟ್ಟವನ್ನು ಹತ್ತುತ್ತಾನೆ. ಮೊದಲು ಅಲ್ಲಿದ್ದ ಪುಣ್ಯ ತೀರ್ಥಗಳಲ್ಲಿ ಮಂಗಳ ಸ್ನಾನವನ್ನು ಮಾಡುತ್ತಾನೆ. ಆ ಕ್ಷಣದಲ್ಲಿ ಅವನು ಮಾಡಿದ್ದ ಪಾಪಕರ್ಮಗಳಿಂದ ಮುಕ್ತಿಯನ್ನು ಪಡೆಯುತ್ತಾನೆ. ಆ ನಂತರ ಭಗವಂತನನ್ನು ಕುರಿತು ಘೋರ ತಪಸ್ಸನ್ನು ಆಚರಿಸುತ್ತಾನೆ. ಆಗ ಭಗವಂತನು ಪ್ರತ್ಯಕ್ಷನಾಗಿ ಆ ಬೆಟ್ಟವನ್ನು ನಾರಾಯಣಾದ್ರಿ ಎಂಬ ಹೆಸರಿಂದ ಕರೆದು ಸದಾ ಕಾಲ ನಾರಣಮಹರ್ಷಿಯ ಹೆಸರು ಉಳಿಯುವಂತೆ ಮಾಡುತ್ತಾನೆ.
ಬೆಟ್ಟವನ್ನು ಏರಿದರೆ ಸಂತೋಷದ ದಾಂಪತ್ಯ ಜೀವನ ನಿಮ್ಮದಾಗುತ್ತೆ
ಬಹುದಿನಗಳಿಂದ ದಾಂಪತ್ಯ ಜೀವನದಲ್ಲಿ ತೊಂದರೆ ತಾಪತ್ರಯಗಳು ಇದ್ದರೆ, ದಂಪತಿಗೆ ವೈರಾಗ್ಯದ ಮನೋಭಾವನೆ ಕಂಡುಬರುತ್ತದೆ. ಸಂತಾನವಿಲ್ಲದ ಕಾರಣ ಕೇವಲ ದಂಪತಿಗಳಲ್ಲದೆ ಕುಟುಂಬದ ಇತರೆ ಸದಸ್ಯರು ಸಹ ಆತಂಕಕ್ಕೆ ಒಳಗಾಗುತ್ತಾರೆ. ಆದರೆ ದಂಪತಿ ತಮ್ಮ ಮನಸ್ಸನ್ನು ತಿಳಿಗೊಳಿಸಿ, ಈ ಬೆಟ್ಟವನ್ನು ಏರುವ ಮೂಲಕ ತಮ್ಮ ಮನದಲ್ಲಿ ವಿಶ್ವಾಸವನ್ನು ಗಳಿಸುತ್ತಾರೆ. ಭಗವಂತನ ದರ್ಶನದಿಂದ ದಂಪತಿಯಲ್ಲಿ ಮತ್ತೊಮ್ಮೆ ಒಮ್ಮತ ಮೂಡುತ್ತದೆ.
ವಿವಾಹದ ವೇಳೆಯಲ್ಲಿ ಅನಾವಶ್ಯಕ ಮನಸ್ತಾಪ ಉಂಟಾಗಿ ವಿವಾಹವು ನಡೆಯದೇ ಹೋಗುತ್ತದೆ. ಇಂತಹ ಪ್ರಸಂಗಗಳು ಕೆಲವರ ಜೀವನದಲ್ಲಿ ಪದೇ ಪದೆ ಮರುಕಳಿಸುತ್ತದೆ. ವಿವಾಹದ ವೇಳೆಯಲ್ಲಿ ವಧು ವರರನ್ನು ಲಕ್ಷ್ಮೀ ನಾರಾಯಣರಿಗೆ ಹೋಲಿಸುತ್ತಾರೆ. ಈ ಬೆಟ್ಟದಲ್ಲಿ ಪೂಜೆ ಸಲ್ಲಿಸಬೇಕು. ಆನಂತರ ಮದುವೆ ಮಾಡಲಾಗದೆ ತೊಂದರೆಯಲ್ಲಿ ಇರುವವರಿಗೆ ಹಣದ ಸಹಾಯ ಮಾಡಬೇಕು. ಇದರಿಂದ ವಿವಾದಗಳು ಮರೆಯಾಗಿ ವಿವಾಹ ಕಾರ್ಯವು ಶಾಂತಿಯುತವಾಗಿ ಪೂರ್ಣಗೊಳ್ಳುತ್ತದೆ.
ಬರಹ: ಹೆಚ್. ಸತೀಶ್, ಜ್ಯೋತಿಷಿ, ಬೆಂಗಳೂರು
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ವೆಂಕಟಾದ್ರಿ ಬೆಟ್ಟದ ಮಾಹಿತಿಯನ್ನು ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).