Bhagavad Gita: ಮನಸ್ಸು ಶಾಂತವಾಗಲು, ವೈಫಲ್ಯದ ಭಯ ದೂರವಾಗಲು ಭಗವದ್ಗೀತೆಯ ಈ ಶ್ಲೋಕಗಳ ಅರ್ಥ ತಿಳಿದುಕೊಳ್ಳಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ಮನಸ್ಸು ಶಾಂತವಾಗಲು, ವೈಫಲ್ಯದ ಭಯ ದೂರವಾಗಲು ಭಗವದ್ಗೀತೆಯ ಈ ಶ್ಲೋಕಗಳ ಅರ್ಥ ತಿಳಿದುಕೊಳ್ಳಿ

Bhagavad Gita: ಮನಸ್ಸು ಶಾಂತವಾಗಲು, ವೈಫಲ್ಯದ ಭಯ ದೂರವಾಗಲು ಭಗವದ್ಗೀತೆಯ ಈ ಶ್ಲೋಕಗಳ ಅರ್ಥ ತಿಳಿದುಕೊಳ್ಳಿ

ಭಗವದ್ಗೀತೆಯು ಮಾನಸಿಕ ಒತ್ತಡದಿಂದ ಬಳಲುತ್ತಿರುವವರಿಗೆ ವರದಾನ. ಜೀವನದಲ್ಲಿ ಕಷ್ಟಗಳು ಬಂದಾಗ ಮನಸ್ಸು ವಿಚಲಿತಗೊಳ್ಳುತ್ತದೆ, ವೈಫಲ್ಯದ ಭಯ ಕಾಡುತ್ತದೆ. ಮನಸ್ಸನ್ನು ಶಾಂತಗೊಳಿಸಲು ಸಹಾಯ ಮಾಡುವ ಭಗವದ್ಗೀತೆಯ ಶ್ಲೋಕಗಳು ಇಲ್ಲಿವೆ. (ಬರಹ: ಅರ್ಚನಾ ವಿ. ಭಟ್)

ಭಗವದ್ಗೀತೆ ಶ್ಲೋಕಗಳ ಅರ್ಥ
ಭಗವದ್ಗೀತೆ ಶ್ಲೋಕಗಳ ಅರ್ಥ

ಮನುಷ್ಯನ ಜೀವನ ಯಾವಾಗಲೂ ಹೂವಿನ ಹಾಸಿಗೆಯಾಗಿರುವುದಿಲ್ಲ. ಅದು ನೋವು-ನಲಿವು, ಕಷ್ಟ-ಸುಖಗಳ ಸಮ್ಮಿಶ್ರಣವಾಗಿದೆ. ಜೀವನದಲ್ಲಿ ಕಷ್ಟಗಳು ಬಂದೇ ಬರುತ್ತದೆ. ಕಷ್ಟ ಬಂತೆಂದು ಕುಗ್ಗಿ ಮನಸ್ಸನ್ನು ವಿಚಲಿತಗೊಳಿಸಿಕೊಳ್ಳುವವರೇ ಹೆಚ್ಚು. ವೈಫಲ್ಯದ ಭಯ ಅವರನ್ನು ಕಾಡುತ್ತಿರುತ್ತದೆ. ಮನಸ್ಸನ್ನು ಶಾಂತಗೊಳಿಸಿದರೆ ಆ ಕಷ್ಟದಿಂದ ಹೊರಬರುವುದು ಸುಲಭ. ಕುರುಕ್ಷೇತ್ರ ಯುದ್ಧದಲ್ಲಿ ಅರ್ಜುನನ ಮನಸ್ಸು ಅಶಾಂತಿಯಿಂದ ಕೂಡಿದಾಗ, ಅವನಿಗೆ ಸಹಾಯ ಮಾಡಿದ್ದು ಶ್ರೀಕೃಷ್ಣ. ಭಗವಾನ್‌ ಶ್ರೀಕೃಷ್ಣನು ಭಗವದ್ಗೀತೆಯನ್ನು ಉಪದೇಶಿಸುವ ಮೂಲಕ ಅರ್ಜುನನ ಕಷ್ಟಗಳನ್ನು ಪರಿಹರಿಸಿದನು. ಶ್ರೀಮದ್‌ ಭಗವದ್ಗೀತೆಯು ಜೀವನ, ಧರ್ಮ, ಕ್ರಿಯೆ ಮತ್ತು ಪ್ರೀತಿಯ ಪಾಠಗಳನ್ನು ಕಲಿಸುತ್ತದೆ. ಮನಸ್ಸು ಅಶಾಂತಿಯ ಗೂಡಾದಾಗ ಭಗವದ್ಗೀತೆಯ ಈ ಶ್ಲೋಕಗಳು ನಿಮಗೆ ಅಲ್ಲಿಂದ ಹೊರಬರಲು ಸಹಾಯ ಮಾಡುತ್ತದೆ.

ಕರ್ಮ ಬ್ರಹ್ಮೋದ್ಭವಂ ವಿದ್ಧಿ ಬ್ರಹ್ಮಾಕ್ಷರಸಮುದ್ಭವಮ್ |
ತಸ್ಮಾತ್ ಸರ್ವಗತಂ ಬ್ರಹ್ಮ ನಿತ್ಯಂ ಯಜ್ಞೇ ಪ್ರತಿಷ್ಠಿತಮ್ ||

ಈ ಶ್ಲೋಕದ ಅರ್ಥವೇನೆಂದರೆ, ಕರ್ಮವು ವೇದಗಳಿಂದ ಉತ್ಪತ್ತಿಯಾಗಿದೆ. ವೇದಗಳು ಸಾಕ್ಷಾತ್‌ ಪರಬ್ರಹ್ಮನಿಂದ ವ್ಯಕ್ತವಾಗಿವೆ. ಆದ್ದರಿಂದ ಸರ್ವವ್ಯಾಪಿಯಾದ ಬ್ರಹ್ಮನು ಶಾಶ್ವತವಾಗಿ ಯಜ್ಞದಲ್ಲಿ ನೆಲೆಸಿದ್ದಾನೆ.

ಯಸ್ವಾತ್ಮರತಿರೇವ ಸ್ಯಾದಾತ್ಮತೃಪ್ತಶ್ಚ ಮಾನವಃ |
ಆತ್ಮನ್ಯೇವ ಚ ಸಂತುಷ್ಟಸ್ತಸ್ಯ ಕಾರ್ಯಂ ನ ವಿದ್ಯತೇ ||

ಈ ಶ್ಲೋಕದ ಅರ್ಥವೇನೆಂದರೆ, ಯಾವ ಮನುಷ್ಯನು ಆತ್ಮದಲ್ಲಿ ಆನಂದಪಡುತ್ತಾನೋ, ಆತ್ಮದಲ್ಲಿ ತೃಪ್ತಿ ಹೊಂದುತ್ತಾನೋ ಮತ್ತು ಆತ್ಮದಲ್ಲಿ ಸಂತುಷ್ಟನಾಗುತ್ತಾನೋ ಆ ವ್ಯಕ್ತಿಗೆ ಯಾವುದೇ ಕ್ರಿಯೆಯು ತುಂಬಾ ಚಿಕ್ಕದೂ ಅಲ್ಲ ಅಥವಾ ತುಂಬಾ ದೊಡ್ಡದೂ ಅಲ್ಲ.

ಶ್ರೀಮದ್‌ ಭಗವದ್ಗೀತೆಯು ಮಾನವರಿಗೆ ಕರ್ಮಗಳನ್ನು ಮಾಡುವ ಹಕ್ಕಿದೆ. ಆದರೆ ಫಲಗಳನ್ನು ಬಯಸುವ ಹಕ್ಕಿಲ್ಲ ಎಂದು ಹೇಳುತ್ತದೆ. ಫಲಿತಾಂಶಗಳನ್ನು ಎಂದಿಗೂ ಬಯಸಬೇಡಿ. ನೀವು ನಿಮ್ಮ ಕೆಲಸಗಳನ್ನು ಮಾಡುತ್ತಲೇ ಇರಿ, ಪರಿಣಾಮಗಳ ಬಗ್ಗೆ ಚಿಂತಿಸಬೇಡಿ ಎಂದು ಶ್ರೀಕೃಷ್ಣನು ಹೇಳಿದ್ದಾನೆ. ವ್ಯಕ್ತಿಯು ಫಲಿತಾಂಶಗಳನ್ನು ನಿರೀಕ್ಷಿಸದಿದ್ದಾಗ, ವೈಫಲ್ಯದ ಭಯ ಅವನಿಗೆ ಇರುವುದಿಲ್ಲ. ಆಗ ಮನಸ್ಸು ಶಾಂತವಾಗಿರುತ್ತದೆ.

ಗೀತೆಯ ಪ್ರಕಾರ, ಒಬ್ಬ ವ್ಯಕ್ತಿಯು ಪ್ರತಿಯೊಂದು ಕೆಲಸವನ್ನು ಬಹಳ ಬುದ್ಧಿವಂತಿಕೆಯಿಂದ ಮಾಡಬೇಕು. ಆಗ ಮಾತ್ರ ಯಶಸ್ಸು ಗಳಿಸಬಹುದು. ಜೀವನದ ಎಲ್ಲಾ ಕೆಲಸಗಳಿಗೂ ಬುದ್ಧಿವಂತಿಕೆ ಅಗತ್ಯ. ಬುದ್ಧಿವಂತಿಕೆಯಿಂದ ಮಾಡಿದ ಕೆಲಸಗಳಿಗೆ ಬಹಳ ಬೇಗ ಯಶಸ್ಸು ಸಿಗುತ್ತದೆ. ಮನಸ್ಸನ್ನು ಯಾವಾಗಲೂ ಶಾಂತವಾಗಿಟ್ಟುಕೊಳ್ಳಬೇಕು ಮತ್ತು ನಿಸ್ವಾರ್ಥದಿಂದ ಕೆಲಸವನ್ನು ಮಾಡಬೇಕು ಎಂದು ಶ್ರೀಕೃಷ್ಣನು ಹೇಳುತ್ತಾನೆ. ಕೆಲಸದ ಮೇಲೆ ಪ್ರೀತಿ ಮತ್ತು ಸಮರ್ಪಣೆಯಿದ್ದಾಗ ವೈಫಲ್ಯದ ಚಿಂತೆ ಕಾಡುವುದಿಲ್ಲ.

ಸಂತೋಷವು ನಮ್ಮ ಆಲೋಚನೆ, ಕಾರ್ಯ ಮತ್ತು ವರ್ತನೆಗಳ ಮೂಲಕ ಹೆಚ್ಚಿಸಿಕೊಳ್ಳಬಹುದಾದ ಸುಲಭದ ಮಾರ್ಗ ಎಂದು ಗೀತೆಯು ಎತ್ತಿ ತೋರಿಸುತ್ತದೆ. ಒಟ್ಟಾರೆಯಾಗಿ ಭಗವದ್ಗೀತೆಯ ಉಪದೇಶಗಳು ನಮ್ಮ ಮತ್ತು ನಮ್ಮ ಸುತ್ತಲಿನ ಪ್ರಪಂಚದ ನಡುವೆ ಹೆಚ್ಚಿನ ಸಾಮರಸ್ಯ ಮತ್ತು ಸಮತೋಲನವನ್ನು ಸಾಧಿಸಲು ಮತ್ತು ತೃಪ್ತಿದಾಯಕ ಜೀವನ ನಡೆಸುವ ಮಹತ್ವವನ್ನು ಸಾರುತ್ತದೆ.

ವಸ್ತುಗಳ ಮೇಲಿನ ಅತಿಯಾದ ಮೋಹವೂ ಸಹ ಅಶಾಂತ ಮನಸ್ಸಿಗೆ ಕಾರಣವಾಗಿದೆ. ಆದ್ದರಿಂದ ಮೋಹದ ಬಗ್ಗೆ ಜಾಗರೂಕರಾಗಿರಬೇಕು ಎಂದು ಗೀತೆಯಲ್ಲಿ ಹೇಳಲಾಗಿದೆ. ಯಾವುದೇ ವಿಷಯದ ಮೇಲಿನ ಮೋಹವು ಒತ್ತಡ ಮತ್ತು ಗೊಂದಲಕ್ಕೆ ಮೂಲ ಕಾರಣವಾಗಿದೆ. ಆದ್ದರಿಂದ ಅಂತಹ ವಿಷಯಗಳಿಂದ ದೂರವಿರಲು ಪ್ರಯತ್ನಿಸಬೇಕು. ಮೋಹವು ಬಯಕೆಯನ್ನು ಹುಟ್ಟುಹಾಕುತ್ತದೆ ಮತ್ತು ಬಯಕೆಯು ಕೋಪವನ್ನು ಹುಟ್ಟುಹಾಕುತ್ತದೆ ಎಂದು ಶ್ರೀಕೃಷ್ಣನು ಭಗವದ್ಗೀತೆಯಲ್ಲಿ ಹೇಳಿದ್ದಾನೆ.

(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟಿಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.)

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.