ದೀಪಾವಳಿ ದಿನ ಈ ವಿಗ್ರಹಗಳು ನಿಮ್ಮ ಮನೆಯಲ್ಲಿದ್ದರೆ ಲಕ್ಷ್ಮಿ ದೇವಿ ಹುಡುಕಿ ಬರ್ತಾಳೆ, ಹಣಕ್ಕೆ ಕೊರತೆ ಇರಲ್ಲ
ದೀಪಾವಳಿ 2024: ದೀಪಾವಳಿ ಹಬ್ಬದ ಸಮಯದಲ್ಲಿ ಲಕ್ಷ್ಮಿ ದೇವಿಯ ವಿಗ್ರಹವನ್ನು ಪೂಜೆಗಾಗಿ ತರಲಾಗುತ್ತದೆ. ಆದರೆ ಈ ದೀಪಾವಳಿಗೆ ನಿಮ್ಮ ಮನೆಗೆ ಈ ಮೂರ್ತಿಗಳನ್ನು ತಂದುಕೊಳ್ಳಿ. ಇವುಗಳ ಉಪಸ್ಥಿತಿಯಿಂದ ಮನೆಯಲ್ಲಿ ಸುಖ-ಸಮೃದ್ಧಿಯನ್ನು ಹೆಚ್ಚಿಸುತ್ತವೆ.

ಬೆಳಕಿನ ಹಬ್ಬ ದೀಪಾವಳಿಗೆ ಇನ್ನ ಕೆಲವೇ ದಿನಗಳು ಬಾಕಿ ಇವೆ. ದೀಪಾವಳಿಯು ಸಂತೋಷ ಮತ್ತು ಸಮೃದ್ಧಿಯ ಹಬ್ಬವಾಗಿದ್ದು, ಈ ದಿನ ಲಕ್ಷ್ಮಿ, ವಿನಾಯಕ ಹಾಗೂ ಕುಬೇರ ದೇವರಿಗೆ ದೀಪಗಳನ್ನು ಹಚ್ಚಿ ಪೂಜಿಸಲಾಗುತ್ತದೆ. ಈ ಪವಿತ್ರ ಹಬ್ಬದ ಸಮಯದಲ್ಲಿ ಜನರು ತಮ್ಮ ಮನೆ ಮತ್ತು ದೇವಾಲಯಗಳನ್ನು ಹೂವುಗಳು ಮತ್ತು ದೀಪಗಳಿಂದ ಅಲಂಕರಿಸುವ ಮೂಲಕ ಲಕ್ಷ್ಮಿ ದೇವಿಯನ್ನು ಸ್ವಾಗತಿಸುತ್ತಾರೆ. ಈ ಹಬ್ಬವು ಕೇವಲ ಅಲಂಕಾರಕ್ಕಾಗಿ ಮಾತ್ರವಲ್ಲದೆ ಮನೆಯಿಂದ ನಕಾರಾತ್ಮಕತೆಯನ್ನು ತೊಡೆದುಹಾಕಲು ಮತ್ತು ಧನಾತ್ಮಕ ಶಕ್ತಿಯ ಜೊತೆಗೆ ಸಂತೋಷ, ಸಮೃದ್ಧಿ ಮತ್ತು ಆಶೀರ್ವಾದವನ್ನು ತರಲು ತುಂಬಾ ಮಂಗಳಕರವಾಗಿದೆ. ಹಾಗಾಗಿ ಈ ದೀಪಾವಳಿಯಲ್ಲಿ ದೀಪಗಳನ್ನು ಮಾತ್ರವಲ್ಲದೆ ಮನೆಯ ಅಲಂಕಾರಕ್ಕಾಗಿ ಕೆಲವು ವಿಗ್ರಹಗಳನ್ನು ಸಹ ಖರೀದಿಸಿ. ಮನೆಯಲ್ಲಿ ಈ ವಿಗ್ರಹಗಳನ್ನು ಇಡುವುದರಿಂದ ಸಂತೋಷ ಮತ್ತು ಸಂಪತ್ತು ಬರುತ್ತದೆ. ಮನೆಯಲ್ಲಿ ಸಂಪತ್ತಿಗೆ ಕೊರತೆಯಿಲ್ಲ ಎಂಬ ನಂಬಿಕೆ ಇದೆ. ದೀಪಾವಳಿ ಹಬ್ಬದಲ್ಲಿ ನಿಮ್ಮ ಮನೆಗೆ ತರಬೇಕಾದ ಕೆಲವು ವಿಶೇಷ ಮೂರ್ತಿಗಳು ಇಲ್ಲಿವೆ.
ಲಕ್ಷ್ಮಿ ದೇವಿಯ ವಿಗ್ರಹ
ವಾಸ್ತವವಾಗಿ ಪ್ರತಿ ಮನೆಯಲ್ಲೂ ಲಕ್ಷ್ಮಿ ದೇವಿಯ ಫೋಟೊ ಇರುತ್ತದೆ. ದೀಪಾವಳಿ ಪೂಜೆಗೆ ಲಕ್ಷ್ಮಿ ದೇವಿಯ ಮಣ್ಣಿನ ವಿಗ್ರಹವನ್ನೂ ತರಲಾಗುತ್ತದೆ. ಆದರೆ ಮನೆಯಲ್ಲಿ ಯಾವಾಗಲೂ ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಹೊಂದಲು, ಮನೆಯಲ್ಲಿ ಹಿತ್ತಾಳೆ, ಬೆಳ್ಳಿ ಅಥವಾ ತಾಮ್ರದಿಂದ ಮಾಡಿದ ಲಕ್ಷ್ಮಿ ದೇವಿಯ ವಿಗ್ರಹವನ್ನು ಇಡಬೇಕು. ವಿಷ್ಣುವಿನೊಂದಿಗೆ ಲಕ್ಷ್ಮಿ ದೇವಿಯ ವಿಗ್ರಹವು ಇನ್ನೂ ಉತ್ತಮವಾಗಿದೆ.
ಗೂಬೆ ಪ್ರತಿಮೆ
ಗೂಬೆಯನ್ನು ಲಕ್ಷ್ಮಿ ದೇವಿಯ ವಾಹನವೆಂದು ಪರಿಗಣಿಸಲಾಗಿದೆ. ಆದ್ದರಿಂದ, ಮನೆಯಲ್ಲಿ ಗೂಬೆ ವಿಗ್ರಹವನ್ನು ಇಡುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಗೂಬೆಯ ಮೂರ್ತಿಯನ್ನು ಮನೆಯಲ್ಲಿಟ್ಟರೆ ಸಂಪತ್ತಿಗೆ ಎಂದೂ ಕೊರತೆಯಾಗುವುದಿಲ್ಲ. ಮನೆಯಲ್ಲಿ ಗೂಬೆಯ ವಿಗ್ರಹವನ್ನು ಇಡುವುದು ವಾಸ್ತುವಿಗೆ ಮಂಗಳಕರ. ನಿಮ್ಮ ಮನೆಯಲ್ಲಿ ಗೂಬೆಯ ಪ್ರತಿಮೆ ಇಲ್ಲದಿದ್ದರೆ, ಈ ದೀಪಾವಳಿಯಂದು ಖರೀದಿಸಲು ಮರೆಯಬೇಡಿ.
ಗಣಪತಿ ವಿಗ್ರಹ
ಹಿಂದೂ ಧರ್ಮದಲ್ಲಿ ಪ್ರತಿ ಶುಭ ಕಾರ್ಯದಲ್ಲಿ ಗಣೇಶನನ್ನು ಮೊದಲು ಪೂಜಿಸಲಾಗುತ್ತದೆ. ವಿಘ್ನ ನಿವಾರಕನಾದ ಗಣೇಶನ ಆರಾಧನೆಯಿಂದ ಎಲ್ಲ ಅಡೆತಡೆಗಳು ನಿವಾರಣೆಯಾಗಿ ಸಕಲ ಕಾರ್ಯಗಳು ನೆರವೇರುತ್ತವೆ. ದೀಪಾವಳಿಯ ಸಮಯದಲ್ಲಿ ಲಕ್ಷ್ಮಿ ದೇವಿಯ ಜೊತೆಗೆ ಗಣೇಶನನ್ನು ಪೂಜಿಸಲಾಗುತ್ತದೆ. ಮನೆಯಲ್ಲಿ ಗಣೇಶನ ವಿಗ್ರಹವನ್ನು ಇಡುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ. ಗಣೇಶನ ಮೂರ್ತಿಯನ್ನು ಮನೆಯಲ್ಲಿ ಇಡುವುದರಿಂದ ಯಾವುದೇ ಕೆಲಸಗಳಿಗೆ ಅಡ್ಡಿಯಾಗುವುದಿಲ್ಲ ಮತ್ತು ಎಲ್ಲರಿಗೂ ಸಮೃದ್ಧಿಯಾಗುತ್ತದೆ ಎಂಬ ನಂಬಿಕೆ ಇದೆ.
ಆನೆ ಪ್ರತಿಮೆ
ಆನೆಯನ್ನು ಸಂಪತ್ತು ಮತ್ತು ಖ್ಯಾತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಆನೆಯ ತಲೆಯನ್ನು ಮೊದಲು ಗಣೇಶನ ತಲೆಯ ಮೇಲೆ ಇರಿಸಲಾಯಿತು, ಆದ್ದರಿಂದ ಆನೆಯನ್ನು ಗಣೇಶ ಎಂದು ಪೂಜಿಸಲಾಗುತ್ತದೆ. ಮನೆಯಲ್ಲಿ ತಾಮ್ರ, ಹಿತ್ತಾಳೆ ಅಥವಾ ಬೆಳ್ಳಿಯ ಆನೆಯ ವಿಗ್ರಹವನ್ನು ಇಡುವುದು ಶುಭ. ವಾಸ್ತು ಶಾಸ್ತ್ರದ ಪ್ರಕಾರ ಇದು ಮನೆಗೆ ಧನಾತ್ಮಕ ಶಕ್ತಿಯನ್ನು ತರುತ್ತದೆ. ಮನೆಯಲ್ಲಿ ಯಾವಾಗಲೂ ಸಂತೋಷ ಮತ್ತು ಸಮೃದ್ಧಿ ಇರುತ್ತದೆ.
ಕಾಮಧೇನು ವಿಗ್ರಹ
ಕಾಮಧೇನು ಧಾರ್ಮಿಕ ಮತ್ತು ಪೌರಾಣಿಕ ನಂಬಿಕೆಗಳ ಪ್ರಕಾರ ಎಲ್ಲಾ ಆಸೆಗಳನ್ನು ಪೂರೈಸುತ್ತದೆ. ಮನೆಯಲ್ಲಿ ಕಾಮಧೇನು ವಿಗ್ರಹವನ್ನು ಇಟ್ಟುಕೊಳ್ಳುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ. ಕಾಮಧೇನುವಿನ ವಿಗ್ರಹವಿರುವ ಮನೆಯಲ್ಲಿ ಐಶ್ವರ್ಯಕ್ಕೆ ಯಾವತ್ತೂ ಕೊರತೆಯಾಗುವುದಿಲ್ಲ ಎಂದು ಹೇಳಲಾಗುತ್ತದೆ. ಕುಟುಂಬದ ಎಲ್ಲ ಸದಸ್ಯರ ಇಷ್ಟಾರ್ಥಗಳು ಈಡೇರುತ್ತವೆ.
ಸ್ಫಟಿಕ ಅಥವಾ ಲೋಹದ ಪಿರಮಿಡ್
ಸ್ಫಟಿಕ ಅಥವಾ ಲೋಹದಿಂದ ಮಾಡಿದ ಪಿರಮಿಡ್ ಅನ್ನು ಸಹ ಮನೆಯಲ್ಲಿ ಇಡಬೇಕು. ಇದು ನಕಾರಾತ್ಮಕತೆಯನ್ನು ಮನೆಯಿಂದ ದೂರವಿಡುತ್ತದೆ. ಧನಾತ್ಮಕ ಶಕ್ತಿಯನ್ನು ಮನೆಗೆ ತರುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಮನೆಯಲ್ಲಿ ಸ್ಫಟಿಕ ಅಥವಾ ಲೋಹದಿಂದ ಮಾಡಿದ ಪಿರಮಿಡ್ ಅನ್ನು ಇಟ್ಟುಕೊಳ್ಳುವುದು ಲಕ್ಷ್ಮಿ ದೇವಿಯ ಆಶೀರ್ವಾದವನ್ನು ತರುತ್ತದೆ. ಹಾಗಾಗಿ ಹರಳು ಅಥವಾ ಲೋಹದಿಂದ ಮಾಡಿದ ಪಿರಮಿಡ್ ತಂದು ದೀಪಾವಳಿಯ ಸಂದರ್ಭದಲ್ಲಿ ಮನೆಯಲ್ಲಿ ಇಡಿ.
ಆಮೆ ಮೂರ್ತಿ
ಭಗವಾನ್ ವಿಷ್ಣುವು ತನ್ನ ಎರಡನೆಯ ಅವತಾರವನ್ನು ಕೂರ್ಮ ಅಂದರೆ ಆಮೆಯ ರೂಪದಲ್ಲಿ ತೆಗೆದುಕೊಂಡನು. ಆದ್ದರಿಂದ ಆಮೆಗೆ ಧಾರ್ಮಿಕ ಪ್ರಾಮುಖ್ಯ ತುಂಬಾ ಹೆಚ್ಚಾಗಿದೆ. ಮನೆಯಲ್ಲಿ ಹಿತ್ತಾಳೆ, ತಾಮ್ರ ಅಥವಾ ಬೆಳ್ಳಿಯಿಂದ ಮಾಡಿದ ಆಮೆಯನ್ನು ಇಡುವುದರಿಂದ ಲಕ್ಷ್ಮಿ ದೇವಿಗೆ ಸಂತೋಷವಾಗುತ್ತದೆ.
ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.