Magha Masa 2025: ಮಾಘ ಮಾಸದಲ್ಲಿ ಈ ಕೆಲಸಗಳನ್ನು ಮಾಡಿದರೆ ಶುಭಫಲ ನಿಮ್ಮದಾಗುತ್ತೆ; ಪಾರ್ವತಿಗೆ ಶಿವ ಹೇಳಿದ ಕಥೆ ಇಲ್ಲಿದೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Magha Masa 2025: ಮಾಘ ಮಾಸದಲ್ಲಿ ಈ ಕೆಲಸಗಳನ್ನು ಮಾಡಿದರೆ ಶುಭಫಲ ನಿಮ್ಮದಾಗುತ್ತೆ; ಪಾರ್ವತಿಗೆ ಶಿವ ಹೇಳಿದ ಕಥೆ ಇಲ್ಲಿದೆ

Magha Masa 2025: ಮಾಘ ಮಾಸದಲ್ಲಿ ಈ ಕೆಲಸಗಳನ್ನು ಮಾಡಿದರೆ ಶುಭಫಲ ನಿಮ್ಮದಾಗುತ್ತೆ; ಪಾರ್ವತಿಗೆ ಶಿವ ಹೇಳಿದ ಕಥೆ ಇಲ್ಲಿದೆ

ಮಾಘ ಮಾಸ ಯಾವಾಗ ಪ್ರಾರಂಭವಾಗುತ್ತೆ, ಈ ಸಮಯದಲ್ಲಿ ಏನೆಲ್ಲಾ ಕೆಲಸಗಳನ್ನು ಮಾಡಿದರೆ ಹೆಚ್ಚಿನ ಶುಭಫಲಗಳನ್ನು ಪಡೆಯಬಹುದು ಹಾಗೂ ಪಾರ್ವತಿ ದೇವಿಗೆ ಪರಮೇಶ್ವರ ಹೇಳಿದ ಕಥೆಯನ್ನು ಇಲ್ಲಿ ನೀಡಲಾಗಿದೆ. (ಬರಹ: ಎಚ್.ಸತೀಶ್, ಜ್ಯೋತಿಷಿ)

Magha Masa 2025: ಮಾಘ ಮಾಸದ ಮಹತ್ವ ಮತ್ತು ಪಾರ್ವತಿಗೆ ಶಿವ ಹೇಳುವ ಕಥೆಯನ್ನು ಇಲ್ಲಿ ನೀಡಲಾಗಿದೆ.
Magha Masa 2025: ಮಾಘ ಮಾಸದ ಮಹತ್ವ ಮತ್ತು ಪಾರ್ವತಿಗೆ ಶಿವ ಹೇಳುವ ಕಥೆಯನ್ನು ಇಲ್ಲಿ ನೀಡಲಾಗಿದೆ.

2025 ರಲ್ಲಿ ಮಾಘ ಮಾಸವು ಜನವರಿ 30 ರಂದು ಆರಂಭವಾಗಿ ಫೆಬ್ರವರಿ 28 ರವರೆಗೂ ಇರುತ್ತದೆ. ಈ ಅವಧಿಯಲ್ಲಿ ಆಚರಿಸುವ ಪೂಜೆ ಪುನಸ್ಕಾರ, ದಾನ ಧರ್ಮ ಮತ್ತು ಗಂಗಾಸ್ನಾನ ಮಾಡುವುದರಿಂದ ದೀರ್ಘಕಾಲದವರೆಗು ಶುಭಫಲಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಮಾಘಮಾಸದ ಮಹಿಮೆಯ ಬಗ್ಗೆ ಪರಮೇಶ್ವರ ಮತ್ತು ಪಾರ್ವತಿ ದೇವಿಯ ನಡುವಿನ ಸಂಭಾಷಣೆಯಿಂದ ತಿಳಿಯಬಹುದಾಗಿದೆ.

ಅನೇಕ ಧಾರ್ಮಿಕ ವಿಧಿ ನಿಯಮಗಳ ಬಗ್ಗೆ ತಿಳಿದಿದ್ದ ಪಾರ್ವತಿ ದೇವಿಯು ಕುತೂಹಲದಿಂದ ಪರಮೇಶ್ವರನನ್ನು ಮಾಘ ಮಾಸದ ಪೂಜೆ ಮತ್ತು ಇತರ ಧಾರ್ಮಿಕ ಆಚರಣೆಗಳು ಮತ್ತು ಮಾಘ ಮಾಸದ ಮಹಾತ್ಮೆಯ ಬಗ್ಗೆ ವಿವರಿಸಬೇಕೆಂದು ಕೋರುತ್ತಾಳೆ. ಆಗ ಶಿವನು ಮಕರ ರಾಶಿಯಲ್ಲಿ ಸೂರ್ಯನು ಸಂಚರಿಸುವ ಮಾಸದಲ್ಲಿ, ಸೂರ್ಯನು ಉದಯವಾಗುವ ಮುನ್ನ ಅಥವಾ ಸೂರ್ಯೋದಯದ ವೇಳೆಯಲ್ಲಿ ಸ್ನಾನವನ್ನು ಮಾಡಬೇಕು. ಇದರಿಂದ ಅರಿಯದೆ ಮಾಡಿರುವ ಯಾವುದೇ ರೀತಿಯ ಪಾಪಕರ್ಮಗಳಿಂದ ಪರಿಹಾರ ಹೊಂದಬಹುದು. ಇದರಿಂದಾಗಿ ಪುಣ್ಯಲೋಕ ದೊರೆಯುತ್ತದೆ ಎಂದು ಪಾರ್ವತಿಗೆ ತಿಳಿಸುತ್ತಾನೆ.

ಪ್ರತಿದಿನ ನದಿ ಅಥವಾ ಸಮುದ್ರ ಸ್ಥಾನ ಮಾಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಕನಿಷ್ಠ ಪಕ್ಷ ಒಂದು ಹಸುವು ನಿಂತಾಗ ಅದರ ಪಾದ ಮುಳುಗುವಷ್ಟು ನೀರಿದ್ದಲ್ಲಿ ಅಲ್ಲಿಯೂ ಸ್ನಾನವನ್ನು ಮಾಡಬಹುದು. ಮಾಘ ಮಾಸದಲ್ಲಿ ಸೂರ್ಯೋದಯದ ವೇಳೆಯಲ್ಲಿ ಕೆರೆ, ಕಾಲುವೆ ಅಥವಾ ಇನ್ನಾವುದೇ ನೀರಿರುವ ಸ್ಥಳದಲ್ಲಿ ಸ್ನಾನ ಮಾಡಿದರೆ ಅದು ಗಂಗಾ ಸ್ನಾನ ಅಥವಾ ಪುಣ್ಯ ಸ್ನಾನಕ್ಕೆ ಸಮನಾಗುತ್ತದೆ. ಹರಿಯುವ ನೀರಿರುವ ಪ್ರದೇಶದಲ್ಲಿ ಮಾಡುವ ಸ್ನಾನದಿಂದ ವಿಶೇಷ ಪುಣ್ಯಫಲಗಳು ದೊರೆಯುತ್ತವೆ.

ಮಾಘಸ್ನಾನದಿಂದ ಯಾರು ಯಾವ ಪ್ರಯೋಜನಗಳನ್ನು ಪಡೆದರು

ಪುರಾಣ ಗ್ರಂಥಗಳಲ್ಲಿ ಇಂತಹ ಸ್ನಾನದಿಂದ ಒಂದು ಹೆಣ್ಣು ನಾಯಿಗೆ ಮುಕ್ತಿ ದೊರೆತ ಬಗ್ಗೆ ಮಾಹಿತಿ ದೊರೆಯುತ್ತದೆ. ಮಹರ್ಷಿ ವಿಶ್ವಾಮಿತ್ರರಿಗೆ ತಾವೆ ಮಾಡಿದ ತಪ್ಪಿನಿಂದಾಗಿ ಕೋತಿಯ ಮುಖವು ಮೂಡಿರುತ್ತದೆ. ಹಿರಿಯರ ಆದೇಶದಂತೆ ವಿಶ್ವಾಮಿತ್ರರು ಮಾಘ ಸ್ನಾನವನ್ನು ಮಾಡುತ್ತಾರೆ. ಆನಂತರ ಅವರಿಗೆ ಇದ್ದ ಕೋತಿಯ ಮುಖವು ಮರೆಯಾಗುತ್ತದೆ. ಉಚಿತ ಮಾರ್ಗದಲ್ಲಿ ಸಂಸ್ಕಾರ ಆಗದೆ ಇದ್ದ ಪ್ರೇತಾತ್ಮವು ಮಾಘಸ್ನಾನವನ್ನು ಮಾಡುತ್ತದೆ. ಇದರಿಂದಾಗಿ ಮುಕ್ತಿಯನ್ನು ಪಡೆಯುತ್ತದೆ. ದೇವರಲ್ಲಿ ನಂಬಿಕೆ ಇಟ್ಟಿದ್ದ ಭಕ್ತನೊಬ್ಬನು ಮಾಘ ಸ್ನಾನದದ ನಂತರ ಹರಿಹರರಲ್ಲಿ ಭೇದವಿಲ್ಲ ಎಂದು ಜಗತ್ತಿಗೆ ತಿಳಿಸಿ ಕೊಡುತ್ತಾನೆ. ಪರಿಪೂರ್ಣ ವಿದ್ಯಾವಂತರಾಗಿದ್ದ ಋಷಿಮುನಿಗಳ ನಡುವೆ ದೊಡ್ಡ ಪ್ರಮಾಣದ ಕಲಹ ಉಂಟಾಗುತ್ತದೆ. ಇಂತಹ ಸಂದರ್ಭದಲ್ಲಿ ಮಾಘ ಸ್ನಾನದಿಂದ ಈ ಕಲಹವು ಅಂತ್ಯಗೊಳ್ಳುತ್ತದೆ.

ಮಾಘಸ್ನಾನದಿಂದ ಶಿವ ಮತ್ತು ಬ್ರಹ್ಮ ನಡುವಿನ ಕಲಹ ಅಂತ್ಯ

ಶಿವನು ಸಂದರ್ಭವೊಂದರಲ್ಲಿ ಬ್ರಹ್ಮನನ್ನು ನಿಂದಿಸುತ್ತಾನೆ. ಇದೇ ರೀತಿಯಲ್ಲಿ ದಕ್ಷಯಜ್ಞದ ವೇಳೆಯಲ್ಲಿ ಸ್ವಯಂ ಬ್ರಹ್ಮನು ಶಿವನನ್ನು ನಿಂದಿಸುತ್ತಾನೆ. ಈ ವಿಚಾರಗಳು ತಾರಕಕ್ಕೆ ಏರುತ್ತದೆ. ಬ್ರಹ್ಮ ಕಪಾಲವು ಶಿವನ ಕೈಗೆ ಬರುತ್ತದೆ. ಆದರೆ ಅದು ಶಿವನ ಕೈಬಿಟ್ಟು ಹೋಗುವುದಿಲ್ಲ. ಹಾಗೆಯೆ ಕಪಾಲವು ಬೇರೆಯವರು ನೀಡಿದ ಭಿಕ್ಷೆಯಿಂದ ತುಂಬುವುದೂ ಇಲ್ಲ. ಆದರೆ ಶಿವ ಮತ್ತು ಬ್ರಹ್ಮರು ಮಾಘಸ್ನಾನವನ್ನು ಮಾಡುತ್ತಾರೆ. ಆನಂತರ ಇವರಿಬ್ಬರ ನಡುವಿನ ಕಲಹವು ವಿಷ್ಣುವಿನ ಮಧ್ಯಸ್ಥಿಕೆಯಿಂದ ಪರಿಹಾರ ಗೊಳ್ಳುತ್ತದೆ.

ಪ್ರತಿದಿನವು ಸೂರ್ಯೋದಯದ ಮುನ್ನ ಸ್ನಾನವನ್ನು ಮಾಡಲು ಸಾಧ್ಯವಾಗದೆ ಹೋದಲ್ಲಿ ಹುಣ್ಣಿಮೆ ಮತ್ತು ಏಕಾದಶಿಯ ದಿನಗಳಂದು ಸ್ನಾನ ಮಾಡುವುದರಿಂದ ಪಾಪ ವಿಮುಕ್ತರಾಗಲು ಸಾಧ್ಯ ಎಂದು ಶಿವನು ಪಾರ್ವತಿಗೆ ತಿಳಿಸುತ್ತಾನೆ. ಆದ್ದರಿಂದ ಹುಣ್ಣಿಮೆ ಅಥವಾ ಏಕಾದಶಿಯ ದಿನಗಳಂದು ನದಿ ಅಥವಾ ಸಮುದ್ರದಲ್ಲಿ ಸ್ನಾನ ಮಾಡುವುದು ಶ್ರೇಷ್ಠ. ವಯೋವೃದ್ಧರು ಪುಣ್ಯನದಿಗಳಲ್ಲಿ ನೀರನ್ನು ಸಂಗ್ರಹಿಸಿ ಮನೆಯಲ್ಲಿಯೇ ಸ್ನಾನವನ್ನು ಮಾಡಬಹುದು. ಇದರಿಂದ ಶುಭಫಲಗಳನ್ನು ಪಡೆಯಬಹುದು.

ಮಾಘ ಮಾಸದಲ್ಲಿ ಮುಖ್ಯವಾಗಿ ಶ್ರೀಹರಿಯ ಪೂಜೆಯನ್ನು ಮಾಡಬೇಕು. ಹೆಣ್ಣು ಮಕ್ಕಳಿಗೆ ಮೊರದ ಬಾಗಿನ ನೀಡಿ ಅವರಿಂದ ಆಶೀರ್ವಾದವನ್ನು ಪಡೆಯಬೇಕು. ಇದಲ್ಲದೆ ವಯೋವೃದ್ಧರು, ದಂಪತಿ ಅಥವಾ ಬ್ರಹ್ಮಚಾರಿಗಳಿಗೆ ಹಣ್ಣು, ಹಾಲು, ಮೊಸರು, ತರಕಾರಿಗಳು ಹೀಗೆ ಯಾವುದೇ ಪದಾರ್ಥಗಳನ್ನು ದಾನ ನೀಡಬಹುದು. ಆದರೆ ಅದನ್ನು ದಿನನಿತ್ಯದ ಅಡುಗೆಗೆ ಉಪಯೋಗಿಸುವಂತೆ ಇರಬೇಕು. ಈ ರೀತಿಯ ದಾನ ಧರ್ಮದಿಂದ ಜನ್ಮಜನ್ಮಾಂತರದಲ್ಲಿಯೂ ಉಪವಾಸದ ಭಯ ಇರುವುದಿಲ್ಲ.

ಮಾಘ ಮಾಸದಲ್ಲಿ ಯೋಗ್ಯಕರವಾದ ಸಂಕಲ್ಪವನ್ನು ಮಾಡಿಕೊಂಡು ಮಾಡುವ ಪೂಜೆ ಪುರಸ್ಕಾರಗಳು, ದಾನ ಧರ್ಮಗಳು ಹೆಚ್ಚಿನ ಫಲ ನೀಡುತ್ತವೆ ಎಂದು ಶಿವನು ಪಾರ್ವತಿಗೆ ತಿಳಿಸುತ್ತಾನೆ. ಯಾವ ವ್ಯಕ್ತಿಯು ಮಾಘ ಮಾಸದಲ್ಲಿ ಸೂರ್ಯೋದಯದ ವೇಳೆ ಸ್ನಾನವನ್ನು ಮಾಡುವುದಿಲ್ಲವೋ ಅವರಿಗೆ ಜೀವನಪೂರ್ತಿ ಅಶುಭ ಫಲಗಳು ದೊರೆಯುತ್ತವೆ. ಅನಾರೋಗ್ಯದ ತೊಂದರೆ ಇರುವವರಿಗೆ ಮತ್ತು ವಯೋವೃದ್ಧರಿಗೆ ಯಾವುದೇ ರೀತಿ ನೀತಿಗಳು ಅನ್ವಯವಾಗುವುದಿಲ್ಲ. ನದಿ ಸ್ನಾನ ಅಥವಾ ಸಮುದ್ರ ಸ್ನಾನ ಮಾಡಲು ಸಾಧ್ಯವಾಗದೆ ಹೋದವರು ನೀರಿಗೆ ಅರಿಶಿನವನ್ನು ಬೆರೆಸಿ ಸ್ನಾನ ಮಾಡಬಹುದು.

ಮಾಘಸ್ನಾನದಂದು ಬ್ರಹ್ಮ ಹತ್ಯ ದೋಷ ಸಹ ಪರಿಹಾರವಾಗುವುದು ಎಂದು ಶಿವನು ಪಾರ್ವತಿಗೆ ತಿಳಿಸುತ್ತಾನೆ. ಕುಟುಂಬದಲ್ಲಿರುವ ಹಿರಿಯರ ಆಸೆ ಆಕಾಂಕ್ಷೆಗಳನ್ನು ಪೂರೈಸುವುದರಿಂದ ಶುಭಫಲಗಳನ್ನು ಪಡೆಯಬಹುದಾಗಿದೆ. ಅಶಕ್ತರಿಗೆ ಪುಸ್ತಕ, ಲೇಖನಿ, ಔಷಧಿ ಅಥವಾ ಯಾವುದೇ ರೀತಿಯ ಪದಾರ್ಥಗಳನ್ನು ದಾನ ನೀಡಬಹುದು. ಬಡವರ ವಿವಾಹಕ್ಕೆ ಸಹಾಯ ಮಾಡಿದಲ್ಲಿ ಕುಂಡಲಿಯಲ್ಲಿನ ವಿವಾಹಸಂಬಂಧಿತ ದೋಷವು ಪರಿಹಾರವಾಗುತ್ತದೆ. ಮಾಘಮಾಸದಲ್ಲಿ ಗಿರಿಶಿಖರದಲ್ಲಿ ಮಾಡುವ ಧ್ಯಾನದಿಂದ ಸಕಲ ಸೌಭಾಗ್ಯಗಳೂ ಲಭಿಸುತ್ತವೆ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.