ಸಂಬಂಧಗಳಲ್ಲಿ ಎಂದಿಗೂ ಸಮಸ್ಯೆ ಬರಬಾರದೆಂದರೆ ಭಗವದ್ಗೀತೆಯ ಈ ಉಪದೇಶಗಳನ್ನು ಗಮನದಲ್ಲಿಟ್ಟುಕೊಳ್ಳಿ
Bhagavad Gita: ಕೆಲವರು ಸಂಬಂಧಗಳಿಗೆ ಗೌರವ ನೀಡುವುದಿಲ್ಲ. ಇದರ ಪರಿಣಾಮ ಅವರ ಜೀವನದ ಅಂತ್ಯದ ದಿನಗಳಲ್ಲಿ ಗೋಚರಿಸುತ್ತದೆ. ಆ ಅವಧಿಯಲ್ಲಿ ಅವರಿಗೆ ಕಣ್ಣೀರು ಬಿಟ್ಟರೆ ಬೇರೇನೂ ಸಿಗುವುದಿಲ್ಲ. ಹೀಗಾಗಬಾರದು ಎಂದರೆ ಭಗವದ್ಗೀತೆಯಲ್ಲಿ, ಸಂಬಂಧಗಳ ಬಗ್ಗೆ ಶ್ರೀಕೃಷ್ಣನು ಹೇಳಿರುವ ಈ ಮಾತುಗಳನ್ನು ಅರಿತುಕೊಳ್ಳಬೇಕು.
ಭಗವದ್ಗೀತೆ ಹಿಂದೂ ಧರ್ಮದ ಬಹಳಷ್ಟು ಜನರು ಓದುವ ಧಾರ್ಮಿಕ ಗ್ರಂಥವಾಗಿದ. ಇದು ದೇವೋತ್ತಮ ಪರಮ ಪುರುಷನಾದ ಶ್ರೀಕೃಷ್ಣನ ನೇರವಾದ ಮಾತುಗಳಾಗಿವೆ. ಶ್ರೇಷ್ಠ ಧನುರ್ಧಾರಿಯಾದ ಅರ್ಜುನ ಮತ್ತು ಅವನ ಸಾರಥಿಯಾದ ಶ್ರೀಕೃಷ್ಣನ ನಡುವಿನ ಸಂಭಾಷಣೆ ಇದಾಗಿದೆ. ಧರ್ಮ, ಕರ್ಮ, ಅಧ್ಯಾತ್ಮಿಕ, ಭೌತಿಕ ವ್ಯತ್ಯಾಸಗಳು, ಭಕ್ತಿ, ಆತ್ಮ ಮತ್ತು ಪರಮಾತ್ಮ ಸೇರಿದಂತೆ ವಿವಿಧ ವಿಷಯಗಳ ಕುರಿತು ಸ್ವತಃ ಶ್ರೀಕೃಷ್ಣನೇ ಅರ್ಜುನನಿಗೆ ತಿಳಿಸಿಕೊಡುತ್ತಾನೆ. ಗೀತೆಯನ್ನು ಸರಿಯಾಗಿ ಓದಿ, ಅರ್ಥಮಾಡಿಕೊಂಡು, ಜೀವನದಲ್ಲಿ ಅದನ್ನು ಪಾಲಿಸುವ ವ್ಯಕ್ತಿ ಎಂದಿಗೂ ಸರಿಯಾದ ಮಾರ್ಗದಿಂದ ವಿಮುಖನಾಗುವುದಿಲ್ಲ. ವೈಯಕ್ತಿಕ ಸಂಬಂಧಗಳು ಮತ್ತು ಜೀವನದ ವಿವಿಧ ವಿಷಯಗಳ ಬಗ್ಗೆ ಭಗವದ್ಗೀತೆಯು ಸ್ಪಷ್ಟಪಡಿಸುತ್ತದೆ. ಕೆಲವರು ಸಂಬಂಧಗಳಿಗೆ ಗೌರವವನ್ನು ನೀಡುವುದೇ ಇಲ್ಲ. ಅದರ ಪರಿಣಾಮ ಜೀವನದ ಅಂತ್ಯದಲ್ಲಿ ಅವರಿಗೆ ಗೋಚರಿಸುತ್ತದೆ. ಆ ಅವಧಿಯಲ್ಲಿ ವ್ಯಕ್ತಿಗಳಿಗೆ ಕಣ್ಣೀರು ಸುರಿಸುವುದನ್ನು ಬಿಟ್ಟು ಬೇರೇನೂ ಸಿಗಲು ಸಾಧ್ಯವಿಲ್ಲ. ಆದ್ದರಿಂದ ಪ್ರತಿಯೊಬ್ಬರು ಸಂಬಂಧಗಳ ಬಗ್ಗೆ ಜಾಗರೂಕರಾಗಿರಬೇಕು. ಜೀವನದ ಕೆಟ್ಟ ಅನುಭವಗಳನ್ನು ತಪ್ಪಿಸಲು ನೀವು ಬಯಸಿದರೆ ಗೀತೆಯಲ್ಲಿ ಬರೆದಿರುವ ಈ ಅಂಶಗಳನ್ನು ನೆನಪಿನಲ್ಲಿಡಿ. ಭಗವದ್ಗೀತೆಯು ಹೇಳಿರುವ ಉಪದೇಶಗಳನ್ನು ಅಳವಡಿಸಿಕೊಳ್ಳುವುದರಿಂದ ಸಂಬಂಧದಲ್ಲಿ ಯಾವುದೇ ತೊಂದರೆಗಳು ಉಂಟಾಗುವುದಿಲ್ಲ.
ಸ್ವಯಂ ಸಾಕ್ಷಾತ್ಕಾರ ಮಾಡಿಕೊಳ್ಳಿ
ಮನುಷ್ಯನು ತನ್ನನ್ನು ತಾನು ಮೊದಲು ಅರಿತುಕೊಳ್ಳಬೇಕು ಎಂದು ಭಗವದ್ಗೀತೆಯಲ್ಲಿ ಹೇಳಲಾಗಿದೆ. ಸ್ವಯಂ-ಸಾಕ್ಷಾತ್ಕಾರ ಮತ್ತು ಸ್ವಯಂ-ಪರೀಕ್ಷೆಯ ಮೂಲಕ ಮಾತ್ರ ವ್ಯಕ್ತಿಯು ತನ್ನನ್ನು ತಾನು ಚೆನ್ನಾಗಿ ಅರ್ಥಮಾಡಿಕೊಳ್ಳಬಹುದು. ಪ್ರತಿಯೊಬ್ಬರು ಅವರ ಸಾಮರ್ಥ್ಯ, ದೌರ್ಬಲ್ಯ ಮತ್ತು ಆಸೆಗಳನ್ನು ತಿಳಿದುಕೊಳ್ಳುವುದು ಅತ್ಯಂತ ಮುಖ್ಯವಾಗಿದೆ. ನಿಮ್ಮನ್ನು ನೀವು ಚೆನ್ನಾಗಿ ತಿಳಿದಿದ್ದರೆ, ಇನ್ನೊಬ್ಬ ವ್ಯಕ್ತಿಯೊಂದಿಗೆ ಆರೋಗ್ಯಕರ ಸಂಬಂಧವನ್ನು ನಿರ್ಮಿಸುವುದು ಸುಲಭವಾಗುತ್ತದೆ.
ಸಂಬಂಧ ಮತ್ತು ಕರ್ತವ್ಯಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳಿ
ಮನುಷ್ಯನು ಧರ್ಮ ಮತ್ತು ಕರ್ತವ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು ಎಂದು ಶ್ರೀ ಕೃಷ್ಣನು ಗೀತೋಪದೇಶದಲ್ಲಿ ಹೇಳುತ್ತಾನೆ. ಹೆತ್ತವರು, ಒಡಹುಟ್ಟಿದವರು, ಸ್ನೇಹಿತರು, ಹೆಂಡತಿ, ಮಕ್ಕಳು ಮತ್ತು ಜೀವಿತಾವಧಿಯಲ್ಲಿ ಬರುವ ಯಾವುದೇ ಸಂಬಂಧವಿರಲಿ, ವ್ಯಕ್ತಿಯು ತನ್ನ ಜವಾಬ್ದಾರಿಗಳನ್ನು ಚೆನ್ನಾಗಿ ನಿರ್ವಹಿಸಬೇಕು. ತನ್ನ ಕರ್ತವ್ಯ ಮತ್ತು ಧರ್ಮವನ್ನು ಅರ್ಥಮಾಡಿಕೊಳ್ಳುವ ವ್ಯಕ್ತಿ ಎಂದಿಗೂ ಯಾವುದೋ ಒಂದು ಸಂಬಂಧಗಳ ಸುಳಿಯಲ್ಲಿ ಸಿಲುಕಿಕೊಳ್ಳುವುದಿಲ್ಲ.
ಸಂಬಂಧಗಳ ಮೋಹದಲ್ಲಿ ಸಿಲುಕಿಕೊಳ್ಳಬೇಡಿ
ಮನುಷ್ಯನು ಸನ್ಯಾಸಿಯಾಗಿದ್ದಾಗ ಮಾತ್ರ ಈ ಜಗತ್ತಿನ ಸಂತೋಷ ಮತ್ತು ಸುಖವನ್ನು ಕಾಣಬಹುದು ಎಂದು ಗೀತೆಯಲ್ಲಿ ಹೇಳಲಾಗಿದೆ. ಇಲ್ಲಿ ಸನ್ಯಾಸ ಎಂದರೆ ಎಲ್ಲ ಸಂಬಂಧಗಳನ್ನು ಮುರಿದು ಸನ್ಯಾಸ ಸ್ವೀಕರಿಸುವುದು ಎಂದಲ್ಲ. ಇದರರ್ಥ ವ್ಯಕ್ತಿಯು ಸಂಬಂಧಗಳ ವ್ಯಾಮೋಹಕ್ಕೆ ಒಳಪಡಬಾರದು. ಸಂಬಂಧಗಳ ಮೋಹದಲ್ಲಿ ಮುಳುಗಿರುವ ವ್ಯಕ್ತಿಯು ಯಾವುದೇ ಸಂಬಂಧ ಅಥವಾ ಪ್ರಪಂಚವನ್ನು ಮುಕ್ತವಾಗಿ ಆನಂದಿಸಲು ಸಾಧ್ಯವಿಲ್ಲ ಎಂದು ಶ್ರೀಕೃಷ್ಣನು ಅರ್ಜುನಿಗೆ ಬೋಧಿಸುತ್ತಾನೆ.
ಎಲ್ಲರನ್ನೂ ಗೌರವಿಸಿ
ಮನುಷ್ಯನು ಇತರರಿಂದ ಗೌರವವನ್ನು ನಿರೀಕ್ಷಿಸುತ್ತಾನೆ. ಹಾಗೆಯೇ ಇತರರಿಗೂ ಗೌರವ ನೀಡಬೇಕು. ದೊಡ್ಡವರು, ಚಿಕ್ಕವರು ಎಂಬ ಭೇದಭಾವ ಮಾಡದ ವ್ಯಕ್ತಿ ಎಲ್ಲರೊಂದಿಗೆ ಪ್ರೀತಿಯಿಂದ ಬಾಳಬೇಕು. ಭಗವದ್ಗೀತೆಯ ಪ್ರಕಾರ, ಮನುಷ್ಯನು ಜಗತ್ತಿನ ಪ್ರತಿಯೊಂದು ಜೀವಿಗೆ ಗೌರವವನ್ನು ನೀಡಬೇಕು. ಅಗೌರವವನ್ನು ತೋರಿಸುವ ವರ್ತನೆ ಎಂದಿಗೂ ಮಾಡಬಾರದು. ಸಂಬಂಧಗಳ ಬಗ್ಗೆ ಆತನಿಗಿರುವ ಈ ತಿಳುವಳಿಕೆಗಳು ಅವನಲ್ಲಿ ಸಹಿಷ್ಣುತೆ, ಸಹಾನುಭೂತಿ ಮತ್ತು ಕಾಳಜಿಯನ್ನು ಸೃಷ್ಟಿಸುತ್ತದೆ.