ದಾನ ಮಾಡಲೂ ಇದೆ ನಿಯಮ; ಲಕ್ಷ್ಮೀದೇವಿ ನಿಮ್ಮ ಮೇಲೆ ಕೋಪಿಸಿಕೊಳ್ಳಬಾರದು ಅಂದ್ರೆ ಈ ಐದು ದಿನಗಳಲ್ಲಿ ತಪ್ಪಿಯೂ ದಾನ ಮಾಡದಿರಿ
ದಾನ ಮಾಡುವುದರಿಂದ ಒಳ್ಳೆಯದಾಗುತ್ತದೆ ಎಂಬ ನಂಬಿಕೆಯಿಂದ ಅನೇಕರು ತಮಗೆ ಇಷ್ಟವಾದದ್ದನ್ನು ದಾನ ಮಾಡುತ್ತಾರೆ. ಇನ್ನು ಕೆಲವರಂತೂ ಯಾರೇ ಬಂದು ಏನೇ ಕೇಳಿದರೂ ದಿನ, ಸಮಯ, ದಿನವನ್ನೂ ನೋಡದೆ ದಾನ ಮಾಡುತ್ತಾರೆ. ಆದರೆ ದಾನಕ್ಕೂ ಕೆಲವು ನಿಯಮಗಳಿವೆ. ಲಕ್ಷ್ಮೀ ದೇವಿ ನಿಮ್ಮಿಂದ ದೂರವಾಗದಿರಲು ಈ ನಿಯಮಗಳನ್ನು ಪಾಲಿಸಿ.
ಪುಣ್ಯ ಗಳಿಸಲು ಇರುವ ಮಾರ್ಗಗಳಲ್ಲಿ ದಾನ ಮಾಡುವುದು ಸಹ ಒಂದು. ಯಾರಿಗಾದರೂ ಸಹಾಯ ಮಾಡಿದರೆ ಪುಣ್ಯ ಲಭಿಸುತ್ತದೆ ಎಂದು ನಮ್ಮ ಹಿರಿಯರು ಹೇಳುತ್ತಾರೆ. ಸನಾತನ ಧರ್ಮದಲ್ಲಿ ದಾನ ಮಾಡದೆ ಯಾವುದೇ ಹಬ್ಬ, ಉಪವಾಸ ಪೂರ್ಣವಾಗುವುದಿಲ್ಲ. ದಾನ ಮಾಡುವುದರಿಂದ ಭಗವಾನ್ ವಿಷ್ಣು ಮತ್ತು ಲಕ್ಷ್ಮೀ ದೇವಿಯ ಆಶೀರ್ವಾದ ದೊರೆಯುತ್ತದೆ. ಲಕ್ಷ್ಮೀ ದೇವಿಯು ದಾನ ಮುಂತಾದ ಪುಣ್ಯದ ಕೆಲಸ ಮಾಡುವವರ ಮನೆಯಲ್ಲಿ ಸಂಪತ್ತಿನ ಮಳೆಯನ್ನೇ ಸುರಿಸುತ್ತಾಳೆ ಎಂದು ನಂಬಲಾಗಿದೆ. ಆದರೆ ದಾನ ಮಾಡುವುದಕ್ಕೂ ಕೆಲವು ನಿಯಮಗಳಿವೆ. ದಾನ ಮಾಡಿದರೆ ಒಳಿತಾಗುತ್ತದೆ ಎಂದು ತಮಗೆ ಇಷ್ಟ ಬಂದಾಗಲೆಲ್ಲಾ ದಾನ ಮಾಡಲು ಮುಂದಾಗುತ್ತಾರೆ. ಆದರೆ ಅದು ತಪ್ಪು. ವರ್ಷದ ಈ ಐದು ದಿನಗಳಂದು ಯಾರಿಗಾದರೂ ಸಹಾಯ ಮಾಡುವುದು ಅಥವಾ ಏನನ್ನಾದರೂ ದಾನ ಮಾಡುವುದು ಸರಿಯಲ್ಲ. ಈ ಐದು ದಿನಗಳಲ್ಲಿ ದಾನ ಮಾಡುವುದರಿಂದ ಸಮಸ್ಯೆಗಳು ಉಂಟಾಗುತ್ತದೆ ಎಂಬ ನಂಬಿಕೆ ಇದೆ. ಈ ದಿನಗಳಂದು ಮಾಡಿದ ದಾನದಿಂದ ಫಲ ಸಿಗುವುದಿಲ್ಲ. ಹಾಗಾದರೆ ವರ್ಷದ ಯಾವ ಐದು ದಿನಗಳಲ್ಲಿ ದಾನ ಮಾಡಬಾರದು ಮತ್ತು ಯಾರಿಗೂ ದಾನ ಮಾಡಬಾರದ ವಸ್ತುಗಳು ಯಾವುವು ಎಂಬುದನ್ನು ಇಲ್ಲಿ ತಿಳಿಯೋಣ.
ದಾನ ಮಾಡುವಾಗ ಈ ನಿಯಮಗಳನ್ನು ಪಾಲಿಸುವುದರಿಂದ ಒಳ್ಳೆಯದಾಗುತ್ತದೆ. ಇದೇ ವೇಳೆ ವಿಷ್ಣು ಮತ್ತು ಲಕ್ಷ್ಮೀ ದೇವಿಯ ಅನುಗ್ರಹವನ್ನು ಪಡೆಯಬಹುದಾಗಿದೆ.
ಯಾವ ದಿನಗಳಲ್ಲಿ ಏನನ್ನೂ ದಾನ ಮಾಡಬಾರದು?
ಗುರುವಾರ: ಗುರುವಾರ ಯಾರಿಗೆ ಏನು ಕೊಡಬಾರದು ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ . ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗುರುವಾರ ಯಾರಿಗೂ ದಾನ ಮಾಡಬೇಡಿ. ಹೀಗೆ ಮಾಡುವುದರಿಂದ ಲಕ್ಷ್ಮೀದೇವಿಗೆ ಮತ್ತು ವಿಷ್ಣುವಿಗೆ ಕೋಪ ಬರುತ್ತದೆ. ಗುರುವಾರದಂದು ಯಾರಿಗಾದರೂ ಹಣ ಕೊಡುವುದು ಒಳ್ಳೆಯದಲ್ಲ. ಇದನ್ನು ಮಾಡುವುದರಿಂದ ಆರ್ಥಿಕ ತೊಂದರೆಗಳು ಉಂಟಾಗುತ್ತವೆ. ಅನೇಕ ರೀತಿಯ ಸಮಸ್ಯೆಗಳು ಉದ್ಭವಿಸಬಹುದು.
ಕತ್ತಲಾದ ನಂತರ ಇವುಗಳನ್ನು ಯಾರಿಗೂ ಕೊಡಬೇಡಿ: ಹೆಚ್ಚಿನವರು ಕತ್ತಲಾದ ನಂತರವೂ ಸಹಾಯ ಕೇಳಿ ಬಂದವರಿಗೆ ಏನು ಬೇಕಾದರೂ ನೀಡುತ್ತಾರೆ. ಆದರೆ ವಾಸ್ತವವಾಗಿ, ಸೂರ್ಯ ಮುಳುಗಿದ ನಂತರ ದಾನ ನೀಡಬಾರದು. ಸೂರ್ಯಾಸ್ತದ ನಂತರ ಮೊಸರು, ಹಾಲು, ಅರಿಶಿಣ ಮತ್ತು ತುಳಸಿ ಗಿಡವನ್ನು ಯಾರಿಗೂ ನೀಡಬಾರದು. ಹಾಗೆ ಮಾಡುವುದರಿಂದ ಅಡ್ಡ ಪರಿಣಾಮಗಳು ಉಂಟಾಗಬಹುದು. ಹಣಕಾಸಿನ ತೊಂದರೆಯನ್ನೂ ನೀವು ಅನುಭವಿಸಬಹುದು. ಏಕೆಂದರೆ ಲಕ್ಷ್ಮೀದೇವಿಯು ಕೋಪಗೊಳ್ಳುತ್ತಾಳೆ. ಆದ್ದರಿಂದ ಯಾವುದೇ ಸಂದರ್ಭದಲ್ಲೂ ಕತ್ತಲಾದ ನಂತರ ಯಾರಿಗೂ ಇವುಗಳನ್ನು ನೀಡಬೇಡಿ.
ಮರಣಾನಂತರ ದಾನ: ಮನೆಯಲ್ಲಿ ಯಾರಾದರೂ ಸತ್ತಿದ್ದರೆ ಯಾರಿಗೂ ಏನನ್ನೂ ಕೊಡಬಾರದು. 13 ದಿನಗಳವರೆಗೆ ಯಾರಿಗೂ ಸಹಾಯ ಮಾಡಬೇಡಿ. ಹಣ ನೀಡುವಂತಹ ತಪ್ಪುಗಳನ್ನು ಮಾಡಬೇಡಿ. ಹೀಗೆ ಮಾಡುವುದರಿಂದ ಪಿತೃ ದೋಷ ಉಂಟಾಗುತ್ತದೆ. ಕುಟುಂಬದಲ್ಲಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಆದ್ದರಿಂದ 13ನೇ ದಿನದವರೆಗೆ ಯಾರಿಗೂ ದಾನ, ಹಣ ಸಹಾಯ ಮಾಡಬೇಡಿ ಎಂದು ಜ್ಯೋತಿಷ್ಯಶಾಸ್ತ್ರ ಹೇಳುತ್ತದೆ.
ದೀಪಾವಳಿಯ ದಿನ: ದೀಪಾವಳಿಯಂದು ಲಕ್ಷ್ಮೀದೇವಿ ನಮ್ಮ ಮನೆಗೆ ಬರುತ್ತಾಳೆ. ಹಾಗಾಗಿ ಆ ದಿನ ನಾವು ಮನೆಯನ್ನು ತುಂಬಾ ಸುಂದರವಾಗಿ ಅಲಂಕರಿಸುತ್ತೇವೆ. ಮನೆಯಲ್ಲಿ ದೀಪಗಳನ್ನು ಹಚ್ಚುತ್ತೇವೆ. ಆದರೆ ದೀಪಾವಳಿಯಂದು ನೀವು ಯಾರಿಗಾದರೂ ದಾನ ಅಥವಾ ಹಣವನ್ನು ನೀಡಿದರೆ ಲಕ್ಷ್ಮೀ ದೇವಿ ಕೋಪಗೊಳ್ಳುತ್ತಾಳೆ. ನೀವು ಸಾಲ ಬಾಧೆಯನ್ನು ಎದುರಿಸಬೇಕಾಗುತ್ತದೆ.
ಧನ್ ತ್ರಯೋದಶಿಯಂದು: ಧನ್ ತ್ರಯೋದಶಿಯಂದು ಸೂರ್ಯಾಸ್ತದ ನಂತರ ಉಪ್ಪನ್ನು ಯಾರಿಗೂ ದಾನ ಮಾಡಬಾರದು. ಹೀಗೆ ಮಾಡುವುದರಿಂದ ನಿಮ್ಮ ಮೇಲಿರುವ ಲಕ್ಷ್ಮೀದೇವಿಯ ಕೃಪೆಯನ್ನು ಕಳೆದುಕೊಳ್ಳಬೇಕಾಗುತ್ತದೆ. ಹಾಗಾಗಿ ಧನ್ ತ್ರಯೋದಶಿಯಂದು ಯಾರಿಗೂ ಉಪ್ಪನ್ನು ಕೊಡಬೇಡಿ. ಸಾಮಾನ್ಯ ದಿನಗಳಲ್ಲೂ ಕತ್ತಲಾದ ನಂತರ ಉಪ್ಪನ್ನು ಯಾರಿಗೂ ಕೊಡಬಾರದು.
ಈ ನಿಯಮಗಳನ್ನು ಪಾಲಿಸಿದರೆ ನಿಮಗೆ ಯಾವುದೇ ತೊಂದರೆ ಉಂಟಾಗುವುದಿಲ್ಲ. ಇಲ್ಲವಾದಲ್ಲಿ ಲಕ್ಷ್ಮೀ ದೇವಿಯ ಕೋಪಕ್ಕೆ ಗುರಿಯಾಗಿ ಸಾಲ ಭಾದೆ ಅನುಭವಿಸಬೇಕಾಗಿ ಬರುವ ಸಾಧ್ಯತೆ ಇದೆ.
(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟಿಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.)