ಕುಕ್ಕೆ ಸುಬ್ರಹ್ಮಣ್ಯ: ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಚೌತಿಯ ದಿನ 78 ಭಕ್ತರಿಂದ ಎಡೆಸ್ನಾನ ಸೇವೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಕುಕ್ಕೆ ಸುಬ್ರಹ್ಮಣ್ಯ: ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಚೌತಿಯ ದಿನ 78 ಭಕ್ತರಿಂದ ಎಡೆಸ್ನಾನ ಸೇವೆ

ಕುಕ್ಕೆ ಸುಬ್ರಹ್ಮಣ್ಯ: ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಚೌತಿಯ ದಿನ 78 ಭಕ್ತರಿಂದ ಎಡೆಸ್ನಾನ ಸೇವೆ

ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ 78 ಭಕ್ತರು ಸ್ವಯಂ ಪ್ರೇರಿತವಾಗಿ ಎಡೆಸ್ನಾನದ ಸೇವೆಯನ್ನು ಸಲ್ಲಿಸಿದ್ದಾರೆ. ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಚೌತಿಯ ದಿನ ಧಾರ್ಮಿಕ ದತ್ತಿ ಇಲಾಖೆಯ ಶೈವಾಗಮ ಪಂಡಿತರ ಮಾರ್ಗದರ್ಶನದಂತೆ ದೇವರ ಮಧ್ಯಾಹ್ನದ ಮಹಾಪೂಜೆ ಬಳಿಕ ಎಡೆಸ್ನಾನ ಸೇವೆ ನಡೆದಿದೆ.

ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ ಎಡೆಸ್ನಾನ ಸೇವೆ ಅರ್ಪಿಸುತ್ತಿರುವ ಭಕ್ತರು
ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ ಎಡೆಸ್ನಾನ ಸೇವೆ ಅರ್ಪಿಸುತ್ತಿರುವ ಭಕ್ತರು

ಮಂಗಳೂರು: ಮಹತೋಭಾರ ಕುಕ್ಕೆ ಸುಬ್ರಹ್ಮಣ್ಯ ದೇವರ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಚೌತಿಯ ದಿನವಾದ ಗುರುವಾರ (ಡಿಸೆಂಬರ್ 5) ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಕ್ತರು ಎಡೆಸ್ನಾನ ಸೇವೆ ನೆರವೇರಿಸಿದ್ದಾರೆ. ಗೋವು ಸೇವಿಸಿದ ಎಲೆಯ ಮೇಲೆ ಭಕ್ತರು ಉರುಳು ಸೇವೆ ನಡೆಸುವ ಮೂಲಕ ಚಂಪಾಷಷ್ಠಿಯ ಜಾತ್ರೋತ್ಸವದ ಚೌತಿಯ ದಿನದಂದು ಎಡೆಸ್ನಾನ ಹರಕೆ ಸೇವೆ ಸಲ್ಲಿಸಿದರು. ಸುಮಾರು 78 ಭಕ್ತರು ಸ್ವಯಂಪ್ರೇರಿತರಾಗಿ ಸೇವೆ ನೆರವೇರಿಸಿದರು. ಶುಕ್ರವಾರ ಪಂಚಮಿ ಮತ್ತು ಶನಿವಾರ ಷಷ್ಠಿಯಂದು ಭಕ್ತರು ಎಡೆಸ್ನಾನ ಸೇವೆ ನಡೆಸುತ್ತಾರೆ.

ಧಾರ್ಮಿಕ ದತ್ತಿ ಇಲಾಖೆಯ ಶೈವಾಗಮ ಪಂಡಿತರ ಮಾರ್ಗದರ್ಶನದಂತೆ ದೇವಾಲಯದಲ್ಲಿ ಮಧ್ಯಾಹ್ನದ ಮಹಾಪೂಜೆ ಬಳಿಕ ದೇವಳದ ಹೊರಾಂಗಣದ ಸುತ್ತಲೂ 432 ಬಾಳೆ ಎಲೆಗಳನ್ನು ಹಾಕಿ ಅದರ ಮೇಲೆ ದೇವರ ನೈವೇದ್ಯಗಳನ್ನು ಬಡಿಸಲಾಯಿತು. ಬಳಿಕ ದೇವಳದ ಗೋವುಗಳು ಆ ಎಲೆಗಳಲ್ಲಿದ್ದ ಅನ್ನಪ್ರಸಾದವನ್ನು ತಿಂದವು. ಹಸುಗಳು ತಿಂದ ಅನ್ನಪ್ರಸಾದದ ಮೇಲೆ ದೇವಳದ ಎದುರಿನ ದರ್ಪಣತೀರ್ಥ ನದಿಯಲ್ಲಿ ಸ್ನಾನ ಮಾಡಿ ನಿಂತಿದ್ದ ಎಲ್ಲಾ ವಯೋಮಾನದ ಭಕ್ತರು ಉರುಳು ಸೇವೆ ಕೈಗೊಂಡರು. ಗೋವು ತಿಂದ ಎಲೆಯ ಮೇಲೆ ಉರುಳು ಸೇವೆ ಮಾಡುತ್ತಾ ಒಂದು ಸುತ್ತು ಪ್ರದಕ್ಷಿಣೆ ಹಾಕಿದ ಬಳಿಕ ಭಕ್ತರು ದರ್ಪಣ ತೀರ್ಥ ನದಿಯಲ್ಲಿ ಸ್ನಾನ ಮಾಡಿ ದೇವರ ಪ್ರಸಾದ ಬೋಜನ ಸ್ವೀಕರಿಸಿದರು.

ಅನ್ನದಾನದ ಸಂಕೇತವಾಗಿ ಶ್ರೀ ದೇವಳದಲ್ಲಿ ಪಲ್ಲಪೂಜೆ

ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಕಾರ್ತಿಕ ಶುದ್ಧ ಚೌತಿಯ ದಿನವಾದ ಗುರುವಾರ (ಡಿಸೆಂಬರ್ 5) ಶ್ರೀ ದೇವಳದಲ್ಲಿ ಪಲ್ಲಪೂಜೆ ನೆರವೇರಿತು. ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಸೀತಾರಾಮ ಎಡಪಡಿತ್ತಾಯರು ಒಳಾಂಗಣದಲ್ಲಿ ಪಲ್ಲಪೂಜೆ ನೆರವೇರಿಸಿದರು. ಅಲ್ಲದೆ ಅಕ್ಷಯ ಪಾತ್ರೆಗೆ ಪೂಜೆ ಸಲ್ಲಿಸಿದರು. ಕುಕ್ಕೆಯಲ್ಲಿ ನಿರಂತರ ಅನ್ನದಾನ ನಡೆಯುವುದು ಪ್ರಧಾನವಾಗಿದ್ದು, ಜಾತ್ರಾ ಸಮಯ ವಿಶೇಷ ಭೋಜನ ಪ್ರಸಾದ ವಿತರಣೆಯ ಸಂಕೇತವಾಗಿಯೂ ಪಲ್ಲಪೂಜೆ ನಡೆಯಿತು.

ಭೋಜನ ಶಾಲೆಯಲ್ಲಿ ಪಲ್ಲಪೂಜೆ

ಜಾತ್ರೋತ್ಸವದ ಪ್ರಧಾನ 4 ದಿನಗಳಾದ ಚೌತಿ, ಪಂಚಮಿ, ಷಷ್ಠಿ ಮತ್ತು ಅವಭೃತೋತ್ಸವದಂದು ವಿಶೇಷ ಅನ್ನದಾನ ನೆರವೇರುತ್ತದೆ. ಈ ಸಂಬಂಧವಾಗಿ ಗುರುವಾರ ಮಧ್ಯಾಹ್ನ ಪುರೋಹಿತರು ಅಂಗಡಿಗುಡ್ಡೆಯಲ್ಲಿ ನೂತನವಾಗಿ ನಿರ್ಮಿಸಿದ ಅನ್ನಛತ್ರ ಅನ್ನಪೂರ್ಣದಲ್ಲಿ ಪುರೋಹಿತ ಪ್ರಸನ್ನ ಹೊಳ್ಳ ಪೂಜೆ ನೆರವೇರಿಸಿದರು. ಅಲ್ಲದೆ ವಿವಿಧ ವೈದಿಕ ವಿಧಿ ವಿಧಾನಗಳ ಮೂಲಕ ಅನ್ನಬ್ರಹ್ಮನಿಗೆ ಪೂಜೆ ಸಲ್ಲಿಸಿದರು. ಬಳಿಕ ಪ್ರಸಾದ ವಿತರಿಸಲಾಯಿತು. ಕುಕ್ಕೆಸುಬ್ರಹ್ಮಣ್ಯ ಕ್ಷೇತ್ರ ನಿರಂತರ ಅನ್ನದಾನ ನೀಡುವ ಕ್ಷೇತ್ರವಾದುದರಿಂದ ಚೌತಿ ದಿನ ಅನ್ನಪ್ರಸಾದಕ್ಕೆ ಪೂಜೆ ನೆರವೇರುತ್ತದೆ. ಡಿಸೆಂಬರ್ 6ರ ಶುಕ್ರವಾರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಪಂಚಮಿ ರಥೋತ್ಸವ ಮತ್ತು ಕುಕ್ಕೆಬೆಡಿ (ಸುಡುಮದ್ದು ಪ್ರದರ್ಶನ) ನಡೆಯಲಿದೆ.

ಕುಕ್ಕೆ ಸುಬ್ರಹ್ಮಣ್ಯ ದೇವರ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಚೌತಿಯ ದಿನ ದೇವಳದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ದೇವಳದ ಅಧೀಕ್ಷಕ ಪದ್ಮನಾಭ ಶೆಟ್ಟಿಗಾರ್, ದೇವಳದ ದೇವಣ್ಣ ಗೌಡ, ಮಹಾಬಲೇಶ್ವರ ದೋಳ, ಪುರುಷೋತ್ತಮ, ಬಾಲಸುಬ್ರಹ್ಮಣ್ಯ ಮಾರರ್, ಹೂವಪ್ಪ, ಭವಾನಿಶಂಕರ ದೇವರಗದ್ದೆ, ಎನ್.ಸಿ ಸುಬ್ಬಪ್ಪ, ನಿರಂಜನ ಭಟ್, ಸ್ವಯಂಸೇವಕರಾದ ಮೋಹನದಾಸ ರೈ, ನವೀನ್ ಕುಮಾರ್ ಕೆ.ವಿ, ಪ್ರವೀಣ್ ಕುಮಾರ್ ಕೆ.ವಿ ಸೇರಿದಂತೆ ದೇವಳದ ಸಿಬ್ಬಂದಿ, ಭಕ್ತರು ಉಪಸ್ಥಿತರಿದ್ದರು.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.