ರಾಮಾಯಣದ ಈ ಮೂಲ ಮಂತ್ರ ಜೀವನದಲ್ಲಿ ಅಳವಡಿಸಿಕೊಂಡರೆ ನಿಮ್ಮ ಯಶಸ್ಸನ್ನು ಯಾರಿಂದಲೂ ತೆಡೆಯಲು ಸಾಧ್ಯವಿಲ್ಲ
ಹಿಂದೂಗಳ ಧಾರ್ಮಿಕ ಗ್ರಂಥಗಳಲ್ಲಿ ಅನೇಕ ಪೌರಾಣಿಕ ಕಥೆಗಳಿವೆ. ಅವು ಜ್ಞಾನದ ಜೊತೆಗೆ ಶಿಕ್ಷಣವನ್ನು ನೀಡುತ್ತವೆ. ಶ್ರೀರಾಮನ ಜೀವನ ಚರಿತ್ರೆಯನ್ನು ಆಧರಿಸಿದ ರಾಮಾಯಣವು ಮನುಷ್ಯರನ್ನು ಪ್ರೇರೇಪಿಸುವ ಕೆಲಸ ಮಾಡುತ್ತದೆ. ಈ ಪವಿತ್ರ ಗ್ರಂಥದಲ್ಲಿರುವ ಅನೇಕ ಸಂಗತಿಗಳು ನಮಗೆ ಯಶಸ್ಸಿನ ಹಾದಿಯನ್ನು ತೆರೆಯುತ್ತವೆ.
ರಾಮಾಯಣವು ಹಿಂದೂಗಳ ಪವಿತ್ರ ಧರ್ಮ ಗ್ರಂಥಗಳಲ್ಲಿ ಒಂದಾಗಿದೆ. ಇದರಲ್ಲಿ ಬದುಕಿಗೆ ಸ್ಪೂರ್ತಿ ತುಂಬು ಅನೇಕ ಘಟನೆಗಳು ಕಂಡುಬರುತ್ತವೆ. ಈ ಧಾರ್ಮಿಕ ಗ್ರಂಥವು ಮನುಷ್ಯರಿಗೆ ಯಶಸ್ವಿ ಬದುಕಿನ ದಾರಿಯನ್ನು ತೋರಿಸುತ್ತದೆ. ಶ್ರೀರಾಮನ ಜೀವನ ಚರಿತ್ರೆಯನ್ನು ಆಧರಿಸಿರುವ ಈ ಗ್ರಂಥದಲ್ಲಿ ನಿತ್ಯ ಜೀವನಕ್ಕೆ ಅಗತ್ಯವಿರುವ ಅನೇಕ ಪಾಠಗಳಿವೆ. ತಾಳ್ಮೆ, ಸಹನೆ ಮತ್ತು ಕರ್ತವ್ಯ ಪಾಲನೆಯಂತ ಮೂಲಭೂತ ಮಂತ್ರಗಳು ಇದರಲ್ಲಿವೆ. ಇದನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ಒತ್ತಡದಿಂದ ಮುಕ್ತರಾಗಿ ಸಂತೋಷದಿಂದ ಬದುಕಬಹುದು. ರಾಮಾಯಣವು ನಮಗೆ ಕಲಿಸಕೊಡುವ ಪಾಠಗಳೇನು? ನಿತ್ಯದ ಜೀವನದಲ್ಲಿ ಅದು ಹೇಗೆ ಸಹಾಯ ಮಾಡುತ್ತದೆ ಎಂದು ತಿಳಿಯೋಣ.
ಎಂದಿಗೂ ತಾಳ್ಮೆ ಕಳೆದುಕೊಳ್ಳಬೇಡಿ
ರಾಮಾಯಣದ ಕಥೆಯ ಪ್ರಕಾರ, ಭಗವಾನ್ ಶ್ರೀರಾಮನಿಗೆ ಪಟ್ಟಾಭಿಷೇಕ ನಿಶ್ಚಯವಾಗಿರುತ್ತದೆ. ಸಂಪೂರ್ಣ ಅಯೋಧ್ಯೆ ಸಡಗರದಲ್ಲಿ ತೇಲುತ್ತಿರುತ್ತದೆ. ಆದರೆ ಕೈಕೇಯಿ ನೀಡಿದ ವನವಾಸವನ್ನು ಸ್ವೀಕರಿಸಿದ ಶ್ರೀರಾಮನು 14 ವರ್ಷಗಳ ಕಾಲ ವನವಾಸಕ್ಕೆ ಹೋಗಬೇಕಾಗುತ್ತದೆ. ತನ್ನ ತಂದೆ, ತಾಯಿ, ಸಹೋದರ ಮತ್ತು ಪುರ ಜನರನ್ನೆಲ್ಲಾ ಬಿಟ್ಟು ಹೊರಡಬೇಕಾದ ಸಂದರ್ಭದಲ್ಲೂ ಕೂಡಾ ಶ್ರೀರಾಮನು ತಾಳ್ಮೆಯನ್ನು ಕಳೆದುಕೊಳ್ಳುವುದಿಲ್ಲ. ರಘುವಂಶದ ಪದ್ಧತಿಗಳನ್ನು ಸಮಾಧಾನದಿಂದ ಪಾಲಿಸಲು ಮುಂದಾಗುತ್ತಾನೆ. ಜೀವನದಲ್ಲಿ ಎಷ್ಟೇ ಕಠಿಣ ಪರಿಸ್ಥಿತಿ ಎದುರಾದರೂ ತಾಳ್ಮೆ ಕಳೆದುಕೊಳ್ಳಬಾರದು ಮತ್ತು ಸಕಾರಾತ್ಮಕ ರೀತಿಯಲ್ಲಿ ಆ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸಬೇಕು. ಇದನ್ನು ಪ್ರತಿಯೊಬ್ಬ ವ್ಯಕ್ತಿಯೂ ಶ್ರೀರಾಮನಿಂದ ಕಲಿಯಬೇಕು. ತಾಳ್ಮೆ ಮತ್ತು ಸಕಾರಾತ್ಮಕ ಚಿಂತನೆಯೊಂದಿಗೆ ಜೀವನದ ಹೋರಾಟವನ್ನು ಎದುರಿಸಬೇಕು. ನೀವು ನಿಮ್ಮ ಜೀವನದಲ್ಲಿ ಈ ಪಾಠವನ್ನು ಅಳವಡಿಸಿಕೊಂಡರೆ ಕಠಿಣ ಪರಿಸ್ಥಿತಿಯನ್ನು ಯಶಸ್ವಿಯಾಗಿ ಜಯಿಸಬಹುದು.
ಉತ್ತಮ ಸ್ನೇಹ ಸಂಪಾದಿಸಿ
ವ್ಯಕ್ತಿಯು ತನ್ನ ಸ್ನೇಹದ ಬಗ್ಗೆ ಯಾವಾಗಲೂ ಜಾಗರೂಕರಾಗಿರಬೇಕು. ಏಕೆಂದರೆ ಉತ್ತಮರ ಸಂಗವು ನಮ್ಮ ಜೀವನದ ಮೇಲೆ ಅಗಾಧವಾದ ಪರಿಣಾಮವನ್ನು ಬೀರುತ್ತದೆ. ಸರಿಯಾದ ದಾರಿಯಲ್ಲಿ ಮುನ್ನಡೆಯುವಂತೆ ಮಾಡುತ್ತದೆ. ಇದಕ್ಕೆ ರಾಮಾಯಣದಲ್ಲಿ ಕಂಡುಬರುವ ಶ್ರೀರಾಮ ಮತ್ತು ಸುಗ್ರೀವನ ಸ್ನೇಹವೇ ಸಾಕ್ಷಿ. ಸುಗ್ರೀವನು ಭಗವಾನ್ ಶ್ರೀರಾಮನೊಂದಿಗೆ ಸ್ನೇಹವನ್ನು ಬೆಳಸಿದನು. ಶ್ರೀರಾಮನ ಸಹಾಯದಿಂದ ಕಿಷ್ಕಿಂಧೆಯ ರಾಜನಾದನು. ಅದೇ ಸ್ನೇಹವನ್ನು ಮುಂದುವರಿಸಿಕೊಂಡು ಸೀತಾಮಾತೆಯನ್ನು ಹುಡುಕುವಲ್ಲಿ ಶ್ರೀರಾಮನಿಗೆ ಸಹಾಯ ಮಾಡಿದನು. ರಾವಣನ ಸಂಗ ಮಾಡಿದ ಜನರೆಲ್ಲರೂ ಯುದ್ಧದಲ್ಲಿ ಸೋಲನ್ನು ಕಂಡರು. ಹಾಗಾಗಿ ನಾವೂ ಕೂಡಾ ಸದಾ ಉತ್ತಮರ ಸಂಗವನ್ನೇ ಮಾಡಬೇಕು ಎಂಬುದು ಇದರಿಂದ ತಿಳಿದುಬರುತ್ತದೆ.
ಗುರಿ ಸಾಧಿಸುವವರೆಗೆ ಬಿಡಬೇಡಿ
ರಾಮಾಯಣದಲ್ಲಿ ಒಂದು ಘಟನೆಯಿದೆ. ಅದರ ಪ್ರಕಾರ, ಹನುಮಂತನು ಸೀತಾ ಮಾತೆಯನ್ನು ಹುಡುಕಲು ಹೊರಟಾಗ, ದಾರಿಯಲ್ಲಿ ಎಲ್ಲಿಯೂ ವಿಶ್ರಾಂತಿ ಪಡೆಯಲಿಲ್ಲ. ಎಲ್ಲಾ ಕಷ್ಟಗಳನ್ನು ದಾಟಿ ಗುರಿಯನ್ನು ತಲುಪಿದನು. ಎಂತಹುದೇ ಪರಿಸ್ಥಿತಿಯಿರಲಿ ಗುರಿ ಸಾಧಿಸುವವರೆಗೆ ನಿಲ್ಲಬಾರದು. ಆಗ ಮಾತ್ರ ಯಶಸ್ಸನ್ನು ಗಳಿಸಬಹುದು. ಗುರಿ ಸಾಧನೆಯ ಕಡೆಗೆ ನಮ್ಮ ಮನಸ್ಸು ಅಚಲವಾಗಿರಬೇಕು. ದೃಢ ಸಂಕಲ್ಪ ಮಾಡಬೇಕು ಎಂಬುದು ಈ ಘಟನೆಯಿಂದ ನಾವು ಕಲಿಯಬಹುದಾಗಿದೆ.