ಅಂಜನಾದ್ರಿ ಬೆಟ್ಟಕ್ಕೆ ಈ ಹೆಸರು ಬರಲು ಕಾರಣವೇನು; ಪುರಾಣದಲ್ಲಿರುವ ಆಸಕ್ತಿಕರ ಕಥೆಯನ್ನು ತಿಳಿಯಿರಿ
ಕೊಪ್ಪಳ ಜಿಲ್ಲೆಯಲ್ಲಿರುವ ಅಂಜನಾದ್ರಿ ಬೆಟ್ಟಕ್ಕೆ ಇದೇ ಹೆಸರು ಬರಲು ಕಾರಣವೇನು, ಅಂಜನೆಯ ತಪಸ್ಸಿನಿಂದ ಪಡೆದ ವರ ಮತ್ತು ಆಂಜನೇಯ ಹುಟ್ಟಿದ ಈ ಸ್ಥಳದ ಕುರಿತ ಪುರಾಣದ ಕಥೆಯನ್ನು ಓದಿ.

ಕೊಪ್ಪಳ ಜಿಲ್ಲೆಯ ಆನೆಗುಂದಿ ಸಮೀಪದಲ್ಲಿರುವ ಅಂಜನಾದ್ರಿ ಬೆಟ್ಟದ ಕುರಿತ ಆಸಕ್ತಿಕರ ವಿಚಾರಗಳು ಸಾಕಷ್ಟು ಮಂದಿಗೆ ಗೊತ್ತಿಲ್ಲ. ಆಂಜನೇಯನ ಜನ್ಮಸ್ಥಳ ಅಂತಲೇ ಕರೆಯಲಾಗುವ ಈ ಬೆಟ್ಟಕ್ಕೆ ಅಂಜನಾದ್ರಿ ಬೆಟ್ಟ ಎಂಬ ಹೆಸರು ಹೇಗೆ ಬಂತು, ಇದರ ಹಿಂದಿರುವ ಪುರಾಣಗಳ ಕಥೆಯ ಏನು ಎಂಬುದನ್ನು ಜ್ಯೋತಿಷಿ ಎಚ್ ಸತೀಶ್ ಅವರು ವಿವರಿಸಿದ್ದಾರೆ.
ದ್ವಾಪರ ಯುಗದಲ್ಲಿ ಅಂಜನಾದ್ರಿ ಬೆಟ್ಟದ ಬಗ್ಗೆ ತಿಳಿದುಬರುತ್ತದೆ. ಆ ದಿನಗಳಲ್ಲಿ ಕೇಸರಿ ಎಂಬ ಶಿವನ ಭಕ್ತನಿರುತ್ತಾನೆ. ಇವನು ತನ್ನ ಅಪಾರ ಭಕ್ತಿಯಿಂದ ಶಿವನ ಅನುಗ್ರಹಕ್ಕೆ ಪಾತ್ರನಾಗಿರುತ್ತಾನೆ. ಆದರೂ ಸಹ ಇವನಲ್ಲಿದ್ದ ಕೆಲವೊಂದು ತಪ್ಪು ಗುಣಗಳನ್ನು ಜನಸಾಮಾನ್ಯರು ವಿರೋಧಿಸುತ್ತಾರೆ. ಹಲವು ಬಾರಿ ದೇವೇಂದ್ರ ಮುಂತಾದ ದೇವತೆಗಳು ಇವನನ್ನು ಹತ್ಯೆಗೆಯ್ಯಲು ಪ್ರಯತ್ನಿಸುತ್ತಾರೆ. ಇದರಿಂದ ಬೇಸರಗೊಂಡ ಕೇಸರಿಯು ಸಾವನ್ನೇ ಗೆಲ್ಲುವ ತೀರ್ಮಾನಕ್ಕೆ ಬರುತ್ತಾನೆ. ಲಯಕಾರಕನಾದ ಪರಮಶಿವನನ್ನು ಕುರಿತು ಕೇಸರಿಯು ಕಠಿಣವಾದ ತಪಸ್ಸನ್ನು ಆಚರಿಸುತ್ತಾನೆ. ಇವನ ತಪಸ್ಸಿನಿಂದ ಮೂರು ಲೋಕದಲ್ಲಿಯೂ ಅಲ್ಲೋಲ ಕಲ್ಲೋಲವಾಗುತ್ತದೆ. ಇದರಿಂದ ಸಕಲ ದೇವತೆಗಳೂ ಇವನ ತಪಸ್ಸನ್ನು ನಿಲ್ಲಿಸುವಂತೆ ಶಿವನಲ್ಲಿ ವಿನಂತಿಸಿಕೊಳ್ಳುತ್ತಾನೆ. ಕೇಸರಿಯ ತಪಸ್ಸಿನಿಂದ ಸಂತೃಪ್ತನಾದ ಶಿವನು ಪ್ರತ್ಯಕ್ಷನಾಗುತ್ತಾನೆ.
ಕೇಸರಿಯನ್ನು ಕುರಿತು ತಪಸ್ಸಿಗೆ ಕಾರಣವನ್ನು ಕೇಳುತ್ತಾನೆ. ಅವನಿಗೆ ಬೇಕಾದ ವರವೇನೆಂದು ಕೇಳುತ್ತಾನೆ. ಆಗ ಕೇಸರಿಯು ನಾನು ನಿನ್ನ ಭಕ್ತನಾದರೂ ನನಗೂ ಸಾವಿನ ಭಯ ದೂರವಾಗಿಲ್ಲ ಎನ್ನುತ್ತಾನೆ. ನನಗೆ ಯಾರಿಂದಲೂ ಸಾವು ಬರದಂತೆ ವರವನ್ನು ನೀಡು ಎಂದು ಬೇಡುತ್ತಾನೆ. ಆಗ ಶಿವನು ನೀನು ಮಾಡಿರುವ ಪಾಪ ಕರ್ಮಗಳಿಗೆ ಫಲವನ್ನು ತೆರಲೇಬೇಕು. ಆದ್ದರಿಂದ ನೀನು ಸಾವನ್ನು ಗೆಲ್ಲಲಾರೆ. ಆದರೆ ನಿನ್ನ ಮಗಳಿಗೆ ಜನಿಸುವ ಹೆಣ್ಣುಮಗುವಿಗೆ ಒಂದು ಗಂಡು ಸಂತಾನವಾಗುತ್ತದೆ. ಅವನು ಸಾವನ್ನು ಗೆಲ್ಲುತ್ತಾನೆ. ಒಟ್ಟಾರೆ ನಿನ್ನ ಮಗಳಿಗೆ ಜನಿಸಿದ ನಿನ್ನ ಮೊಮ್ಮಗನು ಚಿರಂಜೀವಿಯಾಗಿ ಬಾಳುತ್ತಾನೆ. ಮಾತ್ರವಲ್ಲದೆ ಅವನಿಂದ ಲೋಕಕಲ್ಯಾಣವಾಗುತ್ತದೆ. ಭೂಲೋಕ ಇರುವವರೆಗು ನಿನ್ನ ಮೊಮ್ಮಗನು ಜನರಿಂದ ಪೂಜಿಸಲ್ಪಡುತ್ತಾನೆ. ಭಕ್ತರಿಗೆ ದೀರ್ಘಾಯಸ್ಸನ್ನೂ ನೀಡುತ್ತಾನೆ ಎಂದು ತಿಳಿಸುತ್ತಾನೆ. ಆಗ ಕೇಸರಿಗೆ ಸಂತೋಷವಾಗುತ್ತದೆ. ಕೇಸರಿಗೆ ವಿವಾಹವಾಗುತ್ತದೆ. ಆನಂತರ ಕೇಸರಿ ದಂಪತಿಗೆ ಒಂದು ಹೆಣ್ಣು ಮಗುವಾಗುತ್ತದೆ. ಆ ಮಗುವಿಗೆ ಅಂಜನೆ ಎಂಬ ಹೆಸರನ್ನು ಇಡುತ್ತಾರೆ. ಈಕೆಯು ಧೈರ್ಯ ಸಾಹಸಗಳಿಗೆ ಹಸರಾಗುತ್ತಾಳೆ. ಸಕಲ ವಿದ್ಯಾಪಾರಂಗತರಾಗುತ್ತಾಳೆ. ದಿನಕಳೆದಂತೆ ಅಂಜನೆಯು ಯೌವಾವಸ್ಥೆಗೆ ಕಾಲಿಡುತ್ತಾಳೆ. ಇವಳ ವಿವಾಹವು ವಾನರರಾಜನ ಜೊತೆಯಲ್ಲಿ ನಡೆಯುತ್ತದೆ.
ಶಿವನಿಂದ ಚಿರಂಜೀವಿಯಾಗಿ ಬಾಳುವ ವರವನ್ನು ಪಡೆದಿದ್ದ ಅಂಜನೆಯ
ಕೇಸರಿಗೆ ಶಿವನು ನೀಡಿದ ವರ ನೆನಪಾಗುತ್ತದೆ. ಅತಿ ಸಂತಸದಿಂದ ಮೊಮ್ಮಗನ ಬಗ್ಗೆ ನಿರೀಕ್ಷೆ ಮೂಡುತ್ತದೆ. ವಿವಾಹವಾಗಿ ಬಹುದಿನ ಕಳೆದರೂ ಅವಳಿಗೆ ಸಂತಾನವಾಗುವುದಿಲ್ಲ. ಇದರಿಂದ ನಿರಾಸೆಗೊಂಡ ಅಂಜನೆಯು ಅನೇಕ ವ್ರತಗಳನ್ನು ಆಚರಿಸುತ್ತಾಳೆ. ಹಿರಿಯರ ಆದೇಶದಂತೆ ಅಲ್ಲಿನ ಧರ್ಮದೇವತೆಯನ್ನು ಪೂಜಿಸುತ್ತಾಳೆ. ಈಕೆಯ ಪೂಜೆಯನ್ನು ಮೆಚ್ಚಿದ ಧರ್ಮದೇವತೆಯು, ಒಂದು ದಿನ ಅಂಜನಯನ ಕನಸಿನಲ್ಲಿ ಪ್ರತ್ಯಕ್ಷವಾಗುತ್ತಾಳೆ. ತಿರುಪತಿಯಲ್ಲಿ ಇರುವ ಪ್ರತ್ಯೇಕ ಸ್ಥಳವನ್ನು ಸೂಚಿಸುತ್ತಾಳೆ. ಆ ಸ್ಥಳದಲ್ಲಿಯೇ ಶಿವನನ್ನು ಕುರಿತು ತಪಸ್ಸನ್ನು ಮಾಡಲು ತಿಳಿಸುತ್ತಾಳೆ. ಇದರಿಂದ ಅಂಜನೆಯು ಭಯ ಭಕ್ತಿಗಳಿಂದ ಅಂಜನೆಯು ಶಿವನನ್ನು ಕುರಿತು ಘೋರ ತಪಸ್ಸನ್ನು ಆಚರಿಸುತ್ತಾಳೆ. ಇದರ ಫಲವಾಗಿ ಆಕೆಗೆ ಗಂಡು ಮಗುವಿನ ಜನನವಾಗುತ್ತದೆ. ಶಿವನಿಂದ ಚಿರಂಜೀವಿಯಾಗಿ ಬಾಳುವ ವರವನ್ನು ಪಡೆಯುತ್ತಾನೆ. ಅಂಜನೆಯು ಒಂದು ದಿನ ಮೈಮರೆತು ಕುಳಿತಿರುತ್ತಾಳೆ. ಮಗುವಿಗೆ ಅತಿಯಾದ ಹಸಿವೆ ಆಗುತ್ತದೆ. ಮಗುವಿನ ಅಳುವಿನ ಧ್ವನಿಯು ಆಂಜನೆಗೆ ಕೇಳುವುದಿಲ್ಲ. ಆಗ ಸೂರ್ಯೋದಯದ ಸಮಯವಾಗಿರುತ್ತದೆ. ಆಕಾಶದಲ್ಲಿ ಸೂರ್ಯನು ಕೆಂಪು ಬಣ್ಣದಿಂದ ಕಂಗೊಳಿಸುತ್ತಿರುತ್ತಾನೆ. ಕೆಂಪು ಬಣ್ಣದ ಕಾರಣ ಸೂರ್ಯನನ್ನು ಹಣ್ಣಿಂದು ತಿಳಿದು ಅದನ್ನು ಸೇವಿಸಲು ಸೂರ್ಯನ ಬಳಿಗೆ ತೆರಳುತ್ತದೆ. ಇದನ್ನು ಕಂಡ ದೇವತೆಗಳು ಭಯದಿಂದ ಬ್ರಹ್ಮನಿಗೆ ವಿಚಾರವನ್ನು ತಿಳಿಸುತ್ತಾರೆ.
ಬ್ರಹ್ಮನು ತನ್ನ ದಂಡಾಯುದದಿಂದ ಮಗುವಿಗೆ ಹೊಡೆದಾಗ ಮಗುವು ಮೂರ್ಚೆ ಹೋಗಿ ತಾಯಿಯ ಬಳಿ ಬೀಳುತ್ತದೆ. ಇದನ್ನು ಕಂಡ ಆಂಜನೆಯು ಶಿವನು ನೀಡಿದ ವರವು ವಿಫಲವಾಯಿತು ಎಂದು ತಿಳಿಯುತ್ತಾಳೆ. ಮತೊಮ್ಮೆ ಶಿವನನ್ನು ಕುರಿತು ಘೋರ ತಪಸ್ಸಿಗೆ ಪ್ರಾರಂಭಿಸುತ್ತಾಳೆ. ಇದನ್ನು ಕಂಡ ಶಿವನು ಬ್ರಹ್ಮನ ಜೊತೆಯಲ್ಲಿ ಆಂಜನೆಯ ಮುಂದೆ ಪ್ರತ್ಯಕ್ಷರಾಗುತ್ತಾರೆ. ಅಂಜನೆಯನ್ನು ಸಮಾಧಾನ ಮಾಡಿ ಮಗುವಿಗೆ ಮರುಜನ್ಮವನ್ನು ನೀಡುತ್ತಾರೆ. ನಿನ್ನ ಮಗನು ಮೂರು ಲೋಕ ಇರುವರೆಗೂ ಚಿರಂಜೀವಿಯಾಗಿಯೇ ಬಾಳುತ್ತಾನೆ. ಇವನು ಆಂಜನೇಯ ಎಂಬ ಹೆಸರನ್ನು ಪಡೆಯುತ್ತಾನೆ ಎನ್ನುತ್ತಾರೆ. ಅಂಜನೆಯು ತಪಸ್ಸನ್ನು ಮಾಡಿದ ಕಾರಣ ಈ ಪರ್ವತಕ್ಕೆ ಅಂಜನಾದ್ರಿ ಎಂಬ ಹೆಸರು ಬರುತ್ತದೆ.
ಬರಹ: ಹೆಚ್. ಸತೀಶ್, ಜ್ಯೋತಿಷಿ, ಬೆಂಗಳೂರು